ಸೋಮವಾರ, ಮಾರ್ಚ್ 8, 2021
31 °C
ರಣಜಿ ಟ್ರೋಫಿ: ವಿನಯ ಕುಮಾರ್ ಬಳಗಕ್ಕೆ ಸೆಮಿಫೈನಲ್‌ ಪಂದ್ಯದಲ್ಲೂ ಮಿಂಚುವ ನಿರೀಕ್ಷೆ

ಆಲ್‌ರೌಂಡ್ ಆಟ; ಅಜೇಯ ಓಟ

ಗಿರೀಶ ದೊಡ್ಡಮನಿ Updated:

ಅಕ್ಷರ ಗಾತ್ರ : | |

ಆಲ್‌ರೌಂಡ್ ಆಟ; ಅಜೇಯ ಓಟ

ನಾಗಪುರ: ‘ನಮ್ಮ ತಂಡದಲ್ಲಿ ಬಾಲಂಗೋಚಿಗಳು ಇಲ್ಲ. ಎಲ್ಲರೂ ಬ್ಯಾಟ್ಸ್‌ಮನ್‌ಗಳೇ. ಕೊನೆಯ ವಿಕೆಟ್ ಪತನವಾಗುವವರೆಗೂ ರನ್ ಗಳಿಸುವುದೇ ನಮ್ಮ ಉದ್ದೇಶ. ಇದರಿಂದ ತಂಡದ ಗೆಲುವಿಗೆ ನೆರವಾಗುತ್ತದೆ’– ಕರ್ನಾಟಕ ತಂಡದ ಆಲ್ ರೌಂಡರ್ ಶ್ರೇಯಸ್ ಗೋಪಾಲ್ ಅವರ ನುಡಿಗಳಿವು.

ಈ ಬಾರಿಯ ರಣಜಿ ಋತುವಿನಲ್ಲಿ ಕರ್ನಾಟಕದಷ್ಟು ಆಲ್‌ರೌಂಡ್ ಆಟವಾಡಲು ಯಾವುದೇ ತಂಡಕ್ಕೂ ಸಾಧ್ಯವಾಗಿಲ್ಲ. ಇದರರಿಂದಾಗಿ ಲೀಗ್ ಹಂತದ ಯಾವುದೇ ಪಂದ್ಯದಲ್ಲೂ ತಂಡ ಸೋತಿಲ್ಲ.

ಆರನೇ ಕ್ರಮಾಂಕದವರೆಗೆ ಬ್ಯಾಟ್ಸ್‌ ಮನ್‌ಗಳು ನಂತರ ಏಳರಿಂದ 11ನೇ ಕ್ರಮಾಂಕದವರೆಗೆ ಬೌಲರ್‌ಗಳು ಎಂಬ ಸಂಪ್ರದಾಯ ಈಗ ಇಲ್ಲ. ಅಗತ್ಯ ಬಿದ್ದರೆ ಬ್ಯಾಟ್ಸ್ ಮನ್ ಕರುಣ್ ನಾಯರ್, ಪವನ್ ದೇಶಪಾಂಡೆ, ಸಮರ್ಥ್ ಅವರು ಬೌಲಿಂಗ್ ಮಾಡಬೇಕು. ಬೌಲರ್‌ಗಳು ಬ್ಯಾಟಿಂಗ್‌ನಲ್ಲಿ ಮಿಂಚಲೇ ಬೇಕು. ಕೊನೆಯ ಹಂತದಲ್ಲಿ ತಲಾ 30–40 ರನ್ ಗಳಷ್ಟು ಕಾಣಿಕೆ ನೀಡಿದರೆ ತಂಡದ ಬಲ ಹೆಚ್ಚುತ್ತದೆ.

ಎದುರಾಳಿ ತಂಡದ ಒತ್ತಡವೂ ದುಪಟ್ಟಾಗುತ್ತದೆ. ಆದ್ದರಿಂದಲೇ ಈಗ ಕರ್ನಾಟಕ ತಂಡದ ಪ್ರತಿದಿನದ ಸಭೆಗಳಲ್ಲಿ ‘ನಮ್ಮಲ್ಲಿ ಬಾಲಂಗೋಚಿಗಳಿಲ್ಲ. ಎಲ್ಲರೂ ಆಲ್‌ರೌಂಡರ್‌ಗಳೇ’ ಎಂಬ ಮಂತ್ರ ಪಠಿಸಲಾಗುತ್ತಿದೆ.

ದಶಕಗಳ ಹಿಂದೆ ಎ. ರಘುರಾಮ್ ಭಟ್, ಜೆ. ಅಭಿರಾಮ್, ರೋಜರ್ ಬಿನ್ನಿ, ಜಾವಗಲ್ ಶ್ರೀನಾಥ್, ಅನಿಲ್ ಕುಂಬ್ಳೆ, ದೊಡ್ಡಗಣೇಶ್ ಮತ್ತು ಸುನಿಲ್ ಜೋಶಿ ಬೌಲಿಂಗ್ ಜೊತೆಗೆ ಬ್ಯಾಟಿಂಗ್ ನಲ್ಲಿಯೂ ತಂಡಕ್ಕೆ ಆಸರೆಯಾಗಿದ್ದ ಹಲವು ಉದಾಹರಣೆಗಳು ಇವೆ. ಅದೇ ಪರಂಪರೆಯನ್ನು ಇಂದಿನ ತಂಡವೂ ಮುಂದುವರಿಸುತ್ತಿದೆ.

ಭಾನುವಾರ ಮುಕ್ತಾಯವಾದ ಬದ್ಧ ಪ್ರತಿಸ್ಪರ್ಧಿ ಮುಂಬೈ ತಂಡದ ಎದುರಿನ ಕ್ವಾರ್ಟರ್ ಫೈನಲ್ ಪಂದ್ಯ ನಡೆದ ನಾಲ್ಕು ದಿನಗಳ ಆಟವನ್ನು ಒಮ್ಮೆ ವಿಶ್ಲೇಷಿಸಿದರೆ ಈ ಅಂಶ ಢಾಳಾಗಿ ಕಾಣಿಸುತ್ತದೆ. ಅದ ರಲ್ಲೂ ಕೆ.ಎಲ್. ರಾಹುಲ್, ಮನೀಷ್ ಪಾಂಡೆ ಮತ್ತು ಗಾಯಗೊಂಡ ಸ್ಟುವರ್ಟ್ ಬಿನ್ನಿ ಅವರಂತಹ ಅನುಭವಿಗಳು ಇಲ್ಲದಿದ್ದರೂ ತಂಡವು ಜಯಿಸುವಲ್ಲಿ ಶ್ರೇಯಸ್ ಗೋಪಾಲ್, ಕೆ. ಗೌತಮ್ ಮತ್ತು ಅರವಿಂದ್ ಅವರ ಬ್ಯಾಟಿಂಗ್ ಮಹತ್ವದ ಪಾತ್ರ ವಹಿಸಿತು.

ಶ್ರೇಯಸ್ ಗೋಪಾಲ್ ನೈಜ ಆಲ್‌ರೌಂಡರ್

ಶ್ರೇಯಸ್ ಗೋಪಾಲ್ 2013ರಲ್ಲಿ ಮುಂಬೈ ಎದುರಿನ ಪಂದ್ಯದಲ್ಲಿ ಬೆಂಗಳೂರಿನಲ್ಲಿ ಲೆಗ್ ಸ್ಪಿನ್ನರ್ ಆಗಿ  ಪದಾರ್ಪಣೆ ಮಾಡಿದವರು. ಕ್ಲಬ್ ಕ್ರಿಕೆಟ್‌ನಲ್ಲಿ ಬ್ಯಾಟಿಂಗ್ ನಲ್ಲಿ ಯೂ ಮಿಂಚಿದ್ದ ಅವರು ಎರಡೂ ವಿಭಾಗಗಳಲ್ಲಿ ಪರಿಣತಿ ಸಾಧಿಸುವತ್ತ ಒತ್ತು ನೀಡಿದರು. ಅದರ ಫಲ ಅವರಿಗೆ ಕಳೆದ ನಾಲ್ಕು ಋತುಗಳಲ್ಲಿಯೂ ಲಭಿಸಿದೆ.

ಈ ಋತುವಿನಲ್ಲಿಯಂತೂ ಶ್ರೇಯಸ್ ಅವರ ಆಟ ಉತ್ತುಂಗದಲ್ಲಿದೆ. ತಣ್ಣನೆ ಸ್ವಭಾವದ ಶ್ರೇಯಸ್ ಉತ್ಕೃಷ್ಠವಾದ ಹೊಡೆತಗಳಿಂದ ನುರಿತ  ಬ್ಯಾಟ್ಸ್ ಮನ್ ಆಗಿದ್ದಾರೆ. ಆಲೂರಿನಲ್ಲಿ ಮಿಥುನ್ ಜೊತೆಗೆ 10ನೇ ವಿಕೆಟ್ ಗೆ ಅವರು 101 ರನ್ ಗಳಿಸಿದ್ದರು. ಮುಂಬೈ ಎದುರಿನ ಮೊದಲ ಇನಿಂಗ್ಸ್‌ ನಲ್ಲಿ ಎರಡು ಮಹತ್ವದ ಪಾಲುದಾರಿಕೆಗಳಲ್ಲಿ ಅವರು ಭಾಗಿಯಾದರು. ಶತಕೋತ್ತರ ಅರ್ಧಶತಕ (150) ಕೂಡ ದಾಖಲಿಸಿದರು.

ಶ್ರೇಯಸ್ ಮತ್ತು ವಿನಯಕುಮಾರ್ 7ನೇ ವಿಕೆಟ್‌ಗೆ 84 ರನ್, ಶ್ರೇಯಸ್ ಮತ್ತು ಕೃಷ್ಣಪ್ಪ ಗೌತಮ್ ಎಂಟನೇ ವಿಕೆಟ್‌ಗೆ 73 ರನ್  ನಂತರ ಶ್ರೇಯಸ್ ಮತ್ತು ಎಸ್. ಅರವಿಂದ್ 10ನೇ ವಿಕೆಟ್‌ಗೆ 92 ರನ್ ಪೇರಿಸಿದರು.

321 ರನ್‌ಗಳಿಗೆ ಕರ್ನಾಟಕವು 6 ವಿಕೆಟ್ ಕಳೆದುಕೊಂಡ ನಂತರ ಈ ಮೂರು ಜೊತೆಯಾಟಗಳು ದಾಖಲಾದವು.

ಅದರಿಂದಾಗಿ ತಂಡವು 570 ರನ್ ಮೊತ್ತ ಪೇರಿಸಲು ಸಾಧ್ಯವಾಯಿತು. 397 ರನ್‌ಗಳ ದೊಡ್ಡ ಮುನ್ನಡೆ ಸಾಧಿಸಲು ಸಾಧ್ಯವಾಯಿತು.

ಯಾವುದೇ ಹಂತದಲ್ಲಿಯೂ ತಿರು ಗೇಟು ನೀಡುವ ಗುಣ ಇರುವ ಮುಂಬೈ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ ಅದೇ ರೀತಿ ಆಡಿತ್ತು. ಮೊದಲ ಇನಿಂಗ್ಸ್ 173 ರನ್ ಗಳಿಗೆ ಆಲೌಟ್ ಆಗಿದ್ದ ತಂಡವು ಎರಡನೇ ಇನಿಂಗ್ಸ್ ನಲ್ಲಿ 377 ರನ್ ಗಳಿಸಿತ್ತು.

ಒಂದೊಮ್ಮೆ ಶ್ರೇಯಸ್ ಮತ್ತಿತರ ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ಒಟ್ಟು 249 ರನ್ ಗಳ ಕಾಣಿಕೆ ನೀಡದೇ ಹೋಗಿದ್ದರೆ ಪಂದ್ಯದ ಚಿತ್ರಣ ಬೇರೆಯೇ ಇರುತ್ತಿತ್ತು ಮತ್ತು ವಿನಯ್ ಬಳಗಕ್ಕೆ ಸೆಮಿಫೈನಲ್ ಹಾದಿ ಜಟಿಲವಾಗುತ್ತಿತ್ತು.

ಮುಂಬೈ ಎದುರಿನ ಜಯ ತಂಡದ ಆತ್ಮವಿಶ್ವಾಸವನ್ನು ದುಪಟ್ಟುಗೊಳಿಸಿದೆ. ಇನ್ನೆರಡು ಕಠಿಣ ಮಜಲುಗಳನ್ನು ಯಶಸ್ವಿಯಾಗಿ ಮೀರಿ ನಿಂತರೆ ಮಿರಿಮಿರಿ ಮಿರುಗುವ ರಣಜಿ ಟ್ರೋಫಿಗೆ ಮುತ್ತಿಡುವ ಅವಕಾಶ ಸಿಗಲಿದೆ. ಕಪ್ ಮೇಲೆ ಕಣ್ಣಿಟ್ಟಿರುವ ನಾಲ್ಕರ ಘಟ್ಟದಲ್ಲಿಯೂ ‘ಆಲ್ ರೌಂಡ್’ ಆಟವನ್ನು ಮುಂದುವರೆಸುವ ಭರವಸೆ ಯನ್ನು ವಿನಯ್ ಈಗಾಗಲೇ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.