ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗ್ರಾ.ಪಂ.ಗೆ ಸಿಗುವುದೇ ಹೊಸ ಕಟ್ಟಡ ಭಾಗ್ಯ?

Last Updated 8 ಡಿಸೆಂಬರ್ 2017, 9:17 IST
ಅಕ್ಷರ ಗಾತ್ರ

ಡಂಬಳ: ಇಲ್ಲಿನ ಗ್ರಾಮ ಪಂಚಾಯ್ತಿ ಹೊಸ ಕಟ್ಟಡ ನಿರ್ಮಾಣ ಕಾಮಗಾರಿ ಪ್ರಾರಂಭಗೊಂಡು ಒಂದೂವರೆ ವರ್ಷ ಕಳೆದರೂ ಇನ್ನೂ ಪೂರ್ಣಗೊಂಡಿಲ್ಲ. ಕಾಮಗಾರಿ ಆಮೆ ವೇಗದಲ್ಲಿ ನಡೆಯುತ್ತಿದ್ದು, ಪಂಚಾಯ್ತಿ ಸಿಬ್ಬಂದಿ, ಸಾರ್ವಜನಿಕರು ಸಮಸ್ಯೆ ಎದುರಿಸುತ್ತಿದ್ದಾರೆ.

ಕೆಲವು ತಿಂಗಳು ರೇಷ್ಮೆ ಇಲಾಖೆ ನಂತರ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್, ಬಳಿಕ ಗ್ರಾಮ ಪಂಚಾಯ್ತಿ ಸಭಾ ಭವನ ಹೀಗೆ ಹಲವು ಕಡೆ ಪಂಚಾಯ್ತಿ ಕಚೇರಿ ಸ್ಥಳಾಂತರಗೊಂಡಿದೆ. ವಿವಿಧ ಕೆಲಸಗಳಿಗಾಗಿ ನಿತ್ಯ ನೂರಾರು ಜನರು ಗ್ರಾಮ ಪಂಚಾಯ್ತಿ ಕಾರ್ಯಾಲಯಕ್ಕೆ ಬರುತ್ತಾರೆ. ಆದರೆ, ಸ್ವಂತ ಕಟ್ಟಡ ಇಲ್ಲದಿರುವುದರಿಂದ ಪಂಚಾಯ್ತಿ ಕಾರ್ಯಾಲಯ ಯಾವ ಕಟ್ಟಡದಲ್ಲಿದೆ, ಅಧಿಕಾರಿಗಳು ಎಲ್ಲಿದ್ದಾರೆ ಎಂದು ಹುಡುಕುವುದೇ ಸಾರ್ವಜನಿಕರಿಗೆ ದೊಡ್ಡ ಕೆಲಸವಾಗಿದೆ.

ಡಂಬಳ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ನಾರಾಯಣಪುರ, ಹೊಸಡಂಬಳ, ರಾಮೇನಹಳ್ಳಿ ಗ್ರಾಮಗಳು ಬರುತ್ತಿದ್ದು, 20 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ‘ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಕಟ್ಟಡ ನಿರ್ಮಾಣ ಕಾರ್ಯ ನಿಧಾನವಾಗಿ ನಡೆಯುತ್ತಿದೆ’ ಎನ್ನುವುದು ಗ್ರಾಮಸ್ಥರ ಆರೋಪ.

ನಿರ್ಮಿತಿ ಕೇಂದ್ರ ಕಟ್ಟಡ ನಿರ್ಮಿಸುತ್ತಿದ್ದು, ಈಗಾಗಲೇ ₹ 15 ಲಕ್ಷ ಅನುದಾನ ಖರ್ಚಾಗಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ₹ 17 ಲಕ್ಷ ಮೀಸಲಿಡಲಾಗಿದೆ. ಇದರಲ್ಲಿ ₹ 1.35 ಲಕ್ಷ ಕೂಲಿ ಪಾವತಿಯಾಗಿದೆ. ‘ಹೆಚ್ಚುವರಿ ಅನುದಾನಕ್ಕಾಗಿ ಶಾಸಕರಿಗೆ ಮನವಿ ಸಲ್ಲಿಸಲಾಗಿದ್ದು, ಸಕಾರಾತ್ಮಕ ಸ್ಪಂದನೆ ಲಭಿಸಿದೆ’ ಎಂದು ಪಿಡಿಒ ಎಸ್.ಕೆ.ಕವಡೆಲೆ ಹೇಳಿದರು.

ತಾಲ್ಲೂಕಿನಲ್ಲೇ ದೊಡ್ಡ ಗ್ರಾಮ ಪಂಚಾಯ್ತಿ ಎಂಬ ಹೆಗ್ಗಳಿಕೆಯನ್ನು ಡಂಬಳ ಪಂಚಾಯ್ತಿ ಹೊಂದಿದ್ದು, 29 ಸದಸ್ಯರನ್ನು ಹೊಂದಿದೆ. ಸಾಮಾನ್ಯಸಭೆ, ಗ್ರಾಮಸಭೆ ನಡೆಯುವ ದಿನಗಳಲ್ಲಿ ಅಧಿಕಾರಿಗಳು, ಪಂಚಾಯ್ತಿ ಸದಸ್ಯರಿಗೇ ಕುಳಿತುಕೊಳ್ಳಲು ಕುರ್ಚಿ ಹಾಕಲು ಸಹ ಸ್ಥಳದ ಸಮಸ್ಯೆ ಕಾಡುತ್ತಿದೆ.

ಉದ್ಯೋಗ ಖಾತ್ರಿ ಕೂಲಿ, ಕಂಪ್ಯೂಟರ್ ಉತಾರ, ಆಶ್ರಯ ಮನೆಗಳ ಬಿಲ್, ಕುಡಿಯುವ ನೀರಿನ ಸಮಸ್ಯೆ, ಸ್ವಚ್ಚತೆ ಸೇರಿದಂತೆ ಹಲವು ಸಮಸ್ಯೆಗಳನ್ನು ಹೇಳಿಕೊಂಡು ನಿತ್ಯ ನೂರಾರು ಜನರು ಪಂಚಾಯ್ತಿ ಕಾರ್ಯಾಲಯಕ್ಕೆ ಬರುತ್ತಾರೆ. ಅವರೆಲ್ಲರಿಗೂ ಸಮಸ್ಯೆಯಾಗಿದೆ. ‘ಶೀಘ್ರವೇ ಕಾಮಗಾರಿ ಪೂರ್ಣಗೊಳಿಸಿ ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು’ ಎನ್ನುತ್ತಾರೆ ಗ್ರಾಮದ ಅಶೋಕ ತಳಗೇರಿ ಹಾಗೂ ಶಿವಪ್ಪ ಕರಿಗಾರ ಹಾಗೂ ಮಂಜುನಾಥ ಹಡಪದ.

ಹೊಸಕಟ್ಟಡದಲ್ಲಿ ಅಧ್ಯಕ್ಷ, ಉಪಾಧ್ಯಕ್ಷ, ಪಿಡಿಒ, ಬಿಲ್‌ ಕಲೆಕ್ಟರ್, ಕಂಪ್ಯೂಟರ್‌ ಕೊಠಡಿ, ಮಹಿಳಾ ಮತ್ತು ಪುರುಷರ ಪ್ರತ್ಯೇಕ ಕೊಠಡಿ, ಶೌಚಾಲಯ, ಸಭಾಭವನ ಇರಲಿದೆ.

* * 

ಕಾಮಗಾರಿ ಬೇಗ ಪೂರ್ಣಗೊಂಡರೆ ಸಾರ್ವಜನಿಕರ ಎಲ್ಲ ಸಮಸ್ಯೆಗಳಿಗೆ ಒಂದೇ ಸೂರಿನಡಿ ಪರಿಹಾರ ಲಭಿಸುತ್ತದೆ. ವಿನಾಕಾರಣ ಅಲೆದಾಟ ತಪ್ಪುತ್ತದೆ. ಸಮಯದ ಉಳಿತಾಯವೂ ಆಗುತ್ತದೆ
ಸಿದ್ದಪ್ಪ ನಂಜಪ್ಪನವರ
ಸ್ಥಳೀಯ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT