ಭಾನುವಾರ, ಮಾರ್ಚ್ 7, 2021
27 °C

ರಸ್ತೆಯಲ್ಲಿ ಹುರುಳಿ ಒಕ್ಕಣೆ: ಸಂಚಾರಕ್ಕೆ ಅಡ್ಡಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಸ್ತೆಯಲ್ಲಿ ಹುರುಳಿ ಒಕ್ಕಣೆ: ಸಂಚಾರಕ್ಕೆ ಅಡ್ಡಿ

ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಚುಮು ಚಳಿ ಆವರಿಸುತ್ತಿರುವಂತೆ  ರೈತರು ತೆನೆದೂಗುತ್ತಿರುವ ಹುರುಳಿ ಯನ್ನು ಕಟಾವು ಮಾಡುತ್ತಾ ಸಂಭ್ರಮಿಸುತ್ತಿದ್ದರೆ, ವಾಹನ ಚಾಲಕರು ಮಾತ್ರ ಪರದಾಡುತ್ತಿದ್ದಾರೆ. ಇದಕ್ಕೆ ಕಾರಣ, ರೈತರು ಹುರುಳಿಯನ್ನು ರಸ್ತೆಯಲ್ಲೇ ಒಕ್ಕಣೆ ಮಾಡುತ್ತಿರುವುದು.

ತಾಲ್ಲೂಕಿನ ಮಡಹಳ್ಳಿ ರಸ್ತೆ ಮತ್ತು ಬೇಗೂರಿನಿಂದ ಹೆಡಿಯಾಲಕ್ಕೆ ಹೋಗುವ ಮುಖ್ಯ ರಸ್ತೆಯಲ್ಲಿ ಸುಮಾರು 10 ಕಿ.ಮೀ. ದೂರ ಹುರುಳಿ ಹುಲ್ಲಿನ ಮೇಲೆ ವಾಹನ ಚಾಲನೆ ಮಾಡಬೇಕಾದ ಪರಿಸ್ಥಿತಿ ಎದುರಾಗಿದೆ.

ಕಳೆದ ವರ್ಷ ಮಳೆಯಿಲ್ಲದೆ ಈ ಭಾಗದ ರೈತರು ಯಾವುದೇ ಬೆಳೆಯನ್ನು ಬೆಳೆದಿರಲಿಲ್ಲ. ಈ ವರ್ಷ ಉತ್ತಮವಾದ ಮಳೆಯಾದ ಹಿನ್ನಲೆಯಲ್ಲಿ ಎರಡನೇಯ ಬೆಳೆಗೆ ಹುರಳಿಯನ್ನು ಬಿತ್ತಿದ್ದರು. ಇದೀಗ ಕಟಾವಿಗೆ ಬಂದಿದ್ದು ಹಲವು ರೈತರು ಕಣಗಳ ಬದಲಿಗೆ ರಸ್ತೆಗೆ ಹಾಕಿ ಒಕ್ಕಣೆ ಮಾಡುತ್ತಿದ್ದಾರೆ.

‘ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ ಚಟುವಟಿಕೆಗಾಗಿ ಕಣ ನಿರ್ಮಿಸಿಕೊಟ್ಟಿ ದ್ದರೂ ರೈತರು ಆ ಸ್ಥಳಗಳಲ್ಲಿ ಒಕ್ಕಣೆ ಮಾಡದೇ ರಸ್ತೆಗೆ ಹಾಕುತ್ತಿರುವುದರಿಂದ ವಾಹನ ಸವಾರರಿಗೆ ತೀವ್ರ ತೊಂದರೆಯಾಗುತ್ತಿದೆ. ಆದರೂ ವಿಧಿಯಿಲ್ಲದೆ ಅದರ ಮೇಲೆ ಯೇ ಚಾಲನೆ ಮಾಡಬೇಕಾಗಿದೆ’ ಎಂದು ಚಾಲಕರು ಅಳಲು ತೋಡಿಕೊಂಡಿದ್ದಾರೆ.

‘ಕೃಷಿ ಇಲಾಖೆ ಅಧಿಕಾರಿಗಳು ಎಲ್ಲ ಗ್ರಾಮಗಳಲ್ಲಿ ಸಾಮೂಹಿಕ ಒಕ್ಕಣೆ ಕಣ ಹಾಗೂ ವೈಯಕ್ತಿಕ ಕಣ ನಿರ್ಮಿಸಿಕೊಳ್ಳಲು ಹೆಚ್ಚಿನ ಯೋಜನೆ ಗಳನ್ನು ರೂಪಿಸಿದ ಕಾರಣ ಒಕ್ಕಣೆ ಕಾರ್ಯಕ್ಕೆ ತೊಂದರೆಯಾಗುತ್ತಿದೆ. ಜತೆಗೆ ಕೆಲವರು ವೈಯಕ್ತಿಕ ಕಣ ನಿರ್ಮಿಸಿಕೊಳ್ಳದೆ ರಸ್ತೆಯಲ್ಲಿ ಒಕ್ಕಣೆ ಮಾಡುತ್ತಿದ್ದಾರೆ’ ಎಂದು ರೈತರೊಬ್ಬರು ಆರೋಪಿಸಿದರು.

‘ದಿನನಿತ್ಯ ಗುಂಡ್ಲುಪೇಟೆಯಿಂದ ದೇಶಿಪುರ ಗ್ರಾಮದವರೆಗೆ ಬಾಡಿಗೆ ಆಟೊವನ್ನು ಓಡಿಸುತ್ತೇನೆ. ಹುರುಳಿ ಯನ್ನು ಹಾಕಿರುವುದರಿಂದ ವಾಹನ ಚಾಲನೆ ಮಾಡುವುದು ತುಂಬಾ ತೊಂದರೆಯಾಗುತ್ತಿದೆ. ಅಲ್ಲದೇ, ಕೆಟ್ಟುನಿಲ್ಲುವ ಸಾಧ್ಯತೆಯೂ ಇರುತ್ತದೆ’  ಎಂದು ಆಟೊ ಚಾಲಕರೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

ದ್ವಿಚಕ್ರವಾಹನಗಳಿಗೆ ಹುರುಳಿ ಬಳ್ಳಿ ಗಳು ಸುತ್ತಿಕೊಂಡು ನಿಯಂತ್ರಣ ತಪ್ಪಿ ಬೀಳುವ ಸಾಧ್ಯತೆ ಇದೆ. ಆದ್ದರಿಂದ ರಸ್ತೆಯಲ್ಲಿ ಒಕ್ಕಣೆ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂಬುದು ಶಿಕ್ಷಕರೊಬ್ಬರ ಒತ್ತಾಯವಾಗಿದೆ.

‘ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಕಣಗಳನ್ನು ಮಾಡಲಾಗಿದೆ. ಕಣಗಳಲ್ಲಿ ಒಕ್ಕಣೆ ಮಾಡಿದರೆ ದಿಂಡನ್ನು ಒಡೆಯಲು ಮೂರು ನಾಲ್ಕು ಆಳುಗಳು ಬೇಕಾಗುತ್ತಾರೆ. ರಸ್ತೆಗೆ ಹಾಕಿದರೆ ಓಡಾಡುವ ವಾಹನಗಳಿಂದ ದಿಂಡು ಒಡೆಯುವುದು ತಪ್ಪುತ್ತದೆ ಎನ್ನುವ ಉದ್ದೇಶದಿಂದ ರಸ್ತೆಗೆ ಹಾಕುತ್ತಿದ್ದಾರೆ. ಹಾಗೆ ಮಾಡದಂತೆ ರೈತರಿಗೆ ತಿಳಿವಳಿಕೆ ಹೇಳಲಾಗುತ್ತಿದೆ’ ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದೇಗೌಡ ತಿಳಿಸಿದರು.

‘ರಸ್ತೆಯಲ್ಲಿ  ಹುರುಳಿ ಹಾಕಿರುವ ರೈತರಿಗೆ ಎಚ್ಚರಿಕೆ ನೀಡಲಾಗಿದೆ. ರಸ್ತೆಗಳಿಗೆ ಹಾಕದಂತೆ ಹೈ ವೇ ಪೊಲೀ ಸರು ಸಹ ಸೂಚನೆ ನೀಡುತ್ತಿದ್ದಾರೆ. ಈಗ ಆದಷ್ಟು ಕಡಿಮೆಯಾಗಿದೆ’ ಎಂದು ಸಬ್‌ಇನ್‌ಸ್ಪೆಕ್ಟರ್‌ ಶಿವರುದ್ರ ತಿಳಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.