6

ಹುಣಸಿನಕೆರೆ ದಡದಲ್ಲಿ ನೃತ್ಯ, ಚಿತ್ರಕಲೆ ಸಂದೇಶ

Published:
Updated:
ಹುಣಸಿನಕೆರೆ ದಡದಲ್ಲಿ ನೃತ್ಯ, ಚಿತ್ರಕಲೆ ಸಂದೇಶ

ಹಾಸನ: ಮಂಜು ಮುಸುಕಿದ ಆಕಾಶ, ಮೈ ನಡುಗಿಸುವ ಚಳಿ, ಸೂರ್ಯನ ಕಿರಣಗಳು ಭೂಮಿಯನ್ನು ತಾಗುವ ಮೊದಲೇ ಕೆರೆಯಂಗಳದಲ್ಲಿ ಜಮಾಯಿಸಿದ್ದ ಪುಟ್ಟ ಮಕ್ಕಳು ತಮ್ಮ ಪೋಷಕರೊಂದಿಗೆ ಧ್ಯಾನದಲ್ಲಿ ಮಗ್ನರಾಗಿದ್ದರು. ವಿದ್ಯಾರ್ಥಿಗಳು ಪರಿಸರ ಸಂದೇಶ ಸಾರುವ ಚಿತ್ರಗಳನ್ನು ಬಿಡಿಸುವುದರಲ್ಲಿ ನಿರತರಾಗಿದ್ದರು.

ಹಸಿರುಭೂಮಿ ಪ್ರತಿಷ್ಠಾನ, ನಗರಸಭೆ, ಚಿತ್ಕಲಾ ಫೌಂಡೇಷನ್, ಹಿರಿಯ ನಾಗರಿಕರ ವೇದಿಕೆ, ಪ್ರೇರಣಾ ವಿಕಾಸ ಟ್ರಸ್ಟ್ ವತಿಯಿಂದ ಹುಣಸಿನಕೆರೆ ಅಂಗಳದಲ್ಲಿ ಭಾನುವಾರ ಬೆಳಿಗ್ಗೆ 7 ರಿಂದ 10ರ ವರೆಗೆ ನಡೆದ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯ.

ನಗರ ಸಮೀಪದ ಹುಣಸಿನ ಕೆರೆ ದಡದ ಬಂಡೆ ಮೇಲೆ ಮಕ್ಕಳು ಸಂಗೀತ, ಕೊಳಲು ವಾದನ, ಭರತನಾಟ್ಯ ಹಾಗೂ ಚಿತ್ರಕಲೆ ಪ್ರದರ್ಶಿಸಿ ಕೆರೆ ಸಂರಕ್ಷಣೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು. ನಾಟ್ಯಕಲಾ ನಿವಾಸದ ಉನ್ನತ್ ತಂಡದವರ ನೃತ್ಯಗೀತೆಗಳು, ಧ್ಯಾನ ಹಾಗೂ ಚಿತ್ಕಲಾ ಚಿತ್ರಶಾಲೆಯ ವಿದ್ಯಾರ್ಥಿಗಳು ರಚಿಸಿದ ಪರಿಸರ ಸಂದೇಶ ಸಾರುವ ಚಿತ್ರಗಳು, ಗಾಯಕ ರೋಹನ್ ಅಯ್ಯರ್ ಅವರ ಸುಮಧುರ ಗಾಯನ, 20 ಸಾವಿರ ಕಿ.ಮೀ. ದೂರದಿಂದ ಬಂದಿರುವ ಪಕ್ಷಿಗಳ ಪರಿಚಯ ಮಾಡಿಕೊಡುತ್ತಿದ್ದ ಬಿ.ಎಸ್.ದೇಸಾಯಿ ಅವರ ಭಾಷಣ ಕಾಡಿನ ವಾತಾವರಣ ಸೃಷ್ಟಿ ಮಾಡಿತ್ತು.

ಕೆರೆಯಂಗಳದಿಂದ ಜಾಗೃತಿ ಜಾಥಾ ಆರಂಭಿಸಲಾಯಿತು. ಕೆರೆ ಸಂರಕ್ಷಿಸಿ ಎಂಬ ಘೋಷಣೆಯೊಂದಿಗೆ ನಗರ ಪ್ರವೇಶಿಸಿದ ಪರಿಸರ ಪ್ರೇಮಿಗಳು, ಮನೆ ಮನೆಗೆ ತೆರಳಿ ಕೆರೆಗೆ ತ್ಯಾಜ್ಯ ಎಸೆಯಬೇಡಿ ಎಂದು ಮನವಿ ಮಾಡಿದರು. ಜತೆಗೆ ಮನೆ ಬಾಗಿಲುಗಳಿಗೆ ಬಿತ್ತಿಪತ್ರ ಅಂಟಿಸಿದರು.

ಮೈಸೂರಿನ ಕುಕ್ಕರಹಳ್ಳಿ ಕೆರೆ ಮಾದರಿಯಲ್ಲಿ ಹುಣಸಿನಕೆರೆ ಅಭಿವೃದ್ಧಿಪಡಿಸಲು ಪಣ ತೊಟ್ಟಿದ್ದು, ಇದಕ್ಕೆ ಸಾರ್ವಜನಿಕರ ಸಹಕಾರ ಬೇಕು. ಪ್ರತಿ ಭಾನುವಾರ ಹುಣಸಿನಕೆರೆ ಸಂರಕ್ಷಣೆಗಾಗಿ ವಿವಿಧ ಕಾರ್ಯಕ್ರಮ ಆಯೋಜಿಸಲು ನಿರ್ಧರಿಸಲಾಗಿದೆ. ನಗರಸಭೆ ನೆರವಿನಿಂದ ಈ ಕಾರ್ಯಕ್ರಮ ಇನ್ನಷ್ಟು ಅಚ್ಚುಕಟ್ಟಾಗಿ ಮಾಡಬೇಕಿದೆ ಎಂದು ಉಪವಿಭಾಗಾಧಿಕಾರಿ ಎಚ್.ಎಲ್.ನಾಗರಾಜ್ ಹೇಳಿದರು.

ನಗರ ಸುತ್ತಲೂ ಐದು ಕೆರೆಗಳಿದ್ದು, ಎಲ್ಲವೂ ಅವಸಾನದ ಅಂಚಿನಲ್ಲಿವೆ. ಸತ್ಯಮಂಗಲ, ಕೋರವಂಗಲ, ಬೀರನಹಳ್ಳಿ, ಚನ್ನಪಟ್ಟಣ ಹಾಗೂ ಹುಣಸಿನಕೆರೆಗಳು ಮಾಯವಾಗಿವೆ. ಕೆರೆ ಸುತ್ತಲಿನ ನಿವಾಸಿಗಳು ತ್ಯಾಜ್ಯ ಎಸೆಯುತ್ತಿರುವುದರಿಂದ ಜಲಚರ ಜೀವಿಗಳು ಸಾವನ್ನಪ್ಪುತ್ತಿವೆ. ಸಾರ್ವಜನಿಕರೆಲ್ಲರೂ ಕೆರೆ ಅಭಿವೃದ್ಧಿಗೆ ಪಣ ತೊಡಬೇಕು ಎಂದು ಕರೆ ನೀಡಿದರು.

ಹಸಿರು ಭೂಮಿ ಪ್ರತಿಷ್ಠಾನದ ಅಧ್ಯಕ್ಷ ಆರ್.ಪಿ.ವೆಂಕಟೇಶಮೂರ್ತಿ ಮಾತನಾಡಿ, ‘ಹುಣಸಿನಕೆರೆ ಅಭಿವೃದ್ಧಿಗೆ ಸರ್ಕಾರ ಅನುದಾನ ನೀಡುವವರೆಗೆ ಕಾಯುವುದು ಬೇಡ. ಸಾರ್ವಜನಿಕರಿಂದ ನಿಧಿ ಸಂಗ್ರಹಿಸಿ ಕೆಲಸ ಮಾಡೋಣ. ಇಂತಹ ಕಾರ್ಯಗಳಿಗೆ ನೆರವಿಗೆ ದಾನಿಗಳು ತಾವಾಗಿಯೇ ಮುಂದೆ ಬರಬೇಕು’ ಎಂದು ಹೇಳಿದರು.

ನಗರಸಭೆ ಅಧ್ಯಕ್ಷ ಎಚ್.ಎಸ್.ಅನಿಲ್ ಕುಮಾರ್, ಸದಸ್ಯ ಗೋಪಾಲ್, ಸಾಹಿತಿ ರೂಪ ಹಾಸನ, ಲೇಖಕಿ ಕೆ.ಟಿ.ಜಯಶ್ರೀ, ಅಹಮದ್ ಹಗರೆ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ, ಚಿತ್ರಕಲಾವಿದ ಬಿ.ಎಸ್. ದೇಸಾಯಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ವನಜಾಕ್ಷಿ, ನಾಟ್ಯ ಕಲಾವಿದ ಉನ್ನತ್, ಪಾಷ, ಪುಟ್ಟರಾಜು, ಸಾಹಿತಿ ಗೊರೂರು ಅನಂತರಾಜು, ಭಾರತ ಸೇವಾದಲ ಜಿಲ್ಲಾ ಸಂಚಾಲಕಿ ವಿ.ಎಸ್. ರಾಣಿ, ಸಾಮಾಜಿಕ ಕಾರ್ಯಕರ್ತ ಕೆ.ಪಿ. ಶಿವಕುಮಾರ್‌ ಈ ಸಂದರ್ಭದಲ್ಲಿ ಇದ್ದರು.

* * 

ಕೆರೆಯಲ್ಲಿ ಅಪಾರ ಪ್ರಮಾಣದ ಹೂಳು ತುಂಬಿರುವುದರಿಂದ ನೀರು ಸಂಗ್ರಹಕ್ಕೆ ತೊಡಕಾಗಿದೆ

ಎಚ್‌.ಎಲ್‌.ನಾಗರಾಜ್, ಉಪವಿಭಾಗಾಧಿಕಾರಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry