ಮಂಗಳವಾರ, ಮಾರ್ಚ್ 9, 2021
18 °C

ವೀರಶೈವ ಧರ್ಮ ಒಡೆಯಲು ಸಾಧ್ಯವಿಲ್ಲ: ಸ್ವಾಮೀಜಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವೀರಶೈವ ಧರ್ಮ ಒಡೆಯಲು ಸಾಧ್ಯವಿಲ್ಲ: ಸ್ವಾಮೀಜಿ

ಸಂಡೂರು: ‘ ವೀರಶೈವ ಧರ್ಮವನ್ನು ಕೆಲವರು ಒಡೆಯಲು ಪ್ರಯತ್ನಿಸುತ್ತಿದ್ದಾರೆ. ಅದು ಎಂದಿಗೂ ಫಲಿಸುವುದಿಲ್ಲ’ ಎಂದು ಬಾಳೆಹೊನ್ನೂರು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಪಂಚವಟಿ ಬಡಾವಣೆಯಲ್ಲಿ ಬೇಡ ಜಂಗಮ ಸಮುದಾಯ ಶುಕ್ರವಾರ ಏರ್ಪಡಿಸಿದ್ದ ರೇಣುಕಾಚಾರ್ಯ ಮಂದಿರದ ಭೂಮಿಪೂಜೆ ನೆರವೇರಿಸಿದ ಬಳಿಕ ನಡೆದ ಧರ್ಮಸಭೆಯಲ್ಲಿ ಮಾತನಾಡಿದರು.

‘ದೇಶದಲ್ಲಿನ ಧರ್ಮಗಳು ಮಾನವ ಕಲ್ಯಾಣಕ್ಕಾಗಿ ಉದಯವಾಗಿವೆ. ಧರ್ಮದಲ್ಲಿ ದೂರದೃಷ್ಟಿ, ವೈಶಾಲ್ಯತೆ ಇದೆ. ಆದರೆ, ಜಾತಿಯಲ್ಲಿ ಇದ್ಯಾವ ಲಕ್ಷಣಗಳು ಕಂಡು ಬರುವುದಿಲ್ಲ. ಸಿದ್ಧಾಂತ ಶಿಖಾಮಣಿ, ಶಿವಾಗಮಗಳು ವೀರಶೈವ ಧರ್ಮದ ಬೇರುಗಳು. ರೇಣುಕಾಚಾರ್ಯರು ಮತ್ತು ಬಸವಣ್ಣ ಅವರ ತತ್ವಗಳು ಒಂದೇ ಆಗಿವೆ’ ಎಂದರು.

‘ಕೆಲವರು ಧರ್ಮದಲ್ಲಿ ರಾಜಕೀಯ ತರುತ್ತಿದ್ದಾರೆ. ಇದು ಸರಿಯಲ್ಲ. ಧರ್ಮ ಬೇರೆ, ರಾಜಕೀಯ ಬೇರೆ’ ಎಂದು ಅಭಿಪ್ರಾಯಟ್ಟರು.

‘ಕುಮಾರಸ್ವಾಮಿ ದೇವಸ್ಥಾನ ಸಂರಕ್ಷಣೆಗಾಗಿ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಹೋರಾಟ ಸ್ವಾಗತಾರ್ಹ. ಇದಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ. ಸರ್ಕಾರವು ದೇವಸ್ಥಾನದಿಂದ 2 ಕಿ.ಮೀ ವ್ಯಾಪ್ತಿಯಲ್ಲಿ ಗಣಿಗಾರಿಕೆ ಹಾಗೂ ಉದ್ಯಮ ಸ್ಥಾಪನೆಗೆ ಅವಕಾಶ ನೀಡಬಾರದು’ ಎಂದು ಒತ್ತಾಯಿಸಿದರು.

ಉಜ್ಜಯಿನಿ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಗುರುವಿರಕ್ತರು ಹಾಗೂ ವೀರಶೈವದವರು ಸಮಾಜದ ಎರಡು ಕಣ್ಣುಗಳು ಇದ್ದಂತೆ. ವೀರಶೈವ ಧರ್ಮದಲ್ಲಿ ಆಧ್ಯಾತ್ಮಿಕತೆ, ವೈಚಾರಿಕತೆ ಇದೆ. ಜಾತಿಯಿಂದ ವೀರಶೈವರಾಗುವುದಿಲ್ಲ. ಧರ್ಮದ ಆಚರಣೆ ಅನುಸರಿಸಿದರೆ ಮಾತ್ರ ವೀರಶೈವರಾಗಲು ಸಾಧ್ಯ. ಆದರೆ, ದೇಶದಲ್ಲಿ ಸದ್ಯ ಜಾತಿಯತೆ ಮುಂದುವರಿಯುತ್ತಿರುವುದು ವಿಪರ್ಯಾಸದ ಸಂಗತಿ’ ಎಂದು ಬೇಸರ ವ್ಯಕ್ತಪಡಿಸಿದರು. ಪ್ರಭು ಸ್ವಾಮೀಜಿ ಮಾತನಾಡಿದರು.

ರೇಣುಕಾಚಾರ್ಯ ಮಂದಿರ ನಿರ್ಮಾಣದ ಖರ್ಚನ್ನು ಎಚ್.ಎಂ. ಜಂಬಯ್ಯ ಮತ್ತು ಅವರ ಕುಟುಂಬದವರು ಹಾಗೂ ಗುರು ನಿವಾಸ ನಿರ್ಮಾಣದ ವೆಚ್ಚವನ್ನು ಬೇಡ ಜಂಗಮದ ರಾಜ್ಯ ಘಟಕದ ಅಧ್ಯಕ್ಷ ಕೆ.ಎಂ.ವಿಶ್ವನಾಥ ಸ್ವಾಮಿ ಭರಿಸಲಿದ್ದಾರೆ. ಭವನ ನಿರ್ಮಾಣಕ್ಕೆ ಪಿ. ನೀಲಕಂಠಪ್ಪ ಅವರು ₹10 ಲಕ್ಷ ದೇಣಿಗೆ ನೀಡುವುದಾಗಿ ಈ ಸಂದರ್ಭದಲ್ಲಿ ಭರವಸೆ ನೀಡಿದರು.

ಬೇಡ ಜಂಗಮ ಸಮುದಾಯದ ಪಟ್ಟಣ ಘಟಕದ ಅಧ್ಯಕ್ಷ ಎಸ್.ಎಂ. ಗಿರೀಶ್, ಗೌರವ ಅಧ್ಯಕ್ಷ ಕೆ.ಎಂ. ವೀರಯ್ಯಸ್ವಾಮಿ, ಉಪಾಧ್ಯಕ್ಷ ಎಂ.ವಿ. ಹಿರೇಮಠ್, ಕಾರ್ಯದರ್ಶಿ ಜೆ.ಎಂ. ಬಸವರಾಜ, ಮುಖಂಡರಾದ ಜೆ.ಎಂ. ವೃಷಬೇಂದ್ರಯ್ಯ, ಸಾಲಿ ಸಿದ್ದಯ್ಯಸ್ವಾಮಿ, ಬಿ.ಎಂ.ಎಸ್. ವೀರಯ್ಯಸ್ವಾಮಿ, ಹಗರಿ ಬಸವರಾಜಪ್ಪ, ಡಿ. ಕೃಷ್ಣಪ್ಪ, ಎಂ.ಎಂ. ಬಸವರಾಜಯ್ಯ, ಎಚ್.ಎಂ. ಬಕ್ಕಪ್ಪಯ್ಯ, ವೀರೇಶ್, ಕೆ.ಎಸ್. ಕುಮಾರಸ್ವಾಮಿ, ಸತೀಶ್ ಹಿರೇಮಠ್, ಗುಡೇಕೋಟೆ ನಾಗರಾಜ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.