7

ಚಂದನಾ ಅದೃಷ್ಟಕ್ಕೆ ಒಲಿದ ನಟನೆ

Published:
Updated:
ಚಂದನಾ ಅದೃಷ್ಟಕ್ಕೆ ಒಲಿದ ನಟನೆ

ನಗುಮುಖದಿಂದ ಕಿರುತೆರೆ ಪ್ರೇಕ್ಷಕರಿಗೆ ಪರಿಚಿತರಾಗಿರುವ ಚಂದನಾ ರಾಘವೇಂದ್ರ ‘ಮೀರಾಳ ಕೃಷ್ಣ’ ಸಿನಿಮಾದ ಮೂಲಕ ನಟನಾ ಕ್ಷೇತ್ರಕ್ಕೆ ಪ್ರವೇಶಿಸಿದವರು. ಇದೀಗ ಕಿರುತೆರೆಯಲ್ಲಿ ನಟನೆಯ ಹಾದಿ ಹಿಡಿದಿರುವ ಅವರು ತಮ್ಮ ಸ್ವಭಾವಕ್ಕೆ ತದ್ವಿರುದ್ಧವಾಗಿರುವ ತಾಳ್ಮೆಯನ್ನೇ ಮೈಹೊದ್ದುಕೊಂಡಂತೆ ಇರುವ ಸುಮಾ ಪಾತ್ರಧಾರಿಯಾಗಿ ‘ಸಿಂಧೂರ’ ಧಾರಾವಾಹಿಯಲ್ಲಿ ನಟಿಸುತ್ತಿದ್ದಾರೆ.

ಸದ್ಯ ಚಿತ್ರರಂಗ ಹಾಗೂ ಕಿರುತೆರೆಯಲ್ಲಿ ಸಕ್ರಿಯರಾಗಿರುವ ಬೆಂಗಳೂರಿನ ಚಂದನಾ ನಟನಾ ಕ್ಷೇತ್ರಕ್ಕೆ ಅದೃಷ್ಟದಿಂದ ಬಂದವರು. ಎಂ.ಎಸ್ ರಾಮಯ್ಯ ಕಾಲೇಜಿನಲ್ಲಿ ಡಿಪ್ಲೊಮ ಮುಗಿಸಿದ ಮೇಲೆ ಸ್ವಂತ ಬಿಪಿಒ ಕಂಪನಿ ಆರಂಭಿಸಿದ ಚಂದನಾ ತಾನಾಯ್ತು, ತನ್ನ ಕೆಲಸವಾಯ್ತು ಅಂತಾ ಇದ್ದವರು. ಒಂದು ಬಾರಿ ತನ್ನ ಸ್ನೇಹಿತರ ಜೊತೆ ಕಾಫಿ ಡೇಗೆ ಹೋಗಿದ್ದಾಗ ಅದೃಷ್ಟ ಅವರನ್ನು ತಾನೇ ಹುಡುಕಿಕೊಂಡು ಬಂತು. ಕಾಫಿ ಡೇಗೆ ಫ್ಯಾಷನ್ ಕೊರಿಯೋಗ್ರಾಫರ್ ರಾಜೇಶ್ ರಾಮಕೃಷ್ಣನ್ ಕೂಡಾ ಬಂದಿದ್ದರು. ಆಗ ಅವರು ತಮ್ಮ ಹೊಸ ಸಿನಿಮಾಕ್ಕೆ ನಾಯಕಿಯನ್ನು ಹುಡುಕುತ್ತಿದ್ದರು. ಕಾಫಿ ಡೇಯಲ್ಲಿ ಚಂದನಾ ಅವರನ್ನು ನೋಡಿದ ರಾಜೇಶ್‌, ‘ಹೊಸ ಸಿನಿಮಾ ನಿರ್ದೇಶಿಸುತ್ತಿದ್ದೇನೆ. ಫ್ರೆಶ್ ಮುಖ ಹುಡುಕುತ್ತಿದ್ದೇನೆ. ನಟನೆಯಲ್ಲಿ ಆಸಕ್ತಿ ಇದೆಯಾ’ ಅಂತ ಕೇಳಿದ್ರು. ಅಪ್ಪ, ಅಮ್ಮನಲ್ಲಿ ಕೇಳಿ ಹೇಳುವುದಾಗಿ ಮನೆಗೆ ಬಂದರು ಚಂದನಾ.

ಮನೆಯಲ್ಲಿ ಈ ವಿಷಯ ಹೇಳಿದಾಗ ಪ್ರತಿಕ್ರಿಯೆ ಚಂದನಾ ಎನಿಸಿದ್ದಕ್ಕಿಂತ ಉಲ್ಟಾ ಆಗಿತ್ತು. ‘ಪಾತ್ರ ಚೆನ್ನಾಗಿದ್ದರೆ ಒಪ್ಪಿಕೊ’ ಅಂತ ಪೋಷಕರೂ ಹುರಿದುಂಬಿಸಿದರು. ಹೀಗೆ ಆಕಸ್ಮಿಕವಾಗಿ ನಟನಾ ಕ್ಷೇತ್ರಕ್ಕೆ ಬಂದವರು ಚಂದನಾ.

‘ಮೀರಾಳ ಕೃಷ್ಣ’ ಚಂದನಾ ಅವರ ಮೊದಲ ಚಿತ್ರ. ಇದು ದ್ವಿಭಾಷಾ ಚಿತ್ರ. ಕನ್ನಡ ಮತ್ತು ತೆಲುಗು ಎರಡೂ ಭಾಷೆಯಲ್ಲಿ ಈ ಚಿತ್ರ ನಿರ್ಮಾಣಗೊಂಡಿದೆ. ‘ಏಪ್ರಿಲ್‌ನ ಹಿಮಬಿಂದು’ ಇತ್ತೀಚೆಗೆ ಬಿಡುಗಡೆಗೊಂಡಿದೆ.  ‘ರಾಜು ಕನ್ನಡ ಮೀಡಿಯಂ’ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ಚಂದನಾ ನಟಿಸಿದ್ದಾರೆ. ‘ಮೀರಾಳ ಕೃಷ್ಣ’ ಚಿತ್ರದಲ್ಲಿ ಹಳ್ಳಿ ಹುಡುಗಿಯ ಬಬ್ಲಿ ಪಾತ್ರ. ‘ಸಂಪತ್ತಿಗೆ ಸವಾಲ್’ ಚಿತ್ರದಲ್ಲಿ ಮಂಜುಳಾ ಅವರು ಮಾಡಿದಂತಹ ಪಾತ್ರ.

‘ಏಪ್ರಿಲ್‌ನ ಹಿಮಬಿಂದು’ವಿನಲ್ಲಿ ಐಟಿ ಗೃಹಿಣಿಯ ಪಾತ್ರ. ‘ಎರಡೂ ಚಿತ್ರಗಳಲ್ಲೂ ಭಿನ್ನ ಭಿನ್ನ ಪಾತ್ರಗಳು. ನಟನೆ ಬಗ್ಗೆ ಏನೂ ಗೊತ್ತಿಲ್ಲದ ನನಗೆ ಈ ಪಾತ್ರಗಳು ನಟನೆ ಬಗ್ಗೆ ತಿಳಿಸಿದವು’  ಎಂದು ಹೇಳುತ್ತಾರೆ ಚಂದನಾ.

ಹಿರಿತೆರೆಯಲ್ಲಿದ್ದರೂ ಕಿರುತೆರೆ ಬಗ್ಗೆಯೂ ಆಸಕ್ತಿ ಇದ್ದವರು ಚಂದನಾ. ಕಿರುತೆರೆಯಲ್ಲೂ ಯಾಕೆ ಅವಕಾಶ ಹುಡುಕಬಾರದು ಎಂದು ಸ್ಟಾರ್ ಸುವರ್ಣ ವಾಹಿನಿಯ ‘ಸಿಂಧೂರ’ ಧಾರಾವಾಹಿಯ ಆಡಿಶನ್‌ಗೆ ಹೋದಾಗ ಸುಮಾ ಪಾತ್ರಕ್ಕೆ ಆಯ್ಕೆಯಾದರು.  ‘ಈಗ ಎಲ್ಲೇ ಹೋಗಲಿ ಜನ ಸುಮಾ ಪಾತ್ರದ ಮೂಲಕವೇ ಗುರುತಿಸುತ್ತಾರೆ’ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಚಂದನಾ.

‘ನಿಜ ಜೀವನದಲ್ಲಿ ತನ್ನ ಸ್ವಭಾವಕ್ಕೂ, ಸುಮಾ ಪಾತ್ರಕ್ಕೂ ಒಂಚೂರು ಹೋಲಿಕೆಯಿಲ್ಲ.  ತಂಗಿಗಾಗಿ ಎಲ್ಲಾ ತ್ಯಾಗ ಮಾಡುವ, ಬಂದ ಕಷ್ಟಗಳನ್ನೆಲ್ಲಾ ಅನುಭವಿಸುವ ತಾಯಿಯಂಥ ಹೃದಯ ಸುಮಾಳದ್ದು. ಆದರೆ, ಚಂದನಾ ಸಾಹಸ ಮನೋಭಾವದವಳು. ತುಂಬ ಮಾತು, ನೇರ ಮಾತು.  ಮನೆಯಲ್ಲಿ ಹಾಗೂ ಸ್ನೇಹಿತರು ಧಾರಾವಾಹಿ ನೋಡಿದಾಗ ನನ್ನ ನಟನೆ ಬಗ್ಗೆ ರೇಗಿಸುತ್ತಿರುತ್ತಾರೆ’ ಎಂದು ನಗುತ್ತಾರೆ ಚಂದನಾ.

ಈಗ ನಟನೆಯಲ್ಲಿ ಬ್ಯುಸಿಯಾಗಿದ್ದರೂ ಚಂದನಾ ನಟನೆ ಹಾಗೂ ತನ್ನ ಕಂಪನಿಯನ್ನು ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ.  ‘ತಿಂಗಳಲ್ಲಿ 15 ದಿನ ಶೂಟಿಂಗ್ ಇರುತ್ತದೆ. ಉಳಿದ 15 ದಿನಗಳಲ್ಲಿ  ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುತ್ತೇನೆ’ ಎನ್ನುತ್ತಾರೆ. ಈಗ ತೆಲುಗು ಸಿನಿಮಾ ರಂಗ ಪ್ರವೇಶಿಸಲು ಚಂದನಾ ತಯಾರಾಗಿದ್ದಾರೆ. ತೆಲುಗಿನ ಎರಡು ಸಿನಿಮಾಗಳಿಗೆ ಸಹಿ ಮಾಡಿದ್ದು, ಜನವರಿಯಲ್ಲಿ ಚಿತ್ರೀಕರಣ ಆರಂಭವಾಗಲಿದೆ. 

ತಿಂಡಿಪೋತಿಯಾಗಿದ್ದ ಚಂದನಾ ಈಗ ಡಯೆಟ್‌ ಹಾಗೂ ಫಿಟ್‌ನೆಸ್‌ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುತ್ತಾರೆ. ನಟನೆಗೆ ಬಂದ ಆರಂಭದಲ್ಲಿ ಏನೂ ಗೊತ್ತಿಲ್ಲದೇ ದಪ್ಪ ಆಗಿದ್ದುಂಟು. ಈಗ ಡಯೆಟ್, ಫಿಟ್ನೆಸ್ ಬಗ್ಗೆ ತುಂಬ ಕಾಳಜಿ ತಗೋತೀನಿ. ಶೂಟಿಂಗ್ ಮುಗಿಸಿ ಯಾವ ಏರಿಯಾದಲ್ಲಿ ಜಿಮ್ ಕಾಣುತ್ತೋ ಅಲ್ಲಿ ಹೋಗ್ತೀನಿ. ಜಿಮ್‌ಗೆ ಹೋಗಕ್ಕಾಗಲ್ಲ ಅಂದ್ರೆ ಮನೆಯಲ್ಲೇ ವ್ಯಾಯಾಮ’ ಎಂಬ ವಿವರಣೆ ಅವರದು. 

‘ಮುಂಚೆ  ಅನ್ನ, ಪಿಜ್ಜಾ, ಫಾಸ್ಟ್‌ಫುಡ್ ಇಷ್ಟಪಟ್ಟು ತಿಂತಿದ್ದೆ. ಆದ್ರೆ ಈಗ ಆರೋಗ್ಯಕರ ಆಹಾರ ಮಾತ್ರ. ಬೆಳಿಗ್ಗೆ ಎದ್ದ ಕೂಡಲೇ ರಾಗಿ ಮಾಲ್ಟ್. ಆಮೇಲೆ ಕಾರ್ನ್ ಫ್ಲೇಕ್ಸ್. ಮಧ್ಯಾಹ್ನ ಮುದ್ದೆ ಅಥವಾ ಚಪಾತಿ. ಸಂಜೆ ತರಕಾರಿ ಸಲಾಡ್. ರಾತ್ರಿ ಮುದ್ದೆ. ಮಧ್ಯ ಹಸಿವಾದಾಗಲೆಲ್ಲಾ ಎಳನೀರು ಕುಡಿಯುತ್ತೇನೆ. ನೀರು ಜಾಸ್ತಿ ಕುಡಿಯುತ್ತೇನೆ. ನಾನು ಆದಿತ್ಯವಾರ ಡಯೆಟ್ ಮಾಡಲ್ಲ. ಆದಿನ ನಂಗೆ ಏನೆಲ್ಲಾ ಇಷ್ಟವೋ ಅದನ್ನೆಲ್ಲಾ ಮಾಡಿಸ್ಕೊಂಡು ತಿಂತೀನಿ. ಚಿತ್ರಾನ್ನ ಅಂದ್ರೆ ಪಂಚಪ್ರಾಣ’ ಎಂದು ಹೇಳುತ್ತಾರೆ.  ⇒v

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry