ಅಂದು ಭದ್ರತಾ ಪಡೆಗಳ ಮೇಲೆ ಕಲ್ಲೆಸೆದಿದ್ದ ಯುವತಿ ಇಂದು ಮಹಿಳಾ ಫುಟ್‌ಬಾಲ್ ತಂಡದ ನಾಯಕಿ!

ಶ್ರೀನಗರ: ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ ನಡೆಸಿದ್ದ ಆಫ್ಸನ್ ಆಶಿಕ್, ಇದೀಗ ಕಣಿವೆ ರಾಜ್ಯದ ಮಹಿಳಾ ಫುಟ್‌ಬಾಲ್ ತಂಡದ ನಾಯಕಿಯಾಗಿ ದೇಶಕ್ಕೆ ಹೆಮ್ಮೆ ತರುವ ಕನಸು ಕಾಣುತ್ತಿದ್ದಾಳೆ.
ಆಫ್ಸನ್ ಆಶಿಕ್ ಮಹಿಳಾ ಫುಟ್‌ಬಾಲ್ ತಂಡದ ಸದಸ್ಯರೊಂದಿಗೆ ಮಂಗಳವಾರ ಗೃಹಸಚಿವ ರಾಜನಾಥ ಸಿಂಗ್ ಅವರನ್ನು ಭೇಟಿಯಾಗಿ 30 ನಿಮಿಷ ಮಾತುಕತೆ ನಡೆಸಿದ್ದರು.
‘ಜಮ್ಮು ಕಾಶ್ಮೀರದಲ್ಲಿ ಕ್ರೀಡಾ ಮೂಲಸೌಕರ್ಯಗಳ ಕುರಿತು ಚರ್ಚೆ ನಡೆಸಿದ್ದೇವೆ. ನಮ್ಮ ಬೇಡಿಕೆಗಳಿಗೆ ಸ್ಪಂದಿಸಿದ ಗೃಹಸಚಿವರು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಅವರಿಗೆ ಕರೆ ಮಾಡಿ ಸಮಸ್ಯೆ ಬಗೆಹರಿಸುವಂತೆ ಸೂಚಿಸಿದರು’ ಎಂದು ಆಶಿಕ್ ಹೇಳಿದ್ದಾರೆ.
21 ವರ್ಷದ ಆಫ್ಸನ್ ಆಶಿಕ್ ಕಣಿವೆ ರಾಜ್ಯದ ಮಹಿಳಾ ಫುಟ್‌ಬಾಲ್ ತಂಡದ ನಾಯಕಿಯಾಗಿದ್ದಾರೆ. ಇದೇ ವೇಳೆ ಮಾತನಾಡಿದ ಆಶಿಕ್, ‘ಹಿಂದೆ ನಡೆದ ಘಟನೆಯನ್ನು ಮತ್ತೆ ನೆನಪು ಮಾಡಿಕೊಳ್ಳುವುದಿಲ್ಲ. ಸದ್ಯ ನನ್ನ ಬದುಕು ಬದಲಾಗಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿ ರಾಜ್ಯ ಹಾಗೂ ದೇಶಕ್ಕೆ ಹೆಮ್ಮೆ ತರಲು ಬಯಸುತ್ತೇನೆ’ ಎಂದರು.
‘ರಾಜ್ಯದಲ್ಲಿ ಕ್ರೀಡೆಗೆ ಪ್ರೋತ್ಸಾಹ ದೊರೆತರೆ, ಯುವ ಜನತೆ ಭಯೋತ್ಪಾದನೆ ಹಾಗೂ ಇನ್ನಿತರೆ ಕಾನೂನುಬಾಹಿರ ಚಟುವಟಿಕೆಗಳಿಂದ ದೂರ ಉಳಿಯುತ್ತಾರೆ ಎಂದು ತಂಡದ ಸದಸ್ಯರು ಅಭಿಪ್ರಾಯಪಟ್ಟಿದ್ದಾರೆ.
ಜಮ್ಮು ಕಾಶ್ಮೀರಕ್ಕೆ ಪ್ರಧಾನಮಂತ್ರಿ ವಿಶೇಷ ಅನುದಾನದಡಿಯಲ್ಲಿ ₹100 ಕೋಟಿ ಈಗಾಗಲೇ ಬಿಡುಗಡೆಯಾಗಿದೆ ಎಂದು ರಾಜನಾಥ ಸಿಂಗ್ ತಿಳಿಸಿದ್ದಾರೆ.
Met the young and energetic girls of J&K’s first ever women football team. They are highly motivated & driven when it comes to football. Playing the role of new age ‘Gender Benders’ these girls are setting an example for others to follow. I wish them success and a great future. pic.twitter.com/3ZlMwhzkXm
— Rajnath Singh (@rajnathsingh) December 5, 2017
ಈ ಕುರಿತು ಟ್ವೀಟ್ ಮಾಡಿರುವ ರಾಜನಾಥ ಸಿಂಗ್ ‘ಮಹಿಳಾ ಪುಟ್ಬಾಲ್ ತಂಡದ ಆಟಗಾರ್ತಿಯರು ಇತರರಿಗೆ ಮಾದರಿಯಾಗಿದ್ದಾರೆ. ಇವರಿಗೆ ನಾನು ಯಶಸ್ಸು ಹಾಗೂ ಉತ್ತಮ ಭವಿಷ್ಯವನ್ನು ಹಾರೈಸುತ್ತೇನೆ’ ಎಂದಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.