ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಯಕ್ತಿಕ ಪ್ರತಿಷ್ಠೆ ಬದಿಗಿಡಿ: ವೇಣುಗೋಪಾಲ್ ಎಚ್ಚರಿಕೆ

ರಾಜ್ಯ ಕಾಂಗ್ರೆಸ್ ಉಸ್ತುವಾರಿ ಎಚ್ಚರಿಕೆ
Last Updated 7 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ವೈಯಕ್ತಿಕ ಪ್ರತಿಷ್ಠೆಗಾಗಿ ಪಕ್ಷಕ್ಕೆ ಹಾನಿ ಉಂಟು ಮಾಡಿದರೆ ಸಹಿಸುವುದಿಲ್ಲ’ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆ.ಸಿ. ವೇಣುಗೋಪಾಲ್ ಎಚ್ಚರಿಕೆ ನೀಡಿದ್ದಾರೆ.

ಬೆಳಗಾವಿ ಮತ್ತು ಕಲಬುರ್ಗಿ ವಿಭಾಗಗಳ ಜಿಲ್ಲೆಗಳ ಪಕ್ಷದ ಮುಖಂಡರ ಜೊತೆ ಗುರುವಾರ ಸಭೆ ನಡೆಸಿದ ಅವರು, ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಪಕ್ಷದ ಸಂಘಟನೆ ಹಾಗೂ ಬಲವರ್ಧನೆಗೆ ಶ್ರಮಿಸುವಂತೆ ತಾಕೀತು ಮಾಡಿದ್ದಾರೆ.

‘ಮುಂಬರುವ ಚುನಾವಣೆಯಲ್ಲಿ ಗೆದ್ದು ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವುದೇ ನಮ್ಮ ಮೊದಲ ಆದ್ಯತೆ ಆಗಬೇಕು. ಅಧಿಕಾರದ ಗದ್ದುಗೆ ಹಿಡಿಯಲು ಯಾವುದೇ ಒಳ ಜಗಳ, ಒಣ ಪ್ರತಿಷ್ಠೆ ಅಡ್ಡಿ ಆಗಬಾರದು. ಇದರಿಂದ ಪಕ್ಷಕ್ಕೂ ಹಾನಿ ಆಗಲಿದೆ. ಇದನ್ನು ಗಮನದಲ್ಲಿಟ್ಟು ಕಾರ್ಯಪ್ರವೃತ್ತರಾಗಿ’ ಎಂದು ಅವರು ಸಲಹೆ ನೀಡಿದ್ದಾರೆ.

‘ಹಿಂದಿನ ಸಭೆಗಳಲ್ಲಿ ಚರ್ಚೆಯಾದ ಯಾವೆಲ್ಲ ಅಂಶಗಳನ್ನು ನಿಮ್ಮ ಜಿಲ್ಲೆಗಳಲ್ಲಿ ಅನುಷ್ಠಾನಕ್ಕೆ ತಂದಿದ್ದೀರಿ. ಮನೆ ಮನೆ ಕಾಂಗ್ರೆಸ್‌ ಅಭಿಯಾನಕ್ಕೆ ಜನಸ್ಪಂದನೆ ಹೇಗಿತ್ತು’ ಮತ್ತಿತರ ಅಂಶಗಳ ಬಗ್ಗೆ ಮಾಹಿತಿ ಪಡೆದ ವೇಣುಗೋಪಾಲ್‌, ಪಕ್ಷ ಹಮ್ಮಿಕೊಳ್ಳುವ ಎಲ್ಲ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ಬೆಳಗಾವಿ ಗ್ರಾಮೀಣ ಭಾಗ, ಧಾರವಾಡ, ಹುಬ್ಬಳ್ಳಿ ನಗರ, ಉತ್ತರ ಕನ್ನಡ, ಬಾಗಲಕೋಟೆ, ಚಿಕ್ಕೋಡಿ, ಗದಗ, ವಿಜಾಪುರ ಜಿಲ್ಲೆಗಳ ಮುಖಂಡರ ಜೊತೆ ವೇಣುಗೋಪಾಲ್ ಸಭೆ ನಡೆಸಿದರು. ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ, ಕಾರ್ಯಾಧ್ಯಕ್ಷರಾದ ದಿನೇಶ್ ಗುಂಡೂರಾವ್, ಎಸ್.ಆರ್. ಪಾಟೀಲ ಇದ್ದರು.

ಕೆಪಿಸಿಸಿ ಕಚೇರಿಯಲ್ಲಿ ಮೂರು ದಿನಗಳಿಂದ ಠಿಕಾಣಿ ಹೂಡಿರುವ ವೇಣುಗೋಪಾಲ್‌, ಪಕ್ಷದ ಪ್ರಮುಖರೊಂದಿಗೆ ಸರಣಿ ಸಭೆ ನಡೆಸಿದರು. ವಿಭಾಗವಾರು ನಡೆದ ಸಭೆಗಳಲ್ಲಿ ಪಕ್ಷದ ಶಾಸಕರು, ಮಾಜಿ ಶಾಸಕರು, ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತವರು, ಜಿಲ್ಲಾ ಘಟಕಗಳ ಪದಾಧಿಕಾರಿಗಳು ಭಾಗವಹಿಸಿದರು. ಪಕ್ಷ ಸಂಘಟನೆ ಮತ್ತು ಚುನಾವಣಾ ತಂತ್ರಗಳ ಕುರಿತು ಅಭಿಪ್ರಾಯ ಸಂಗ್ರಹಿಸಲಾಯಿತು.

ಮುಂದುವರಿದ ಮುಸುಕಿನ ಗುದ್ದಾಟ?

ಜಾರಕಿಹೊಳಿ ಸಹೋದರರ ನಡುವಿನ ಮುಸುಕಿನ ಗುದ್ದಾಟ ಮತ್ತೆ ಬಹಿರಂಗವಾಗಿದೆ. ಬೆಳಗಾವಿ ವಿಭಾಗ ಮಟ್ಟದ ಸಭೆಗೆ ಸಚಿವ ರಮೇಶ ಜಾರಕಿಹೊಳಿ ಹಾಜರಾದರೆ, ಸತೀಶ್ ಜಾರಕಿಹೊಳಿ ಗೈರಾದರು. ‌ಕಾರ್ಯಕ್ರಮವೊಂದರಲ್ಲಿ ಭಾಗವಹಿಸುವ ನೆಪದಲ್ಲಿ ಸತೀಶ ಜಾರಕಿಹೊಳಿ ಬೆಳಗಾವಿಯಲ್ಲೇ ಉಳಿದಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT