ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾವೇರಿ ತಾಲ್ಲೂಕು ರಚನೆಗಾಗಿ ಒಕ್ಕೊರಲ ಧ್ವನಿ

Last Updated 10 ಡಿಸೆಂಬರ್ 2017, 8:31 IST
ಅಕ್ಷರ ಗಾತ್ರ

ಕುಶಾಲನಗರ: ಕುಶಾಲನಗರ ಪಟ್ಟಣವನ್ನು ಕೇಂದ್ರವಾಗಿರಿಸಿ ‘ಕಾವೇರಿ ತಾಲ್ಲೂಕು’ ರಚನೆ ಮಾಡುವಂತೆ ಒತ್ತಾಯಿಸಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಶನಿವಾರ ಕರೆ ನೀಡಿದ್ದ ಬಂದ್ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಯಶಸ್ವಿಯಾಯಿತು.

ಪಟ್ಟಣದಲ್ಲಿ ಬೆಳಿಗ್ಗೆಯಿಂದಲೇ ವರ್ತಕರು ಸ್ವಯಂ ಪ್ರೇರಣೆಯಿಂದ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲ ವ್ಯಕ್ತಪಡಿಸಿದರು. ಖಾಸಗಿ ಬಸ್ಸುಗಳ ಸಂಚಾರ, ಆಟೊರಿಕ್ಷಾ ಮತ್ತು ಮ್ಯಾಕ್ಸಿಕ್ಯಾಬುಗಳ ಸಂಚಾರ, ಟ್ಯಾಕ್ಸಿಗಳ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಸಿನಿಮಾ ಮಂದಿರ, ಹೋಟೆಲುಗಳು ಬಂದ್ ಆಗಿದ್ದವು. ಔಷಧಿ ಅಂಗಡಿ, ಹಾಲಿನ ಅಂಗಡಿಗಳಿಗೆ ಮಾತ್ರ ವಿನಾಯತಿ ನೀಡಲಾಗಿತ್ತು.

ಬಂದ್ ಹಿನ್ನೆಲೆಯಲ್ಲಿ ಜನಸಂಚಾರ ಕೂಡ ವಿರಳವಾಗಿತ್ತು. ಬಸ್ಸುಗಳ ಸಂಚಾರವಿಲ್ಲದ ಕಾರಣ ಖಾಸಗಿ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ಹಾಜರಾಗಿದ್ದರು. ಬ್ಯಾಂಕುಗಳು ಬಾಗಿಲು ಮುಚ್ಚಿಕೊಂಡು ಕಾರ್ಯ ನಿರ್ವಹಿಸಿದವು. ಪಟ್ಟಣದಲ್ಲಿ ಹೋಟೆಲುಗಳು ಸಂಪೂರ್ಣ ಮುಚ್ಚಿದ್ದರಿಂದ ದೂರದ ಊರುಗಳಿಂದ ಬಂದಿದ್ದ ಪ್ರಯಾಣಿಕರು ಹಾಗೂ ಪ್ರವಾಸಿಗರು ಊಟ, ತಿಂಡಿಗಾಗಿ ಪರದಾಡಿದರು.

ಕಾವೇರಿ ನಿಸರ್ಗಧಾಮ, ದುಬಾರೆ, ಹಾರಂಗಿ ಮತ್ತಿತರ ಕಡೆಗಳಲ್ಲಿ ಪ್ರವಾಸಿಗರ ಸಂಖ್ಯೆ ಕ್ಷೀಣಿಸಿತು. ಉದ್ದೇಶಿತ ತಾಲ್ಲೂಕು ವ್ಯಾಪ್ತಿಯ 19 ಗ್ರಾಮ ಪಂಚಾಯಿತಿಗಳಲ್ಲಿ ವಿವಿಧ ರಾಜಕೀಯ ಪಕ್ಷಗಳು, ಸಂಘ–ಸಂಸ್ಥೆಗಳು ಸೇರಿದಂತೆ ಸ್ಥಾನೀಯ ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದರು.

ವಿವಿಧ ಗ್ರಾಮಗಳಲ್ಲಿ ಹೆಬ್ಬಾಲೆ ಗ್ರಾಮದಲ್ಲಿ ಜಿ.ಪಂ ಕೃಷಿ ಸ್ಥಾನೀಯ ಸಮಿತಿ ಅಧ್ಯಕ್ಷ ಎಚ್.ಆರ್.ಶ್ರೀನಿವಾಸ್ ನೇತೃತ್ವದಲ್ಲಿ, ತೊರೆನೂರು ಗ್ರಾಮದಲ್ಲಿ ಗ್ರಾ.ಪಂ ಅಧ್ಯಕ್ಷ ದೇವರಾಜ್, ಕೃಷ್ಣೇಗೌಡ, ಟಿ.ಕೆ.ಪಾಂಡುಗಂಗ, ಟಿ.ಬಿ.ಜಗದೀಶ್ ನೇತೃತ್ವದಲ್ಲಿ, ಶಿರಂಗಾಂಲ ಗ್ರಾಮದಲ್ಲಿ ತಾ.ಪಂ ಸದಸ್ಯ ಜಯಣ್ಣ , ಎಸ್.ಎಸ್.ಚಂದ್ರಶೇಖರ್, ಶ್ರೀನಿವಾಸ್, ಗಣೇಶ್ ನೇತೃತ್ವದಲ್ಲಿ, ಗುಡ್ಡೆಹೊಸೂರು ಗ್ರಾಮದಲ್ಲಿ ಸ್ಥಾನೀಯ ಸಮಿತಿ ಅಧ್ಯಕ್ಷ ಪೂವಯ್ಯ, ಗ್ರಾ.ಪಂ ಅಧ್ಯಕ್ಷೆ ಭಾರತಿ ಹಾಗೂ ನಂಜರಾಯಪಟ್ಟಣದಲ್ಲಿ ತಾ.ಪಂ ಮಾಜಿ ಸದಸ್ಯ ಸಿ.ಎಲ್.ವಿಶ್ವ, ಜೈನಭ, ನವೀನ್, ಲೋಕನಾಥ್, ತಾ.ಪಂ ಸದಸ್ಯ ಚಂಗಪ್ಪ ನೇತೃತ್ವದಲ್ಲಿ ಮಾನವ ಸರಪಳಿ ರಚಿಸಲಾಯಿತು.

ಅಹಿತಕರ ಘಟನೆಗಳು ನಡೆಯದಂತೆ ಡಿವೈಎಸ್ಪಿ ಮುರಳೀಧರ್, ಸಿಪಿಐ ಕ್ಯಾತೇಗೌಡ, ಎಸ್ಐ ಜಗದೀಶ್, ಮಹೇಶ್, ಅಪ್ಪಾಜಿ ನೇತೃತ್ವದಲ್ಲಿ ಬಂದೋಬಸ್ತ್ ಕಲ್ಪಿಸಲಾಗಿತ್ತು.

ರಸ್ತೆತಡೆ; ಸಂಚಾರ ದುಸ್ತರ

ಕುಶಾಲನಗರ: ಕಾವೇರಿ ತಾಲ್ಲೂಕು ರಚನೆಗೆ ಒತ್ತಾಯಿಸಿ ನಡೆದ ರಸ್ತೆ ತಡೆಯಿಂದ ಸಂಚಾರಕ್ಕೆ ಬಿಸಿತಟ್ಟಿತು. ಕಾವೇರಿ ತಾಲ್ಲೂಕು ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ನೇತೃತ್ವದಲ್ಲಿ ಜಮಾಯಿಸಿದ ಸಮಿತಿ ಸದಸ್ಯರು, ವಿವಿಧ ಸಂಘ– ಸಂಸ್ಥೆಗಳ ಸದಸ್ಯರು ಹಾಗೂ ಗ್ರಾಮಸ್ಥರು ರಾಷ್ಟ್ರೀಯ ಹೆದ್ದಾರಿಯಲ್ಲಿ ಧರಣಿಸಿ ಕುಳಿತರು. ಒಂದು ತಾಸಿಗೂ ಹೆಚ್ಚು ಕಾಲ ರಸ್ತೆಯಲ್ಲಿ ಕುಳಿತ ಪ್ರತಿಭಟನಕಾರರು ನ್ಯಾಯ ಸಿಗುವವರೆಗೂ ವಿರಮಿಸುವುದಿಲ್ಲ ಎಂಬ ಘೋಷಣೆ ಮೊಳಗಿಸಿದರು. ಹೋರಾಟದ ಹಾಡು ಹಾಡುವ ಮೂಲಕ ಗಮನ ಸೆಳೆದರು.

ರಸ್ತೆತಡೆಯಿಂದಾಗಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಟೋಲ್‌ಗೇಟಿನಿಂದ ಕೊಪ್ಪ ಗ್ರಾಮದವರೆಗೂ ವಾಹನಗಳು ಸಾಲುಗಟ್ಟಿ ನಿಂತವು. ಮೈಸೂರು– ಮಡಿಕೇರಿ ಕಡೆಗೆ ಸಂಚರಿಸುವ ವಾಹನಗಳಲ್ಲಿ ವ್ಯತ್ಯಯ ಉಂಟಾಯಿತು.

ಜಿ.ಪಂ ಸದಸ್ಯೆ ಕೆ.ಪಿ.ಚಂದ್ರಕಲಾ, ಕೆ.ಆರ್.ಮಂಜುಳಾ, ಪ.ಪಂ ಉಪಾಧ್ಯಕ್ಷ ಟಿ.ಆರ್.ಶರವಣಕುಮಾರ್, ಸದಸ್ಯರಾದ ಎಚ್.ಜೆ.ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಮಧುಸೂದನ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ.ಭಾರತೀಶ್, ನಗರಾಧ್ಯಕ್ಷ ಕೆ.ಜಿ.ಮನು, ಹೋರಾಟ ಸಮಿತಿ ಸದಸ್ಯರಾದ ಅಬ್ದುಲ್ ಖಾದರ್, ಜಿ.ಎಲ್.ನಾಗರಾಜು, ಎಂ.ವಿ.ನಾರಾಯಣ್,ಎನ್.ಕೆ.ಮೋಹನ್ ಕುಮಾರ್, ಕೆ.ಎನ್.ದೇವರಾಜ್, ಕೆ.ಎಸ್.ನಾಗೇಶ್, ಚೇಂಬರ್ ಆಫ್ ಕಾಮರ್ಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಅಮೃತ್ ರಾಜ್, ರವಿಚಂದ್ರನ್ ಕನ್ನಡ ಅಭಿಮಾನಿ ಸಂಘದ ಅಧ್ಯಕ್ಷ ಬಬೀಂದ್ರ ಪ್ರಸಾದ್, ಕಾವಲು ಪಡೆ ಅಧ್ಯಕ್ಷ ಎಂ.ಕೃಷ್ಣ, ರಕ್ಷಣಾ ವೇದಿಕೆ ಅಧ್ಯಕ್ಷ ಪಿ.ಕೆ.ಜಗದೀಶ್, ಜಯ ಕರ್ನಾಟಕ ಸಂಘಟನೆ ಕಾರ್ಯಾಧ್ಯಕ್ಷ ಮುರುಳೀಧರ್, ನಗರಾಧ್ಯಕ್ಷ ಗುರು, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಕೆ.ಬಿ.ರಾಜು ಸೇರಿದಂತೆ ವಿವಿಧ ರಾಜಕೀಯ ಪಕ್ಷಗಳ ಹಾಗೂ ಸಂಘ ಸಂಸ್ಥೆಗಳ ಮುಖಂಡರು ಪಾಲ್ಗೊಂಡಿದ್ದರು.

‘ವಿಶೇಷ ಮಾನದಂಡ ಅಗತ್ಯ’

ಕುಶಾಲನಗರ: ‘ಗುಡ್ಡಗಾಡು ಪ್ರದೇಶವಾಗಿರುವ ಕೊಡಗು ಜಿಲ್ಲೆಯನ್ನು ವಿಶೇಷ ಮಾನದಂಡದ ಅಡಿಯಲ್ಲಿ ಪರಿಗಣಿಸುವ ಮೂಲಕ ಕಾವೇರಿ ತಾಲ್ಲೂಕು ರಚನೆಗೆ ಸರ್ಕಾರ ಹಸಿರು ನಿಶಾನೆ ತೋರಿಸಬೇಕು’ ಎಂದು ಹೋರಾಟ ಕೇಂದ್ರೀಯ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಆಗ್ರಹಿಸಿದರು.

‘ಸರ್ಕಾರ ಈಗಾಗಲೇ 50 ನೂತನ ತಾಲ್ಲೂಕುಗಳನ್ನು ರಚಿಸುವ ನಿರ್ಧಾರ ಪ್ರಕಟಿಸಿದೆ. ಆದರೆ, ತಾಲ್ಲೂಕು ಆಗಬಲ್ಲ ಎಲ್ಲ ಅರ್ಹತೆ ಹೊಂದಿರುವ ಕಾವೇರಿ ತಾಲ್ಲೂಕನ್ನು ಪಟ್ಟಿಯಲ್ಲಿ ಕೈಬಿಟ್ಟಿರುವುದು ನೋವಿನ ಸಂಗತಿ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT