ಶನಿವಾರ, ಮಾರ್ಚ್ 6, 2021
20 °C

ಸ್ವಿಟ್ಜರ್ಲೆಂಡ್‌ ಸಂಸದನಾದ ಉಡುಪಿಯ ನಿಕ್ ಗುಗ್ಗರ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸ್ವಿಟ್ಜರ್ಲೆಂಡ್‌ ಸಂಸದನಾದ ಉಡುಪಿಯ ನಿಕ್ ಗುಗ್ಗರ್‌

ಉಡುಪಿ: ಉಡುಪಿ ನಗರದಲ್ಲಿ ಜನಿಸಿದ ನಿಕ್‌ ಗುಗ್ಗರ್ ಸ್ವಿಟ್ಜರ್ಲೆಂಡ್ ಸಂಸದರಾಗಿದ್ದಾರೆ. ಅತ್ಯಂತ ಕಿರಿಯ ವಯಸ್ಸಿನ ಸಂಸದ ಹಾಗೂ ಅಲ್ಲಿನ ಸಂಸತ್ ಪ್ರವೇಶಿಸಿದ ಮೊದಲ ಭಾರತೀಯ ಸಂಜಾತ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ನಿಕ್ ಅವರ ಜೀವನ ಯಾನ ಬಹಳ ಕುತೂಹಲಕಾರಿ. ಉಡುಪಿಯ ಬಾಸೆಲ್ ಮಿಷನ್ ಆಸ್ಪತ್ರೆಯಲ್ಲಿ 1970 ಮೇ 1ರಂದು ಅವರು ಜನಿಸಿದರು. ಆದರೆ ಅವರ ತಾಯಿ ಮಗುವನ್ನು ಬಿಟ್ಟು ಹೋಗಿದ್ದರು. ಕೇರಳದ ತಲಶ್ಯೇರಿಯಲ್ಲಿ ಅನಾಥಾಶ್ರಮ ನಡೆಸುತ್ತಿದ್ದ ಸ್ವಿಟ್ಜರ್ಲೆಂಡ್‌ ದಂಪತಿ ಫ್ರಿಟ್ಸ್ ಗುಗ್ಗರ್ ಹಾಗೂ ಎಲೆಜಬೆತ್ ಗುಗ್ಗರ್ ಮಗುವನ್ನು ದತ್ತು ಪಡೆದುಕೊಂಡರು.

ವಿದೇಶಕ್ಕೆ ಹೋಗುವವರೆಗೂ ಅವರು ತಲಶ್ಯೇರಿಯಲ್ಲಿರುವ ನೆಟ್ಟೂರು ತಾಂತ್ರಿಕ ತರಬೇತಿ ಪ್ರತಿಷ್ಠಾನದ ಕ್ಯಾಂಪಸ್‌ನಲ್ಲಿ ಇದ್ದರು. ಭಾರತ ಮತ್ತು ಸ್ವಿಟ್ಜರ್ಲೆಂಡ್‌ನ ವಿದ್ಯಾರ್ಥಿಗಳ ತಾಂತ್ರಿಕ ಶಿಕ್ಷಣ ಸಹಕಾರಕ್ಕಾಗಿ ಈ ಪ್ರತಿಷ್ಠಾನ ಕೆಲಸ ಮಾಡುತ್ತಿದೆ.

ಸ್ವಿಟ್ಜರ್ಲೆಂಡ್‌ನಲ್ಲಿ ಇವಿಪಿ ಪಕ್ಷದಲ್ಲಿ ರಾಜಕೀಯ ಜೀವನವನ್ನು ಸಾಗಿಸುತ್ತಿರುವ ನಿಕ್‌ ಅವರು ನವೆಂಬರ್‌ನಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು.  ರಾಜಕೀಯದ ಜತೆಗೆ ಸಮಾಜ ಸೇವಾ ಕಾರ್ಯಗಳಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.

‘ಉಡುಪಿಯೊಂದಿಗಿನ ನನ್ನ ನೆನಪುಗಳು ಹಸಿರಾಗಿವೆ. ಕುಟುಂಬಕ್ಕೆ ಆಪ್ತರಾಗಿರುವ ಉಡುಪಿಯಲ್ಲಿ ನೆಲೆಸಿರುವ ಹೈಡಿ ಶಿರಿ ಅವರೊಂದಿಗೆ ಆಗಾಗ್ಗೆ ಮಾತನಾಡುತ್ತಿರುತ್ತೇನೆ. ಹಳೆ ದಿನಗಳನ್ನು ನೆನೆದರೆ ತುಂಬಾ ಸಂತೋಷವಾಗುತ್ತದೆ’ ಎಂದು ನಿಕ್ ಅವರು ‘ಪ್ರಜಾವಾಣಿ’ಗೆ ದೂರವಾಣಿ ಮೂಲಕ ತಿಳಿಸಿದರು.

ಉಡುಪಿಯವರೇ ಆದ ಹೈಡಿ ನಗರದಲ್ಲಿಯೇ ನೆಲೆಸಿದ್ದಾರೆ. ನಿಕ್ ಗುಗ್ಗರ್‌ ತಂದೆ– ತಾಯಿ ಅವರೊಂದಿಗೆ ಹೈಡಿ ಅವರ ಅಜ್ಜಿ ಅವರಿಗೆ ಸಂಪರ್ಕ ಇತ್ತು. ಆ ಸಂಬಂಧ ಈಗಲೂ ಮುಂದುವರಿದಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.