3

ಮೆಟ್ರೊದಲ್ಲಿ ಲಗೇಜಿಗೂ ಟಿಕೆಟ್‌!

Published:
Updated:
ಮೆಟ್ರೊದಲ್ಲಿ ಲಗೇಜಿಗೂ ಟಿಕೆಟ್‌!

ಬೆಂಗಳೂರು: ಇಷ್ಟು ದಿನ ‘ನಮ್ಮ ಮೆಟ್ರೊ’ ರೈಲಿನಲ್ಲಿ ಪ್ರಯಾಣಿಸಲು ಮಾತ್ರ ಟಿಕೆಟ್‌ ಪಡೆಯಬೇಕಿತ್ತು. ಆದರೆ, ಇನ್ನು ಮುಂದೆ ಬ್ಯಾಗ್‌ ತೆಗೆದುಕೊಂಡು ಹೋಗಬೇಕಾದರೆ ಪ್ರತ್ಯೇಕ ಟಿಕೆಟ್‌ ಪಡೆಯುವುದು ಕಡ್ಡಾಯ.

ಪ್ರಯಾಣಿಕರು ತಮ್ಮ ಜತೆಯಲ್ಲಿ ತೆಗೆದುಕೊಂಡು ಹೋಗುವ ಬ್ಯಾಗ್‌ಗಳಿಗೆ  ಬಿಎಂಆರ್‌ಸಿಎಲ್‌ ಟಿಕೆಟ್‌ ದರ ನಿಗದಿ ಮಾಡಿದೆ. ಪ್ರತಿ ಬ್ಯಾಗ್‌ಗೆ ₹30 ಪಡೆಯುತ್ತಿದೆ.

ಕೆಲ ನಿಲ್ದಾಣಗಳಲ್ಲಿ ಗುರುವಾರದಿಂದಲೇ ಬ್ಯಾಗ್‌ಗಳಿಗೆ ಟಿಕೆಟ್‌ ನೀಡಲಾಗುತ್ತಿದೆ. ಯಾವುದೇ ಮುನ್ಸೂಚನೆ ನೀಡದೆ ಬ್ಯಾಗ್‌ಗಳಿಗೆ ಟಿಕೆಟ್‌ ನಿಗದಿಪಡಿಸಿದ್ದಕ್ಕೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಎಂದಿನಂತೆ ನಿಲ್ದಾಣದ ಒಳಗೆ ಹೊರಟಿದ್ದೆ. ನನ್ನನ್ನು ತಡೆದಿದ್ದ ಮೆಟ್ರೊ ಸಿಬ್ಬಂದಿ, ಬ್ಯಾಗ್‌ಗೆ ಟಿಕೆಟ್‌ ತೆಗೆದುಕೊಳ್ಳುವಂತೆ ಹೇಳಿದರು. ನನ್ನ ಬ್ಯಾಗ್‌ ಚಿಕ್ಕದಾಗಿದ್ದರಿಂದ ಟಿಕೆಟ್‌ ಏಕೆ ಎಂದು ಪ್ರಶ್ನಿಸಿದೆ. ಆಗ ಸಿಬ್ಬಂದಿ, ಉನ್ನತ ಅಧಿಕಾರಿಗಳ ಆದೇಶವಿದೆ. ಟಿಕೆಟ್ ಪಡೆಯಲೇ ಬೇಕು ಎಂದು ಪಟ್ಟುಹಿಡಿದರು’ ಎಂದು ಕೆಲ ಪ್ರಯಾಣಿಕರು ತಿಳಿಸಿದರು.

‘ಎಷ್ಟು ತೂಕದ ಬ್ಯಾಗ್‌ಗಳಿಗೆ ಟಿಕೆಟ್‌ ತೆಗೆದುಕೊಳ್ಳಬೇಕು ಎಂಬ ಬಗ್ಗೆ ಮೆಟ್ರೊ ಸಿಬ್ಬಂದಿ ಹೇಳುತ್ತಿಲ್ಲ. ಈ ಬಗ್ಗೆ ನಿಲ್ದಾಣದ ಎಲ್ಲಿಯೂ ಸೂಚನಾ ಫಲಕ ಅಳವಡಿಸಿಲ್ಲ. ಪ್ರತಿ ಬ್ಯಾಗ್‌ಗೂ ₹30 ಪಡೆಯುತ್ತಿದ್ದು, ಅದನ್ನು ಪಾವತಿ ಮಾಡದಿದ್ದರೆ ನಿಲ್ದಾಣದ ಒಳಗೆ ಬಿಡುವುದಿಲ್ಲವೆಂದು ಸಿಬ್ಬಂದಿ ಹೇಳುತ್ತಿದ್ದಾರೆ. ಮೆಟ್ರೊ ಸಂಚಾರ ಅಗತ್ಯವಾಗಿದ್ದರಿಂದ ಟಿಕೆಟ್‌ ಪಡೆದುಕೊಂಡು ಹೋದೆವು’ ಎಂದು ಕೆ.ಕೈಲಾಶ್‌ ಹೇಳಿದರು.

‘ಒತ್ತಾಯದಿಂದ ಬ್ಯಾಗ್‌ಗಳಿಗೆ ಹಣ ಪಡೆಯುವುದು ಸರಿಯಲ್ಲ. ದೆಹಲಿ ಮೆಟ್ರೊದಲ್ಲಿ ಇಲ್ಲದ ನಿಯಮ ಇಲ್ಲಿ ಏಕೆ’ ಎಂದು ಪ್ರಯಾಣಿಕ ಎಂ.ಅಭಿಲಾಷ್ ಪ್ರಶ್ನಿಸಿದರು.

‘ರೈಲು, ಕೆಎಸ್‌ಆರ್‌ಟಿಸಿ ಹಾಗೂ ಬಿಎಂಟಿಸಿಯಲ್ಲಿ ಬ್ಯಾಗ್‌ಗಳಿಗೆ ಪ್ರತ್ಯೇಕ ಟಿಕೆಟ್‌ ಇಲ್ಲ. ವಿಮಾನದಲ್ಲಿ 19 ಕೆ.ಜಿ ಗಿಂತ ಹೆಚ್ಚಿದ್ದರೆ ಮಾತ್ರ ₹20

ಸಂಗ್ರಹಿಸುತ್ತಾರೆ’ ಎಂದರು.

ಬಿಎಂಆರ್‌ಸಿಎಲ್‌ ಕಾರ್ಯಾಚರಣೆ ಹಾಗೂ ನಿರ್ವಹಣೆ ವಿಭಾಗದ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್‌.ಶಂಕರ್‌, ‘ಲೋಹಶೋಧಕ ಯಂತ್ರದಲ್ಲಿ ಬ್ಯಾಗ್‌ ಪರಿಶೀಲನೆ ನಡೆಸುವ ಸಿಬ್ಬಂದಿಯೇ ಟಿಕೆಟ್‌ ಪಡೆಯುವಂತೆ ಪ್ರಯಾಣಿಕರಿಗೆ ಹೇಳಲಿದ್ದಾರೆ. ಕೌಂಟರ್‌ನಲ್ಲಿ ಬೇಕಾಬಿಟ್ಟಿಯಾಗಿ ಹಣ ಪಡೆಯುವಂತಿಲ್ಲ. ತೂಕ ಹಾಗೂ ಅಳತೆ ನಿರ್ಧರಿಸಿ ಟಿಕೆಟ್‌ ನಿಗದಿ ಮಾಡುವಂತೆ ನಿಲ್ದಾಣಗಳ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry