ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಲೆ ಇಲ್ಲದ ನಿಲ್ದಾಣ: ಪ್ರಯಾಣಿಕರ ಪರದಾಟ

Last Updated 15 ಡಿಸೆಂಬರ್ 2017, 9:28 IST
ಅಕ್ಷರ ಗಾತ್ರ

ಗಜೇಂದ್ರಗಡ: ಪಟ್ಟಣದ ಬಸ್ ನಿಲ್ದಾಣ ನವೀಕರಣಗೊಳ್ಳುತ್ತಿರುವ ಕಾರಣ ಈಗ ಜೋಡಿ ರಸ್ತೆಯೇ ಬಸ್ ನಿಲ್ದಾಣವಾಗಿದ್ದು, ಇದರಿಂದ ನಿತ್ಯ ಪ್ರಯಾಣಿಕರು ಪರದಾಡುವಂತಾಗಿದೆ.

ಬಸ್ ನಿಲ್ದಾಣ ನವೀಕರಣ ಕಾಮಗಾರಿ ನಡೆಯುತ್ತಿರುವುದರಿಂದ ನಿಲ್ದಾಣದ ಒಳಗೆ ವಾಹನಗಳು ಹೋಗದಂತೆ ತಡೆಯಲು ನಿಲ್ದಾಣದ ಎರಡೂ ದ್ವಾರಗಳಿಗೆ ಮುಳ್ಳು
ಹಾಕಲಾಗಿದೆ. ಹೀಗಾಗಿ, ಬಸ್‌ಗಳು ಅನಿವಾರ್ಯವಾಗಿ ಜೋಡಿ ರಸ್ತೆಯಲ್ಲಿಯೇ ನಿಲ್ಲುವಂತಾಗಿದೆ. ಜೋಡಿ ರಸ್ತೆಯಲ್ಲಿ ದೂಳು ತುಂಬಿದ್ದು, ಬಸ್‌ಗಳ ನಿಲುಗಡೆಯಿಂದ ಅದರ ಪ್ರಮಾಣ ಮತ್ತಷ್ಟು ಹೆಚ್ಚಿ ಪ್ರಯಾಣಿಕರು ಹಾಗೂ ಸುತ್ತಲಿನ ವ್ಯಾಪಾರಿಗಳಿಗೆ ತೊಂದರೆಯಾಗಿದೆ.

ಜೋಡಿ ರಸ್ತೆಯಲ್ಲಿ ದ್ವಿಚಕ್ರ ವಾಹನಗಳು ಮತ್ತು ಖಾಸಗಿ ವಾಹನಗಳನ್ನು ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ನಿಲ್ಲಿಸುವುದರಿಂದ ಬಸ್‌ ನಿಲುಗಡೆಗೆ ಸ್ಥಳಾವಕಾಶ ಇಲ್ಲದಂತಾಗಿದೆ. ಇದರಿಂದ ಪ್ರಯಾಣಿಕರು ತಾವು ಹಿಡಿಯಬೇಕಾದ ಬಸ್ ಹುಡುಕುವಲ್ಲಿ ಸುಸ್ತಾಗುವಂತಾಗಿದೆ. ಅದರಲ್ಲೂ ವೃದ್ಧರು, ಮಹಿಳೆಯರು, ಅಂಗವಿಕಲ ಪಾಡು ಹೇಳತೀರದು. ಜೋಡಿ ರಸ್ತೆ ದಾಟುವಾಗ ಅವರು ಜೀವ ಕೈಯಲ್ಲಿ ಹಿಡಿದುಕೊಂಡಿರುತ್ತಾರೆ.

ಪ್ರಯಾಣಿಕರಿಗೆ ಕುಳಿತುಕೊಳ್ಳಲು ಜಾಗ ಇಲ್ಲದ ಕಾರಣ ನಿಲ್ದಾಣದ ಬಾಗಿಲಿಗೆ ಹಾಕಿದ ಮುಳ್ಳುಗಳ ಬದಿಯಲ್ಲಿಯೇ ಕುಳಿತುಕೊಳ್ಳುತ್ತಿದ್ದಾರೆ. ಯಾವ ಬಸ್ ಎಲ್ಲಿ ನಿಲ್ಲುತ್ತದೆ? ಯಾವ ಕಡೆಗೆ ಹೋಗುತ್ತದೆ? ಎಂಬುದು ಪ್ರಯಾಣಿಕರಿಗೆ ಗೊತ್ತಾಗುವುದಿಲ್ಲ. ನಿಲ್ದಾಣದ ಅಧಿಕಾರಿ ಕೂಡ ನಿಲ್ದಾಣದ ಬಾಗಿಲ ಬಳಿ ಹಾಕಿದ ಮುಳ್ಳುಗಳ ಬದಿಯಲ್ಲಿ ಕೂರುವುದು ಅನಿವಾರ್ಯವಾಗಿದೆ.

‘ನಿಲ್ದಾಣಕ್ಕೆ ಈಗ ಕಾಂಕ್ರೀಟ್ ಹಾಕಿದ್ದು, ಅದು ಪೂರ್ತಿ ಗಟ್ಟಿಗೊಳ್ಳಲು ಇನ್ನೂ ಎರಡು ತಿಂಗಳು ಬೇಕು. ಆವರೆಗೆ ಬೇರೆ ಜಾಗದಲ್ಲಿ ಬಸ್ ನಿಲ್ಲಲು ಅವಕಾಶ ಮಾಡಿಕೊಡಬೇಕು ಎಂದು ಪುರಸಭೆ ಮುಖ್ಯಾಧಿಕಾರಿಗೆ ಮನವಿ ಮಾಡಲಾಗಿದೆ’ ಎಂದು ಡಿಪೊ ವ್ಯವಸ್ಥಾಪಕ ರಾಜಶೇಖರ ಮಸ್ಕಿ ಹೇಳಿದರು.

‘ರಸ್ತೆಯಲ್ಲಿಯೇ ಬಸ್ ನಿಲುಗಡೆ ಮಾಡತ್ತಿರುವುದರಿಂದ ಯಾವ ಸಮಯದಲ್ಲಿ ಏನಾಗುವದೋ ಎಂಬ ಆತಂಕ ಕಾಡುತ್ತಿದೆ. ಶಾಳೆಗೆ ಹೋಗುವ ಮಕ್ಕಳು, ವೃದ್ಧರು, ಮಹಿಳೆಯರು ಸುರಕ್ಷಿತವಾಗಿ ಮನೆ ಸೇರಿದರೆ ಸಾಕು ಎನ್ನುವಂತಾಗಿದೆ. ಅಲ್ಲದೆ, ದೂಳಿನಿಂದ ಆಸ್ತಮಾ ಬರುವ ಭಯ ಆವರಿಸಿದೆ’ ಎಂದು ರಾಂಪುರ ಗ್ರಾಮದ ವೃದ್ಧೆ ಶರಣವ್ವ ಪಾಟೀಲ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT