7

ಲಕ್ಷ್ಮಯ್ಯ ಎಂಬ ಕೃಷಿ ವಿಶ್ವವಿದ್ಯಾಲಯ

Published:
Updated:
ಲಕ್ಷ್ಮಯ್ಯ ಎಂಬ ಕೃಷಿ ವಿಶ್ವವಿದ್ಯಾಲಯ

ಮಂಡ್ಯ: ಅದು ಸಸ್ಯ ಕಾಶಿ. 40ಕ್ಕೂ ಹೆಚ್ಚು ವಿವಿಧ ಸಸ್ಯ ಸಂಕುಲ, ಮರಗಿಡ ಹೊಂದಿರುವ ಆ ಭೂಮಿ ಸುಂದರ ಶಾಂತಿಯ ತೋಟ. ಹೂವು, ಹಣ್ಣು, ತರಕಾರಿ, ಹಸು, ನಾಯಿ, ಮೀನು, ಕೋಳಿಗಳ ವಾಸಸ್ಥಾನ. 5 ಎಕರೆ ಭೂಮಿಯಲ್ಲಿ ಅರಣ್ಯದ ಪರಿಸರ ಸೃಷ್ಟಿಸಿರುವ ಲಕ್ಷ್ಮಯ್ಯ ಎಂಬ ರೈತನ ಯಶೋಗಾಥೆ ಇದು. ಶಾಲೆಯ ಮೆಟ್ಟಿಲನ್ನೇ ಹತ್ತದ ಅವರ ಬದಕೇ ಒಂದು ಕೃಷಿ ವಿಶ್ವವಿದ್ಯಾಲಯ!

ತಾಲ್ಲೂಕಿನ ಮಂಗಲ ಗ್ರಾಮಕ್ಕೂ ಬೆಂಗಳೂರಿನ ಸಿ.ವಿ.ರಾಮನ್‌ ನಗರಕ್ಕೂ ಏನು ಸಂಬಂಧ? ಸಮುದ್ರದೊಳಗಿನ ಉಪ್ಪು ಬೆಟ್ಟದ ಮೇಲಿನ ನೆಲ್ಲಿ ಕಾಯಿಗೂ ಇರುವ ಸಂಬಂಧವದು. ನಾಗವಾರ ಪಾಳ್ಯವಾಗಿದ್ದ ಬೆಂಗಳೂರಿನ ಸಿ.ವಿ.ರಾಮನ್‌ನಗರದಲ್ಲಿ ರಾಷ್ಟ್ರೀಯ ರಕ್ಷಣಾ ಅಕಾಡೆಮಿ (ಎನ್‌ಡಿಎ) ಸ್ಥಾಪನೆಯಾದಾಗ ಲಕ್ಷ್ಮಯ್ಯ 10 ಎಕರೆ ಜಮೀನು ಕಳೆದುಕೊಂಡರು.

ಭೂಮಿಯ ಜೊತೆಯಲ್ಲೇ ಬದುಕು ಕಂಡು, ಉಂಡಿದ್ದ ಲಕ್ಷ್ಮಯ್ಯ ಕೃಷಿಯನ್ನಲ್ಲದೇ ಮತ್ತೇನೂ ಯೋಚಿಸಿದವರಲ್ಲ. ಸರ್ಕಾರ ಕೊಟ್ಟ ಅಲ್ಪ ಪರಿಹಾರದೊಂದಿಗೆ ಅವರು ತಾಲ್ಲೂಕಿನ ಮಂಗಲ ಗ್ರಾಮಕ್ಕೆ ಬಂದರು. 12 ವರ್ಷಗಳ ಹಿಂದೆ ಮಂಗಲದಲ್ಲಿ ಕೊಂಡ ಸಾದಾ ಜಮೀನು ಇಂದು ಸಸ್ಯ ಕಾಶಿಯಾಗಿ ರೂಪಗೊಂಡಿದೆ. 4 ಎಕರೆಗೆ 2 ವರ್ಷಗಳಿಂದ ಹನಿ ನೀರಾವರಿ ಮೂಲಕ ನೀರು ಉಣಿಸುತ್ತಿದ್ದಾರೆ. ಒಂದೇ ಕೊಳವೆ ಬಾವಿ ಇದೆ.

ಅಪರೂಪದ ಸಸ್ಯಗಳು : ಪತ್ನಿ ದೇವಮ್ಮ ಅವರೊಂದಿಗೆ ಮಂಗಲ ಗ್ರಾಮಕ್ಕೆ ಬಂದಾಗ ಜಮೀನು ಖಾಲಿ ಇತ್ತು. ಲಕ್ಷ್ಮಯ್ಯ ಒಂದೊಂದೇ ಸಸ್ಯಗಳನ್ನು ಅಲ್ಲಿ ಬೆಳೆಸಿದರು. 200 ತೆಂಗಿನ ಮರಗಳು ಅಲ್ಲಿ ತಲೆ ಎತ್ತಿದವು. ತೆಂಗಿನ ತೋಟದೊಳಗೆ ಮಿಶ್ರ ಬೇಸಾಯ ಪದ್ಧತಿಯಡಿ ವಿವಿಧ ಬೆಳೆ ಬೆಳೆದರು.

ಕಬ್ಬು, ಭತ್ತ ಬೆಳೆಯುವ ಜೊತೆಗೆ ತರಕಾರಿ, ಹಣ್ಣು, ಹೂವು ಬೆಳೆದರು. ತೋಟದಲ್ಲಿ 100 ಸೀಬೆ ಗಿಡಗಳಿವೆ. ರಾಜಮುಂಡ್ರಿಯಿಂದ ಗುಣಮಟ್ಟದ ಸೀಬೆ ಸಸಿ ತಂದು ನೆಟ್ಟಿರುವ ಅವರು ಸುಂದರ ತೋಟ ನಿರ್ಮಿಸಿದರು. ಒಂದು ಹಣ್ಣು ಅರ್ಧ ಕೆ.ಜಿಯಷ್ಟು ತೂಕವಿರುವ ಸೀಬೆ ಹಣ್ಣು ಅವು. ಗಿಡಗಳ ರಕ್ಷಣೆಗಾಗಿ ತೋಟದ ಮೇಲೆ ಹಾಗೂ ಸುತ್ತಲೂ ಬಲೆ ಬಿಟ್ಟಿದ್ದು ಪಕ್ಷಿ ಹಾಗೂ ಪ್ರಾಣಿಗಳಿಂದ ಹಣ್ಣು ರಕ್ಷಿಸಿಕೊಂಡಿದ್ದಾರೆ.

ಲಕ್ಷ್ಮಯ್ಯ ತಮ್ಮ ತೋಟದಲ್ಲಿ ಸೇಬು, ಮೋಸಂಬಿ, ದಾಳಿಂಬೆ ಗಿಡಗಳನ್ನೂ ಬೆಳೆಸಿದ್ದಾರೆ. ಸೇಬು ಬೆಳೆಯಲು ಜಿಲ್ಲೆಯಲ್ಲಿ ಸೂಕ್ತ ಹವಾಮಾನ ಇಲ್ಲದಿದ್ದರೂ ಲಕ್ಷ್ಮಯ್ಯ ತಮ್ಮ ತೋಟದಲ್ಲಿ ಸೇಬಿಗೆ ಬೇಕಾದ ಉತ್ತಮ ಹವಾಗುಣ ಸೃಷ್ಟಿಸಿದ್ದಾರೆ. ಸೀತಾಫಲ, ಸಪೋಟ, ಚಕ್ಕೋತಾ, ಹಲಸು, ಮಾವು, ಪಪ್ಪಾಯ ಮುಂತಾದ ಹಣ್ಣಿನ ಗಿಡಗಳನ್ನೂ ಅವರು ಬೆಳೆಸಿದ್ದಾರೆ. 100 ನಿಂಬೆ ಗಿಡ ಬೆಳೆಸಿರುವ ಅವರು ಉತ್ತಮ ಗುಣಮಟ್ಟದ ಸಸಿ ಹಾಕಿದ್ದಾರೆ.

ತಮ್ಮ ತೋಟದಲ್ಲಿ ಔಷಧೀಯ ಗಿಡಗಳನ್ನು ಬೆಳೆಸಿರುವ ಲಕ್ಷ್ಮಯ್ಯ ಅಪರೂಪದ ಸಸ್ಯಗಳನ್ನು ಪೋಷಣೆ ಮಾಡಿದ್ದಾರೆ. ಬೆಟ್ಟದ ನೆಲ್ಲಿಕಾಯಿ, ನುಗ್ಗೆ, ಪಲಾವ್‌ಗೆ ಬಳಸುವ ಎಲೆ, ಮೆಣಸು, ಚಕ್ಕೆ, ನೇರಳೆ ಹಾಗೂ ಹಲವು ಔಷಧೀಯ ಗಿಡಗಳು ಅವರ ತೋಟದಲ್ಲಿ ಇವೆ. ಜೊತೆಗೆ ತರಕಾರಿಯನ್ನೂ ಅವರು ಬೆಳೆಯುತ್ತಿದ್ದಾರೆ.

‘ಭತ್ತ, ಕಬ್ಬು ಹಾಗೂ ತೆಂಗಿನಿಂದ ಮಾತ್ರ ನಾನು ಆದಾಯ ನಿರೀಕ್ಷೆ ಮಾಡುತ್ತೇನೆ. ಹಣ್ಣು ಮತ್ತು ತರಕಾರಿಯಿಂದ ಯಾವುದೇ ಲಾಭ ಪಡೆದಿಲ್ಲ. ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ ಅಕ್ಕಪಕ್ಕದ ಸ್ನೇಹಿತರಿಗೆ, ಸಂಬಂಧಿಕರಿಗೆ ಹಾಗೂ ಮನೆಬಳಕೆಗೆ ಮಾತ್ರ ಬಳಸುತ್ತೇನೆ’ ಎಂದು ಲಕ್ಷ್ಮಯ್ಯ ಹೇಳಿದರು.

ತಿಪಟೂರು ತೆಂಗಿನ ಸಸಿ ಪೋಷಣೆ : ತಿಪಟೂರು ತೆಂಗಿನ ನಾಟಿ ಸಸಿಗಳನ್ನು ಪೋಷಿಸಿರುವ ಅವರು ತಮ್ಮ ತೋಟದಲ್ಲೇ ನರ್ಸರಿ ಮಾಡಿದ್ದಾರೆ. ಬೇರೆ ಜಿಲ್ಲೆಗಳಿಂದಲೂ ಬಂದು ಈ ತೆಂಗಿನ ಸಸಿಗಳನ್ನು ಕೊಳ್ಳುತ್ತಾರೆ. ಕೇವಲ ₹ 50ಕ್ಕೆ ಒಂದರಂತೆ ತೆಂಗಿನ ಸಸಿ ಮಾರಾಟ ಮಾಡುತ್ತಾರೆ. ‘ಲಕ್ಷ್ಮಯ್ಯ ಅವರು ಅತ್ಯಂತ ಗುಣಮಟ್ಟದ ತೆಂಗಿನ ಸಸಿಗಳನ್ನು ಪೋಷಣೆ ಮಾಡಿದ್ದಾರೆ.

‘ತೋಟಗಾರಿಕೆ ಇಲಾಖೆಯಲ್ಲೂ ಸಿಗದ ಗುಣಮಟ್ಟದ ತೆಂಗಿನ ಸಸಿಗಳು ಲಕ್ಷ್ಮಯ್ಯ ಅವರ ತೋಟದಲ್ಲಿ ಸಿಗುತ್ತವೆ’ ಎಂದು ಮಂಗಲ ಗ್ರಾಮಸ್ಥ, ನೆಲದನಿ ಸಾಂಸ್ಕೃತಿಕ ಸಂಘಟನೆ ಅಧ್ಯಕ್ಷ ಲಂಕೇಶ್‌ ತಿಳಿಸಿದರು.

ಶಾಲೆಯನ್ನೇ ಕಾಣದ ಲಕ್ಷ್ಮಯ್ಯ ಅವರು ‘ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆಯೇ ಮೇಲು’ನಾಣ್ಣುಡಿಯ ಸಾಕಾರ ಮೂರ್ತಿಯಂತಿದ್ದಾರೆ. ತೋಟದಲ್ಲಿ ಸಣ್ಣ ಮನೆ ನಿರ್ಮಿಸಿಕೊಂಡಿರುವ ಅವರು ಪತ್ನಿ ದೇವಮ್ಮ ಅವರೊಂದಿಗೆ ಕೃಷಿಯೊಂದಿಗೆ ಜೀವನ ಮಾಡುತ್ತಿದ್ದಾರೆ.

ಅವರಿಗೆ ಮೂವರು ಮಕ್ಕಳಿದ್ದು ಎಲ್ಲರೂ ಬೆಂಗಳೂರಿ ನಲ್ಲಿ ನೆಲೆಸಿದ್ದಾರೆ. ಬೆಂಗಳೂರು ತ್ಯಜಿಸಿ ಮಂಡ್ಯ ನೆಲದಲ್ಲಿ ಬದುಕು ಕಟ್ಟಿಕೊಂಡಿರುವ ಅವರು ಪ್ರಗತಿಪರ ರೈತ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ. ಊರ ಹೊರಗೆ ಶಾಂತಿಯ ತೋಟದಲ್ಲಿ ನೆಮ್ಮದಿಯ ಜೀವನ ಸಾಗಿಸುತ್ತಿರುವ ಲಕ್ಷ್ಮಯ್ಯ ಮಾದರಿ ರೈತ ಎನಿಸಿಕೊಂಡಿದ್ದಾರೆ. ಶನಿವಾರ ನಗರದಲ್ಲಿ ನಡೆಯುವ ರಾಷ್ಟ್ರೀಯ ರೈತ ದಿನಾಚರಣೆಯಲ್ಲಿ ಅವರನ್ನು ಸನ್ಮಾನಿಸಲಾಗುತ್ತಿದೆ.

ಮೀನು ಸಾಕಣೆ, ಕೊಳ ನಿರ್ಮಾಣ

ಮಂಡ್ಯ: ಮೀನು ಸಾಕಣೆ ಮಾಡುವ ಲಕ್ಷ್ಮಯ್ಯ ತಮ್ಮ ತೋಟದಲ್ಲಿ 50X20 ಅಳತೆಯ ಮೀನು ಕೊಳ ನಿರ್ಮಿಸಿದ್ದಾರೆ. ಕೊಳದಲ್ಲಿ ಸ್ಥಳೀಯ ಕಾಟ್ಲಾ ಜಾತಿಯ ಮೀನು ಸಾಕಣೆ ಮಾಡುತ್ತಿದ್ದಾರೆ. ಮೀನು ಕೃಷಿಗೆ ಬೇಕಾದ ಎಲ್ಲಾ ತಿಳಿವಳಿಕೆ ಹೊಂದಿರುವ ಅವರು ವೈಜ್ಞಾನಿಕವಾಗಿ ಮೀನು ಸಾಕಣೆ ಮಾಡುತ್ತಿದ್ದಾರೆ. ಹಸು, ಎಮ್ಮೆ, ಕೋಳಿ ಸಾಕಣೆಯಲ್ಲೂ ಹೆಸರು ಗಳಿಸಿರುವ ಅವರು ಜಾನುವಾರುಗಳಿಗಾಗಿ ತೋಟದಲ್ಲಿ ಒಂದು ಸಣ್ಣ ಮನೆ ನಿರ್ಮಿಸಿದ್ದಾರೆ. ಹಲವು ನಾಯಿ, ಕೋಳಿಗಳನ್ನೂ ಸಾಕಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry