ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಾಪಸಿಂಹಗೆ ನೆಟ್ಟಿಗರಿಂದ ಟೀಕೆ, ಶ್ಲಾಘನೆ

Last Updated 6 ಡಿಸೆಂಬರ್ 2017, 19:47 IST
ಅಕ್ಷರ ಗಾತ್ರ

ಮೈಸೂರು: ಹನುಮ ಜಯಂತಿ ವೇಳೆ ಹುಣಸೂರಿನಲ್ಲಿ ಸಂಸದ ಪ್ರತಾಪಸಿಂಹ ತೋರಿದ ವರ್ತನೆ ಹಾಗೂ ನಂತರ ಅವರು ಫೇಸ್‌ಬುಕ್‌ನಲ್ಲಿ ಹಾಕಿದ ಪೋಸ್ಟ್‌ಗಳಿಗೆ ನೆಟ್ಟಿಗರಿಂದ ಪರ ಹಾಗೂ ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿವೆ.

ಪ್ರತಾಪಸಿಂಹ ಅವರನ್ನು ‘ಅಂತ’ ಸಿನಿಮಾದಲ್ಲಿ ಸರಪಳಿಯಿಂದ ಬಂಧಿಯಾಗಿ ಜೈಲಿನ ಬಳಿ ನಿಂತಿರುವ ಕನ್ವರ್‌ಲಾಲ್‌ ರೂಪದಲ್ಲಿ ಬಹಳಷ್ಟು ನೆಟ್ಟಿಗರು ಟ್ರೋಲ್ ಮಾಡಿದ್ದಾರೆ. ‘ಗೂಂಡಾ ಸಂಸದ, ಪ್ರತಾಪನ ಅವಾಂತರ’ ಎಂದೂ ಟೀಕಾ ಪ್ರಹಾರ ನಡೆಸಿದ್ದಾರೆ.

‘ಸಿಂಹ ಎಂಬುದು ನಿಮ್ಮ ಮನೆಯವರು ಇಟ್ಟ ಹೆಸರು, ಸಿಂಗಂ ಎಂದು ಜನರು ಇಟ್ಟ ಹೆಸರು’ ಎಂದು ಪ್ರತಾಪಸಿಂಹ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ.ಚನ್ನಣ್ಣನವರ್ ಅವರ ಭಾವಚಿತ್ರ ಹಾಕಿ ಪೋಸ್ಟ್ ಮಾಡಿದ್ದಾರೆ.

ಪ್ರತಾಪಸಿಂಹ ಮಂಗಳವಾರ ಫೇಸ್‌ಬುಕ್‌ನಲ್ಲಿ ರವಿ ಡಿ.ಚನ್ನಣ್ಣನವರನ್ನು ಟೀಕಿಸಿ ಹಾಕಿದ ವಿಡಿಯೊವನ್ನು ‘ಮತ್ತೊಮ್ಮೆ ಸಿದ್ದರಾಮಯ್ಯ–2018’ ಬಳಗದಲ್ಲಿ ‘ಉಗಿದು ಶೇರ್ ಮಾಡಿ’ ಎಂಬ ಶೀರ್ಷಿಕೆ ಬಳಸಿ ಶೇರ್ ಮಾಡಲಾಗಿದೆ.

‘ಪ್ರತಾಪ ಸಿಮ್ಮರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರು, ಹಾಗೆಯೇ ಸಂಸತ್ ಸದಸ್ಯರು’ ಎಂಬ ಸ್ಟೇಟಸ್‌ಗೆ ಕೆಲವರು ‘ಹಾಗೆನೇ ಭಾರಿಕೇಡಿಗ’ ಎಂದು ಕಾಲೆಳೆದಿದ್ದಾರೆ.

‘ಒಗ್ಗಟ್ಟಿನಲ್ಲಿ ಬಲ? ಇಕ್ಕಟ್ಟಿನಲ್ಲಿ ತಾಪತ್ರಯ? ಹುಣಸೂರಿನ ಹನುಮ ಇದೀಗ ಅನಾಥ?’ ಎಂಬ ಸ್ಟೇಟಸ್‌ಗಳ ಜತೆಗೆ ಪ್ರತಾಪಸಿಂಹ ಅವರನ್ನು ಅವಹೇಳನ ಮಾಡುವ ಸಾಕಷ್ಟು ಟ್ರೋಲ್‌ಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ.

ರವಿ ಡಿ.ಚನ್ನಣ್ಣನವರ್‌ ಅವರತ್ತಲೂ ನೆಟ್ಟಿಗರು ಟೀಕಾ ಪ್ರಹಾರ ನಡೆಸಿದ್ದಾರೆ. ‘ಪ್ರತಾಪಸಿಂಹ ಅವರ ಜಾಗದಲ್ಲಿ ಬೇರೊಬ್ಬ ಸಾಮಾನ್ಯ ಪ್ರಜೆ ಇದ್ದರೆ ಏನು ಮಾಡುತ್ತಿದ್ದೀರಿ’ ಎಂದು ಪ್ರಶ್ನಿಸಿದ್ದಾರೆ. ಪ್ರತಾಪಸಿಂಹ ಹಾಗೂ ರವಿ ಡಿ.ಚನ್ನಣ್ಣನವರ್ ಅವರ ಭಾವಚಿತ್ರಗಳನ್ನು ಅಕ್ಕಪಕ್ಕ ಹಾಕಿ ‘ಯಾರು ಹಿತವರು ಈ ಇಬ್ಬರೊಳಗೆ’ ಎಂದು ಟ್ರೋಲ್ ಮಾಡಲಾಗಿದೆ. ‘ಕೇಸ್ ಹಾಕಿದ್ದು ಓಕೆ... ಆದರೆ ಬಿಲ್ಡಪ್ ಯಾಕೆ? ಇಟ್ಸ್ ನಾಟ್ ಓಕೆ.... ಅಧಿಕಾರಿಗಳೇ ಜೋಕೆ?’ ಎಂಬ ಸ್ಟೇಟಸ್ ಕೂಡ ಇದೆ.

ಇಂತಹ ಟ್ರೋಲ್‌ಗಳ ಜತೆಗೆ ಹಲವು ಸಭ್ಯ ಪೋಸ್ಟ್‌ಗಳೂ ಇವೆ. ‘ಕರ್ತವ್ಯ ನಿರ್ವಹಿಸಿದ ಮೈಸೂರು ಜಿಲ್ಲೆಯ ಎಸ್‌ಪಿ ರವಿ ಚನ್ನಣ್ಣನವರನ್ನು ದೂಷಿಸುವುದು ನ್ಯಾಯಸಮ್ಮತವಲ್ಲ’ ಎಂದು ಸ್ಟೇಟಸ್ ಹಾಕಿದ್ದಾರೆ. ‘ಪ್ರತಾಪಸಿಂಹ ಹುಣಸೂರಿನ ವಿಧಾನಸಭೆಗೆ ಸ್ಪರ್ಧಿಸಲು ಯೋಚಿಸುತ್ತಿದ್ದಾರೆಯೆ?’ ಎಂದು ಕೆಲವರು ಪ್ರಶ್ನಿಸಿದ್ದಾರೆ.

ಸಿಂಹಗೂ ಲೈಕ್‌ಗಳು:

ಪ್ರತಾಪಸಿಂಹ ಅವರು ಮಂಗಳವಾರ ಎಸ್‌ಪಿ ರವಿ ಡಿ.ಚನ್ನಣ್ಣನವರ್‌ ಅವರನ್ನು ಗುರಿಯಾಗಿಸಿಕೊಂಡು ಹಾಕಿದ ಫೇಸ್‌ ಬುಕ್‌ ವಿಡಿಯೊಗೆ 500ಕ್ಕೂ ಹೆಚ್ಚಿನ ‘ಲೈಕ್‌’ಗಳು ಲಭಿಸಿವೆ.

‘ನಿಮ್ಮ ಕೆಲಸವನ್ನು ಬೆಂಬಲಿಸುತ್ತೇವೆ, ಒಳ್ಳೆಯ ಕೆಲಸ ಮಾಡಿದ್ದೀರಿ’ ಎಂದು ಹಲವರು ಶ್ಲಾಘಿಸಿದ್ದಾರೆ. ‘ಇಂತಹ ಸಂಸದ ನಮಗೆ ಬೇಕು’ ಎಂದು ಸ್ಟೇಟಸ್ ಹಾಕಿದ್ದಾರೆ.

‘ನನ್ನ ರಾಜಕೀಯ ಭವಿಷ್ಯಕ್ಕಿಂತ ನನ್ನ ಧರ್ಮ ಹಾಗೂ ಆಚರಣೆಗಳನ್ನು ಕಾಪಾಡುವುದೇ ಅತಿ ಮುಖ್ಯ’ ಎಂಬ ಪ್ರತಾಪಸಿಂಹ ಅವರ ಹೇಳಿಕೆಯನ್ನು ಭಾವಚಿತ್ರ ಸಹಿತ ಪೋಸ್ಟ್ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT