ಗುರುವಾರ , ಮಾರ್ಚ್ 4, 2021
29 °C

ಮರ್ಯಾದೇಗೇಡು ಹತ್ಯೆ ತೀರ್ಪು ಕಠಿಣ ಸಂದೇಶದ ರವಾನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮರ್ಯಾದೇಗೇಡು ಹತ್ಯೆ ತೀರ್ಪು ಕಠಿಣ ಸಂದೇಶದ ರವಾನೆ

ಮರ್ಯಾದೆಗೇಡು ಹತ್ಯೆಗೆ ಸಂಬಂಧಿಸಿದಂತೆ ತಮಿಳುನಾಡಿನಲ್ಲಿ ಆರು ಮಂದಿಗೆ ಗಲ್ಲು ಶಿಕ್ಷೆ ವಿಧಿಸಿರುವ ಪ್ರಕರಣ ಮಹತ್ವದ್ದು. ಥೇವರ್ ಸಮುದಾಯಕ್ಕೆ ಸೇರಿದ ಕೌಸಲ್ಯಾ ಅವರನ್ನು ಪ್ರೀತಿಸಿ ವಿವಾಹವಾಗಿದ್ದ ದಲಿತ ಯುವಕ ಶಂಕರನನ್ನು ಬೀದಿಯಲ್ಲಿ ಹತ್ಯೆ ಮಾಡಲಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಶಿಕ್ಷೆ ನೀಡಲಾಗಿದೆ. ಘಟನೆ ನಡೆದ ನಂತರ ಎರಡು ವರ್ಷಗಳಿಗೂ ಕಡಿಮೆ ಅವಧಿಯಲ್ಲಿ ವಿಚಾರಣೆ ಮುಗಿಸಿ ಅಧೀನ ನ್ಯಾಯಾಲಯ ಈ ತೀರ್ಪು ನೀಡಿದೆ ಎಂಬುದು ಗಮನಾರ್ಹ. 11 ಆರೋಪಿಗಳಲ್ಲಿ 8 ಮಂದಿಯನ್ನು ತಪ್ಪಿತಸ್ಥರನ್ನಾಗಿಸಿ ತಿರುಪ್ಪೂರ್ ನ್ಯಾಯಾಲಯ ಶಿಕ್ಷೆ ವಿಧಿಸಿದೆ. ನ್ಯಾಯಾಲಯದ ಈ ತೀರ್ಪು ಮರ್ಯಾದೆಗೇಡು ಹತ್ಯೆ ವಿರುದ್ಧ ಗಟ್ಟಿ ಸಂದೇಶವನ್ನೇ ರವಾನಿಸಿದೆ. ಶಿಕ್ಷೆಗೊಳಗಾದವರು ಉನ್ನತ ನ್ಯಾಯಾಲಯಗಳಲ್ಲಿ ಮೇಲ್ಮನವಿ ಸಲ್ಲಿಸಲು ಅವಕಾಶ ಇದೆ ಎಂಬುದು ನಿಜ. ಹೀಗಿದ್ದೂ ಮರ್ಯಾದೆಗೇಡು ಹತ್ಯೆ ಪ್ರಕರಣಗಳಲ್ಲೂ ನ್ಯಾಯ ಲಭ್ಯ ಎಂಬುದನ್ನು ಈ ತೀರ್ಪು ಮತ್ತೊಮ್ಮೆ ಎತ್ತಿ ಹೇಳಿದಂತಾಗಿದೆ.

ಮರ್ಯಾದೆಗೇಡು ಹತ್ಯೆಗೆ ಗಲ್ಲು ಶಿಕ್ಷೆ ವಿಧಿಸಿರುವುದು ಇದು ಎರಡನೇ ಬಾರಿ. ದಲಿತ ಮಹಿಳೆ ಕಲ್ಪನಾ ಹತ್ಯೆ ಸಂಬಂಧದಲ್ಲಿ ಥೇವರ್ ಸಮುದಾಯದ ದಂಪತಿಗೆ ಈ ವರ್ಷದ ಆರಂಭದಲ್ಲಿ ತಿರುನಲ್ವೇಲಿಯ ಸೆಷನ್ಸ್ ನ್ಯಾಯಾಲಯ ಗಲ್ಲು ಶಿಕ್ಷೆ ವಿಧಿಸಿತ್ತು. ಕಲ್ಪನಾಳ ಸೋದರ ವಿಶ್ವನಾಥನ್ ಜೊತೆಗೆ ಈ ದಂಪತಿಯ ಮಗಳು ಕಾವೇರಿ ಓಡಿಹೋದ ನಂತರ ಈ ಹತ್ಯೆ ನಡೆದಿತ್ತು. ಹೀಗಾಗಿ ಮರ್ಯಾದೆಗೇಡು ಹತ್ಯೆ ಆರೋಪದಡಿ ಈ ದಂಪತಿಯನ್ನು ಬಂಧಿಸಲಾಗಿತ್ತು. ಈಗ, ಶಂಕರ್ ಹತ್ಯೆ ಸಂಬಂಧದಲ್ಲಿ ಕೌಸಲ್ಯಾ ಅವರು ತಂದೆ– ತಾಯಿಯ ವಿರುದ್ಧವೇ ಸಾಕ್ಷ್ಯ ಹೇಳಿರುವುದು ವಿಶೇಷ. ತಾಯಿ, ಸೋದರಮಾವ ಸೇರಿದಂತೆ ಬಿಡುಗಡೆ ಆಗಿರುವ ಇನ್ನೂ ಮೂವರ ವಿರುದ್ಧ ಶಿಕ್ಷೆಗೆ ಆಗ್ರಹಿಸಿ ಮೇಲ್ಮನವಿ ಸಲ್ಲಿಸುವುದಾಗಿಯೂ ಕೌಸಲ್ಯಾ ಹೇಳಿದ್ದಾರೆ. ಶಂಕರ್ ಹತ್ಯೆಯ ನಂತರ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೂ ಯತ್ನಿಸಿದ್ದ ಕೌಸಲ್ಯಾ, ಜಾತಿ ವಿರುದ್ಧದ ಹೋರಾಟದಲ್ಲಿ ಈಗ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ ಎಂಬುದು ದೊಡ್ಡ ಬದಲಾವಣೆ. ಶತಮಾನದ ಹಿಂದೆಯೇ ಜಾತಿ ವಿರೋಧಿ ರಾಜಕಾರಣವನ್ನು ತಮಿಳುನಾಡಿನಲ್ಲಿ ಮುನ್ನೆಲೆಗೆ ತಂದವರು ಪೆರಿಯಾರ್‌. ಅಂತಹ ರಾಜ್ಯದಲ್ಲೇ ಮರ್ಯಾದೆಗೇಡು ಹತ್ಯೆಗಳು ನಡೆಯುತ್ತಿವೆ ಎಂಬುದಂತೂ ವಿಪರ್ಯಾಸದ ಸಂಗತಿ. ಗಲ್ಲು ಶಿಕ್ಷೆ ಕುರಿತಂತೆ ಪರ– ವಿರೋಧಗಳ ಚರ್ಚೆಗಳಿವೆ ಎಂಬುದನ್ನೂ ನಾವು ಈ ಸಂದರ್ಭದಲ್ಲಿ ಮರೆಯುವಂತಿಲ್ಲ. ಹೀಗಿದ್ದೂ ಮರ್ಯಾದೆಗೇಡು ಹತ್ಯೆ ಬಗ್ಗೆ ಈ ಶಿಕ್ಷೆ ನೀಡುವಂತಹ ಸಂದೇಶ ಇಲ್ಲಿ ಮುಖ್ಯ ಎಂಬುದನ್ನು ಪರಿಗಣಿಸಬೇಕು. ಆದರೆ ಎಲ್ಲಕ್ಕಿಂತ ಮುಖ್ಯವಾಗಿ ಮರ್ಯಾದೆಗೇಡು ಹತ್ಯೆ ಪ್ರಕರಣಗಳನ್ನು ಸಮಗ್ರ ನೆಲೆಯಲ್ಲಿ ದಕ್ಷವಾಗಿ ನಿರ್ವಹಿಸಲು ಪ್ರತ್ಯೇಕವಾದ ಕಾನೂನು ಅಗತ್ಯ. ಕಾನೂನು ರೂಪಿಸುವವರು ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.