ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ₹7,500 ಬೆಂಬಲ ಬೆಲೆಗೆ ಆಗ್ರಹ

Last Updated 15 ಡಿಸೆಂಬರ್ 2017, 6:58 IST
ಅಕ್ಷರ ಗಾತ್ರ

ಕಲಬುರ್ಗಿ: ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ತಲಾ ₹1,000 ಸಹಾಯಧನ ಸೇರಿಸಿ ತೊಗರಿಗೆ ₹7,500 ಬೆಂಬಲ ಬೆಲೆ ನಿಗದಿಪಡಿಸಬೇಕು ಎಂದು ಆಗ್ರಹಿಸಿ ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ವಿವಿಧ ಸಂಘಟನೆಗಳವರು ಗುರುವಾರ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ್ ಸಭಾ, ದಲಿತ ಹಕ್ಕುಗಳ ಸಮಿತಿ, ತೊಗರಿ ಬೆಳೆಗಾರರ ಸಂಘ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ ವಾದ), ದಲಿತ ಸಂಘರ್ಷ ಸಮಿತಿ (ಭೀಮವಾದ) ಸಂಘಟನೆಗಳ ಪದಾಧಿಕಾರಿಗಳು ಧರಣಿಯಲ್ಲಿ ಪಾಲ್ಗೊಂಡರು.

ಪ್ರಾಂತ ರೈತ ಸಂಘದ ಉಪಾಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ‘ತೊಗರಿ ಬೆಳೆಗಾರರ ನೆರವಿಗೆ ಕೇಂದ್ರ ರಾಜ್ಯ, ಸರ್ಕಾರಗಳು ಧಾವಿಸ ಬೇಕು. ಎರಡೂ ಸರ್ಕಾರಗಳು ಸಹಾಯಧನ ನೀಡಬೇಕು, ಗ್ರಾಮ ಪಂಚಾಯಿತಿಗೊಂದು ತೊಗರಿ ಖರೀದಿ ಕೇಂದ್ರ ತೆರೆಯಬೇಕು.

ತೂಕ ಮಾಡಲು, ರೈತರ ಹೆಸರು ನೋಂದಣಿಗೆ ಸಿಬ್ಬಂದಿಯನ್ನು ನೇಮಕ ಮಾಡಬೇಕು, ಖರೀದಿ ಕೇಂದ್ರಗಳಲ್ಲಿ ರೈತರಿಂದ ಹಣ ವಸೂಲಿ ಮಾಡುವುದನ್ನು ತಡೆಯಬೇಕು’ ಎಂದು ಆಗ್ರಹಿಸಿದರು.

‘ಟನ್‌ ಕಬ್ಬಿಗೆ ₹3,600 ದರ ನಿಗದಿಪಡಿಸಬೇಕು, 2015, 2016ನೇ ಸಾಲಿನಲ್ಲಿ ಬಾಕಿ ಉಳಿಸಿಕೊಂಡಿರುವ ಬೆಳೆ ವಿಮೆ ಪಾವತಿಸಬೇಕು, ಫಸಲ್ ಭಿಮಾ ಯೋಜನೆ ನಿಯಮಾವಳಿಗಳನ್ನು ಬದಲಾವಣೆ ಮಾಡಬೇಕು’ ಎಂದು ಹೇಳಿದರು.

‘ಜಿಲ್ಲೆಯ ಬೃಹತ್‌ ಕಾರ್ಖಾನೆಗಳು ರೈತರಿಂದ ಖರೀದಿಸಿದ ಜಮೀನಿಗೆ ಕಡಿಮೆ ಬೆಲೆ ನೀಡುತ್ತಿದೆ. ಭೂಮಿ ಕೊಡಲು ಮುಂದಾದ ರೈತರಿಗೆ ಅನ್ಯಾಯ ಮಾಡುತ್ತಿವೆ. ಜಿಲ್ಲಾಡಳಿತ ಈ ಬಗ್ಗೆ ಗಮನಹರಿಸಬೇಕು’ ಎಂದು ಅವರು ಮನವಿ ಮಾಡಿದರು.

ರೈತ ಮುಖಂಡರಾದ ಮೌಲಾ ಮುಲ್ಲಾ, ಮುನಿರ್‌ ಹಾಶ್ಮಿ, ಮಂಜುನಾಥ ಗೌಡ, ಅರ್ಜುನ್ ಗೊಬ್ಬೂರ, ಅಂಬರೀಶ ಪಾಟೀಲ ಬಳಬಟ್ಟಿ, ಶರಣಬಸಪ್ಪ ಹೆರೂರ, ಅಶೋಕ ಮ್ಯಾಗೇರಿ, ಪಾಂಡುರಂಗ ಮಾವಿನಕರ, ಶರಣಬಸಪ್ಪ ಮಮಶೆಟ್ಟಿ ಭಾಗವಹಿಸಿದ್ದರು.

ವೀರ ಕನ್ನಡಗಿರ ಸೇನೆ: ತೊಗರಿಗೆ ₹7,500, ಹೆಸರಿಗೆ ₹7,000 ಹಾಗೂ ಉದ್ದಿಗೆ ₹6,000 ಬೆಂಬಲ ಬೆಲೆ ನಿಗದಿಪಡಿಸುವಂತೆ ಒತ್ತಾಯಿಸಿ ವೀರ ಕನ್ನಡಗಿರ ಸೇನೆಯ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು. ‘ಬೆಂಬಲ ಬೆಲೆ ನಿಗದಿಯಲ್ಲಿ ಸರ್ಕಾರ ಪ್ರತಿ ವರ್ಷ ಅನ್ಯಾಯ ಮಾಡುತ್ತಿದೆ. ಈ ವರ್ಷವಾದರೂ ನ್ಯಾಯಯುತ ಬೆಲೆ ನೀಡಬೇಕು’ ಎಂದು ಪ್ರತಿಭಟನಾನಿರತರು ಆಗ್ರಹಿಸಿದರು.

‘ನಾಲ್ಕು ವರ್ಷಗಳಿಂದ ಸಮರ್ಪಕ ಮಳೆಯಾದರೆ ರೈತರು ಸಂಕಷ್ಟದಲ್ಲಿದ್ದಾರೆ. ಬೆಳೆ ವಿಮೆ ಪಾವತಿಯೂ ಸರಿಯಾಗಿ ಆಗಿಲ್ಲ. ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲ ಮರುಪಾವತಿ ಮಾಡುವಂತೆ ರೈತರಿಗೆ ನೋಟಿಸ್‌ ಜಾರಿಗೊಳಿಸಿವೆ. ಕೇಂದ್ರ ಸರ್ಕಾರ ಕೂಡಲೇ ರೈತರ ಸಾಲ ಮನ್ನಾ ಮಾಡಬೇಕು’ ಎಂದು ಮನವಿ ಮಾಡಿದರು.

ಮುಖಂಡರಾದ ಅಮೃತ್ ಪಾಟೀಲ ಸಿರನೂರು, ನಾಗನ್ನಾಥ ಸೂರ್ಯವಂಶಿ, ರವಿ ಒಂಟಿ, ಸಿದ್ದು ಕಂದಗಲ್, ಭರತ್ ಭೂಷಣ್, ಶ್ರೀನಿವಾಸ, ಶೇಷಗಿರಿ, ವಸಂತಕುಮಾರ್, ಆಕಾಶ, ಶಿವಲಿಂಗ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT