ಗುರುವಾರ , ಫೆಬ್ರವರಿ 25, 2021
30 °C

ರಾನಾಗೆ 33

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾನಾಗೆ 33

‘ಬಾಹುಬಲಿ’ಯಲ್ಲಿ ಪ್ರತಿನಾಯಕ ಬಲ್ಲಾಳದೇವನಾಗಿ ಜನಪ್ರಿಯರಾದ ರಾನಾ ದಗ್ಗುಬಾಟಿಗೆ ನಿನ್ನೆಯಷ್ಟೇ (ಡಿ.14) 33ನೇ ಹುಟ್ಟುಹಬ್ಬದ ಖುಷಿ. ಸಾಮಾಜಿಕ ಜಾಲತಾಣದಲ್ಲಿ ರಾನಾ ಹೆಸರು ಅತ್ಯಧಿಕ ಬಾರಿ ಸರ್ಚ್‌ ಆಗಿದೆ. ಟ್ವಿಟರ್‌ನಲ್ಲಿ ಜನ್ಮದಿನದ ಶುಭಾಶಯಗಳ ಸುರಿಮಳೆಯೇ ಸುರಿಯುತ್ತಿದೆ. ಆದರೆ ರಾನಾ ಮಾತ್ರ ಸದ್ಯ ಅಮೆರಿಕ ಪ್ರವಾಸದಲ್ಲಿ ಬ್ಯುಸಿ.

‘ಇಷ್ಟೂ ವರ್ಷ ಹುಟ್ಟುಹಬ್ಬದಂದು ಕಡ್ಡಾಯವಾಗಿ ರಜೆ ಮಾಡಿ ಮನೆಮಂದಿಯೊಂದಿಗೆ ಕಾಲ ಕಳೆಯುತ್ತಿದ್ದೆ. ಆದರೆ ಇದೇ ಮೊದಲ ಬಾರಿಗೆ ಹುಟ್ಟುಹಬ್ಬದಂದು ಮನೆಯಿಂದಾಚೆ ಇದ್ದೇನೆ. ಡಿ. 20ರಂದು ಅಮೆರಿಕದಿಂದ ವಾಪಸಾಗುತ್ತೇನೆ. ನನ್ನ ಪ್ರಕಾರ ಹುಟ್ಟುಹಬ್ಬ ಆಮೇಲೆಯೇ. ಅಭಿಮಾನಿಗಳು ಇಷ್ಟೊಂದು ಅಭಿಮಾನ ವ್ಯಕ್ತಪಡಿಸುವುದನ್ನು ಕಂಡರೆ ಮನಸ್ಸು ತುಂಬಿಬರುತ್ತದೆ’ ಎಂದು ಅಮೆರಿಕದಿಂದಲೇ ರಾನಾ ಪ್ರತಿಕ್ರಿಯಿಸಿದ್ದಾರೆ.

‘ಮುಂಬೈನಲ್ಲಿದ್ದಾಗ ನನ್ನ ಹುಟ್ಟುಹಬ್ಬದ ದಿನ ಕರೆ ಮಾಡಿದ ಗೆಳೆಯರನ್ನೆಲ್ಲಾ ಹಾಗೇ ಸುಮ್ಮನೆ ಮನೆಗೆ ಆಹ್ವಾನಿಸುತ್ತಿದ್ದೆ. ಸಂಜೆ ಹೊತ್ತಿಗೆ ಎಲ್ಲರೂ ಬಂದು ಸೇರುತ್ತಿದ್ದರು. ಪಾರ್ಟಿಯ ವಾತಾವರಣ ಸೃಷ್ಟಿಯಾಗುತ್ತಿತ್ತು. ಆಮೇಲೆ ಪಾರ್ಟಿ ಮಾಡಿಯೇಬಿಡುತ್ತಿದ್ದೆವು’ ಎಂದು ತಮ್ಮ ಹುಟ್ಟುಹಬ್ಬವನ್ನು ನೆನಪಿಸಿಕೊಂಡಿದ್ದಾರೆ ರಾನಾ.

ಹುಟ್ಟುಹಬ್ಬಕ್ಕೆ ಶುಭ ಕೋರಿದ ರಾನಾ ಆಪ್ತರಲ್ಲಿ ಪ್ರಭಾಸ್‌, ಅನುಷ್ಕಾ ಶೆಟ್ಟಿ, ಜ್ಯೂನಿಯರ್‌ ಎನ್‌ಟಿಆರ್‌, ಅಲ್ಲು ಅರ್ಜುನ್‌ ಪ್ರಮುಖರು. ಅನುಷ್ಕಾ ‘ನನ್ನ ಪ್ರೀತಿಯ

ರಾನಾ ಅಣ್ಣ ಹೀಗೇ ಮಿಂಚುತ್ತಿರಬೇಕು’ ಎಂದು ಹಾರೈಸಿದ್ದಾರೆ.

ರಾನಾ ಎಂದರೆ ‘ಬಾಹುಬಲಿ’ ಸಿನಿಮಾ ಎಂಬಷ್ಟರಮಟ್ಟಿಗೆ ಟ್ರೆಂಡ್‌ ಸೃಷ್ಟಿಸಿದೆ ಅವರ ಬಲ್ಲಾಳದೇವನ ಪಾತ್ರ ಮತ್ತು ನಟನೆ. ಹೊಸ ವರ್ಷಕ್ಕೆ ರಾನಾ ಅಭಿನಯದ ‘ಹಾಥೀ ಮೇರೆ ಸಾಥೀ’ ಎಂಬ ಸಿನಿಮಾ ಬಿಡುಗಡೆಯಾಗಲಿದೆ. 1971ರಲ್ಲಿ ರಾಜೇಶ್‌ ಖನ್ನಾ ನಟಿಸಿದ್ದ ಸಿನಿಮಾದ ರಿಮೇಕ್‌ ಇದು ಎಂದು ಹೇಳಲಾಗುತ್ತಿದೆ.

‘ಈ ಸಿನಿಮಾದಲ್ಲಿ ಆನೆಯೊಡನೆ ಮನುಷ್ಯನ ಭಾವನಾತ್ಮಕ ಒಡನಾಟ ಕಟ್ಟಿಕೊಡುವ ಪ್ರಯತ್ನ ಇದೆ. ಇದು ರಿಮೇಕ್‌ ಅಲ್ಲ’ ಎಂದು ರಾನಾ ಸ್ಪಷ್ಟಪಡಿಸಿದ್ದಾರೆ. ಚಿತ್ರೀಕರಣ ಮುಂದಿನ ತಿಂಗಳು ಥಾಯ್ಲೆಂಡ್‌ನಲ್ಲಿ ಆರಂಭವಾಗಲಿದೆ. 2018ರ ದೀಪಾವಳಿಗೆ ವೇಳೆಗೆ ಇದು ಬಿಡುಗಡೆಯಾಗುವ ನಿರೀಕ್ಷೆ ಇದೆ.

ತೆಲುಗು, ತಮಿಳು ಮತ್ತು ಹಿಂದಿಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗಲಿರುವ ಈ ಚಿತ್ರಕ್ಕೆ ‘ಕುಂಕಿ’ ಖ್ಯಾತಿಯ ಪ್ರಭು ಸಾಲಮನ್ ಸಾರಥಿ. ರಾನಾ ಹುಟ್ಟುಹಬ್ಬದ ದಿನದಂದೇ ‘ಹಾಥಿ...’ಯ ಫಸ್ಟ್‌ಲುಕ್‌ ಸಹ ಬಿಡುಗಡೆಯಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.