ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೋದಿ ಹುಟ್ಟೂರು ಬಳಿ ಹುಲ್ಲು ಹುಟ್ಟಿಸುವ ಉಮೇದಿ!

Last Updated 10 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ವಡಗಾಮ್: ಆಲದ ಮರದ ಬುಡದಲ್ಲಿ ಹುಲ್ಲೂ ಹುಟ್ಟುವುದಿಲ್ಲ ಎಂಬ ಮಾತಿದೆ. ಆದರೆ ಈ ಬಾರಿ ಗುಜರಾತ್ ಚುನಾವಣೆಯಲ್ಲಿ ಆಲದಮರದ ಬುಡದಲ್ಲಿ ಹುಲ್ಲು ಹುಟ್ಟಿಸುವ ಯತ್ನವೊಂದು ನಡೆದಿದೆ.

ಗುಜರಾತಿನ ಮಟ್ಟಿಗೆ ಪ್ರಧಾನಿ ನರೇಂದ್ರ ಮೋದಿ ಆಲದ ಮರ ಇದ್ದ ಹಾಗೆ. ಮೋದಿಯ ಎತ್ತರಕ್ಕೆ ಗುಜರಾತಿನ ಇನ್ನೊಬ್ಬ ಬಿಜೆಪಿ ನಾಯಕ ಬೆಳೆದಿಲ್ಲ ಎನ್ನುವುದೂ ಸತ್ಯ. ಇತರ ಪಕ್ಷಗಳಲ್ಲಿಯೂ ಅಂತಹ ನಾಯಕರಿಲ್ಲ. ಈ ಬಾರಿಯ ಗುಜರಾತ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಇತರ ಹಿರಿಯ ನಾಯಕರು ಅಷ್ಟೊಂದು ಪ್ರಮಾಣದಲ್ಲಿ ಕಾಣಿಸಿಕೊಂಡಿಲ್ಲ. ಮೋದಿ–ಷಾ ಜೋಡಿಯೇ ಎಲ್ಲ ಜವಾಬ್ದಾರಿಯನ್ನೂ ತಮ್ಮ ಹೆಗಲ ಮೇಲೆ ಹಾಕಿಕೊಂಡಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟೂರು ವಡನಗರ. ಅಲ್ಲಿಂದ 40 ಕಿಮೀ ದೂರದಲ್ಲಿ ವಡಗಾಮ್ ಇದೆ. ಇವೆರಡೂ ಬೇರೆ ಬೇರೆ ಜಿಲ್ಲೆಗೆ ಸೇರಿದ್ದರೂ ವಡಗಾಮ್ ಚುನಾವಣೆಯಲ್ಲಿ ವಡನಗರ ಹೆಚ್ಚು ಹೆಚ್ಚು ಪ್ರಸ್ತಾಪವಾಗುತ್ತಿದೆ. ಇದಕ್ಕೆ ಮುಖ್ಯ ಕಾರಣ ಇದು ಪ್ರಧಾನಿ ಹುಟ್ಟೂರಿನ ಬಳಿ ಇರುವುದು. ಜೊತೆಗೆ ದಲಿತ ನಾಯಕ ಜಿಗ್ನೇಶ್ ಮೇವಾನಿ ಇಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವುದು.

ವಡಗಾಮ್ ಗ್ರಾಮವನ್ನು ಆಲದಮರದ ಗ್ರಾಮ ಎಂತಲೂ ವಡನಗರವನ್ನು ಆಲದಮರದ ಪಟ್ಟಣ ಎಂದೂ ಕರೆಯಲಾಗುತ್ತದೆ. ‘ವಡಗಾಮ್ ನ ಬಾಲಕ (ಜಿಗ್ನೇಶ್ ಮೇವಾನಿ) ವಡನಗರದ ಮನುಷ್ಯ (ನರೇಂದ್ರ ಮೋದಿ) ಅವರನ್ನು ಸೋಲಿಸುತ್ತಾರೆ’ ಎಂದೇ ಇಲ್ಲಿನ ಜನ ಭಾವಿಸಿದ್ದಾರೆ. ‘ನಾನು ಗೆದ್ದರೆ ವಡಗಾಮ್ ನಿಂದ ವಡನಗರದವರೆಗೆ ಮೆರವಣಿಗೆ ನಡೆಸುತ್ತೇನೆ’ ಎಂದು ಜಿಗ್ನೇಶ್ ಮೇವಾನಿ ಸಾರಿದ್ದಾರೆ.

ಮೆಹಸಾನ ಜಿಲ್ಲೆಯ ಮೆವು ಗ್ರಾಮದವರಾದ ಮೇವಾನಿ ಹುಟ್ಟಿದ್ದು ಬೆಳೆದಿದ್ದು ಎಲ್ಲ ಅಹಮದಾಬಾದ್ ನಲ್ಲಿ. ಕಾನೂನು ಪದವಿಯ ಜೊತೆ ಪತ್ರಿಕೋದ್ಯಮ ಡಿಪ್ಲೊಮಾ ಮುಗಿಸಿರುವ ಅವರು ಕೆಲವು ಕಾಲ ಅಹಮದಾಬಾದ್ ನ ‘ಅಭಿಯಾನ್’ ಪತ್ರಿಕೆಯಲ್ಲಿ ಕೆಲಸ ಮಾಡಿದ್ದರು. ಗಿರ್ ಸೋಮನಾಥ ಜಿಲ್ಲೆಯ ಅತ್ಯಂತ ಹಿಂದುಳಿದ ಪ್ರದೇಶವಾದ ಉನಾದಲ್ಲಿ ದಲಿತರ ಮೇಲೆ ಗೋರಕ್ಷಕರು ಹಲ್ಲೆ ನಡೆಸಿದ ನಂತರ 2016ರ ಆಗಸ್ಟ್ 15ರಿಂದ ಅಹಮದಾಬಾದ್ ನಿಂದ ಉನಾದವರೆಗೆ ‘ದಲಿತ ಅಸ್ಮಿತಾ ರ‍್ಯಾಲಿ’ ನಡೆಸಿದ ಜಿಗ್ನೇಶ್ ಮೇವಾನಿ ಗುಜರಾತಿನ ಹೊಸ ದಲಿತ ನಾಯಕರಾಗಿ ಹೊರಹೊಮ್ಮಿದವರು. ‘ದೇಶದಲ್ಲಿ ಸಂವಿಧಾನ ಉಳಿಯಬೇಕು ಎಂದರೆ ಆರ್ ಎಸ್ ಎಸ್ ಮತ್ತು ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಬೇಕು’ ಎಂದು ಅವರು ಹೇಳುತ್ತಾರೆ.

ವಡಗಾಮ್ ಪರಿಶಿಷ್ಟ ಜಾತಿಯವರಿಗೆ ಮೀಸಲು ಕ್ಷೇತ್ರ. 2012ರಲ್ಲಿ ಇಲ್ಲಿ ಕಾಂಗ್ರೆಸ್ ನ ಮಣಿಲಾಲ್ ವಘೇಲಾ ಗೆದ್ದಿದ್ದರು. ಈ ಬಾರಿ ಅವರು ಮೇವಾನಿಗೆ ಕ್ಷೇತ್ರವನ್ನು ಬಿಟ್ಟುಕೊಟ್ಟು ತಾವು ಸಬರಕಂಠ ಜಿಲ್ಲೆಯ ಐದರ್ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದಾರೆ. ‘ವಡಗಾಮ್ ಕ್ಷೇತ್ರದಲ್ಲಿ ದಯಮಾಡಿ ಬೇರೆ ಯಾರೂ ನಾಮಪತ್ರ ಸಲ್ಲಿಸಬೇಡಿ. ಬಿಜೆಪಿಯೊಂದಿಗೆ ನೇರ ಹೋರಾಟ ನಡೆಸೋಣ’ ಎಂದು ಜಿಗ್ನೇಶ್ ಮನವಿ ಮಾಡಿಕೊಂಡಿದ್ದರೂ ಆಮ್ ಆದ್ಮಿ ಪಕ್ಷವಲ್ಲದೆ 17 ಮಂದಿ ಪಕ್ಷೇತರರೂ ಸ್ಪರ್ಧಿಸಿದ್ದರು. ಆದರೆ ಆಮ್ ಆದ್ಮಿ ಪಕ್ಷ ಈಗ ಮೇವಾನಿಯನ್ನು ಬೆಂಬಲಿಸಿ ನಾಮಪತ್ರ ವಾಪಸು ಪಡೆದಿದೆ. 17 ಮಂದಿ ಪಕ್ಷೇತರರ ಪೈಕಿ 14 ಮಂದಿ ಪಕ್ಷೇತರರೂ ನಾಮಪತ್ರ ವಾಪಸು ಪಡೆದಿದ್ದಾರೆ. ಅವರೆಲ್ಲ ಮೇವಾನಿ ಬೆಂಬಲಕ್ಕೆ ನಿಂತಿದ್ದಾರೆ. ದೆಹಲಿಯ ಜೆಎನ್ ಯು ವಿಶ್ವವಿದ್ಯಾಲಯದ ಹಲವಾರು ಮಂದಿ ಇಲ್ಲಿಗೆ ಬಂದು ಮೇವಾನಿ ಪರ ಪ್ರಚಾರ ನಡೆಸಿದ್ದಾರೆ.

ಜಿಗ್ನೇಶ್‌ ಮೇವಾನಿ

ಆದರೆ ಈ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿದ್ದ ಕಾಂಗ್ರೆಸ್ ಮುಖಂಡ ದೋಲತ್ ಪರ್ಮಾರ್ ಅವರ ಪುತ್ರ ಅಶ್ವಿನ್ ಪರ್ಮಾರ್ ಈಗಲೂ ಕಣ
ದಲ್ಲಿದ್ದಾರೆ. ಅವರು ಪಕ್ಷೇತರರಾಗಿಸ್ಪರ್ಧಿಸಿದ್ದರೂ ಈಗಲೂ ಅವರು ಕಾಂಗ್ರೆಸ್ ಪಕ್ಷದ ಪ್ರಾಥಮಿಕ ಸದಸ್ಯ. ವಿಜಯ ಚಕ್ರವರ್ತಿ ಬಿಜೆಪಿ ಅಭ್ಯರ್ಥಿ. ಚಕ್ರವರ್ತಿ ಕೂಡ ಮೂಲ ಕಾಂಗ್ರೆಸ್ ನವರು. ನಾಲ್ಕು ವರ್ಷದ ಹಿಂದೆ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದರು. ಹೀಗಾಗಿ ಮಡಗಾಮ್ ವಿಧಾನಸಭಾ ಕ್ಷೇತ್ರದಲ್ಲಿ ಒಂದರ್ಥದಲ್ಲಿ ಕಾಂಗ್ರೆಸ್–ಕಾಂಗ್ರೆಸ್–ಕಾಂಗ್ರೆಸ್ ತ್ರಿಕೋನ ಸ್ಪರ್ಧೆ.

ಈ ಕ್ಷೇತ್ರ ಪರಿಶಿಷ್ಟ ಜಾತಿಯವರಿಗೆ ಮೀಸಲಾಗಿದ್ದರೂ ಇಲ್ಲಿ ಮುಸ್ಲಿಂ ಮತದಾರರು ಅತಿ ಹೆಚ್ಚು ಸಂಖ್ಯೆಯಲ್ಲಿದ್ದಾರೆ. 65,000 ಮುಸ್ಲಿಂ, 43,000 ದಲಿತರು, 25,000 ಚೌಧರಿ, 21,000 ಠಾಕೂರರು, 13, 000, ದರ್ಬಾರ್, 9,000 ಪ್ರಜಾಪತಿ ಹಾಗೂ 4000 ಬ್ರಾಹ್ಮಣ ಮತದಾರರಿದ್ದಾರೆ. ಬನಸ್ಕಂದ ಜಿಲ್ಲೆಯಲ್ಲಿ ಕಾಂಗ್ರೆಸ್ ಪ್ರಬಲವಾಗಿದೆ. ಉತ್ತರ ಗುಜರಾತಿನ ಈ ಜಿಲ್ಲೆ ಹಿಂದುಳಿದ ಜಿಲ್ಲೆಗಳ ಪಟ್ಟಿಯಲ್ಲಿಯೇ ಬರುತ್ತದೆ. ಈಗಲೂ ಇಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಒಳ್ಳೆಯ ಶಿಕ್ಷಣ ಸಂಸ್ಥೆಗಳಿಲ್ಲ. ಉತ್ತಮ ಆಸ್ಪತ್ರೆಗಳೂ ಇಲ್ಲ. ಈ ವಿಷಯಗಳೇ ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಚರ್ಚೆ
ಯಾಗುತ್ತಿವೆ.

‘ನಾನು ಗೆದ್ದರೆ ಇಲ್ಲಿ ವೈದ್ಯಕೀಯ ಸಂಸ್ಥೆ ಕಟ್ಟುತ್ತೇನೆ. ಮುಕುಟೇಶ್ವರ ಜಲಾಶಯದಿಂದ ನೀರು ತರುತ್ತೇನೆ. ನರ್ಮದಾ ನೀರು ಇಲ್ಲಿಗೆ ಬರುವಂತೆ ಮಾಡುತ್ತೇನೆ’ ಎಂದು ಜಿಗ್ನೇಶ್ ಭರವಸೆ ನೀಡುತ್ತಿದ್ದಾರೆ. ‘ಕೇವಲ ಜಾತಿಯ ಆಧಾರದಲ್ಲಿ ಮತ ಕೇಳಿದರೆ ಇಲ್ಲಿನ ಜನ ಮತ ನೀಡಲು ಮುಠ್ಠಾಳರಲ್ಲ. ಮೋದಿಯ ಆಡಳಿತವನ್ನು ಅವರು ನೋಡಿದ್ದಾರೆ. ಮೆಚ್ಚಿದ್ದಾರೆ. ಅಭಿವೃದ್ಧಿಯ ರುಚಿ ಅವರಿಗೂ ಸಿಕ್ಕಿದೆ. ಜನ ನಮ್ಮನ್ನು ಗೆಲ್ಲಿಸುತ್ತಾರೆ. ಈ ಬಗ್ಗೆ ಅನುಮಾನವೇ ಬೇಡ’ ಎಂದು ಬಿಜೆಪಿ ಅಭ್ಯರ್ಥಿ ವಿಜಯ್ ಚಕ್ರವರ್ತಿ ಹೇಳುತ್ತಾರೆ.

ದಲಿತ, ಮುಸ್ಲಿಂ ಜನಸಂಖ್ಯೆ ಹೆಚ್ಚಿದ್ದರೂ ಇಲ್ಲಿ ಹಿಂದುತ್ವದ ಪ್ರಚಾರವೂ ನಡೆಯುತ್ತಿದೆ. ‘ಹಿಂದೂ ವಿರೋಧಿಗಳಿಗೆ ಪ್ರವೇಶವಿಲ್ಲ’ ಎಂಬ ಫಲಕಗಳು ಕೆಲವು ಗ್ರಾಮಗಳಲ್ಲಿ ರಾರಾಜಿಸುತ್ತಿವೆ. ಉನಾ ಘಟನೆ ನಡೆದ ಸಂದರ್ಭದಲ್ಲಿ ಜಿಗ್ನೇಶ್ ಮೇವಾನಿ ಅವರು ನೀಡಿದ ಹೇಳಿಕೆಗಳ ವಿಡಿಯೊಗಳು ಇಲ್ಲಿ ಹರಿದಾಡುತ್ತಿವೆ. ಅವರು ಹಿಂದೂಗಳನ್ನು ಬೈದಿದ್ದರು ಎಂಬ ಪ್ರಚಾರವನ್ನು ಜೋರಾಗಿಯೇ ಮಾಡಲಾಗುತ್ತಿದೆ. ಹೀಗಿದ್ದರೂ ಮೇವಾನಿ ಬಿಜೆಪಿಗೆ ಪ್ರಬಲ ಪೈಪೋಟಿಯನ್ನೇ ನೀಡಿದ್ದಾರೆ.

ಕಾಂಗ್ರೆಸ್ ಪಕ್ಷ ತನ್ನ ಅಭ್ಯರ್ಥಿಯನ್ನು ನಿಲ್ಲಿಸದೆ ಮೇವಾನಿಯನ್ನು ಬೆಂಬಲಿಸಿರುವುದಷ್ಟೇ ಅಲ್ಲದೆ ರಾಹುಲ್ ಗಾಂಧಿ ಅವರೂ ಮೇವಾನಿ ಪರ ಪ್ರಚಾರ ಕೈಗೊಂಡಿದ್ದಾರೆ. ಶನಿವಾರವಷ್ಟೆ ಅವರು ವಡನಗರದಲ್ಲಿ ಚುನಾವಣಾ ಪ್ರಚಾರ ಭಾಷಣ ಮಾಡಿದರು. ಮೋದಿ ಹುಟ್ಟೂರಿನಲ್ಲಿಯೇ ಅವರು ಮೋದಿ
ಯನ್ನು ಕಟುವಾಗಿ ಟೀಕಿಸಿದ್ದಾರೆ.

‘ಜಿಗ್ನೇಶ್ ಬಲಿಷ್ಠ ಅಭ್ಯರ್ಥಿ ಹೌದು. ಆದರೆ ಜನರಿಗೆ ಪರಿಚಯ ಇರುವ ಚಿಹ್ನೆ ಅವರಿಗೆ ಇಲ್ಲ. ಚಕ್ರವರ್ತಿ ಅವರು ಬಿಜೆಪಿಯಿಂದ ಸ್ಪರ್ಧಿಸಿರುವುದರಿಂದ ಜನರಿಗೆ ಕಮಲ ಗೊತ್ತು. ಜನರಿಗೆ ಹಸ್ತವೂ ಗೊತ್ತು. ಆದರೆ ಈ ಬಾರಿ ಹಸ್ತದ ಚಿಹ್ನೆ ಇಲ್ಲ. ಇದು ಜಿಗ್ನೇಶ್ ಅವರಿಗೆ ಮುಳುವಾದರೆ ಅಚ್ಚರಿಯಿಲ್ಲ’ ಎಂದು ಮನೀಶ್ ಖಾತ್ರಿ ಎಂಬ ಆಟೋ ಚಾಲಕ ಹೇಳುತ್ತಾರೆ. ‘ಮುಸ್ಲಿಂ ಮತದಾರರ ಬೆಂಬಲ ಜಿಗ್ನೇಶ್ ಅವರಿಗೆ. ಇದರಲ್ಲಿ ಯಾವ ಅನುಮಾನ ಬೇಡ’ ಎಂದು ಸೈಕಲ್ ಅಂಗಡಿ ಹೊಂದಿರುವ ಆಶ್ರಫ್ ಮರಾದಿಯ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಜಿಗ್ನೇಶ್ ಗೆ ಗೆಲುವು ಸುಲಭವಲ್ಲ. ಯಾಕೆಂದರೆ ಅಶ್ವಿನ್ ಪರ್ಮಾರ್ ಅವರಿಗೆ ಕೆಲವು ಸ್ಥಳೀಯ ಕಾಂಗ್ರೆಸ್ ನಾಯಕರು ಬೆಂಬಲ ಸೂಚಿಸಿದ್ದಾರೆ. ಹಾಲಿ ಶಾಸಕರಿಗೆ ಇಲ್ಲಿ ಟಿಕೆಟ್ ನೀಡದೇ ಹೊರಗಿನವರನ್ನು ಕರೆ ತಂದು ಅವರಿಗೆ ಬೆಂಬಲ ನೀಡಿದ್ದು ಹಲವರ ಮುನಿಸಿಗೆ ಕಾರಣವಾಗಿದೆ. ಅದಕ್ಕಾಗಿ ಸ್ಥಳೀಯ ನಾಯಕ ಅಶ್ವಿನ್ ಗೆ ಸಾಕಷ್ಟು ಬೆಂಬಲ ವ್ಯಕ್ತವಾಗಿದೆ ಎಂದು ಕಾಂಜಿಭಾಯ್ ಹೇಳುತ್ತಾರೆ.

ಅಂದಹಾಗೆ ಮೇವಾನಿ ಅವರು ಅಮಹದಾಬಾದಿನವರಾದರೆ ಬಿಜೆಪಿ ಅಭ್ಯರ್ಥಿ ವಿಜಯ್ ಚಕ್ರವರ್ತಿ ಕಛ್ ಜಿಲ್ಲೆಯವರು. ಈ ಇಬ್ಬರು ಹೊರಗಿನವರ ನಡುವೆ ಸ್ಥಳೀಯ ಅಶ್ವಿನ್ ಸಾಕಷ್ಟು ಸ್ಪರ್ಧೆ ನೀಡಿದ್ದಾರೆ.

ಆಲದಮರದ ಖ್ಯಾತಿಯ ವಡಗ್ರಾಮ್ ಮತ್ತು ವಡನಗರ ಎರಡೂ ಪ್ರದೇಶಗಳು ಹಿಂದುಳಿದಿವೆ. ‘ಪ್ರಧಾನಿ ನರೇಂದ್ರ ಮೋದಿಯವರು ಇಲ್ಲಿಯವರೇ ಹೌದು. ಆದರೆ ನಮ್ಮ ಮಕ್ಕಳು ವಿದ್ಯಾಭ್ಯಾಸಕ್ಕೆ, ನೌಕರಿಗೆ, ಉದ್ಯಮಕ್ಕೆ ಬೇರೆ ಊರಿಗೇ ಹೋಗಬೇಕು’ ಎಂದು ನಿರಾಸೆಯಿಂದ ಹೇಳುವ ಹಿರೇನ್ ಭಾಯ್ ಮಾತಿನಲ್ಲಿ ಒಂದಿಷ್ಟು ಸತ್ಯ ಮತ್ತು ಒಂದಿಷ್ಟು ರಹಸ್ಯ ಅಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT