4

ಇಂದು ಘಟಿಕೋತ್ಸವ: 11,278 ವಿದ್ಯಾರ್ಥಿಗಳಿಗೆ ಪದವಿ

Published:
Updated:
ಇಂದು ಘಟಿಕೋತ್ಸವ: 11,278 ವಿದ್ಯಾರ್ಥಿಗಳಿಗೆ ಪದವಿ

ದಾವಣಗೆರೆ: ದಾವಣಗೆರೆ ವಿಶ್ವವಿದ್ಯಾಲಯದ 5ನೇ ಘಟಿಕೋತ್ಸವ ಡಿ.23ರಂದು ನಡೆಯಲಿದ್ದು, ಸ್ನಾತಕ ಮತ್ತು ಸ್ನಾತಕೋತ್ತರ ಪದವಿಗಳು ಸೇರಿ 11,278 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಗುತ್ತದೆ.

ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ ವಿದ್ಯಾರ್ಥಿನಿಯರು, ಸ್ವರ್ಣ ಪದಕಗಳ ಗಳಿಕೆಯಲ್ಲೂ ಪಾರಮ್ಯ ಮೆರೆದಿದ್ದಾರೆ. ಚಿತ್ರದುರ್ಗದ ಸರ್ಕಾರಿ ವಿಜ್ಞಾನ ಕಾಲೇಜಿನ ಸ್ನಾತಕೋತ್ತರ ಪದವಿ ವಿದ್ಯಾರ್ಥಿ ಎನ್‌.ಹರೀಶ್‌ ಅತಿ ಹೆಚ್ಚು ಅಂಕ ಪಡೆದು ನಾಲ್ಕು ಸ್ವರ್ಣ ಪದಕ ಪಡೆದಿದ್ದಾರೆ. ಇವರಿಗೆ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಪದವಿ ಜತೆಗೆ ಸ್ವರ್ಣ ಪದಕ ಪ್ರದಾನ ಮಾಡುವರು. ನ್ಯಾಕ್‌ ಸಂಸ್ಥೆ ಮಾಜಿ ನಿರ್ದೇಶಕ ಪ್ರೊ.ಎಚ್.ಎ.ರಂಗನಾಥ್ ಘಟಿಕೋತ್ಸವ ಭಾಷಣ ಮಾಡುವರು ಎಂದು ಕುಲಪತಿ ಪ್ರೊ.ಬಿ.ಬಿ.ಕಲಿವಾಳ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಘಟಿಕೋತ್ಸವದಲ್ಲಿ 4 ಪಿಎಚ್‌.ಡಿ ವಿದ್ಯಾರ್ಥಿಗಳಿಗೆ ಡಾಕ್ಟರೇಟ್‌ ಪದವಿ ಪ್ರದಾನ ಮಾಡಲಾಗುತ್ತಿದೆ. 2016–17ನೇ ಶೈಕ್ಷಣಿಕ ವರ್ಷದಲ್ಲಿ ಸ್ನಾತಕ ಪದವಿಯಲ್ಲಿ ಶೇ 41.32 ಹಾಗೂ ಸ್ನಾತಕೋತ್ತರ ಪದವಿಯಲ್ಲಿ ಶೇ 91.29 ಫಲಿತಾಂಶ ಬಂದಿದೆ. ಸರಾಸರಿ ಶೇ 45.66 ಫಲಿತಾಂಶ ಆಗಿದೆ ಎಂದರು.

ರಾಜ್ಯಪಾಲರು ಬರಲ್ಲ: ರಾಜ್ಯಪಾಲ ವಜುಭಾಯಿ ರುಡಾಭಾಯಿ ವಾಲಾ ಗುಜರಾತ್‌ಗೆ ತೆರಳಿರುವುದರಿಂದ ಘಟಿಕೋತ್ಸವಕ್ಕೆ ಬರುತ್ತಿಲ್ಲ. ಘಟಿಕೋತ್ಸವ ಡಿ.23ರಂದು ಬೆಳಿಗ್ಗೆ 10.30ಕ್ಕೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿ ನಡೆಯಲಿದೆ. ಅಂದು ನಿಗದಿಯಾಗಿದ್ದ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ತಿಳಿಸಿದರು.

ಗೌರವ ಡಾಕ್ಟರೇಟ್‌ ಈ ಬಾರಿಯೂ ಇಲ್ಲ: ‘ವಿಶ್ವವಿದ್ಯಾಲಯ ನೀಡುವ ಗೌರವ ಡಾಕ್ಟರೇಟ್‌ ಈ ಬಾರಿಯೂ ಪ್ರದಾನ ಮಾಡುತ್ತಿಲ್ಲ. ಗಣ್ಯರ ಹೆಸರು ಪಟ್ಟಿ ಮಾಡಿ ಅನುಮತಿಗೆ ರಾಜ್ಯಪಾಲರ ಕಚೇರಿಗೆ ಶಿಫಾರಸು ಮಾಡಲಾಗಿತ್ತು. ಈ ಪ್ರಕ್ರಿಯೆಯಲ್ಲಿ ವಿಶ್ವವಿದ್ಯಾಲಯದ ಕಡೆಯಿಂದ ವಿಳಂಬವಾಗಿಲ್ಲ. ರಾಜ್ಯಪಾಲರ ಕಚೇರಿ ಹಂತದಲ್ಲಿ ನಮ್ಮ ಪಟ್ಟಿಗೆ ಒಪ್ಪಿಗೆ ಸಿಕ್ಕಿಲ್ಲ’ ಎಂದು ಕುಲಪತಿ ಸ್ಪಷ್ಟನೆ ನೀಡಿದರು.

‘ನನ್ನ ಅಧಿಕಾರಾವಧಿ ಕೆಲ ದಿನಗಳಲ್ಲಿ ಮುಕ್ತಾಯವಾಗಲಿದೆ. ಪ್ರಭಾರ ಕುಲಪತಿ ನೇಮಕಕ್ಕೆ ಶೋಧನಾ ಸಮಿತಿ ಸಭೆ ಶುಕ್ರವಾರ ನಡೆದಿದೆ. ಇದು ನನ್ನೊಬ್ಬನ ತೀರ್ಮಾನ ಅಲ್ಲ. ವಿಶ್ರಾಂತ ಕುಲಪತಿ ‍ಪ್ರೊ.ಇಂದುಮತಿ ಅವರಿಗೂ ನನಗೂ ಯಾವುದೇ ವೈಯಕ್ತಿಕ ದ್ವೇಷ ಇಲ್ಲ’ ಎಂದು ಕುಲಪತಿ ಕಲಿವಾಳ್‌ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಈ ಬಗ್ಗೆ ಸ್ಪಷ್ಟನೆ ನೀಡಿದ ಹಣಕಾಸು ಅಧಿಕಾರಿ ಅನಿತಾ, ‘ಕುಲಪತಿಗಳಿಗೆ ಮನೆ ಬಾಡಿಗೆ ಇರುವುದಿಲ್ಲ. ಆದರೆ, ಇಂದುಮತಿ ಅವರು ಹಿಂದಿನ ನಿಯಮಗಳ ಪ್ರಕಾರ ಮನೆ ಬಾಡಿಗೆ ಭತ್ಯೆ ಪಡೆದುಕೊಂಡಿದ್ದಾರೆ. ಅಲ್ಲದೇ, ಆದಾಯ ತೆರಿಗೆ ವೇಳೆ ಇದಕ್ಕಾಗಿ ವಿನಾಯ್ತಿ ಪಡೆದುಕೊಂಡಿದ್ದಾರೆ. ಹೀಗಾಗಿ ಆದಾಯ ತೆರಿಗೆ ಇಲಾಖೆ ಅವರಿಗೆ ₹ 1.56 ಲಕ್ಷ ದಂಡ ವಿಧಿಸಿತ್ತು. ಈ ಸಮಸ್ಯೆಗೆ ಹಿಂದಿನ ವಿಶ್ವವಿದ್ಯಾಲಯದ ಅಧಿಕಾರಿಗಳೂ ಕಾರಣರಾಗಿದ್ದಾರೆ’ ಎಂದರು.

ಅಂಕಪಟ್ಟಿ ವಿಳಂಬವಾಗಿಲ್ಲ: ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವುದರಲ್ಲಿ ವಿಳಂಬವಾಗಿಲ್ಲ. ಹಿಂದೆ 1ರಿಂದ 6ನೇ ಸೆಮಿಸ್ಟರ್‌ ವರೆಗಿನ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ನೀಡುವಲ್ಲಿ ವಿಳಂಬವಾಗಿರಬಹುದು. ಈಗ ಈ ಕಾರ್ಯ ಶೇ 90ರಷ್ಟು ಮುಗಿದಿದೆ. ಶೀಘ್ರದಲ್ಲೇ ಉಳಿದ ವಿದ್ಯಾರ್ಥಿಗಳಿಗೂ ಅಂಕಪಟ್ಟಿ ವಿತರಿಸಲಾಗುವುದು ಎಂದು ‍ಪರೀಕ್ಷಾಂಗ ಕುಲಸಚಿವ ಪ್ರೊ.ಕೆ.ಎನ್‌.ಗಂಗಾನಾಯ್ಕ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಆಡಳಿತ ಕುಲಸಚಿವ ಪ್ರೊ.ಎಸ್‌.ವಿ.ಹಲಸೆ, ಪ್ರಾಧ್ಯಾಪಕ ಬಿ.ಪಿ.ವೀರಭದ್ರಪ್ಪ ಉಪಸ್ಥಿತರಿದ್ದರು.

ನೇಮಕಾತಿ ಶೀಘ್ರ’

ವಿಶ್ವವಿದ್ಯಾಲಯಕ್ಕೆ 125 ಬೋಧಕ, 98 ಬೋಧಕೇತರ ವರ್ಗದ ನೇಮಕಾತಿಗೆ ಸರ್ಕಾರ ಅನುಮತಿ ನೀಡಿತ್ತು. ಕೆಲವು ಉಹಾಪೋಹಗಳಿಂದ ಸರ್ಕಾರ ಇದಕ್ಕೆ ತಾತ್ಕಲಿಕ ತಡೆ ನೀಡಿದೆ ಅಷ್ಟೇ. ಶೀಘ್ರದಲ್ಲೇ ನೇಮಕಾತಿ ಆರಂಭವಾಗಲಿದೆ ಎಂದು ಕುಲಪತಿ ವಿಶ್ವಾಸ ವ್ಯಕ್ತಪಡಿಸಿದರು.

‘ಶಾಶ್ವತ ಬೋಧಕ–ಬೋಧಕೇತರ ವರ್ಗ ಇಲ್ಲದಿರುವುದೂ ಫಲಿತಾಂಶ ಕುಸಿತಕ್ಕೆ ಕಾರಣ. ಈ ಹಿನ್ನೆಲೆಯಲ್ಲಿ ನಾನು ನೇಮಕಾತಿಗೆ ಮುಂದುವರಿದಿದ್ದು, ತಪ್ಪು ಮಾಹಿತಿಯಿಂದ ಗೊಂದಲ ಏರ್ಪಡಿತ್ತು ಅಷ್ಟೇ. ಸರ್ಕಾರ ನೇಮಕಾತಿಯನ್ನೇ ಸಂಪೂರ್ಣ ರದ್ದುಪಡಿಸುವಂತೆ ಆದೇಶಿಸಿಲ್ಲ’ ಎಂದು ಸ್ಪಷ್ಟಪಡಿಸಿದರು.

* 56 ಸ್ವರ್ಣ ಪದಕಗಳು

ಹಂಚಿಕೊಂಡವರು:

*26 ವಿದ್ಯಾರ್ಥಿನಿಯರು

* 8 ವಿದ್ಯಾರ್ಥಿಗಳು

ಸ್ನಾತಕ ಪದವಿ

ವಿದ್ಯಾರ್ಥಿನಿಯರು       5,381

ವಿದ್ಯಾರ್ಥಿಗಳು         3,936

ಒಟ್ಟು                   9,317

ಸ್ನಾತಕೋತ್ತರ ಪದವಿ

ವಿದ್ಯಾರ್ಥಿನಿಯರು          1,127

ವಿದ್ಯಾರ್ಥಿಗಳು              834

ಒಟ್ಟು                      1,961

* * 

ಹೊಸ ವಿಶ್ವವಿದ್ಯಾಲಯವಾಗಿದ್ದರಿಂದ ಮೂಲಸೌಕರ್ಯ ಕಲ್ಪಿಸುವುದೇ ನನ್ನ ಅಧಿಕಾರಾವಧಿಯಲ್ಲಿ ದೊಡ್ಡ ಸವಾಲಾಗಿತ್ತು.

ಪ್ರೊ.ಬಿ.ಬಿ.ಕಲಿವಾಳ

ಕುಲಪತಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry