7

‘7,500 ಮನೆಗಳಿಗೆ ನಿರಂತರ ನೀರು ಸೌಲಭ್ಯ’

Published:
Updated:

ಸಿಂಧನೂರು: ಏಷಿಯನ್ ಅಭಿವೃದ್ಧಿ ಬ್ಯಾಂಕ್ ಅನುದಾನದ ಅಡಿ ಕೈಗೆತ್ತಿಕೊಂಡಿರುವ ಕುಡಿಯುವ ನೀರಿನ ಯೋಜನೆಯಲ್ಲಿ ತುರ್ವಿಹಾಳ ಬಳಿ ನಿರ್ಮಿಸಲಾದ ಕೆರೆಗೆ ನೀರು ತುಂಬಿಸುವ ಕಾರ್ಯಕ್ಕೆ ಶಾಸಕ ಹಂಪನಗೌಡ ಬಾದರ್ಲಿ ಶುಕ್ರವಾರ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 259 ಎಕರೆ ಜಮೀನನ್ನು ಕೆರೆ ನಿರ್ಮಾಣಕ್ಕಾಗಿ ನಗರಸಭೆಯಿಂದ ಖರೀದಿಸಲಾಗಿದ್ದು, ಅದರಲ್ಲಿ 140 ಎಕರೆ ಜಮೀನಿನಲ್ಲಿ ₹9 ಕೋಟಿ ವೆಚ್ಚದಲ್ಲಿ ಮೊದಲ ಹಂತದ ಕೆರೆ ನಿರ್ಮಿಸಲಾಗಿದೆ. ತುಂಗಭದ್ರಾ ಎಡದಂಡೆ ನಾಲೆಗೆ ಫೆಬ್ರುವರಿ 28ರವರೆಗೆ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಸಭೆಯಲ್ಲಿ ನಿರ್ಣಯಿಸಿರುವುದರಿಂದ ನಂತರದ ಬೇಸಿಗೆ ಸೇರಿ ಆರು ತಿಂಗಳು ಸಿಂಧನೂರು ನಗರಕ್ಕೆ ಕುಡಿಯುವ ನೀರನ್ನು ಪೂರೈಕೆ ಮಾಡುವ ಉದ್ದೇಶದಿಂದ ಕೆರೆಗೆ ನೀರು ತುಂಬಿಸುವ ಕಾರ್ಯ ಆರಂಭಿಸಲಾಗಿದೆ ಎಂದು ವಿವರಿಸಿದರು.

ಎಡದಂಡೆ ಕಾಲುವೆಯಿಂದ 40 ಮೋಟಾರ್‌ಗಳ ಮೂಲಕ ಕೆರೆಗೆ ನೀರು ತುಂಬಿಸಲಾಗುತ್ತಿದೆ. ನಿರಂತರವಾಗಿ ಎಲ್ಲ ಮೋಟಾರ್‌ಗಳು ಕಾರ್ಯನಿರ್ವಹಿಸಿದರೆ 45 ದಿನಗಳಲ್ಲಿ ಕೆರೆ ಭರ್ತಿಗೊಳ್ಳಲಿದೆ. ಪ್ರಸ್ತುತ ಯೋಜನೆಯ 1, 4, 5 ಮತ್ತು 6 ವಲಯಗಳ ವ್ಯಾಪ್ತಿಯಲ್ಲಿ 22 ವಾರ್ಡ್‌ಗಳು ಬರುತ್ತಿದ್ದು, ಅವುಗಳಿಗೆ ದಿನ ಬಿಟ್ಟು ದಿನ 24 ತಾಸು ಕುಡಿಯುವ ನೀರು ಪೂರೈಸಲಾಗುವುದು ಎಂದರು.

ಇದರಿಂದ 7,500 ಮನೆಗಳಿಗೆ ನಿರಂತರ ನೀರು ಸಿಗಲಿದೆ. ಇನ್ನುಳಿದ 10 ವಾರ್ಡ್‌ಗಳಿಗೂ ನಾಲ್ಕು ತಿಂಗಳಲ್ಲಿ 24 ತಾಸು ದಿನ ಬಿಟ್ಟು ದಿನ ನೀರು ಸರಬರಾಜು ಮಾಡಲಾಗುವುದು. ನಿರಂತರ ಕುಡಿಯುವ ನೀರಿನ ಯೋಜನೆಗೆ ಜನವರಿ 27ಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ ಎಂದು ಹೇಳಿದರು.

ನಗರಸಭೆ ಅಧ್ಯಕ್ಷೆ ಮಂಜುಳಾ ಪಾಟೀಲ, ಉಪಾಧ್ಯಕ್ಷೆ ಅನ್ವರಾಬೇಗಂ, ಸ್ಥಾಯಿ ಸಮಿತಿ ಅಧ್ಯಕ್ಷ ನಬೀಸಾಬ, ಮಾಜಿ ಅಧ್ಯಕ್ಷ ವೆಂಕಟೇಶ ಬಂಡಿ ವಕೀಲ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕಾಳಿಂಗಪ್ಪ ವಕೀಲ, ಜಿಲ್ಲಾ ಪಂಚಾಯಿತಿ ಸದಸ್ಯ ಬಸವರಾಜ ಹಿರೇಗೌಡರ್, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬಸಮ್ಮ ಬಸನಗೌಡ, ಸದಸ್ಯ ಈಶಪ್ಪ ಸಾಹುಕಾರ, ವರ್ತಕರ ಸಂಘದ ಅಧ್ಯಕ್ಷ ಮಲ್ಲನಗೌಡ ಕಾನಿಹಾಳ, ನಯೋಪ್ರಾ ಸದಸ್ಯರಾದ ಕನಕಪ್ಪ ನಾಯಕ, ಮಹಿಬೂಬ ಟೇಲರ್, ಮಲ್ಲಿಕಾರ್ಜುನ ಕಲ್ಲೂರು, ನಗರಸಭೆ ಸದಸ್ಯರಾದ ಜಾಫರಅಲಿ ಜಾಗೀರದಾರ್, ಪ್ರಭುರಾಜ್, ಜಿ.ಜೆ.ದೇವಿರಮ್ಮ, ವೆಂಕೋಬಣ್ಣ ಭಂಗಿ, ಬ್ಲಾಕ್ ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ಖಾಜಿಮಲಿಕ್ ವಕೀಲ, ಮುಖಂಡರಾದ ರಾಜುಗೌಡ ಬಾದರ್ಲಿ, ಅಮರೇಶ ಪಾಟೀಲ್, ಎಲೆಕೂಡ್ಲಿಗಿ ಪಂಪನಗೌಡ, ದುರುಗಪ್ಪ ಕಟಾಲಿ, ಎಸ್.ಬಿ.ತಿಮ್ಮಯ್ಯ, ಹಟ್ಟಿ ಮಲ್ಲಿಕಾರ್ಜುನ, ಹನುಮೇಶ ದೀನಸಮುದ್ರ ಇದ್ದರು.

* * 

ಸಿಂಧನೂರಿನ ನಗರಸಭೆ ವ್ಯಾಪ್ತಿಯ 22 ವಾರ್ಡ್‌ಗಳಿಗೆ 24 ತಾಸು ದಿನ ಬಿಟ್ಟು ದಿನ ಕುಡಿಯುವ ನೀರು ಸರಬರಾಜು ಮಾಡಲಾಗುವುದು.

ಮಂಜುಳಾ ಪಾಟೀಲ

ಅಧ್ಯಕ್ಷೆ, ನಗರಸಭೆ ಸಿಂಧನೂರು

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry