ಗುರುವಾರ , ಮಾರ್ಚ್ 4, 2021
30 °C

ಹರೆಯದಲ್ಲೇ ಪಾತಕ ಲೋಕದ ನಂಟು..!

ಡಿ.ಬಿ.ನಾಗರಾಜ್‌ Updated:

ಅಕ್ಷರ ಗಾತ್ರ : | |

ಹರೆಯದಲ್ಲೇ ಪಾತಕ ಲೋಕದ ನಂಟು..!

ವಿಜಯಪುರ: ಪತ್ರಕರ್ತನ ಹತ್ಯೆಗಾಗಿ ಪತ್ರಕರ್ತನಿಂದಲೇ ಸುಪಾರಿ ಪಡೆದಿರುವ ಆರೋಪಿ ಶಶಿಧರ ಮುಂಡೆವಾಡಿ, ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕು ಸೊನಕನಹಳ್ಳಿ ಗ್ರಾಮದವನು.

ನಿವೃತ್ತ ಗ್ರಾಮ ಲೆಕ್ಕಾಧಿಕಾರಿ ರಾಮಚಂದ್ರ ಎಂಬುವವರ ಪುತ್ರ. ಭೀಮಾ ತೀರದ ಚಡಚಣ ಹಾಗೂ ದೇವಣಗಾಂವ ಈತನ ಕಾರ್ಯಸ್ಥಾನ. ಕುಖ್ಯಾತ ರೌಡಿ ಚಂದಪ್ಪ ಹರಿಜನನ ಸಹಚರನಾಗಿ ಪಾತಕ ಲೋಕ ಪ್ರವೇಶಿಸಿದ ಮುಂಡೆವಾಡಿ, ಚಂದಪ್ಪನ ಸಾವಿನ ಬಳಿಕ ಮಲ್ಲಿಕಾರ್ಜುನ ಚಡಚಣ, ಬಾಗಪ್ಪ ಹರಿಜನ ಗುಂಪಿನ ಜತೆ ಪ್ರಮುಖವಾಗಿ ಗುರುತಿಸಿಕೊಂಡಿದ್ದ. ನಂತರ ನಡೆದ ವಿದ್ಯಮಾನಗಳಲ್ಲಿ ಇವರಿಂದಲೂ ಪ್ರತ್ಯೇಕವಾಗಿ ಅಕ್ರಮ ಶಸ್ತ್ರಾಸ್ತ್ರ (ನಾಡ ಪಿಸ್ತೂಲ್‌) ಮಾರಾಟ ದಂಧೆಯಲ್ಲಿ ನಿರತನಾಗಿದ್ದ.

ಮೂರು ಕೊಲೆ ಪ್ರಕರಣ: ಈತನ ವಿರುದ್ಧ ವಿಜಯಪುರದ ಗಾಂಧಿಚೌಕ್‌ ಪೊಲೀಸ್ ಠಾಣೆ, ಆಲಮೇಲದ ಪೊಲೀಸ್‌ ಠಾಣೆ ಸೇರಿದಂತೆ ಹಾಗೂ ಅಫಜಲಪುರ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣಗಳು ದಾಖಲಾಗಿವೆ.

‘ಚಂದಪ್ಪ ಹರಿಜನ ಸಂಪಾದಿಸಿದ್ದ ಬೇನಾಮಿ ಆಸ್ತಿಯ ಒಡೆತನಕ್ಕಾಗಿ ಆತನ ಸಹೋದರರು ಹಾಗೂ ಸಹಚರರ ನಡುವೆ ಜಟಾಪಟಿ ನಡೆದಿತ್ತು. ಆಗ, ಬಾಗಪ್ಪ ಹರಿಜನ ತಂಡದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿದ್ದ. ಎರಡೂ ಗುಂಪಿನ ನಡುವೆ ತಿಕ್ಕಾಟ ತಾರಕಕ್ಕೇರಿದಾಗ ಚಂದಪ್ಪನ ಸ್ವಗ್ರಾಮದಲ್ಲೇ (ಸಿಂದಗಿ ತಾಲ್ಲೂಕು ಆಲಮೇಲ ಪಟ್ಟಣ ಸನಿಹದ ಬೊಮ್ಮನಹಳ್ಳಿ) ಬಸಪ್ಪ ಹರಿಜನ ಮೇಲೆ 2013ರಲ್ಲಿ ಗುಂಡು ಹಾರಿಸಿ ಕೊಲೆ ಮಾಡಲಾಗಿತ್ತು. ಆ ತಂಡದಲ್ಲಿ ಮುಂಡೆವಾಡಿಯೂ ಇದ್ದ’ ಎಂದು ಆಲಮೇಲ ಪೊಲೀಸರು ಮಾಹಿತಿ ನೀಡಿದರು.

‘2013ರಲ್ಲೇ ನಡೆದ ವಿಜಯಪುರದ ಭಾವಸಾರ ನಗರದ ಕಂಡಕ್ಟರ್ ಶಿವಾನಂದ ಲಾಳಸಂಗಿ ಹತ್ಯೆ ಪ್ರಕರಣದಲ್ಲಿ ಗುಂಡು ಹಾರಿಸಿ, ಹತ್ಯೆಗೈದವನೂ ಇದೇ ಶಶಿಧರ ಮುಂಡೆವಾಡಿ’ ಎಂದು ಗಾಂಧಿಚೌಕ್‌ ಪೊಲೀಸರು ತಿಳಿಸಿದರು.

ನಾಡ ಪಿಸ್ತೂಲ್‌ ದಂಧೆ: ‘ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರದ ವಿವಿಧೆಡೆಯಲ್ಲಿ ತಯಾರಾಗುತ್ತಿದ್ದ ನಾಡ ಪಿಸ್ತೂಲುಗಳನ್ನು ₹15 ಸಾವಿರದಿಂದ ₹ 35 ಸಾವಿರಕ್ಕೆ ಖರೀದಿಸುತ್ತಿದ್ದ ಮುಂಡೆವಾಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರದ ವಿವಿಧೆಡೆ ಮಾರಾಟ ಮಾಡುತ್ತಿದ್ದ. ಅಕ್ರಮ ಶಸ್ತ್ರಾಸ್ತ್ರ ಮಾರಾಟಕ್ಕೆ ಸಂಬಂಧಿಸಿದಂತೆ ಈತನ ವಿರುದ್ಧ ಇಂಡಿ, ಸಿಂದಗಿ, ಮಹಾರಾಷ್ಟ್ರದ ಸಾಂಗ್ಲಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರುಗಳು ದಾಖಲಾಗಿವೆ. ಒಂದೂವರೆ ತಿಂಗಳ ಹಿಂದಷ್ಟೇ ನಾಡ ಪಿಸ್ತೂಲ್‌ ಮಾರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಂಗ್ಲಿ ಪೊಲೀಸರು ಬಂಧಿಸಿ, ಜೈಲಿಗಟ್ಟಿದ್ದರು.

ಜಾಮೀನಿನ ಮೇಲೆ ಹೊರ ಬರುತ್ತಿದ್ದಂತೆಯೇ, ಗೌರಿ ಲಂಕೇಶ್‌ ಹಂತಕರ ಪತ್ತೆಗಾಗಿ ಕಾರ್ಯಾಚರಣೆ ನಡೆಸುತ್ತಿರುವ ಎಸ್‌ಐಟಿ ಪೊಲೀಸರು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ಪತ್ರಕರ್ತನ ಹತ್ಯೆಯ ಸುಪಾರಿ ವಿಷಯ ಬಹಿರಂಗಗೊಂಡಿದೆ ಎಂದು ಜಿಲ್ಲಾ ಪೊಲೀಸ್‌ ಮೂಲಗಳು ತಿಳಿಸಿವೆ.

ವಿಜಯಪುರದ ಗಾಂಧಿಚೌಕ್‌ ಹಾಗೂ ಆಲಮೇಲ ಪೊಲೀಸ್ ಠಾಣೆಯಲ್ಲಿ ಶಶಿಧರ ಮುಂಡೆವಾಡಿ ವಿರುದ್ಧ ಕೊಲೆ ಪ್ರಕರಣಗಳು ದಾಖಲಾಗಿವೆ

-ಕುಲದೀಪ್‌ಕುಮಾರ್‌ ಆರ್‌.ಜೈನ್‌, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.