5

ಯಕ್ಷಗಾನವನ್ನೂ ಕನ್ನಡ ಸಾಹಿತ್ಯ ಒಳಗೊಳ್ಳಲಿ

Published:
Updated:

ದಾವಣಗೆರೆ: ಲಕ್ಷಾಂತರ ಯಕ್ಷ ಪ್ರಸಂಗಗಳು ರಚನೆಯಾಗಿವೆ, ಸಾವಿರಾರು ಯಕ್ಷ ಸಾಹಿತಿಗಳಿದ್ದಾರೆ. ಇಷ್ಟು ಸಮೃದ್ಧ ಸಾಹಿತ್ಯವನ್ನು ಕನ್ನಡ ಸಾಹಿತ್ಯ ಪ್ರಕಾರಗಳಲ್ಲಿ ಗುರುತಿಸುವ ಕೆಲಸ ನಡೆಯಬೇಕು ಎಂದು ಶಿವಮೊಗ್ಗದ ಸಹ್ಯಾದ್ರಿ ಕಲಾ ಕಾಲೇಜಿನ ಉಪನ್ಯಾಸಕಿ ಡಾ.ಶುಭಾ ಮರವಂತೆ ಹೇಳಿದರು.

ನಗರದ ಕುವೆಂಪು ಕನ್ನಡ ಭವನದಲ್ಲಿ ಯಕ್ಷರಂಗ ಆಯೋಜಿಸಿರುವ ಎರಡು ದಿನಗಳ ‘ದಾವಣಗೆರೆ ಯಕ್ಷದಿಬ್ಬಣ’ ಸಮಾರಂಭವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಕರಾವಳಿ ಕರ್ನಾಟಕದ ಸಂಸ್ಕೃತಿ ಬಿಂಬಿಸುವ ಯಕ್ಷಗಾನದಲ್ಲಿ ವಿಶಿಷ್ಟ ಸೊಗಡಿದೆ. ಯಾವ ಪ್ರಾದೇಶಿಕ ಭಾಷೆಯನ್ನಾದರೂ ಯಕ್ಷಗಾನಕ್ಕೆ ಒಗ್ಗಿಸಿಕೊಳ್ಳಬಹುದು. ಯಕ್ಷಗಾನದಲ್ಲಿ ಹುಡುಕಿದರೂ ಒಂದೂ ಆಂಗ್ಲ ಪದ ಸಿಗಲಾರದು. ಯಕ್ಷಗಾನದ್ದು ಪರಿಪೂರ್ಣ, ವಿಶಿಷ್ಟ ಲಾಲಿತ್ಯ ಹೊಂದಿರುವ ಸಾಹಿತ್ಯ ಎಂದರು.

ಯಕ್ಷಗಾನವನ್ನು ದೇಶ–ವಿದೇಶಗಳಲ್ಲಿ ಹರಡಲು ಅದೆಷ್ಟೋ ಮಂದಿ ಜೀವನವನ್ನೇ ಮುಡುಪಾಗಿಟ್ಟಿದ್ದಾರೆ. ಹಲವು ಕಲಾವಿದರು ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ರಂಗದಲ್ಲೇ ಪ್ರಾಣ ಬಿಟ್ಟವರೂ ಇದ್ದಾರೆ. ಇತ್ತೀಚೆಗೆ ಮಹಿಳೆಯರೂ ಯಕ್ಷಗಾನಕ್ಕೆ ತಮ್ಮನ್ನು ಅರ್ಪಿಸಿಕೊಳ್ಳುತ್ತಿದ್ದಾರೆ. ಇನ್ನಷ್ಟು ಸ್ತ್ರೀಯರು ಯಕ್ಷಗಾನಕ್ಕೆ ಬರಬೇಕು ಎಂದು ಹೇಳಿದರು. ಯಕ್ಷರಂಗ ಯಕ್ಷಗಾನ ಸಂಸ್ಥೆಯ ಅಧ್ಯಕ್ಷ ಮಲ್ಯಾಡಿ ಪ್ರಭಾಕರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.

ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಡಾ.ಎಚ್‌.ಎಸ್‌.ಮಂಜುನಾಥ ಕುರ್ಕಿ, ಪತ್ರಕರ್ತ ತಾರಾನಾಥ್‌ ವರ್ಕಾಡಿ, ದಾವಣಗೆರೆ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಮೋತಿ ಪರಮೇಶ್ವರ್, ಕಲಾಕುಂಚ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೆ.ಎಚ್.ಮಂಜುನಾಥ್ ಇದ್ದರು. ಯಕ್ಷರಂಗ ಸಂಸ್ಥಾಪಕ ಸಾಲಿಗ್ರಾಮ ಗಣೇಶ್‌ ಶೆಣೈ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಬೇಳೂರು ಸಂತೋಷ್‌ಕುಮಾರ್‌ಶೆಟ್ಟಿ ಸ್ವಾಗತಿಸಿದರು. ರೇಖಾ ಓಂಕಾರಪ್ಪ ಪ್ರಾರ್ಥಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry