7

ಗಮನ ಸೆಳೆದ ಸೈಕಲ್‌ ಜಾಥಾ

Published:
Updated:

ಬೀದರ್: ಪ್ರಥಮ ಜಿಲ್ಲಾ ಸಾವಯವ ಕೃಷಿ ಸಮ್ಮೇಳನ ಮತ್ತು ಸಿರಿಧ್ಯಾನ ಮೇಳದ ಪ್ರಯುಕ್ತ ಕೃಷಿ ಇಲಾಖೆ, ಶಾಂತೀಶ್ವರಿ ಸ್ವಯಂ ಸೇವಾ ಸಂಸ್ಥೆ, ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಜಾನಪದ ಪರಿಷತ್‌ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಶುಕ್ರವಾರ ಸೈಕಲ್ ಜಾಥಾ ನಡೆಯಿತು.

ಜಿಲ್ಲಾಧಿಕಾರಿ ಕಚೇರಿ ಅವರಣದಲ್ಲಿ ಜಿಲ್ಲಾಧಿಕಾರಿ ಡಾ. ಎಚ್‌.ಆರ್‌. ಮಹಾದೇವ ಹಸಿರು ನಿಶಾನೆ ತೋರಿಸುವ ಮೂಲಕ ಸೈಕಲ್‌ ಜಾಥಾಕ್ಕೆ ಚಾಲನೆ ನೀಡಿದರು.

ಜಾಥಾ ಹರಳಯ್ಯ ವೃತ್ತ, ರೋಟರಿ ವೃತ್ತ, ಮಡಿವಾಳ ಮಾಚಿದೇವ ವೃತ್ತ, ಕೇಂದ್ರ ಬಸ್ ನಿಲ್ದಾಣ ಮಾರ್ಗವಾಗಿ ಬರೀದ್ ಶಾಹಿ ಉದ್ಯಾನಕ್ಕೆ ತಲುಪಿ ಸಮಾರೋಪಗೊಂಡಿತು.

‘ಹೆಚ್ಚುತ್ತಿರುವ ವಾಯು ಮಾಲಿನ್ಯ ನಿಯಂತ್ರಿಸಲು ಪ್ರತಿಯೊಬ್ಬರು ಹೆಚ್ಚಾಗಿ ಸೈಕಲ್‌ ಬಳಸುವುದನ್ನು ರೂಢಿ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಮಹಾದೇವ ಹೇಳಿದರು. ‘ಅಭಿವೃದ್ಧಿ ಹೊಂದಿರುವ ಸ್ವಿಡ್ಜರ್‌ಲ್ಯಾಂಡ್‌ ದೇಶದಲ್ಲಿ ಬಹುತೇಕ ಮಂದಿ ಓಡಾಟಕ್ಕೆ ಈಗಲೂ ಸೈಕಲ್ ಬಳಸುತ್ತಾರೆ. ಕೆಲವರು ನಡೆದುಕೊಂಡು ಕೆಲಸ ಕಾರ್ಯಗಳಿಗೆ ಹೋಗುತ್ತಾರೆ. ಇದರಿಂದ ಆ ದೇಶ ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕ ಪ್ರಗತಿ ಸಾಧಿಸಿದೆ. ನಮ್ಮ ದೇಶದಲ್ಲೂ ಸೈಕಲ್‌ ಬಳಕೆಗೆ ಎಲ್ಲರೂ ಆದ್ಯತೆ ನೀಡಬೇಕು’ ಎಂದು ಹೇಳಿದರು.

‘ರೈತರು ತಮ್ಮ ಮಕ್ಕಳಿಗೆ ವಿದ್ಯೆ ಜೊತೆಗೆ ವಿನಯತೆ ಕಲಿಸಿ ಕೊಡಬೇಕು. ಅವರಲ್ಲಿ ನೈತಿಕ ಗುಣಗಳನ್ನು ಬೆಳೆಸಬೇಕು’ ಎಂದು ತಿಳಿಸಿದರು. ‘ಆಹಾರದಲ್ಲಿ ಸಿರಿಧಾನ್ಯಗಳ ಬಳಕೆ ಮಾಡಿದರೆ ಆರೋಗ್ಯ ಸದೃಢ ಆಗಿರುತ್ತದೆ. ರೈತರು ಸಾವಯವ ಪದ್ಧತಿಯಲ್ಲಿ ಬೆಳೆ ಬೆಳೆಸಲು ಪ್ರಯತ್ನಿಸಬೇಕು’ ಎಂದು ಸಲಹೆ ಮಾಡಿದರು.

ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಜಿಯಾವುಲ್ ಹಕ್ ಮಾತನಾಡಿ, ‘ಪೌಷ್ಟಿಕಾಂಶ ಉಳ್ಳ ಸಿರಿಧಾನ್ಯಗಳ ಬಳಕೆ ಬಗೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೈಕಲ್‌ ಜಾಥಾ ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಇನಾಯತ್ ಅಲಿ ಶಿಂಧೆ, ರೈತ ಮುಖಂಡರಾದ ಕೋಂಡಿಬಾರಾವ್‌ ಪಾಂಡ್ರೆ, ವಿಠ್ಠಲ ರೆಡ್ಡಿ ಆಣದೂರ, ಸಿದ್ದು ಫುಲಾರಿ, ಸಂಜೀವಕುಮಾರ ಅತಿವಾಳೆ ಉಪಸ್ಥಿತರಿದ್ದರು. ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷ ದಯಾನಂದ ಸ್ವಾಮಿ ಅಧ್ಯಕ್ಷತೆ ವಹಿಸಿದ್ದರು. ಪ್ರಧಾನ ಕಾರ್ಯದರ್ಶಿ ಶಿವಯ್ಯ ಸ್ವಾಮಿ ಸ್ವಾಗತಿಸಿದರು. ರಾಜಕುಮಾರ ಹೆಬ್ಬಾಳೆ ನಿರೂಪಿಸಿದರು. ಉಪಾಧ್ಯಕ್ಷ ವೈಜಿನಾಥ ನೌಬಾದೆ ವಂದಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry