ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸೆನಾರ್‌ ಗುಂಪಿಗೆ ಭಾರತ ಸೇರ್ಪಡೆ

ಎನ್‌ಎಸ್‌ಜಿಗೆ ಸೇರುವ ಯತ್ನಕ್ಕೆ ಡಬ್ಲ್ಯುಎ ಸದಸ್ಯತ್ವ ನೆರವಾಗುವ ಸಾಧ್ಯತೆ
Last Updated 9 ಡಿಸೆಂಬರ್ 2017, 4:40 IST
ಅಕ್ಷರ ಗಾತ್ರ

ನವದೆಹಲಿ: ಸಾಂಪ್ರದಾಯಿಕ ಶಸ್ತ್ರಾಸ್ತ್ರ, ದ್ವಿಬಳಕೆ ಸಾಧನಗಳು ಮತ್ತು ತಂತ್ರಜ್ಞಾನಗಳ ರಫ್ತು ನಿಯಂತ್ರಿಸುವ ಪ್ರತಿಷ್ಠಿತ ‘ವಾಸೆನಾರ್‌ ಅರೇಂಜ್‌ಮೆಂಟ್‌’ (ಡಬ್ಲ್ಯುಎ) ಗುಂಪಿನಲ್ಲಿ ಭಾರತಕ್ಕೆ ಸದಸ್ಯತ್ವ ದೊರೆತಿದೆ. ದ್ವಿಬಳಕೆ ಎಂದರೆ, ನಾಗರಿಕ, ಮತ್ತು ಸೇನಾ ಬಳಕೆಗಳೆರಡಕ್ಕೂ ಉಪಯೋಗಿಸಬಹುದಾದ ತಂತ್ರಜ್ಞಾನ. ಉದಾಹರಣೆಗೆ ಪರಮಾಣು ತಂತ್ರಜ್ಞಾನ.

ವಿಯೆನ್ನಾದಲ್ಲಿ ನಡೆದ ಡಬ್ಲ್ಯುಎ 23ನೇ ವಾರ್ಷಿಕ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಭಾರತ ಡಬ್ಲ್ಯುಎಯ 42ನೇ ಸದಸ್ಯ ರಾಷ್ಟ್ರವಾಗಿದೆ.

ರಫ್ತು ನಿಯಂತ್ರಣ ಗುಂಪಿಗೆ ಸೇರ್ಪಡೆಯಿಂದಾಗಿ ಅಣ್ವಸ್ತ್ರ ಪ್ರಸರಣ ತಡೆ ಕ್ಷೇತ್ರದಲ್ಲಿ ಭಾರತದ ವಿಶ್ವಾಸಾರ್ಹತೆ ಹೆಚ್ಚಾಗುತ್ತದೆ. ಅಣ್ವಸ್ತ್ರ ಪ್ರಸರಣ ತಡೆ (ಎನ್‌ಪಿಟಿ) ಒಪ್ಪಂದಕ್ಕೆ ಸಹಿ ಹಾಕದಿದ್ದರೂ ಭಾರತಕ್ಕೆ ಈ ಸದಸ್ಯತ್ವ ದೊರೆತಿರುವುದು ವಿಶೇಷ.

ಡಬ್ಲ್ಯುಎ ಸದಸ್ಯತ್ವದಿಂದಾಗಿ 48 ಸದಸ್ಯರನ್ನು ಹೊಂದಿರುವ ಪರಮಾಣು ಪೂರೈಕೆದಾರರ ಗುಂಪಿನ (ಎನ್‌ಎಸ್‌ಜಿ) ಸದಸ್ಯತ್ವಕ್ಕೆ ಭಾರತ ಇರಿಸಿರುವ ಬೇಡಿಕೆಗೆ ಹೆಚ್ಚಿನ ಬಲ ಬರುತ್ತದೆ. ಎನ್‌ಎಸ್‌ಜಿ ಸದಸ್ಯತ್ವ ಪಡೆಯುವಲ್ಲಿ ಭಾರತಕ್ಕೆ ತೊಡಕಾಗಿರುವ ಚೀನಾಕ್ಕೆ ಈ ಸದಸ್ಯತ್ವ ಇಲ್ಲ.

ಸಾಂಪ್ರದಾಯಿಕ ಶಸ್ತ್ರಾಸ್ತ್ರ ಮತ್ತು ದ್ವಿಬಳಕೆ ಸಾಧನಗಳು ಹಾಗೂ ತಂತ್ರಜ್ಞಾನದ ವರ್ಗಾವಣೆಯಲ್ಲಿ ಹೆಚ್ಚಿನ ಪಾರದರ್ಶಕತೆ ತರುವುದು ಮತ್ತು ಹೆಚ್ಚಿನ ಹೊಣೆಗಾರಿಕೆ ತೋರುವಲ್ಲಿ ಡಬ್ಲ್ಯುಎ ಮಹತ್ವದ ಪಾತ್ರ ವಹಿಸುತ್ತಿದೆ. ಈ ಗುರಿಗಳನ್ನು ನಿರ್ಲಕ್ಷಿಸಿ ಸೇನಾ ಸಾಮರ್ಥ್ಯ ವೃದ್ಧಿಗೆ ತಂತ್ರಜ್ಞಾನ ವರ್ಗಾವಣೆ ಮಾಡುವುದಿಲ್ಲ ಎಂಬುದನ್ನು ಸದಸ್ಯ ರಾಷ್ಟ್ರಗಳು ಖಾತರಿಪಡಿಸಬೇಕು. ಇಂತಹ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನ ಭಯೋತ್ಪಾದಕರ ಕೈಗೆ ಸಿಗದಂತೆ ನೋಡಿಕೊಳ್ಳುವುದು ಡಬ್ಲ್ಯುಎ ಇನ್ನೊಂದು ಗುರಿ.

ಇನ್ನೊಂದು ಮಹತ್ವದ ರಫ್ತು ನಿಯಂತ್ರಣ ಗುಂಪಾದ ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಗುಂಪಿಗೆ (ಎಂಟಿಸಿಆರ್‌) ಕಳೆದ ಜೂನ್‌ನಲ್ಲಿ ಭಾರತ ಸೇರ್ಪಡೆಯಾಗಿತ್ತು. ಅಮೆರಿಕದ ಜತೆಗೆ ನಾಗರಿಕ ಪರಮಾಣು ಒಪ್ಪಂದ ಮಾಡಿಕೊಂಡ ಬಳಿಕ ಜಾಗತಿಕ ಮಟ್ಟದ ವಿವಿಧ ನಿಯಂತ್ರಣ ಗುಂಪುಗಳ ಸದಸ್ಯತ್ವ ಪಡೆಯಲು ಭಾರತ ಪ್ರಯತ್ನಿಸಿದೆ. ಎನ್‌ಎಸ್‌ಜಿ, ಎಂಟಿಸಿಆರ್‌, ಆಸ್ಟ್ರೇಲಿಯಾ ಗುಂಪು ಮತ್ತು ಡಬ್ಲ್ಯುಎ ಅವುಗಳಲ್ಲಿ ಮುಖ್ಯವಾದವು. ಸದ್ಯ ಎರಡು ಗುಂಪುಗಳಲ್ಲಿ ಭಾರತಕ್ಕೆ ಸದಸ್ಯತ್ವ ದೊರೆತಿದೆ.

ಕಾರ್ಯ ನಿರ್ವಹಣೆ ಹೇಗೆ

ಗುಂಪು ಒಂದು ನಿಯಂತ್ರಣ ಪಟ್ಟಿಯನ್ನು ಹೊಂದಿದೆ. ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಿದ ಶಸ್ತ್ರಾಸ್ತ್ರ ಮತ್ತು ತಂತ್ರಜ್ಞಾನಗಳು ಈ ಪಟ್ಟಿಗೆ ಸೇರುತ್ತವೆ. ದ್ವಿಬಳಕೆ ಸಾಧನಗಳು ಮತ್ತು ತಂತ್ರಜ್ಞಾನಗಳ ಬಗ್ಗೆ ಮಾಹಿತಿ ವಿನಿಮಯಕ್ಕೆ ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಬೇಕು. ನಿಯಂತ್ರಣ ಪಟ್ಟಿಯಲ್ಲಿ ಇರುವ ಸಾಧನಗಳ ವರ್ಗಾವಣೆ ಬಗ್ಗೆ ಮಾಹಿತಿ ದೊರೆತರೆ ಅದನ್ನು ಡಬ್ಲ್ಯುಎ ಜತೆ ಹಂಚಿಕೊಳ್ಳಬೇಕು. ಸದಸ್ಯರಲ್ಲದ ರಾಷ್ಟ್ರಗಳಿಗೆ ಇಂತಹ ಸಾಧನಗಳನ್ನು ನೀಡಬಾರದು.

ತಂತ್ರಜ್ಞಾನ ನಿಷೇಧದ ಹುನ್ನಾರ ಆರೋಪ

ಶೀತಲ ಸಮರ ಕಾಲದ ಒಪ್ಪಂದಕ್ಕೆ ಹೊಸ ಹೆಸರು ಇರಿಸಲಾಗಿದೆ. ಪ‍ಶ್ಚಿಮದ ದೇಶಗಳು ಮತ್ತು ಕಂಪೆನಿಗಳು ನಿರ್ಣಾಯಕ ತಂತ್ರಜ್ಞಾನಗಳನ್ನು ತಮ್ಮ ಕೈಯಲ್ಲಿ ಇರಿಸಿಕೊಂಡು ಡಿಜಿಟಲ್‌ ಅಂತರ ಸೃಷ್ಟಿಸಲು ಈ ಗುಂಪನ್ನು ಬಳಸಿಕೊಳ್ಳುತ್ತಿವೆ ಎಂಬ ಆರೋಪ ಇದೆ. ಸೈಬರ್‌ ಭದ್ರತೆ ಸಂಶೋಧನೆಗಾಗಿ ಶ್ರೀಮಂತ ದೇಶಗಳು ಬಡ ದೇಶಗಳನ್ನು ಪ್ರಯೋಗ ಪಶುಗಳ ರೀತಿಯಲ್ಲಿ ಬಳಸಿಕೊಳ್ಳುತ್ತಿವೆ. ಇಂತಹ ದೇಶಗಳಿಗೆ ಸಾಮೂಹಿಕ ಗೂಢಚರ್ಯೆ ತಂತ್ರಜ್ಞಾನಗಳನ್ನು ನೀಡುತ್ತವೆ. ಅದರ ಮೂಲಕ ಆ ದೇಶದ ಮೇಲೆ ಗೂಢಚರ್ಯೆ ನಡೆಸುತ್ತವೆಂದು ಕಂಪ್ಯೂಟರ್‌ ವಿಜ್ಞಾನಿಗಳು ಹಾಗೂ ನೀತಿ ವಿಶ್ಲೇಷಕರು ಟೀಕಿಸುತ್ತಾರೆ.

**

ಏನಿದು ಅರೇಂಜ್‌ಮೆಂಟ್‌?

ಬಹುರಾಷ್ಟ್ರೀಯ ರಫ್ತು ನಿಯಂತ್ರಣ ಸಮನ್ವಯ ಸಮಿತಿ ಎಂಬ ಗುಂಪು ಶೀತಲ ಸಮರ ಯುಗದಲ್ಲಿ ಅಸ್ತಿತ್ವದಲ್ಲಿತ್ತು. ಅದರ ಬದಲಿಗೆ 1996ರಲ್ಲಿ ಡಬ್ಲ್ಯುಎ ಜಾರಿಗೆ ಬಂತು. ಹೇಗ್‌ನ ಸಮೀಪದ ವಾಸೆನಾರ್‌ ಪಟ್ಟಣದಲ್ಲಿ ಈ ಒಪ್ಪಂದ ಏರ್ಪಟ್ಟ ಕಾರಣ ಗುಂಪಿಗೆ ಅದೇ ಹೆಸರು ಇರಿಸಿಕೊಳ್ಳಲಾಗಿದೆ.

ಪರಮಾಣು ಪೂರೈಕೆದಾರರ ಗುಂಪು ಮತ್ತು ಕ್ಷಿಪಣಿ ತಂತ್ರಜ್ಞಾನ ನಿಯಂತ್ರಣ ಗುಂಪುಗಳು ಕ್ರಮವಾಗಿ ಅಣ್ವಸ್ತ್ರ ಮತ್ತು ಕ್ಷಿಪಣಿ ತಂತ್ರಜ್ಞಾನ ವರ್ಗಾವಣೆ ಮೇಲೆ ನಿಗಾ ಇರಿಸಿದಂತೆ ಡಬ್ಲ್ಯುಎ, ಸಾಂಪ್ರದಾಯಿಕ ಶಸ್ತ್ರಾಸ್ತ್ರ ಮತ್ತು ದ್ವಿ ಬಳಕೆ ತಂತ್ರಜ್ಞಾನ ವರ್ಗಾವಣೆಯನ್ನು ನಿಯಂತ್ರಿಸುತ್ತದೆ. 

ಭಾರತಕ್ಕೆ ಏನು ಲಾಭ: ಭಾರತವು ಅಣ್ವಸ್ತ್ರ ಪ್ರಸರಣ ತಡೆ (ಎನ್‌ಪಿಟಿ) ಒಪ್ಪಂದಕ್ಕೆ ಸಹಿ ಹಾಕಿಲ್ಲ. ಈಗ ಡಬ್ಲ್ಯುಎ ಸದಸ್ಯತ್ವ ದೊರೆತಿರುವುದರಿಂದ ಅಣ್ವಸ್ತ್ರ ಪ್ರಸರಣ ತಡೆ ಕ್ಷೇತ್ರದಲ್ಲಿ ಭಾರತದ ವಿಶ್ವಾಸಾರ್ಹತೆ ಹೆಚ್ಚುತ್ತದೆ. ಎನ್‌ಎಸ್‌ಜಿ ಸದಸ್ಯತ್ವ ಪಡೆಯುವಲ್ಲಿ ಇದು ನೆರವಾಗಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT