ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

5,000 ನಿವೇಶನ ಹಂಚಿಕೆಗೆ ಬಿಡಿಎ ತಯಾರಿ

ನಾಡಪ್ರಭು ಕೆಂಪೇಗೌಡ ಬಡಾವಣೆ *ವಾರದೊಳಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ
Last Updated 11 ಡಿಸೆಂಬರ್ 2017, 19:41 IST
ಅಕ್ಷರ ಗಾತ್ರ

ಬೆಂಗಳೂರು: ನಾಡಪ್ರಭು ಕೆಂಪೇಗೌಡ ಬಡಾವಣೆಯ 5,000 ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸಿದ್ಧತೆ ನಡೆಸಿದೆ. ಈ ಕುರಿತು ವಾರದೊಳಗೆ ಅಧಿಸೂಚನೆ ಹೊರಡಿಸುವ ಸಾಧ್ಯತೆ ಇದೆ.

‘ಬಡಾವಣೆಯಲ್ಲಿ ಒಟ್ಟು 5,000 ನಿವೇಶನಗಳನ್ನು ನಾಗರಿಕರಿಗೆ ಹಂಚಿಕೆ ಮಾಡುತ್ತೇವೆ. ಈ ಬಡಾವಣೆಗಾಗಿ ಜಾಗ ನೀಡಿದ ರೈತರಿಗೆ ಅಭಿವೃದ್ಧಿಪಡಿಸಿದ 2500 ನಿವೇಶನಗಳನ್ನು ನೀಡುತ್ತೇವೆ. ಶೀಘ್ರವೇ ಈ ಬಗ್ಗೆ ಅಧಿಸೂಚನೆ ಹೊರಡಿಸಲಿದ್ದೇವೆ’ ಎಂದು ಬಿಡಿಎ ಅಧ್ಯಕ್ಷ ಕೆ.ವೆಂಕಟೇಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ನಿವೇಶನ ಹಂಚಿಕೆ ಮಾಡಲು 2015ರ ನ.1ರಂದು ಅಧಿಸೂಚನೆ ಪ್ರಕಟಿಸಲಾಗಿತ್ತು. ಒಟ್ಟು 31,369 ಮಂದಿ ಅರ್ಜಿ ಸಲ್ಲಿಸಿದ್ದರು. 5,000 ಮಂದಿಗೆ ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಬಡಾವಣೆಗೆ ಜಾಗ ಬಿಟ್ಟುಕೊಟ್ಟ ರೈತರಿಗೆ ಒಟ್ಟು 2,174 ಅಭಿವೃದ್ಧಿ ಪಡಿಸಿದ ನಿವೇಶನಗಳನ್ನು ನೀಡಲಾಗಿತ್ತು.

ಮೊದಲ ಹಂತದ ನಿವೇಶನ ಹಂಚಿಕೆ ಪ್ರಕ್ರಿಯೆ ಪುರ್ಣಗೊಂಡು ಒಂದು ವರ್ಷ ಕಳೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ 2016ರ ನವೆಂಬರ್‌ 9ರಂದು ಅರ್ಹ ಫಲಾನುಭವಿಗಳಿಗೆ ಕಂಪ್ಯೂಟರ್‌ ರ‍್ಯಾಂಡಮೈಸೇಷನ್‌ ಮೂಲಕ ನಿವೇಶನ ಸಂಖ್ಯೆ ನಿಗದಿ ಮಾಡಿದ್ದರು.

ಈ ಬಡಾವಣೆಗೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಮೂಲಸೌಕರ್ಯ ಕಲ್ಪಿಸಿಲ್ಲ. ಮೂಲಸೌಕರ್ಯ ಇಲ್ಲದ ಕಾರಣ ಇಲ್ಲಿ ಮನೆ ಕಟ್ಟಲು ಆಗುತ್ತಿಲ್ಲ ಎಂದು ಇಲ್ಲಿ ನಿವೇಶನ ಪಡೆದವರು ದೂರಿದ್ದಾರೆ.

‘ಈ ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವ ಕಾಮಗಾರಿಗೆ ಟೆಂಡರ್‌ ಕರೆದಿದ್ದೇವೆ. ಶೀಘ್ರವೇ ಕಾಮಗಾರಿ ಆರಂಭವಾಗಲಿದೆ’ ಎಂದು ಅಧ್ಯಕ್ಷರು ತಿಳಿಸಿದರು.

‘ಈ ಬಡಾವಣೆಗೆ ನೀರು ಪೂರೈಕೆ, ಒಳಚರಂಡಿ, ವಿದ್ಯುತ್‌ ಪೂರೈಕೆ ಕಾಮಗಾರಿಗಳಿಗೆ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಆದರೆ ಕಾರ್ಯಾದೇಶ ನೀಡುವುದು ಬಾಕಿ ಇದೆ. ಮೂಲಸೌಕರ್ಯ ಕಲ್ಪಿಸುವ ಕಾರ್ಯ ಶೀಘ್ರವೇ ಆರಂಭವಾಗಲಿದೆ’ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಶುಲ್ಕ ಇಳಿಕೆ ಪ್ರಸ್ತಾವ ಇಲ್ಲ
ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೊದಲ ಹಂತದಲ್ಲಿ ನಿವೇಶನ ಪಡೆದ 400ಕ್ಕೂ ಹೆಚ್ಚು ಮಂದಿ ಶುಲ್ಕವನ್ನು ಭರಿಸಲಾಗದೆ ಅದನ್ನು ಬಿಡಿಎಗೆ ಹಿಂತಿರುಗಿಸಿದ್ದರು.

ಇಲ್ಲಿ 600 ಚದರ ಅಡಿ ವಿಸ್ತೀರ್ಣದ ನಿವೇಶನಗಳಿಗೆ ಸಾಮಾನ್ಯ ವರ್ಗದವರಿಗೆ ₹ 10.46 ಲಕ್ಷ, 1,200 ಚದರ ಅಡಿ ವಿಸ್ತೀರ್ಣದ ನಿವೇಶನಗಳಿಗೆ ₹ 23.25 ಲಕ್ಷ, 2,400 ಚದರ ಅಡಿ ವಿಸ್ತೀರ್ಣದ ನಿವೇಶನಗಳಿಗೆ ₹ 52.31 ಲಕ್ಷ ಹಾಗೂ 4,000 ಚದರ ಅಡಿ ವಿಸ್ತೀರ್ಣದ ನಿವೇಶನಗಳಿಗೆ 96.87 ಲಕ್ಷ ಶುಲ್ಕ ನಿಗದಿಪಡಿಸಲಾಗಿತ್ತು. ಈ ಶುಲ್ಕವನ್ನು ಕಡಿಮೆ ಮಾಡಬೇಕು ಎಂಬ ಒತ್ತಾಯವೂ ಕೇಳಿಬಂದಿತ್ತು.

‘ಕೆಲವರು ಹಂಚಿಕೆಯಾದ ನಿವೇಶನವನ್ನು ಹಿಂತಿರುಗಿಸಿದ್ದು ನಿಜ. ಆದರೆ, ಸದ್ಯಕ್ಕೆ ನಿವೇಶನಗಳ ಶುಲ್ಕ ಕಡಿಮೆ ಮಾಡುವ ಪ್ರಸ್ತಾವ ಪ್ರಾಧಿಕಾರದ ಮುಂದೆ ಇಲ್ಲ. ಅರ್ಕಾವತಿ ಬಡಾವಣೆಯಲ್ಲಿ ಡಿನೋಟಿಫಿಕೇಷನ್‌ ಹಾಗೂ ರೀಡು ಪ್ರಕ್ರಿಯೆಯಿಂದಾಗಿ ನಿವೇಶನ ಕಳೆದುಕೊಂಡವರಿಗೆ ಈ ಬಡಾವಣೆಯಲ್ಲಿ ಬದಲಿ ನಿವೇಶನ ಹಂಚಿಕೆ ಮಾಡಿದ್ದೇವೆ. ಬಡಾವಣೆಗೆ ಮೂಲಸೌಕರ್ಯ ಕಲ್ಪಿಸುವುದಕ್ಕೂ ಸಾಕಷ್ಟು ಹಣ ಬೇಕಾಗುತ್ತದೆ. ನಿವೇಶನಗಳ ಶುಲ್ಕ ಕಡಿಮೆಗೊಳಿಸಿದರೆ ನಮಗೆ ನಷ್ಟ ಉಂಟಾಗುತ್ತದೆ’ ಎಂದು ವೆಂಕಟೇಶ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT