ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗಲಭೆಗಳಿಗೆ ವಿನಾಕಾರಣ ನಾವು ಬಲಿ

ಚುನಾವಣಾ ಭರವಸೆಗಳು ಇನ್ನೂ ಈಡೇರಿಲ್ಲ: ಸಂವಾದದಲ್ಲಿ ಅಲ್ಪಸಂಖ್ಯಾತರ ಅಳಲು
Last Updated 13 ಡಿಸೆಂಬರ್ 2017, 19:52 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಜ್ಯದಲ್ಲಿ ನಡೆಯುವ ಗಲಭೆಗಳಿಗೆ ವಿನಾಕಾರಣ ನಾವು ಬಲಿಯಾಗುತ್ತಿದ್ದೇವೆ. ಅಹಿಂದ ಸರ್ಕಾರ ಅಧಿಕಾರದಲ್ಲಿದ್ದರೂ ನಮಗೆ ಅರ್ಹ ಸವಲತ್ತುಗಳು ಸಿಗುತ್ತಿಲ್ಲ...’

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ವತಿಯಿಂದ ನಗರದಲ್ಲಿ ಬುಧವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅಲ್ಪಸಂಖ್ಯಾತರು ವ್ಯಕ್ತಪಡಿಸಿದ ಬೇಸರದ ನುಡಿಗಳಿವು.

ಅಲ್ಪಸಂಖ್ಯಾತರ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿ ಬಗ್ಗೆ ಚರ್ಚಿಸಲು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ನಿವೃತ್ತ ಐಜಿಪಿ ಯು.ನಿಸಾರ್ ಅಹ್ಮದ್, ‘ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಅಲ್ಪಸಂಖ್ಯಾತರಿಗೆ ನೀಡಿದ್ದ ಅನೇಕ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬೆಂಗಳೂರನ್ನು ಕೊಳೆಗೇರಿ ಮುಕ್ತ ನಗರವನ್ನಾಗಿ ರೂಪಿಸುವುದಾಗಿ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಹೇಳಿತ್ತು. ಆದರೆ, ವಿಧಾನಸೌಧದ 5 ಕಿ.ಲೋ ಮೀಟರ್ ವ್ಯಾಪ್ತಿಯಲ್ಲಿ ಈಗಲೂ ಕೊಳೆಗೇರಿಗಳು ಕಾಣಸಿಗುತ್ತವೆ. ಇಲ್ಲಿ ಅಲ್ಪಸಂಖ್ಯಾತರೂ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿದ್ದಾರೆ. ಸುಮಾರು 1 ಲಕ್ಷ ಕುಟುಂಬಗಳು ಇಂದಿಗೂ ನಗರದ ಬೀದಿಗಳಲ್ಲಿ ಮಲಗುತ್ತಿವೆ ಎಂದು ಟೀಕಿಸಿದರು.

’ರಾಜ್ಯದ ನಗರ ಪ್ರದೇಶಗಳಲ್ಲಿ ಹೆಚ್ಚು ಅಲ್ಪಸಂಖ್ಯಾತರು ಇದ್ದಾರೆ. ವಿಧವೆಯರು, ಹಿರಿಯರು ಪಿಂಚಣಿ ಸೌಲಭ್ಯದಿಂದ ವಂಚಿತರಾಗಿದ್ದಾರೆ. ಬೆಂಗಳೂರಿನ ದೇವರ ಜೀವನಹಳ್ಳಿಯ 17,000 ಮನೆಗಳಲ್ಲಿ ಇಂದಿಗೂ ಶೌಚಾಲಯಗಳೇ ಇಲ್ಲ. ಅಲ್ಪಸಂಖ್ಯಾತರ ಇಲಾಖೆಗೆ ನೀಡಿದ್ದ ಹಣ ದುರುಪಯೋಗವಾಗಿದೆ’ ಎಂದು ಆರೋಪಿಸಿದರು.

ಅಲ್ಪಸಂಖ್ಯಾತರ ಮುಖಂಡ ಎಸ್.ಎಸ್.ಖಾದರ್,‘ವಿದ್ಯಾರ್ಥಿವೇತನ ಹಂಚಿಕೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ’ ಎಂದು ಆರೋಪಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್ ಸೇಠ್, ‘ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಬ್ಯಾಂಕ್‌ ಖಾತೆಗೆ ಹಣ ಪಾವತಿಸುತ್ತೇವೆ. ಇದರಲ್ಲಿ ಮಧ್ಯವರ್ತಿಗಳ ಹಾವಳಿಗೆ ಅವಕಾಶವಿಲ್ಲ’ ಎಂದರು.

ಕ್ರೈಸ್ತ ಸಮುದಾಯದ ಮೇರಿ ಮಾಸ್ಕರ್ ಕುಷ್ಠರೋಗಿಗಳಿಗೆ ಸರ್ಕಾರವು ಸೂಕ್ತ ಸೌಲಭ್ಯ ಒದಗಿಸಬೇಕು ಎಂದರು.

ಕರ್ನಾಟಕ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಅಧ್ಯಕ್ಷ ನಸೀರ್ ಅಹ್ಮದ್, ‘ಹೊನ್ನಾವರದ ಯುವಕ ಪರೇಶ ಮೇಸ್ತ ಸಾವು ಪ್ರಕರಣದಲ್ಲಿ ಮರಣೋತ್ತರ ಪರೀಕ್ಷೆಯ ವರದಿಯನ್ನು ಒಪ್ಪದ ಬಿಜೆಪಿ, ಆತನ ಸಾವಿನಲ್ಲಿ ಮುಸ್ಲಿಮರ ಕೈವಾಡವಿದೆ ಎಂದು ಆರೋಪಿಸುತ್ತಿದೆ. ಇದು ಸರಿಯಲ್ಲ’ ಎಂದರು.

‘ಅಲ್ಪಸಂಖ್ಯಾತರಿಗೆ ದೇಶದಲ್ಲಿ ಸಾಮಾಜಿಕ ಭದ್ರತೆ ದೊಡ್ಡ ಸವಾಲಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರ ರಾಜ್ಯದಲ್ಲಿ ಆ ಭಯವನ್ನು ದೂರ ಮಾಡಿದೆ’ ಎಂದು ಹೇಳಿದರು.

‘ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸರ್ಕಾರ ರೂಪಿಸಿರುವ ಯೋಜನೆಗಳ ಪ್ರಯೋಜನ ಅರ್ಹ ಫಲಾನುಭವಿಗಳಿಗೆ ಸಿಗುತ್ತಿಲ್ಲ’ ಎಂದು ಜೈನ ಸಮುದಾಯದ ಜಯಂತ್‌ ದೂರಿದರು.

‘ಸರ್ಕಾರ– ಕಾಂಗ್ರೆಸ್‌ ನಡುವೆ ಭಿನ್ನಾಭಿಪ್ರಾಯವಿಲ್ಲ’
‘ಭಯದ ವಾತಾವರಣ ನಿರ್ಮಿಸಿ ಜನರ ಮಾನಸಿಕ ಸಮತೋಲನ ಹಾಳು ಮಾಡಲು ಕೆಲವರು ಉದ್ದೇಶಪೂರ್ವಕವಾಗಿ ಗಲಭೆ ಸೃಷ್ಟಿಸುತ್ತಿದ್ದಾರೆ. ಈ ನೀಚ ರಾಜಕಾರಣವನ್ನು ಅರ್ಥ ಮಾಡಿಕೊಳ್ಳುವ ಚೈತನ್ಯ ನಾಡಿನ ಜನರಿಗಿದೆ. ವಿರೋಧಿಗಳ ಷಡ್ಯಂತ್ರವನ್ನು ಸರ್ಕಾರ ಸಮರ್ಥವಾಗಿ ಎದುರಿಸಲಿದೆ’ ಎಂದು ಆರೋಗ್ಯ ಸಚಿವ ಕೆ.ಆರ್‌.ರಮೇಶ್ ಕುಮಾರ್ ಹೇಳಿದರು.

‘ಲಾಠಿ ಚಾರ್ಜ್‌ ಆಗುವ ರೀತಿ ಕಾನೂನು ಉಲ್ಲಂಘನೆ ಮಾಡಿ ಎಂದು ಅಮಿತ್ ಷಾ ಅವರು ಗುಪ್ತಸಭೆಯಲ್ಲಿ ಬಿಜೆಪಿ ನಾಯಕರಿಗೆ ಹೇಳಿದ್ದಾರೆ. ಇಸ್ಲಾಂ ಅನ್ನು ನಾಶ ಮಾಡದಿದ್ದರೆ ಭಯೋತ್ಪಾದನೆ ನಿಯಂತ್ರಿಸಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ಸಚಿವರೊಬ್ಬರು ಹೇಳುತ್ತಾರೆ. ಹೀಗಾಗಿಯೇ ಬಿಜೆಪಿಯರು ಅನಗತ್ಯವಾಗಿ ಪ್ರತಿಭಟನೆ ಮಾಡುತ್ತಿದ್ದಾರೆ’ ಎಂದರು.

‘ಪ್ರತ್ಯೇಕ ಸಮಾವೇಶ ಅಗತ್ಯವಿರಲಿಲ್ಲ’
‘ಅವರಿಬ್ಬರು (ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್) ಪ್ರತ್ಯೇಕವಾಗಿ ಚುನಾವಣಾ ಸಮಾವೇಶಗಳನ್ನು ನಡೆಸುವ ಅವಶ್ಯಕತೆ ಇರಲಿಲ್ಲ’ ಎಂದು ಕಾಂಗ್ರೆಸ್‌ನ ಹಿರಿಯ ಮುಖಂಡ ಸಿ.ಕೆ.ಜಾಫರ್ ಷರೀಫ್ ಹೇಳಿದರು.

‘ಒಗ್ಗಟ್ಟಿನಿಂದ ಸಮಾವೇಶ ನಡೆಸಿದರೆ ಒಳ್ಳೆಯದು. ಅವರಿಬ್ಬರೂ ಅದನ್ನು ಅರ್ಥ ಮಾಡಿಕೊಳ್ಳಬೇಕು. ಹೈಕಮಾಂಡ್ ಅವರಿಗೆ ಬುದ್ಧಿ ಹೇಳಬೇಕು. ವ್ಯಕ್ತಿ ಪ್ರತಿಷ್ಠೆ ಬಿಟ್ಟು ಪ‍ಕ್ಷ ಒಂದು ಎಂಬ ಭಾವನೆಯಿಂದ ನಡೆದುಕೊಳ್ಳಬೇಕು. ಅದರಿಂದ ಅವರಿಗೂ ಗೌರವ ಹಾಗೂ ಪಕ್ಷಕ್ಕೂ ಲಾಭ’ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

*
ಪರಿಶಿಷ್ಟರಿಗಾಗಿ ಎಸ್‌ಸಿಪಿ–ಟಿಎಸ್‌ಪಿ  ಯೋಜನೆ ರೂಪಿಸಿದಂತೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಏಕೆ ಕಾರ್ಯಕ್ರಮ ರೂಪಿಸಿಲ್ಲ.
–ಯು.ನಿಸಾರ್ ಅಹ್ಮದ್, ನಿವೃತ್ತ ಐಜಿಪಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT