ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸನ್ನಡತೆಯ ದಾರಿಯಲ್ಲೇ ನಡೆಯಿರಿ’

ಕೇಂದ್ರ ಕಾರಾಗೃಹದಿಂದ ಬಿಡುಗಡೆಗೊಂಡ ಎಂಟು ಮಂದಿಗೆ ಸಲಹೆ
Last Updated 14 ಡಿಸೆಂಬರ್ 2017, 6:31 IST
ಅಕ್ಷರ ಗಾತ್ರ

ಬಳ್ಳಾರಿ: ‘ಸನ್ನಡತೆ ಎಂಬುದು ಜೈಲಿನಿಂದ ಬಿಡುಗಡೆಗೆ ಇರುವ ಏಕೈಕ ದಾರಿ. ಬಿಡುಗಡೆಗೊಂಡ ಬಳಿಕ ಸಮಾಜದಲ್ಲೂ ಅದೇ ದಾರಿಯಲ್ಲಿ ನಡೆದರೆ ಮಾತ್ರ ಶಾಂತಿ, ಯಶಸ್ಸು ದೊರಕುತ್ತದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಎಸ್‌.ಜೆ.ಸೋಮಶೇಖರ್‌ ತಿಳಿಸಿದರು.

ನಗರದ ಜಿಲ್ಲಾ ಕೇಂದ್ರ ಕಾರಾಗೃಹದಲ್ಲಿ ಬುಧವಾರ ಸನ್ನಡತೆ ಆಧಾರದಲ್ಲಿ ಒಬ್ಬ ಮಹಿಳೆ ಸೇರಿದಂತೆ ಎಂಟು ಕೈದಿಗಳ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ನಿಯಂತ್ರಿಸಲು ಆಗದ ಸಾಂದರ್ಭಿಕ ಒತ್ತಡ ಮತ್ತು ಅರಿವಿಲ್ಲದೆ ಮಾಡಿದ ಅಪರಾಧರಿಂದ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ. ಮತ್ತೆ ಅದೇ ತಪ್ಪನ್ನು ಮಾಡಬಾರದಷ್ಟೇ’ ಎಂದರು.

‘ಬಹಳ ಅಮೂಲ್ಯವಾದ ಹದಿನಾಲ್ಕು ವರ್ಷವನ್ನು ಜೈಲಿನಲ್ಲೇ ಕಳೆದಿದ್ದೀರಿ. ಜೈಲಿನ ಹೊರಗೆ ಉತ್ತಮ ಜೀವನವಿದೆ ಎಂಬುದನ್ನು ಮರೆಯಬೇಡಿ’ ಎಂದರು.

‘ಟಿ.ವಿ. ಧಾರಾವಾಹಿಗಳ ದುಷ್ಪ್ರೇರಣೆಯೇ ಅಪರಾಧ ಕೃತ್ಯಗಳು ಹೆಚ್ಚಾಗಲು ಕಾರಣ. ಆದ್ದರಿಂದ ಟಿ.ವಿ.ಸೇರಿದಂತೆ ಸಮೂಹ ಮಾಧ್ಯಮಗಳಿಂದ ಒಳ್ಳೆಯದನ್ನು ಮಾತ್ರ ಸ್ವೀಕರಿಸಿ. ಕೆಟ್ಟದ್ದನ್ನು ದೂರವಿಡಿ’ ಎಂದು ಕಾರಾಗೃಹ ಸ್ಥಾಯಿ ಸಲಹಾ ಮಂಡಳಿ ಸದಸ್ಯೆ ಪದ್ಮಿನಿ ಹೇಳಿದರು.

‘ದ್ವೇಷ ಸಾಧನೆಯಿಂದ ಪ್ರಯೋಜನವಿಲ್ಲ. ದ್ವೇಷ, ಆಕ್ರೋಶದ ಕಾರಣಕ್ಕೆ ಇಷ್ಟು ವರ್ಷ ಜೈಲಿನಲ್ಲಿದ್ದಿರಿ. ಅಪರಾಧ ಕೃತ್ಯವೆಸಗಿದವರು ಶಿಕ್ಷೆಗೆ ಒಳಗಾಗಿದ್ದರೆ ಅದು ಸಹಜ. ಅಪರಾಧವೆಸಗದೆಯೂ ಶಿಕ್ಷೆ ಅನುಭವಿಸಿದ್ದರೆ ಅದು ಅವರದುರಾದೃಷ್ಟ. ಆ ಬಗ್ಗೆ ಹೆಚ್ಚು ಚಿಂತಿಸದೆ, ಸ್ವಾವಲಂಬಿ ಜೀವನವನ್ನುರೂಪಿಸಿಕೊಳ್ಳಬೇಕು. ಜೈಲಿನಲ್ಲಿ ಪಡೆದ ವೃತ್ತಿ ತರಬೇತಿಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಮತ್ತೊಬ್ಬ ಸದಸ್ಯ ಡಾ.ಟೇಕೂರು ರಾಮನಾಥ್‌ ತಿಳಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಸರೆಡ್ಡಿ ಮಾತನಾಡಿದರು.

ಕಾರಾಗೃಹ ವೈದ್ಯ ಡಾ.ಕೆ.ಎಸ್‌.ಆರ್‌ಗುಪ್ತಾ, ಅಧೀಕ್ಷಕ ಡಾ.ಪಿ.ರಂಗನಾಥ್‌ ಉಪಸ್ಥಿತರಿದ್ದರು.

ಎಂಟು ಮಂದಿ: 14 ವರ್ಷ ಶಿಕ್ಷೆ ಪೂರೈಸಿದ ದಾವಣಗೆರೆ ಜಿಲ್ಲೆಯ ಖಾಲಿದ್‌, ಕೆ.ಟಿ.ಮಲ್ಲಿಕಾರ್ಜುನ, ತಿಪ್ಪೇಸ್ವಾಮಿ, ತಿಪ್ಪೇಶಪ್ಪ, ಬಳ್ಳಾರಿ ಜಿಲ್ಲೆಯ ಗುರುಮೂರ್ತಿ ಮತ್ತು

ಚಂದ್ರಶೇಖರಪ್ಪ, 12 ವರ್ಷ ಶಿಕ್ಷೆ ಪೂರೈಸಿದ 65 ವರ್ಷ ಮೇಲ್ಪಟ್ಟ ದಾವಣಗೆರೆ ಜಿಲ್ಲೆಯ ರಾಮನಾಯ್ಕ ಹಾಗೂ 10 ವರ್ಷ ಶಿಕ್ಷೆ ಪೂರೈಸಿದ ಬಳ್ಳಾರಿ ನಗರದ ರಾಜೇಶ್ವರಿ ಅವರಿಗೆ ಗಣ್ಯರು ಬಿಡುಗಡೆ ಪ್ರಮಾಣಪತ್ರವನ್ನು ವಿತರಿಸಿದರು.

**

ಕಾರಾಗೃಹದಲ್ಲಿ ಐಟಿಐ ಕಾಲೇಜು: ಚಿಂತನೆ

‘ಕೈದಿಗಳಿಗೆ ವೃತ್ತಿ ತರಬೇತಿಯನ್ನು ನೀಡಲು ಕಾರಾಗೃಹದಲ್ಲೇ ಐಟಿಐ ಕಾಲೇಜನ್ನು ಸ್ಥಾಪಿಸುವ ಚಿಂತನೆ ನಡೆದಿದ್ದು, ಜಿಲ್ಲಾ ಖನಿಜ ನಿಧಿಯಿಂದ ನೆರವು ನೀಡುವುದಾಗಿ ಜಿಲ್ಲಾಧಿಕಾರಿ ಡಾ.ರಾಮಪ್ರಸಾದ್‌ ಮನೋಹರ್‌ ಭರವಸೆ ನೀಡಿದ್ದಾರೆ’ ಎಂದು ಕಾರಾಗೃಹ ಅಧೀಕ್ಷಕ ಡಾ.ಪಿ.ರಂಗನಾಥ್‌ ತಿಳಿಸಿದರು.

‘30 ಕೈದಿಗಳಿಗೆ ಸಿಂಡಿಕೇಟ್‌ ಬ್ಯಾಂಕ್‌ ಸಹಯೋಗದಲ್ಲಿ ಮೋಟರ್ ರಿವೈಂಡಿಂಗ್‌ ತರಬೇತಿ ನೀಡಲಾಗಿದೆ. ಬಿಡುಗಡೆಯಾದ ಬಳಿಕ ಅವರಿಗೆ ಬ್ಯಾಂಕ್‌ ₹50,000 ಸಾಲ ನೀಡಲಿದೆ. ಶೀಘ್ರದಲ್ಲೆ ಪುರುಷರ ಫ್ಯಾಷನ್‌ ಡಿಸೈನಿಂಗ್‌ ತರಬೇತಿಯನ್ನು 30 ಮಂದಿಗೆ ನೀಡಲಾಗುವುದು.
ಜೀನ್ಸ್‌ ಸಿದ್ಧ ಉಡುಪು ತರಬೇತಿಯನ್ನೂ ನೀಡಲಾಗುವುದು’ ಎಂದರು.

ಸನ್ನಡತೆಯ ಹತ್ತು ಕೈದಿಗಳ ಬಿಡುಗಡೆ ಪ್ರಸ್ತಾವ ಕುರಿತು ಸಲಹಾ ಮಂಡಳಿಯ ಸಭೆ ಶೀಘ್ರ ನಡೆಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT