7

ಕಲಬುರ್ಗಿ ಕೋಟೆ: ಹುಲ್ಲುಹಾಸು, ಉದ್ಯಾನ ನಿರ್ಮಾಣ

Published:
Updated:
ಕಲಬುರ್ಗಿ ಕೋಟೆ: ಹುಲ್ಲುಹಾಸು, ಉದ್ಯಾನ ನಿರ್ಮಾಣ

ಕಲಬುರ್ಗಿ: ಇಲ್ಲಿನ ಬಹಮನಿ ಕೋಟೆ (ಕಲಬುರ್ಗಿ ಕೋಟೆ)ಯ ಒಳ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಭಾರತೀಯ ಪುರಾತತ್ವ ಸರ್ವೇಕ್ಷಣ (ಎಎಸ್‌ಐ) ಇಲಾಖೆಯು ಮುಂದಾಗಿದೆ.

ಬಹಮನಿ ಸುಲ್ತಾನ್‌ ಈ ಕೋಟೆಯನ್ನು ಕಟ್ಟಿಸಿದ್ದು, ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ಇದನ್ನು ‘ಸಂರಕ್ಷಿತ ಪ್ರದೇಶ’ ಹಾಗೂ ‘ರಾಷ್ಟ್ರೀಯ ಮಹತ್ವದ ಸ್ಮಾರಕ’ ಎಂದು ಘೋಷಿಸಿದೆ. ಕೋಟೆಯ ಒಳ ಆವರಣದಲ್ಲಿ ಲ್ಯಾಂಡ್ ಸ್ಕೇಪಿಂಗ್, ಹುಲ್ಲುಹಾಸು, ಉದ್ಯಾನ ನಿರ್ಮಾಣ ಮತ್ತು ಶುದ್ಧ ಕುಡಿಯುವ ನೀರಿನ ಘಟಕವನ್ನು ಸ್ಥಾಪಿಸಲಾಗಿದೆ.

ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯು ₹1.5 ಕೋಟಿ ಮೊತ್ತದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ಅದರಂತೆ ರಾಜ್ಯ ಸರ್ಕಾರವು ಪ್ರವಾಸೋದ್ಯಮ ಇಲಾಖೆ ಮೂಲಕ 2016ರ ಫೆಬ್ರುವರಿಯಲ್ಲೇ ₹1 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಉಳಿಕೆ ₹50 ಲಕ್ಷ ಅನುದಾನವನ್ನು ನಂತರದ ದಿನಗಳಲ್ಲಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಹಣ ಬಿಡುಗಡೆಯಾಗಿದ್ದರೂ ವಿವಿಧ ಕಾರಣಗಳಿಂದಾಗಿ ಅಭಿವೃದ್ಧಿ ಕಾಮಗಾರಿಯು ನನೆಗುದಿಗೆ ಬಿದ್ದಿತ್ತು.

‘ಕಲಬುರ್ಗಿ ಕೋಟೆಯು ಭಾರತೀಯ ಪುರಾತತ್ವ ಸರ್ವೇಕ್ಷಣ (ಎಎಸ್‌ಐ) ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ನೇರವಾಗಿ ರಾಜ್ಯ ಪುರಾತತ್ವ ಸರ್ವೇಕ್ಷಣ ಇಲಾಖೆಯಿಂದ ಕಾಮಗಾರಿ ಕೈಗೊಳ್ಳಲು ಬರುವುದಿಲ್ಲ. ಇದಕ್ಕಾಗಿ ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಅನುಮತಿ ಪಡೆಯಬೇಕಾಗುತ್ತದೆ. ಹೀಗಾಗಿ ಕಾಮಗಾರಿ ವಿಳಂಬವಾಗಿದೆ. ಇದೀಗ ತಾಂತ್ರಿಕ ಸಮಸ್ಯೆಗಳು ಬಗೆಹರಿದಿವೆ. ಟೆಂಡರ್ ಪ್ರಕ್ರಿಯೆ ಆರಂಭವಾಗಿದ್ದು, ಶೀಘ್ರವೇ ಕಾಮಗಾರಿ ಆರಂಭಿಸಲಾಗುವುದು’ ಎಂದು ಎಎಸ್‌ಐನ ಅಧಿಕಾರಿಯೊಬ್ಬರು ಹೇಳುತ್ತಾರೆ.

‘ಕೋಟೆಯ ವೀಕ್ಷಣೆಗೆ ಬಹಳಷ್ಟು ಜನರು ಬರುತ್ತಾರೆ. ಅದರಲ್ಲೂ ಶಾಲಾ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇಲ್ಲಿನ ಜಾಮಿಯಾ ಮಸೀದಿ ಹಾಗೂ ಅತಿ ದೊಡ್ಡ ತೋಪು ಆಕರ್ಷಣೆಯ ಕೇಂದ್ರವಾಗಿವೆ. ಪ್ರವಾಸಿಗರಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಶುದ್ಧ ಕುಡಿವ ನೀರಿನ ಘಟಕ, ಶೌಚಾಲಯ ನಿರ್ಮಿಸ ಲಾಗುತ್ತಿದೆ. ಉದ್ಯಾನದಲ್ಲಿ ವಿವಿಧ ಬಗೆಯ ಹೂವಿನ ಸಸಿಗಳನ್ನು ನೆಡಲಾಗುವುದು’ ಎಂದು ಹೇಳುತ್ತಾರೆ.

ಕಟ್ಟಡ ತೆರವು ಸಮಸ್ಯೆ: ‘ಕೋಟೆ ಆವರಣದಲ್ಲಿ ಕೆಲವರು ಅನಧಿಕೃತವಾಗಿ ಕಟ್ಟಡಗಳನ್ನು ನಿರ್ಮಿಸಿದ್ದಾರೆ. ಇದರಿಂದ ಸೌಂದರ್ಯೀಕರಣ ಕಾಮಗಾರಿ ಕೈಗೊಳ್ಳಲು ತೊಂದರೆಯಾಗುತ್ತಿದೆ. ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತ ಹಾಗೂ ಪಾಲಿಕೆ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ’ ಎಂದು ಅವರು ಹೇಳುತ್ತಾರೆ.

* * 

ಕೋಟೆಯ ಒಳ ಆವರಣದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಕೈಗೊಳ್ಳಲು ಈಗಾಗಲೇ ಟೆಂಡರ್ ಕರೆಯಲಾಗಿದೆ. 15 ದಿನಗಳಲ್ಲಿ ಕೆಲಸ ಆರಂಭಿಸಲಾಗುವುದು

ಅಜಯ್ ಜನಾರ್ದನ

ಸಂರಕ್ಷಣಾ ಅಧಿಕಾರಿ, ಎಎಸ್‌ಐ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry