ಮಂಗಳವಾರ, ಮಾರ್ಚ್ 9, 2021
18 °C

‘ನಮಗೆಲ್ಲರಿಗೂ ಇದೆ ಭಾರತಕ್ಕೆ ಆಡುವ ಗುರಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

‘ನಮಗೆಲ್ಲರಿಗೂ ಇದೆ ಭಾರತಕ್ಕೆ ಆಡುವ ಗುರಿ’

ಬೆಂಗಳೂರು: ನಮ್ಮ ತಂಡದಲ್ಲಿರುವ ಎಲ್ಲ ಆಟಗಾರರಿಗೂ ಭಾರತ ತಂಡಕ್ಕೆ ಆಡುವ ಗುರಿಯಿದೆ.  ಆದ್ದರಿಂದ ಎಲ್ಲ ವಿಭಾಗಗಳಲ್ಲಿ ತಮ್ಮ ಸಾಮರ್ಥ್ಯವನ್ನು ಸಂಪೂರ್ಣವಾಗಿ ಸಾಬೀತು ಮಾಡುವ ಛಲದಲ್ಲಿದ್ದಾರೆ ಎಂದು ಕರ್ನಾಟಕ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟ್ಸ್ ಮನ್  ಆರ್.ಸಮರ್ಥ್ ಹೇಳಿದರು.

ಡಿಸೆಂಬರ್ 17ರಿಂದ 21ರವರೆಗೆ ಕೋಲ್ಕತ್ತದಲ್ಲಿ ನಡೆಯಲಿರುವ ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಕರ್ನಾಟಕವು ವಿದರ್ಭ ತಂಡವನ್ನು ಎದುರಿಸಲಿದೆ. ಅದಕ್ಕಾಗಿ ಗುರುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ತಂಡವು ಅಭ್ಯಾಸ ನಡೆಸಿತು. ಈ ಸಂದರ್ಭದಲ್ಲಿ ಸಮರ್ಥ್ ಸುದ್ದಿಗಾರರೊಂದಿಗೆ ಮಾತನಾಡಿದರು.

‘ಮುಂಬೈ ತಂಡವು ಯಾವಾಗಲೂ ಬಲಿಷ್ಠವಾಗಿದೆ. ಅದರ ಎದುರು ಆಡುವುದು ವಿಶೇಷ ಸವಾಲು. ಅಂತಹ ತಂಡದ ಎದುರು ನಾಲ್ಕು ದಿನಗಳಲ್ಲಿ ಪಂದ್ಯ ಗೆದ್ದಿರುವುದು ಆತ್ಮವಿಶ್ವಾಸ ಹೆಚ್ಚಿಸಿದೆ. ನಾಗಪುರದಲ್ಲಿ ನಡೆದಿದ್ದ ಆ ಪಂದ್ಯದಲ್ಲಿ ಎಲ್ಲರೂ ಚೆನ್ನಾಗಿ ಆಡಿದರು. ಶಂಪೂರ್ಣ ತಂಡದ ಪರಿಶ್ರಮ ಆ ಜಯಕ್ಕೆ ಕಾರಣ’ ಎಂದು ಸಮರ್ಥ್ ವಿಶ್ಲೇಷಿಸಿದರು.

‘ನಮ್ಮ ಪಾಲಿಗೆ ನಿಜವಾಗಿಯೂ ಟೂರ್ನಿ ಈಗ ಆರಂಭವಾಗುತ್ತಿದೆ. ಎದುರಾಳಿ ವಿದರ್ಭ ತಂಡದಲ್ಲಿ ಉತ್ತಮ ಆಟಗಾರರಿದ್ದಾರೆ. ಹೊಸ ಸವಾಲುಗಳನ್ನು ಎದುರಿಸಲು ಸಜ್ಜಾಗಿದ್ದೇವೆ. ನಮ್ಮ ತಂಡದ ಎಲ್ಲರೂ ಉತ್ತಮ ಫಾರ್ಮ್ ನಲ್ಲಿದ್ದಾರೆ. ಅವಕಾಶ ಪಡೆದ ಉದಯೋನ್ಮುಖರು ಮಿಂಚುತ್ತಿದ್ದಾರೆ. ಎಲ್ಲ ವಿಭಾಗಗಳಲ್ಲಿಯೂ ನಾವು ಬಲಿಷ್ಠರಾಗಿದ್ದೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಮ್ಮ ಬ್ಯಾಟಿಂಗ್ ಕುರಿತು ಮಾತನಾಡಿದ ಸಮರ್ಥ್, ‘ಈ ಬಾರಿ ತಂಡಕ್ಕೆ ಉತ್ತಮ ಕಾಣಿಕೆ ನೀಡಿದ್ದು ಸಂತಸವಾಗಿದೆ. ಶತಕಗಳನ್ನು ಗಳಿಸಿದ್ದೇನೆ. ಮಯಂಕ್ ಅಗರವಾಲ್ ಜೊತೆಗೆ ಇನಿಂಗ್ಸ್ ಆರಂಭಿಸಿ ಯಶಸ್ವಿಯಾಗಿದ್ದೇವೆ. ನಾವಿಬ್ಬರೂ ಶಾಲಾ ದಿನಗಳಿಂದಲೇ ಕೂಡಿ ಆಡುತ್ತಿದ್ಧೇವೆ. ಆದ್ದರಿಂದ ಇಲ್ಲಿ ಸಫಲರಾಗಿದ್ಧೇವೆ’ ಎಂದರು.

ಆಭ್ಯಾಸ ಮಾಡಿದ ಬಿನ್ನಿ: ನಾಗಪುರದ ಪಂದ್ಯದ ಹಿಂದಿನ ದಿನ ಮಂಡಿನೋವಿನಿಂದ ಬಳಲಿ ತಂಡದಿಂದ ಹೊರಗುಳಿದಿದ್ದ ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ ಚೇತರಿಸಿಕೊಂಡಿದ್ದಾರೆ. ನೆಟ್ಸ್‌ ನಲ್ಲಿ ಬ್ಯಾಟಿಂಗ್ ಮತ್ತು ಬೌಲಿಂಗ್ ಅಭ್ಯಾಸ ನಡೆಸಿದರು. ಇದರಿಂದಾಗಿ ಅವರು ಕೋಲ್ಕತ್ತದಲ್ಲಿ ಕಣಕ್ಕೆ ಇಳಿಯುವ ಸಾಧ್ಯತೆ ಇದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.