7
ವಕೀಲರ ಕಾರಿನಲ್ಲಿ ದೊರೆತಿದ್ದ ₹ 1.97 ಕೋಟಿ

ಐ.ಟಿ ಇಲಾಖೆ ವಶಕ್ಕೆ ನೀಡಲು ಆದೇಶ

Published:
Updated:

ಬೆಂಗಳೂರು: ಹೈಕೋರ್ಟ್‌ ವಕೀಲ ಎಂ.ಸಿದ್ಧಾರ್ಥ ಅವರ ಕಾರಿನಲ್ಲಿ ದೊರೆತ್ತಿದ್ದ ₹ 1.97 ಕೋಟಿ ಮೊತ್ತವನ್ನು ಆದಾಯ ತೆರಿಗೆ ಇಲಾಖೆ (ಐಟಿ) ವಶಕ್ಕೆ ಒಪ್ಪಿಸುವಂತೆ ವಿಧಾನಸೌಧ ಠಾಣಾ ಪೊಲೀಸರಿಗೆ ಹೈಕೋರ್ಟ್ ನಿರ್ದೇಶಿಸಿದೆ.

‘ಹಣದ ಮೂಲದ ಬಗ್ಗೆ ನಾವು ತನಿಖೆ ನಡೆಸುತ್ತೇವೆ. ಅದಕ್ಕೆ ನಿರ್ದೇಶಿಸಬೇಕು’ ಎಂದು ಕೋರಿ ಐ.ಟಿ (ತನಿಖಾ ವಿಭಾಗ) ಇಲಾಖೆಯ ಉಪ ನಿರ್ದೇಶಕ ಎಸ್.ಜನಾರ್ದನ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಎನ್‌.ಫಣೀಂದ್ರ ಅವರಿದ್ದ ಏಕಸದಸ್ಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.

ಇದನ್ನು ಮಾನ್ಯ ಮಾಡಿದ ನ್ಯಾಯಪೀಠ, ‘ಸಿದ್ಧಾರ್ಥ ವಿರುದ್ಧ ದಾಖಲಿಸಿರುವ ಆರೋಪ ಸಾಬೀತಪಡಿಸುವಲ್ಲಿ ವಿಧಾನಸೌಧ ಠಾಣಾ ಪೊಲೀಸರು ಸಫಲವಾದರೆ, ಐ.ಟಿ ಇಲಾಖೆಯು ಬಡ್ಡಿ ಸಮೇತ ₹ 1.97 ಕೋಟಿಯನ್ನು ಹಿಂದಿರುಗಿಸಬೇಕು. ಈ ಕುರಿತಂತೆ ಪೊಲೀಸರು ಹಾಗೂ ಐ.ಟಿ ಇಲಾಖೆ ಒಪ್ಪಂದ (ಇಂಡೆಮ್ನಿಟಿ ಬಾಂಡ್) ಮಾಡಿಕೊಳ್ಳಬೇಕು’ ಎಂದು ಸೂಚಿಸಿದೆ.

‘ವಕೀಲ ಸಿದ್ಧಾರ್ಥ ಅವರ ಕಾರಿನಲ್ಲಿ ದೊಡ್ಡ ಮೊತ್ತದ ಹಣ ಸಿಕ್ಕಿದೆ. ಅದಕ್ಕೆ ಸೂಕ್ತ ದಾಖಲೆಗಳಿಲ್ಲ. ಆದ್ದರಿಂದ ಈ ಹಣ ಯಾರಿಗೆ ಸೇರಿದೆ ಮತ್ತು ಅವರು ಆದಾಯ ತೆರಿಗೆ ಪಾವತಿ ಮಾಡಿದ್ದಾರೆಯೇ ಇಲ್ಲವೇ ಅಥವಾ ಇದು ತೆರಿಗೆಯನ್ನು ವಂಚಿಸಿದ ಹಣವೇ’ ಎಂಬುದರ ಬಗ್ಗೆ ವಿವರವಾದ ಪರಿಶೀಲನೆ ನಡೆಸಬೇಕಿದೆ. ಆದ್ದರಿಂದ ಈ ಹಣವನ್ನು ನಮ್ಮ ವಶಕ್ಕೆ ಒಪ್ಪಿಸಿ’ ಎಂಬುದು ಐ.ಟಿ.ಕೋರಿಕೆ.

ಪ್ರಕರಣವೇನು?: 2016ರ ಅಕ್ಟೋಬರ್ 21ರಂದು ಸಿದ್ಧಾರ್ಥ ವೋಕ್ಸ್ ವ್ಯಾಗನ್ ಕಾರಿನಲ್ಲಿ ವಿಧಾನಸೌಧದ ಪಶ್ಚಿಮದ್ವಾರದ ಮೂಲಕ ಒಳ ಪ್ರವೇಶಿಸಿದ್ದರು. ಆಗ ಸ್ಥಳದಲ್ಲಿದ್ದ ಭದ್ರತಾ ಪೊಲೀಸರು ತಪಾಸಣೆ ನಡೆಸಿದಾಗ ಕಾರಿನ ಡಿಕ್ಕಿಯಲ್ಲಿ ₹ 1.97 ಕೋಟಿ ನಗದು ಪತ್ತೆಯಾಗಿತ್ತು.

ಈ ಕುರಿತಂತೆ ವಿಧಾನಸೌಧ ಠಾಣಾ ಪೊಲೀಸರು ಕಾರು ಹಾಗೂ ಹಣ ಜಪ್ತಿ ಮಾಡಿ ತನಿಖೆ ಕೈಗೊಂಡಿದ್ದರು.

‘ಪೊಲೀಸರು ವಶಪಡಿಸಿಕೊಂಡಿರುವ ಹಣ ಹಿಂದಿರುಗಿಸಬಾರದು’ ಎಂದು ಐ.ಟಿ ಇಲಾಖೆ, ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿತ್ತು.

ಈ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ಐ.ಟಿ ಇಲಾಖೆ ಹೈಕೋರ್ಟ್ ಮೆಟ್ಟಿಲೇರಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry