ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಳ ವ್ಯಕ್ತಿತ್ವದ ಜನಸೇವಕ ಕಲ್ಲೂರ

ಮಾಜಿ ಶಾಸಕ ಆರ್.ಆರ್.ಕಲ್ಲೂರ ಅಭಿನಂದನಾ ಸಮಾರಂಭದಲ್ಲಿ ಸಂಸದ ಮೊಯಿಲಿ ಅಭಿಮತ
Last Updated 14 ಡಿಸೆಂಬರ್ 2017, 9:24 IST
ಅಕ್ಷರ ಗಾತ್ರ

ವಿಜಯಪುರ: ‘ಇಚ್ಛಾಶಕ್ತಿ ಪ್ರಬಲವಾಗಿದ್ದರೆ ಮಾತ್ರ ಉನ್ನತ ಸಾಧನೆ ಮಾಡಲು ಸಾಧ್ಯ. ಆಗ ಮಾತ್ರ ರಾಷ್ಟ್ರದ ಪ್ರಗತಿ, ಸಮಾಜದ ವಿಕಾಸ ನಡೆಯಲಿದೆ’ ಎಂದು ಸಂಸದ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟರು.

ನಗರದ ಮುಗಳಖೋಡ ಮಠದ ಆವರಣದಲ್ಲಿ ಬುಧವಾರ ನಡೆದ ಮಾಜಿ ಶಾಸಕ ಆರ್.ಆರ್.ಕಲ್ಲೂರ ಅಭಿನಂದನಾ ಸಮಾರಂಭ, ‘ಜನ ಸೇವಕ' ಅಭಿನಂದನಾ ಗ್ರಂಥ ಬಿಡುಗಡೆ ಸಮಾರಂಭ ಉದ್ಘಾಟಿಸಿದ ಅವರು ಮಾತನಾಡಿದರು.

‘ಮುಕ್ತ ಮನಸ್ಸಿನ ಪಾರದರ್ಶಕ ವ್ಯಕ್ತಿತ್ವದ ಸಾಕಾರ ಮೂರ್ತಿಯಾಗಿರುವ ಮಾಜಿ ಶಾಸಕ ಆರ್.ಆರ್.ಕಲ್ಲೂರ ಛಲದಂಕಮಲ್ಲ. ಹಿಡಿದ ಕೆಲಸವನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಮೂರು ಬಾರಿ ಶಾಸಕರಾಗಿ ತಾವು ಪ್ರತಿನಿಧಿಸಿದ ಮತಕ್ಷೇತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಸ್ವಚ್ಛ, ಸರಳ ವ್ಯಕ್ತಿತ್ವದ ಜನ ಸೇವಕ ಕಲ್ಲೂರ ವ್ಯಕ್ತಿತ್ವ ಪ್ರತಿಯೊಬ್ಬರಿಗೂ ಮಾದರಿಯಾಗಿದೆ’ ಎಂದರು.

‘ನಾನು ಶಾಸನ ಸಭೆಯಲ್ಲಿದ್ದಾಗ ನನ್ನ ಸಮುದಾಯದವರು ಯಾರೂ ಶಾಸಕ ರಿರಲಿಲ್ಲ, ಈಗಲೂ ಇಲ್ಲ. ಮುಂದೆ ಇರುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಕನ್ನಡ ನೆಲದ ಉತ್ತಮ ಮನಸ್ಸುಗಳಿಂದ ಉದ್ಭವವಾದ ಉದಾತ್ತ ಚಿಂತನೆಯ ಫಲವಾಗಿ ನಾನು ಮುಖ್ಯಮಂತ್ರಿಯಾಗಲು ಸಾಧ್ಯವಾಯಿತು. ಉತ್ತರ ಕರ್ನಾಟಕ ಭಾಗದ ಶೇ 98ರಷ್ಟು ಶಾಸಕರು ಕೂಡ ನನ್ನನ್ನು ಬೆಂಬಲಿಸಿದ್ದರು’ ಎಂದು ಮೊಯಿಲಿ ನೆನಪಿಸಿಕೊಂಡರು.

‘ಮುಖ್ಯಮಂತ್ರಿಯಾಗಿದ್ದ ವೇಳೆ ಇಂಡಿ ಭಾಗದಲ್ಲಿ ಭೂಕಂಪ ಸಂಭ ವಿಸಿತ್ತು. ಆಗ ನಿರಾಶ್ರಿತರನ್ನು ಭೇಟಿ ಮಾಡಲು ಬಂದಿದ್ದೆ. ಪಕ್ಕದಲ್ಲಿಯೇ ಭೀಮಾ ನದಿ ಹರಿಯುತ್ತಿತ್ತು. ಈ ನೀರು ಸದ್ಬಳಕೆಯಾಗಬೇಕಲ್ಲ ಎಂದು ಯೋಚಿಸಿದೆ, ಆಗಲೇ ನಾಲ್ಕು ಬ್ಯಾರೇಜ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ. ಇದರಿಂದ ಸದ್ಯ 40 ಹಳ್ಳಿಗಳಿಗೆ ನೀರಾವರಿಯಾಗಿದೆ. ಇದರ ಜತೆಗೆ ಸಮಾನತೆ ಸಾರಿದ ಬಸವಣ್ಣನ ಐಕ್ಯ ಸ್ಥಳ ಅಭಿವೃದ್ಧಿಗಾಗಿ ಕೂಡಲ ಸಂಗಮ ಪ್ರಾಧಿಕಾರ ರಚಿಸಿದೆ’ ಎಂದು ತಿಳಿಸಿದರು.

ಗ್ರಂಥ ಬಿಡುಗಡೆಗೊಳಿಸಿದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್ ಮಾತನಾಡಿ ‘ಆರ್.ಆರ್.ಕಲ್ಲೂರ 87ರ ವಯಸ್ಸಿನಲ್ಲಿಯೂ ಅದೇ ಹುಮ್ಮಸ್ಸು, ತೇಜಸ್ಸು, ವರ್ಚಸ್ಸು ಹೊಂದಿದ ವ್ಯಕ್ತಿ. ನನ್ನ ತಂದೆ ದಿ.ಆರ್.ಗುಂಡೂರಾವ್‌ರೊಂದಿಗೆ ಒಡನಾಟ ಹೊಂದಿದ್ದ ಅವರು, ನನಗೂ ಸಹ ಮಾರ್ಗದರ್ಶಕರು. ನಾನು ರಾಜಕೀಯ ಪ್ರವೇಶ ಮಾಡಿದ ಸಂದರ್ಭದಲ್ಲಿ ಅನೇಕ ಸಮಸ್ಯೆ ಎದುರಿಸಿದೆ. ಆಗ ಕಲ್ಲೂರ ಅವರೇ ಬೆನ್ನುತಟ್ಟಿ ಪ್ರೋತ್ಸಾಹಿಸಿದರು. ಆತ್ಮಸ್ಥೈರ್ಯದ ಮಾತುಗಳನ್ನಾಡಿ ಮಾರ್ಗದರ್ಶನ ನೀಡಿದರು’ ಎಂದರು.

ಇದೇ ವೇಳೆ ‘ಜನ ಸೇವಕ' ಅಭಿನಂದನಾ ಗ್ರಂಥ ಬಿಡುಗಡೆ ಗೊಳಿಸಲಾಯಿತು. ಮಾಜಿ ಶಾಸಕ ಆರ್.ಆರ್.ಕಲ್ಲೂರ ದಂಪತಿಯನ್ನು ಮುಖಂಡರು, ಅಭಿಮಾನಿಗಳು ಸನ್ಮಾನಿಸಿದರು.

ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ, ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕೆಪಿಸಿಸಿ ಕಾರ್ಯಾಧ್ಯಕ್ಷ ಎಸ್.ಆರ್.ಪಾಟೀಲ, ಶಾಸಕರಾದ ಶಿವಾನಂದ ಪಾಟೀಲ, ಯಶವಂತರಾಯಗೌಡ ಪಾಟೀಲ ಮಾತನಾಡಿದರು.

ಶಾಸಕರಾದ ರಮೇಶ ಭೂಸನೂರ, ಅರುಣ ಶಹಾಪುರ, ಡಾ.ಮಕ್ಬೂಲ್ ಬಾಗವಾನ, ಮಾಜಿ ಸಚಿವರಾದ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಎಂ.ಸಿ.ಮನಗೂಳಿ, ಮಾಜಿ ಶಾಸಕರಾದ ಎನ್.ಎಸ್.ಖೇಡ, ಜಿ.ಎಸ್‌.ನ್ಯಾಮಗೌಡ, ಡಾ.ಸಾರ್ವಭೌಮ ಬಗಲಿ, ಶಿವಪುತ್ರಪ್ಪ ದೇಸಾಯಿ ಉಪಸ್ಥಿತರಿದ್ದರು.

ಬಿ.ಆರ್‌.ಬನಸೋಡೆ ಸ್ವಾಗತ ಗೀತೆ ಹಾಡಿದರು. ರಾಜೇಂದ್ರ ಬಿರಾದಾರ ನಿರೂಪಿಸಿದರು. ಡಾ.ಮಲ್ಲಿಕಾರ್ಜುನ ಕಲ್ಲೂರ ಸ್ವಾಗತಿಸಿದರು.

**

‘ನಮ್ಮದು ಅಳುವ ಜೀವವಾಗಬಾರದು’

ವಿಜಯಪುರ: ‘ನಮ್ಮದು ಅಳುವ ಜೀವವಾಗಬಾರದು. ನಾವು ನಗುವ ಜತೆಗೆ ಇತರರನ್ನು ನಗಿಸುವ ಕೆಲಸ ಮಾಡಬೇಕು’ ಎಂದು ಜ್ಞಾನಯೋಗಾಶ್ರಮದ ಸಿದ್ಧೇಶ್ವರ ಸ್ವಾಮೀಜಿ ಹೇಳಿದರು.

ಸಮಾರಂಭದಲ್ಲಿ ಆಶೀರ್ವಚನ ನೀಡಿದ ಸ್ವಾಮೀಜಿ ‘ಬದುಕಿನ ಅಮೂಲ್ಯವನ್ನು ತಿಳಿದುಕೊಂಡು, ಹಾಳು ಮಾಡದಂತೆ ಎಚ್ಚರಿಕೆಯಿಂದ ಮತ್ತೊಬ್ಬರಿಗೆ ಉಪಕಾರಿಯಾಗಿ ಜೀವನ ನಡೆಸಬೇಕು. ಭೂಮಿ ಮೇಲೆ ಜನ್ಮ ತಾಳಿದ ಪ್ರತಿಯೊಬ್ಬರೂ ಜಗತ್ತನ್ನು ಸ್ವರ್ಗ ಮಾಡಲು ಶ್ರಮಿಸಬೇಕು. ಮನುಷ್ಯ ಏನಾದರಾಗಲೀ ದೊರೆತ ಜೀವನವನ್ನು ಪ್ರೀತಿಸಬೇಕು. ಸುಂದರ ಕಾರ್ಯಗಳ ಮೂಲಕ ಅಭಿನಂದನಾರ್ಹವಾಗಬೇಕು. ಇದನ್ನು ನೋಡಿ ಮತ್ತೊಬ್ಬರೂ ಸಂತೋಷ ಪಡಬೇಕು’ ಎಂದು ಕಿವಿಮಾತು ಹೇಳಿದರು.

‘ಸಮಾನತೆಗಾಗಿ ಶ್ರಮಿಸಿದ ಅಣ್ಣ ಬಸವಣ್ಣ ಅಂತರಂಗ ಶುದ್ಧಿ, ಬಹಿರಂಗ ಶುದ್ಧಿ ಎಂದು ಹೇಳಿದಂತೆ ಆರ್.ಆರ್.ಕಲ್ಲೂರ, ತಮ್ಮನ್ನು ತಾವು ಜನ ಸೇವಕನಾಗಿ ತಿಳಿದುಕೊಂಡು ಶ್ರಮಿಸಿರುವುದು ಅವರ ದೊಡ್ಡ ಗುಣ ತೋರಿಸುತ್ತದೆ. ಅವರ ಕಾರ್ಯಕ್ಕೆ ಮನಸೋತು ಜಮಾಯಿಸಿದ ಅಭಿಮಾನಿಗಳೇ ಅವರು ಮಾಡಿರುವ ಸಮಾಜ ಸೇವೆ ತೋರಿಸುತ್ತದೆ’ ಎಂದರು.

**

ದುರಾಸೆ, ಸ್ವಾರ್ಥ, ಅಹಂಕಾರ ಮನುಷ್ಯನನ್ನು ವಿನಾಶಕ್ಕೆ ಒಯ್ಯುತ್ತವೆ, ಸಮಾಜದ ವಿನಾಶಕ್ಕೂ ಕಾರಣವಾಗುತ್ತವೆ. ಇವುಗಳಿಂದ ದೂರ ಇರಬೇಕು.

–ಎಂ.ವೀರಪ್ಪ ಮೊಯಿಲಿ, ಸಂಸದ

**

ಎಲ್ಲ ವಿಷಯಗಳಲ್ಲಿಯೂ ಜಾತಿ ಅಂಟಿಕೊಳ್ಳುತ್ತಿದೆ. ಭ್ರಷ್ಟಾಚಾರಿಗಳ ರಕ್ಷಣೆ ವಿಷಯದಲ್ಲಿಯೂ ಜಾತಿ ದಾಂಗುಡಿಯಿಡುತ್ತಿದೆ.

–ದಿನೇಶ್‌ ಗುಂಡೂರಾವ್, ಕೆಪಿಸಿಸಿ ಕಾರ್ಯಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT