ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿ ಘೋಷಣೆ : ಬಿಎಸ್‌ವೈ ವಿರುದ್ಧ ಆಕ್ರೋಶ

Last Updated 8 ಡಿಸೆಂಬರ್ 2017, 19:56 IST
ಅಕ್ಷರ ಗಾತ್ರ

ಬೆಂಗಳೂರು: ಪರಿವರ್ತನಾ ಯಾತ್ರೆ ವೇಳೆ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಘೋಷಣೆ ಮಾಡುತ್ತಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಧೋರಣೆಗೆ ಪಕ್ಷದೊಳಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಬೀದರ್ ಜಿಲ್ಲೆ ಔರಾದ ಕ್ಷೇತ್ರದಲ್ಲಿ ಗುರುವಾರ (ಡಿ.7) ನಡೆದ ಪರಿವರ್ತನಾ ಯಾತ್ರೆಯ ಸಮಾವೇಶದ ವೇಳೆ ಎರಡು ಬಣಗಳ ಮಧ್ಯೆ ವಾಗ್ವಾದ ನಡೆದಿತ್ತು. ಬಿಜೆಪಿ ಶಾಸಕ ಪ್ರಭು ಚವ್ಹಾಣ ಹಾಗೂ 2013ರಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ, 2018ರ ಚುನಾವಣೆಯ ಟಿಕೆಟ್ ಆಕಾಂಕ್ಷಿ ಧನಾಜಿ ಜಾಧವ್‌ ಬಣಗಳು ಪ್ರತ್ಯೇಕವಾಗಿ ವೇದಿಕೆ ನಿರ್ಮಿಸಿ, ಸಮಾವೇಶ ಆಯೋಜಿಸಿದ್ದು ಗೊಂದಲ ಹುಟ್ಟುಹಾಕಿತ್ತು.

ವಿಧಾನಸಭೆ ಚುನಾವಣೆಗೆ ಪಕ್ಷದ ಅಭ್ಯರ್ಥಿ ಹೆಸರು ಘೋಷಿಸಲಿದ್ದಾರೆ ಎಂಬ ಕಾರಣಕ್ಕೆ ಚವ್ಹಾಣ ಮತ್ತು ಜಾಧವ್‌ ಅವರು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದರು. ಇದು ಯಡಿಯೂರಪ್ಪ ಅವರಿಗೂ ಇರಿಸುಮುರಿಸು ತಂದಿತ್ತು.

‘ಪಕ್ಷದಲ್ಲಿ ಬಿಜೆಪಿ, ಕೆಜೆಪಿ ಎಂಬ ಬಣಗಳು ಇನ್ನೂ ಪ್ರಬಲವಾಗಿವೆ. ಯಡಿಯೂರಪ್ಪ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷವನ್ನು ಮುನ್ನಡೆಸಿಕೊಂಡು ಹೋಗುತ್ತಿಲ್ಲ. ಕೆಜೆಪಿಗೆ ಹೋಗದೆ ಬಿಜೆಪಿಯಲ್ಲಿ ಉಳಿದವರನ್ನು ಅವರು ಕಡೆಗಣಿಸಿರುವುದು, ತಮ್ಮ ಜತೆಗೆ ಕೆಜೆಪಿಗೆ ಬಂದವರನ್ನು ಅವರು ಹೆಚ್ಚು ನೆಚ್ಚಿಕೊಂಡಿರುವುದರಿಂದಲೇ ಹೀಗಾಗುತ್ತಿದೆ. ಇದನ್ನು ವರಿಷ್ಠರ ಗಮನಕ್ಕೆ ತರಲಾಗುವುದು’ ಎಂದು ಪಕ್ಷದ ಹಿರಿಯ ನಾಯಕರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇದು ಈಗ ಆರಂಭವಾಗಿರುವ ಸಮಸ್ಯೆಯಲ್ಲ. ಪರಿವರ್ತನಾ ಯಾತ್ರೆಯ ಎರಡನೆ ದಿನ (ನ.3) ತುಮಕೂರಿನಲ್ಲಿ ನಡೆದ ಸಮಾವೇಶದಲ್ಲಿ ಬಿಜೆಪಿ, ಕೆಜೆಪಿ ಜಗಳ ತಲೆದೋರಿತ್ತು. ಹಿಂದಿನ ಚುನಾವಣೆಯಲ್ಲಿ ತುಮಕೂರು ನಗರ ಕ್ಷೇತ್ರದಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಸೋತಿದ್ದ  ಸೊಗಡು ಶಿವಣ್ಣ ಟಿಕೆಟ್ ಆಕಾಂಕ್ಷಿಯಾಗಿದ್ದರು. ಸಮಾವೇಶದಲ್ಲಿ ಮಾತನಾಡಿದ್ದ ಯಡಿಯೂರಪ್ಪ, ಕಳೆದ ಚುನಾವಣೆಯಲ್ಲಿ ಕೆಜೆಪಿಯಿಂದ ಸ್ಪರ್ಧಿಸಿ ಸೋತಿದ್ದ ಜ್ಯೋತಿ ಗಣೇಶ್‌ ಅವರನ್ನು ಕಣಕ್ಕೆ ಇಳಿಸುವುದಾಗಿ ಪ್ರಕಟಿಸಿದ್ದರು.

ಮಾರನೆ ದಿನವೇ ಮಾಧ್ಯಮಗೋಷ್ಠಿ ನಡೆಸಿದ್ದ ಸೊಗಡು ಶಿವಣ್ಣ, ಯಡಿಯೂರಪ್ಪ ವಿರುದ್ಧ ಕಿಡಿಕಾರಿದ್ದರು. ಅಲ್ಲದೆ, ಪಕ್ಷದ ವರಿಷ್ಠರಿಗೆ ದೂರು ನೀಡುವುದಾಗಿ ತಿಳಿಸಿದ್ದರು. ಪಕ್ಷದ ಹಿರಿಯ ನಾಯಕರು ಈ ವಿಷಯವನ್ನು ಬಿಜೆಪಿ ರಾಜ್ಯ ಚುನಾವಣಾ ಉಸ್ತುವಾರಿ ಪ್ರಕಾಶ್ ಜಾವಡೇಕರ್ ಗಮನಕ್ಕೆ ತಂದಿದ್ದರು. ಇದು ವರಿಷ್ಠರ ಮಟ್ಟದಲ್ಲಿ ಚರ್ಚೆಗೂ ಕಾರಣವಾಗಿತ್ತು.

‘ಇನ್ನು ಮುಂದೆ ಯಾವುದೇ ಕ್ಷೇತ್ರಗಳಲ್ಲೂ ಅಭ್ಯರ್ಥಿಯ ಹೆಸರು ಘೋಷಿಸಬಾರದು. ಇದು ಅನಗತ್ಯ ಗೊಂದಲಕ್ಕೆ ಕಾರಣವಾಗುತ್ತದೆ. ಎಲ್ಲರನ್ನೂ ಒಗ್ಗೂಡಿಸುವ ಯಾತ್ರೆಯ ಉದ್ದೇಶವೇ ವಿಫಲವಾಗಲಿದೆ’ ಎಂದು ವರಿಷ್ಠರು ಯಡಿಯೂರಪ್ಪ ಅವರಿಗೆ ಸೂಚಿಸಿದ್ದರು.

‘ರಾಜ್ಯದ 224 ಕ್ಷೇತ್ರಗಳಲ್ಲೂ ಸಮೀಕ್ಷೆ ನಡೆಸಲಾಗುವುದು. ಯಾರಿಗೆ ಟಿಕೆಟ್ ನೀಡಬೇಕು ಎಂಬುದನ್ನು ವರಿಷ್ಠರು ತೀರ್ಮಾನಿಸುತ್ತೇವೆ. ರಾಜ್ಯ ಸರ್ಕಾರದ ಭ್ರಷ್ಟಾಚಾರವನ್ನು, ಆಡಳಿತ ವೈಫಲ್ಯವನ್ನು ಯಾತ್ರೆ ಮೂಲಕ ಜನರಿಗೆ ಮನವರಿಕೆ ಮಾಡುವ ಕೆಲಸ ಮಾತ್ರ ನೀವು ಮಾಡಿ. ಪಕ್ಷದ ಸಂಘಟನೆಗೆ ಮಾತ್ರ ಆದ್ಯತೆ ಕೊಡಿ ಎಂದು ವರಿಷ್ಠರು ಸೂಚಿಸಿದ್ದರು. ಆ ಬಳಿಕ 20 ದಿನ ಸುಮ್ಮನಿದ್ದ ಯಡಿಯೂರಪ್ಪ ಮತ್ತೆ ಅಭ್ಯರ್ಥಿ ಹೆಸರು ಘೋಷಿಸಲು ಆರಂಭಿಸಿದ್ದಾರೆ. ಈ ಬಗ್ಗೆ ಇದೇ 10ರಂದು ನಡೆಯಲಿರುವ ಪ್ರಮುಖರ ಸಮಿತಿ ಸಭೆಯಲ್ಲಿ ಪ್ರಸ್ತಾಪಿಸುತ್ತೇನೆ’ ಎಂದು ಸಮಿತಿಯ ಹಿರಿಯ ಸದಸ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT