ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಪಾರಿ ಪ್ರಶ್ನೆ ಎತ್ತಿದಾಗ ರವಿ ಬೆಳಗೆರೆ ಮೌನ

‘ಹಾಯ್‌ ಬೆಂಗಳೂರು’ ಸಹ ಸಂಪಾದಕರ ಹೇಳಿಕೆ ದಾಖಲು
Last Updated 13 ಡಿಸೆಂಬರ್ 2017, 11:01 IST
ಅಕ್ಷರ ಗಾತ್ರ

ಬೆಂಗಳೂರು: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ್ದ ಆರೋಪಕ್ಕೆ ಸಂಬಂಧಿಸಿದಂತೆ ‘ಹಾಯ್‌ ಬೆಂಗಳೂರು’ ಪತ್ರಿಕೆ ಸಂಸ್ಥಾಪಕ ರವಿ ಬೆಳಗೆರೆ ಅವರ ವಿಚಾರಣೆ ಪೂರ್ಣಗೊಂಡಿದ್ದು, ಸಿಸಿಬಿ ಪೊಲೀಸರು ಅವರನ್ನು ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ.

‘ಭಾನುವಾರ ವಿಚಾರಣೆಗೆ ಸ್ಪಂದಿಸಿದ ಬೆಳಗೆರೆ, ನಾವು ಕೇಳಿದ ಬಹುತೇಕ ಪ್ರಶ್ನೆಗಳಿಗೆ ಉತ್ತರ ಕೊಟ್ಟರು. ಆದರೆ, ಸುಪಾರಿ ಕೊಟ್ಟಿದ್ದೇಕೆ ಎಂದು ಕೇಳಿದಾಗಲೆಲ್ಲ, ಮೌನಕ್ಕೆ ಶರಣಾಗುತ್ತಿದ್ದರು’ ಎಂದು ಸಿಸಿಬಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಶಾರ್ಪ್‌ ಶೂಟರ್ ಶಶಿಧರ್ ಮುಂಡೆವಾಡಿಯ ಹೇಳಿಕೆಯನ್ನು ವಿಡಿಯೊ ರೆಕಾರ್ಡ್ ಮಾಡಿಕೊಂಡಿದ್ದೇವೆ. ಆ ಹೇಳಿಕೆ ಹಾಗೂ ಮೊಬೈಲ್ ಕರೆ ವಿವರ (ಸಿಡಿಆರ್) ಪ್ರಕರಣದ ಪ್ರಮುಖ ಸಾಕ್ಷ್ಯಗಳಾಗಿವೆ. ಸೋಮವಾರಕ್ಕೆ ಕಸ್ಟಡಿ ಅವಧಿ ಪೂರ್ಣಗೊಳ್ಳಲಿದ್ದು, ಬೆಳಗೆರೆ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದೇವೆ. ಕಸ್ಟಡಿ ಅವಧಿ ವಿಸ್ತರಿಸುವಂತೆ ಕೋರುವ ಸಾಧ್ಯತೆ ಕಡಿಮೆ’ ಎಂದು ಹೇಳಿದರು.

ಸಹ ಸಂಪಾದಕರ ವಿಚಾರಣೆ: ಸಿಸಿಬಿ ಪೊಲೀಸರು ಭಾನುವಾರ ‘ಹಾಯ್‌ ಬೆಂಗಳೂರು’ ಪತ್ರಿಕೆಯ ಸಹ ಸಂಪಾದಕ ಲೋಕೇಶ್ ಕೊಪ್ಪದ್, ರವಿ ಬೆಳಗೆರೆ ಅವರ 2ನೇ ಪತ್ನಿ ಯಶೋಮತಿ ಹಾಗೂ ಸುನೀಲ್ ಹೆಗ್ಗರವಳ್ಳಿ ಅವರ ಹೇಳಿಕೆ ದಾಖಲಿಸಿಕೊಂಡರು.

‘ಶಶಿಧರ್ ಮುಂಡೆವಾಡಿಗೆ ಲೋಕೇಶ್ ಅವರ ಮೊಬೈಲ್ ಸಂಖ್ಯೆಯಿಂದ ಹಿಂದೆ ಒಮ್ಮೆ ಕರೆ ಹೋಗಿತ್ತು. ಹಾಗೆಯೇ, ‘ಸುನೀಲ್ ಹೆಗ್ಗರವಳ್ಳಿಯನ್ನು ಕೊಲ್ಲಲು ರವಿಬೆಳಗೆರೆ ಅವರು ಆ.28ರಂದು ನನಗೆ ಗನ್ ಕೊಡುವಾಗ, ಲೋಕೇಶ್ ಸಹ ಅವರ ಜತೆಗಿದ್ದರು’ ಎಂದು ಶಶಿಧರ್ ಹೇಳಿಕೆ ಕೊಟ್ಟಿದ್ದ. ಹೀಗಾಗಿ, ಅವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆದುಕೊಂಡಿದ್ದೇವೆ. ಆದರೆ, ಈ ಆರೋಪಗಳನ್ನು ಲೋಕೇಶ್ ಅಲ್ಲಗಳೆದಿದ್ದಾರೆ’ ಎಂದು ತನಿಖಾಧಿಕಾರಿಗಳು ಹೇಳಿದರು.

‘ಹೀಗಾ ನೋಡಿಕೊಳ್ಳೋದು’: ‘ಶನಿವಾರ ರಾತ್ರಿ ನನ್ನನ್ನು ವೈದ್ಯಕೀಯ ತಪಾಸಣೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ಸ್ಟ್ರೆಚ್ಚರ್ ತಗುಲಿ ಎರಡು ಕಾಲುಗಳಿಗೂ ಗಾಯವಾಯಿತು. ಒಂದು ಕಾಲಿಗೆ ಮಾತ್ರ ಬ್ಯಾಂಡೇಜ್ ಹಾಕಿದ ವೈದ್ಯರು, ಮತ್ತೊಂದಕ್ಕೆ ಚಿಕಿತ್ಸೆಯನ್ನೇ ನೀಡಲಿಲ್ಲ. ಈಗ ಆ ಕಾಲು ಊದಿಕೊಂಡಿದೆ. ಮೊದಲೇ ನಾನು ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದೇನೆ. ಅದರಿಂದ ಸಮಸ್ಯೆ ಹೆಚ್ಚಾಗಿ, ವೈದ್ಯರು ಕಾಲನ್ನೇ ತೆಗೆಯಬೇಕು ಎಂದರೆ ಏನು ಮಾಡಬೇಕು? ನೀವು ನನ್ನನ್ನು ಈ ರೀತಿ ನೋಡಿಕೊಳ್ಳುತ್ತಿರುವುದು ಸರೀನಾ’ ಎಂದು ಬೆಳಗೆರೆ ಅವರು ಹಿರಿಯ ಅಧಿಕಾರಿಗಳನ್ನು ಭಾನುವಾರ ಪ್ರಶ್ನೆ ಮಾಡಿದ್ದಾಗಿ ಸಿಸಿಬಿ ಪೊಲೀಸರು ತಿಳಿಸಿದರು.

ಸಿಗರೇಟ್‌ ಗಲಾಟೆ: ‘ಬೆಳಗೆರೆ ಸಿಗರೇಟ್ ಬೇಕೆಂದು ಭಾನುವಾರ ಸಂಜೆ ಸಹ ನಮ್ಮನ್ನು ಕಾಡಿದರು. ಸಂಜೆ 5 ಗಂಟೆ ಸುಮಾರಿಗೆ ಸಿಸಿಬಿ ಕಚೇರಿಯಿಂದ ಅವರನ್ನು ವಿಕ್ಟೋರಿಯಾ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಮುಂದಾದೆವು. ಜೀಪು ಹತ್ತಿ ಕುಳಿತ ಅವರು, ‘ನನಗೆ ಸಿಗರೇಟ್ ಬೇಕು. ಇಲ್ಲವಾದರೆ ಡೋರ್ ಬಂದ್ ಮಾಡಲು ಬಿಡುವುದಿಲ್ಲ’ ಎಂದು ಪಟ್ಟು ಹಿಡಿದರು. ಎಷ್ಟೇ ಹೇಳಿದರೂ ಮಾತು ಕೇಳಲಿಲ್ಲ. ಸಿಗರೇಟ್ ಕೊಟ್ಟ ಬಳಿಕ ಸುಮ್ಮನಾದರು’ ಎಂದು ಸಿಸಿಬಿ ಪೊಲೀಸರು ಹೇಳಿದರು.

ಪೊಲೀಸ್ ಭದ್ರತೆ: ನಗರ ಪೊಲೀಸ್ ಕಮಿಷನರ್ ಟಿ.ಸುನೀಲ್ ಕುಮಾರ್ ಅವರನ್ನು ಭಾನುವಾರ ಭೇಟಿಯಾದ ಸುನೀಲ್ ಹೆಗ್ಗರವಳ್ಳಿ, ‘ನಾನೊಬ್ಬ ಪತ್ರಕರ್ತ. ಕೆಲಸದ ನಿಮಿತ್ತ ಎಲ್ಲೆಲ್ಲೋ ಓಡಾಡುತ್ತಿರುತ್ತೇನೆ. ರವಿ ಬೆಳಗೆರೆ ಅವರಿಗೆ ಶಶಿಧರ್‌ನಂಥ ಹಲವು ವ್ಯಕ್ತಿಗಳ ಜತೆ ನಂಟಿದೆ. ಹೀಗಾಗಿ, ನನ್ನ ಜೀವಕ್ಕೆ ಭದ್ರತೆ ಬೇಕು. ಅಂತೆಯೇ ನನ್ನ ಹೆಂಡತಿ ಸುಚಿತಾ ಹಾಗೂ ಎಂಟು ವರ್ಷದ ಮಗ ಸೂರ್ಯನ ರಕ್ಷಣೆಗೆ ಕ್ರಮ ತೆಗೆದುಕೊಳ್ಳಬೇಕು’ ಎಂದು ಮನವಿ ಸಲ್ಲಿಸಿದರು.

ನಂತರ ಸುದ್ದಿಗಾರರ ಜತೆ ಮಾತನಾಡಿದ ಸುನೀಲ್, ‘ಮನವಿ ಸ್ವೀಕರಿಸಿದ ಕೂಡಲೇ ಸಂಬಂಧಪಟ್ಟ ಡಿಸಿಪಿಗೆ ಕರೆ ಮಾಡಿದ ಕಮಿಷನರ್, ‘ಸುನೀಲ್ ಹೆಗ್ಗರವಳ್ಳಿ ಅವರ ಮನೆ ಹತ್ತಿರ ಭದ್ರತೆಗೆ ಕಾನ್‌ಸ್ಟೆಬಲ್‌ಗಳನ್ನು ನಿಯೋಜಿಸಿ’ ಎಂದು ಸೂಚನೆ ಕೊಟ್ಟಿದ್ದಾರೆ. ಹಾಗೆಯೇ, ಗನ್‌ಮ್ಯಾನ್‌ ಒದಗಿಸುವ ಸಂಬಂಧ ವಿವಿಐಪಿ ಭದ್ರತಾ ವಿಭಾಗದ ಐಜಿಪಿ ಜತೆ ಚರ್ಚಿಸುವುದಾಗಿ ಹೇಳಿದ್ದಾರೆ’ ಎಂದರು.

ಗೌರಿ ಹತ್ಯೆ: ಕಾರ್ಟ್ರಿಜ್‌ ಮುಂಬೈ ಎಫ್‌ಎಸ್‌ಎಲ್‌ಗೆ
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ನಾಲ್ಕು ಖಾಲಿ ಕೋಕಾಗಳನ್ನು (ಕಾರ್ಟ್ರಿಜ್‌) ಜಪ್ತಿ ಮಾಡಿದ್ದ ಎಸ್‌ಐಟಿ ಅಧಿಕಾರಿಗಳು, ಅವುಗಳನ್ನು ಮುಂಬೈ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಎಫ್‌ಎಸ್‌ಎಲ್‌) ಕಳುಹಿಸಲು ನಿರ್ಧರಿಸಿದ್ದಾರೆ.

‘ಶಶಿಧರ್ ಮುಂಡೆವಾಡಿಯನ್ನು ಇದೇ ಸೆ.14ರಂದು ಬಂಧಿಸಿದ್ದ ಮಹಾರಾಷ್ಟ್ರದ ಮೀರಜ್ ಪೊಲೀಸರು, ಆತನಿಂದ ಎರಡು ನಾಡ ಪಿಸ್ತೂಲುಗಳನ್ನು ಜಪ್ತಿ ಮಾಡಿದ್ದರು. ಗೌರಿ ಹತ್ಯೆಗೆ ಬಳಸಿರುವ ಪಿಸ್ತೂಲಿಗೂ, ಶಶಿಧರ್‌ನಿಂದ ಜಪ್ತಿ ಮಾಡಿರುವ ಪಿಸ್ತೂಲಿಗೂ ಹೋಲಿಕೆ ಇದೆಯೇ ಎಂಬುದನ್ನು ತಿಳಿಯಬೇಕಿದೆ. ಈ ನಿಟ್ಟಿನಲ್ಲಿ ಮೀರಜ್ ಪೊಲೀಸರನ್ನು ಸಂಪರ್ಕಿಸಿದಾಗ, ಆರೋಪಿಯನ್ನು ಬಂಧಿಸಿದ್ದ ದಿನವೇ ಅವುಗಳನ್ನು ಪರಿಶೀಲನೆಗಾಗಿ ಎಫ್‌ಎಸ್‌ಎಲ್‌ಗೆ ಕಳುಹಿಸಿರುವುದಾಗಿ ಹೇಳಿದರು’ ಎಂದು ಎಸ್‌ಐಟಿ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಇದೀಗ ಮುಂಬೈ ಎಫ್‌ಎಸ್‌ಎಲ್‌ಗೆ ಪತ್ರ ಬರೆಯುತ್ತಿದ್ದೇವೆ. ನಾವು ಕಳುಹಿಸುವ ಕಾರ್ಟ್ರಿಜ್‌ಗಳು, ಶಶಿಧರ್‌ನಿಂದ ಜಪ್ತಿ ಮಾಡಲಾದ ಪಿಸ್ತೂಲಿನಿಂದ ಹಾರಿದ್ದವೇ ಎಂಬುದನ್ನು ಸ್ಪಷ್ಟಪಡಿಸುವಂತೆ ಕೋರುತ್ತೇವೆ. ಸುಪಾರಿ ಪ್ರಕರಣದ ತನಿಖೆಯಿಂದಾಗಿ, ಗೌರಿ ಹಂತಕರ ಸುಳಿವು ಸಹ ಸಿಗಬಹುದೆಂಬ ವಿಶ್ವಾಸ ಬಲವಾಗುತ್ತಿದೆ’ ಎಂದು ಮಾಹಿತಿ ನೀಡಿದರು

ವಿಜಯಪುರದಲ್ಲಿ ವಿಜಿ ಬಡಿಗೇರಗಾಗಿ ಶೋಧ
ವಿಜಯಪುರ:
ಪತ್ರಕರ್ತ ಸುನೀಲ್‌ ಹೆಗ್ಗರವಳ್ಳಿ ಹತ್ಯೆಗೆ ಸುಪಾರಿ ನೀಡಿದ ಪ್ರಕರಣದಲ್ಲಿ ಮೂರನೇ ಆರೋಪಿಯಾಗಿರುವ ವಿಜಿ ಬಡಿಗೇರನಿಗಾಗಿ, ಬೆಂಗಳೂರು ಸಿಸಿಬಿ ಪೊಲೀಸರು ವಿಜಯಪುರ ಜಿಲ್ಲೆಯ ವಿವಿಧೆಡೆ ಭಾನುವಾರ ಶೋಧ ನಡೆಸಿದರು.

ಸಿಂದಗಿಯ ವಿಜಿ ಬಡಿಗೇರ, ಈ ಪ್ರಕರಣದಲ್ಲಿ ಈಗಾಗಲೇ ಬಂಧಿತನಾಗಿರುವ ಶಶಿಧರ ಮುಂಡೆವಾಡಿ ಪತ್ನಿಯ ಅಣ್ಣ. ಮುಂಡೇವಾಡಿ ಜತೆ ಅಕ್ರಮ ಶಸ್ತ್ರಾಸ್ತ್ರ ಮಾರಾಟ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ.

ಸಿಸಿಬಿ ಪೊಲೀಸರು ಸಿಂದಗಿ, ಇಂಡಿ, ಚಡಚಣ ವ್ಯಾಪ್ತಿಯಲ್ಲಿ ಶೋಧ ನಡೆಸಿದ್ದಾರೆ. ಸೋಮವಾರ ಸಿಸಿಬಿಯ ಉನ್ನತ ಅಧಿಕಾರಿಗಳು ಭೇಟಿ ನೀಡಲಿದ್ದಾರೆ ಎಂದು ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.

ಭೀಮಾ ತೀರದ ರೌಡಿ ಚಂದಪ್ಪ ಹರಿಜನನ ಮಾಹಿತಿದಾರನಾಗಿ ಕೆಲಸ ಮಾಡಿದ್ದ ವಿಜಿ, ವಿಜಯಪುರದಲ್ಲಿ ನಡೆದ ಕಂಡಕ್ಟರ್‌ ಲಾಳಸಂಗಿ ಹತ್ಯೆ ಪ್ರಕರಣ ಸೇರಿದಂತೆ ಹಲವು ಪ್ರಕರಣಗಳಲ್ಲಿ ಆರೋಪಿಯಾಗಿದ್ದಾನೆ ಎಂದು ಸ್ಥಳೀಯ ಪೊಲೀಸರು ತಿಳಿಸಿದರು.

ಸಿಸಿಬಿ ಕಚೇರಿಯಿಂದಲೇ ಬೆಳಗೆರೆ ಕರೆ; ಸುನೀಲ್‌
ಬೆಂಗಳೂರು:
‘ಸಿಸಿಬಿ ಕಚೇರಿಯಿಂದಲೇ ರವಿ ಬೆಳಗೆರೆ ಅವರು ನನಗೆ ಕರೆ ಮಾಡಿ ಮಾತನಾಡಿದ್ದಾರೆ’ ಎಂದು ಸುನೀಲ್‌ ಹೆಗ್ಗರವಳ್ಳಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಭಾನುವಾರ ರಾತ್ರಿ 9.40 ಗಂಟೆಗೆ ಸ್ನೇಹಿತ ಮಧು ನನ್ನ ಮೊಬೈಲ್‌ಗೆ ಕರೆ ಮಾಡಿದ್ದರು. ಅದನ್ನು ಸ್ವೀಕರಿಸುತ್ತಿದ್ದಂತೆ, ’ರವಿ ಅಣ್ಣ ಮಾತನಾಡುತ್ತಾರೆ’ ಎಂದು ಹೇಳಿ ಮೊಬೈಲ್‌ನನ್ನು ರವಿ ಬೆಳಗೆರೆ ಅವರಿಗೆ ಕೊಟ್ಟಿದ್ದರು’ ಎಂದರು.

‘ನಿನಗೂ ಯಶೋಮತಿಗೂ ಸಂಬಂಧ ಇತ್ತು ಅಂತಾ ಟಿ.ವಿಯಲ್ಲಿ ಹೇಳಿದ್ದೀಯಾ? ಎಂದು ರವಿ ಅವರು ಕೇಳಿದ್ದರು. ನಮ್ಮಿಬ್ಬರ ನಡುವೆ ಸಂಬಂಧ ಇತ್ತು ಎಂದು ನಾನು ಎಲ್ಲಿ ಹೇಳಿದ್ದೇನೆ ಎಂಬುದಾಗಿ ಉತ್ತರಿಸುತ್ತಿದ್ದಂತೆ, ಕರೆ ಕಡಿತಗೊಳಿಸಿದರು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT