ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಕ್ರಮ ಕಲ್ಲು ಗಣಿಗಾರಿಕೆ: ಸಿಬಿಐ ತನಿಖೆಗೆ ಒತ್ತಾಯ

Last Updated 20 ಡಿಸೆಂಬರ್ 2017, 5:25 IST
ಅಕ್ಷರ ಗಾತ್ರ

ಮಂಡ್ಯ: ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಡೆದ ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಂಡವಪುರ ತಾಲ್ಲೂಕಿನ ಅಕ್ರಮ ಕಲ್ಲು ಗಣಿಗಾರಿಕೆ ವಿಷಯ ಸದ್ದು ಮಾಡಿತು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಎನ್‌.ನಾಗಭೂಷಣ್‌ ಗಣಿಗಾರಿಕೆ ಕುರಿತು ಮಾಹಿತಿ ನೀಡಿದರು.

ಇಲಾಖೆಯ ಕಾರ್ಯವೈಖರಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮಳವಳ್ಳಿ ತಾಲ್ಲೂಕು ಶಾಸಕ ಪಿ.ಎಂ.ನರೇಂದ್ರಸ್ವಾಮಿ, "ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಪ್ರಭಾವಿಗಳ ಒತ್ತಡಕ್ಕೆ ಒಳಗಾಗಿ ಅಕ್ರಮ ಗಣಿಗಾರಿಕೆಗೆ ಅವಕಾಶ ನೀಡುತ್ತಿದ್ದಾರೆ. ನಿಯಮಗಳನ್ನು ಗಾಳಿಗೆ ತೂರಿದ್ದಾರೆ. ಈ ಕುರಿತು ಸಿಬಿಐ ತನಿಖೆ ಆಗಬೇಕು. ಉನ್ನತ ಮಟ್ಟದ ತನಿಖೆಯಿಂದ ಸತ್ಯ ಹೊರಬರಬೇಕು' ಎಂದು ಒತ್ತಾಯಿಸಿದರು.

'ಗಣಿ ಗುತ್ತಿಗೆ ನೀಡುವ ಮೊದಲು ಗಣಿ ಮತ್ತು ಖನಿಜ ಕಾಯ್ದೆ ಅನುಸಾರ ಮೀಸಲಾತಿ ಅನುಸರಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಿಗೆ ಗಣಿ ಪ್ರದೇಶ ಗುರುತಿಸಿ ಸರ್ಕಾರಕ್ಕೆ ವರದಿ ನೀಡಬೇಕು. ಕೈಕುಳಿ ಗಣಿ ಮಾಡುವ ಕಾರ್ಮಿಕರ ಸಹಕಾರ ಸಂಘಗಳಿಗೆ ಗಣಿ ಪ್ರದೇಶ ಹಂಚಬೇಕು. ಆದರೆ ಇಷ್ಟು ವರ್ಷ ಯಾವುದನ್ನೂ ಅಧಿಕಾರಿಗಳು ಪಾಲಿಸಿಲ್ಲ. ಯಾವುದೇ ಜವಾಬ್ದಾರಿ ನಿರ್ವಹಿಸದ ಇಲಾಖೆ ಅಧಿಕಾರಿಗಳು ಪ್ರಭಾವಿಗಳಿಗೆ ಗಣಿ ಗುತ್ತಿಗೆ ನೀಡಿದ್ದಾರೆ. ಈ ಕುರಿತು ತನಿಖೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಭೂವಿಜ್ಞಾನಿ ನಾಗಭೂಷಣ್‌, ‘ಜಿಲ್ಲೆಯ ಅಭಿವೃದ್ಧಿ ಕೆಲಸಗಳಿಗಾಗಿ ಕಲ್ಲನ್ನು ಬಳಸಲಾಗಿದೆ’ ಎಂದು ಗಣಿಗಾರಿಕೆಯನ್ನು ಸಮರ್ಥಿಸಿಕೊಳ್ಳಲು ಯತ್ನಿಸಿದರು. ಇದಕ್ಕೆ ಜಿಲ್ಲಾಧಿಕಾರಿ ಎನ್‌.ಮಂಜುಶ್ರೀ ಆಕ್ಷೇಪ ವ್ಯಕ್ತಪಡಿಸಿದರು.

ದಂಡ ವಸೂಲಿ ಮಾಡಲು ವಿಫಲ: ಅಕ್ರಮ ಗಣಿ ಕಂಪೆನಿಗಳಿಗೆ ₹ 30 ಕೋಟಿ ದಂಡ ವಿಧಿಸಲಾಗಿದೆ. ಎಷ್ಟು ಹಣ ವಸೂಲಿಯಾಗಿದೆ ಎಂದು ನರೇಂದ್ರಸ್ವಾಮಿ ಪ್ರಶ್ನಿಸಿದರು. ಇದಕ್ಕೆ ಭೂವಿಜ್ಞಾನಿ ನಾಗಭೂಷಣ್‌, ‘ನಾಲ್ಕು ವರ್ಷಗಳ ಹಿಂದೆ ದಂಡ ವಿಧಿಸಲಾಗಿದೆ. ಇನ್ನೂ ದಂಡ ವಸೂಲಿ ಮಾಡಬೇಕಾಗಿದೆ ಎಂದು ತಿಳಿಸಿದರು.

ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಂ.ಕೃಷ್ಣಪ್ಪ ಅಸಮಾಧಾನ ವ್ಯಕ್ತಪಡಿಸಿದರು. ‘ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳು ದಂಡ ವಸೂಲಿ ಮಾಡಲು ವಿಫಲರಾದರೆ. ವಸೂಲಾತಿ ಜವಾಬ್ದಾರಿಯನ್ನು ಕಂದಾಯ ವಸೂಲಾತಿ ಸಮಿತಿಗೆ (ಆರ್‌ಆರ್‌ಸಿ) ವಹಿಸಲಾಗುವುದು’ ಜಿಲ್ಲಾಧಿಕಾರಿ ಮಂಜುಶ್ರೀ ಹೇಳಿದರು. ಗಣಿಗಾರಿಕೆ ಕುರಿತು ವಿಸ್ತ್ರತ ವರದಿ ಸಲ್ಲಿಸಿ ಎಂದು ಸಚಿವ ಕೃಷ್ಣಪ್ಪ ಜಿಲ್ಲಾಧಿಕಾರಿಗೆ ಸೂಚಿಸಿದರು. ವರದಿ ಆಧಾರದ ಮೇಲೆ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದು ಹೇಳಿದರು.

ಕೆರೆ ತುಂಬಿದ ಮೇಲೆ ಹೂಳೆತ್ತಲು ಟೆಂಡರ್‌: ಕಾವೇರಿ ನೀರಾವರಿ ನಿಗಮದ ಅಧೀಕ್ಷಕ ಎಂಜಿನಿಯರ್‌ ವಿಜಯ್‌ಕುಮಾರ್‌ ಸಭೆಗೆ ಮಾಹಿತಿ ನೀಡಿ, ‘ಜಿಲ್ಲೆಯಲ್ಲಿ 60 ಕೆರೆಗಳ ಹೂಳೆತ್ತಲು ಟೆಂಡರ್‌ ಕರೆಯಲಾಗಿದೆ’ ಎಂದು ಹೇಳಿದರು. ವಿಜಯ್‌ಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಸಚಿವ ಕೃಷ್ಣಪ್ಪ, ‘ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸಲಾಗಿದೆ. ಕೆರೆ ತುಂಬಿದ ನಂತರ ಎಲ್ಲಿ ಹೂಳು ಎತ್ತುವಿರಿ. ಸುಮ್ಮನೆ ಇಲ್ಲಸಲ್ಲದ ಮಾಹಿತಿ ನೀಡಿ ಸಭೆಯ ಸಮಯ ಹಾಳುಮಾಡಬೇಡಿ’ ಎಂದರು.

ಸಭೆಯಲ್ಲಿ ಶಾಸಕರಾದ ಡಿ.ಸಿ.ತಮ್ಮಣ್ಣ, ಕೆ.ಎಸ್‌.ಪುಟ್ಟಣ್ನಯ್ಯ, ನಾರಾಯಣಗೌಡ, ರಮೇಶ್‌ಬಾಬು ಬಂಡಿಸಿದ್ದೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜೆ.ಪ್ರೇಮಕುಮಾರಿ, ಉಪಾಧ್ಯಕ್ಷೆ ಗಾಯತ್ರಿ ರೇವಣ್ಣ, ಜಿಲ್ಲಾ ಪಂಚಾಯಿತಿ ಸಿಇಒ ಬಿ.ಶರತ್‌ ಹಾಜರಿದ್ದರು.

ಮುಂದಿನ ವಾರ ಮತ್ತೆ ಪ್ರಗತಿ ಪರಿಶೀಲನೆ

‘ಜಿಲ್ಲೆಯಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣ ಕಾಮಗಾರಿ ತಡವಾಗುತ್ತಿದೆ. ಕೆಆರ್‌ಡಿಎಲ್‌ ಅಧಿಕಾರಿಗಳು ಕೆಲಸವನ್ನು ಸೂಕ್ತ ಸಮಯಕ್ಕೆ ಮುಗಿಸುತ್ತಿಲ್ಲ. ಶಾಲಾ ಕಟ್ಟಡಗಳ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಶಾಲೆ ಕಾಮಗಾರಿಯನ್ನೂ ಕೆಆರ್‌ಡಿಎಲ್‌ ತಡ ಮಾಡುತ್ತಿದೆ. ಆರ್‌ಎಂಎಸ್‌ಎ ಯೋಜನೆ ಅಡಿಯಲ್ಲೂ ಶಾಲಾ ಕಟ್ಟಡ ಕಾಮಗಾರಿ ಪೂರ್ಣಗೊಂಡಿಲ್ಲ. ಈ ವಿಷಯಗಳನ್ನು ಚರ್ಚಿಸಲು ಮುಂದಿನ ವಾರ ಮತ್ತೊಮ್ಮೆ ಪ್ರಗತಿ ಪರಿಶೀಲನಾ ಸಭೆ ನಡೆಸಲಾಗುವುದು’ ಎಂದು ಸಚಿವ ಕೃಷ್ಣಪ್ಪ ಹೇಳಿದರು.

ಚನ್ನಿಗರಾಯಪ್ಪ ವಿರುದ್ಧ ಕ್ರಮ

ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಚನ್ನಿಗರಾಯಪ್ಪ ವಿರುದ್ಧ ವಿವಿಧ ಶಾಸಕರು ದೂರುಗಳ ಮಳೆಗೈದರು. ‘ಅವರು ಕೆಡಿಪಿ ಸಭೆ ಸೇರಿ ಯಾವುದೇ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವುದಿಲ್ಲ. ವಾರಕ್ಕೊಮ್ಮೆ ಕಚೇರಿಗೆ ಬರುತ್ತಾರೆ. ಗುತ್ತಿಗೆ ಕಾರ್ಮಿಕರ ಅರ್ಧ ಸಂಬಳ ಪಡೆಯುತ್ತಾರೆ ಎಂಬ ಆರೋಪ ಇದೆ. ಏಳೆಂಟು ಬಾರಿ ನೋಟಿಸ್‌ ನೀಡಲಾಗಿದೆ. ಯಾವುದಕ್ಕೂ ಉತ್ತರ ನೀಡಿಲ್ಲ. ಒಮ್ಮೆ ವರ್ಗಾವಣೆಯಾದರೂ ಮತ್ತೆ ಇಲ್ಲಿಗೇ ಬಂದಿದ್ದಾರೆ’ ಎಂದು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣಪ್ಪ, ‘ಇಂತಹ ಅಧಿಕಾರಿಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

ಪ್ರತಿ ತಾಲ್ಲೂಕಿಗೆ ಎರಡು ಡಯಾಲಿಸಿಸ್‌ ಕೇಂದ್ರ

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಮೋಹನ್‌ ಮಾತನಾಡಿ, ‘ಪ್ರತಿ ತಾಲ್ಲೂಕಿಗೆ ಎರಡು ಡಯಾಲಿಸಿಸ್‌ ಕೇಂದ್ರ ಸ್ಥಾಪನೆ ಮಾಡಲು ಯೋಜನೆ ರೂಪಿಸಲಾಗಿದೆ. ಸರ್ಕಾರಿ ಮತ್ತು ಖಾಸಗಿ ಸಹಯೋಗದಲ್ಲಿ ಈ ಕಾರ್ಯ ಕೈಗೊಳ್ಳಲಾಗುವುದು. ಅದಕ್ಕಾಗಿ ತಾಲ್ಲೂಕುಗಳಲ್ಲಿ ಸ್ಥಳ ಗುರುತಿಸಲಾಗುವುದು. ಡಯಾಲಿಸಿಸ್‌ ಅವಶ್ಯವಿರುವ ರೋಗಿಗಳಿಗೆ ಶೀಘ್ರ ಆಯಾ ತಾಲ್ಲೂಕುಗಳಲ್ಲೇ ಸೇವೆ ಸಿಗಲಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT