7

ಆನೆ ದಾಳಿ: ಬಾಳೆ,ರಾಗಿ ನಾಶ

Published:
Updated:

ರಾಮನಗರ: ಕೈಲಾಂಚ ಹೋಬಳಿಯ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಮುಂದುವರಿದಿದೆ. ಭಾನುವಾರ ರಾತ್ರಿ ಇಲ್ಲಿನ ನಂಜಾಪುರ ಹಾಗೂ ಹೊಸ ದೊಡ್ಡಿ ಗ್ರಾಮಗಳ ಹೊಲಗಳಿಗೆ ನುಗ್ಗಿದ ಆನೆಗಳ ಹಿಂಡು ಬಾಳೆ, ರಾಗಿ, ಹಲಸು ಹಾಗೂ ಹುರುಳಿ ಫಸಲನ್ನು ನಾಶ ಮಾಡಿವೆ.

ನಂಜಾಪುರ ಗ್ರಾಮದ ಯೋಗೇಶ್ ಎಂಬುವರ ಸುಮಾರು ಎರಡು ಎಕರೆ ಪ್ರದೇಶದಲ್ಲಿ ಕಟಾವಿಗೆ ಬಂದಿದ್ದ ಬಾಳೆಯ ತೋಟ ಆನೆಗಳ ದಾಳಿ ಯಿಂದಾಗಿ ನಾಶವಾಗಿದೆ. ಅದೇ ಗ್ರಾಮದ ಸಿದ್ದಲಿಂಗಮ್ಮ, ಚಿಕ್ಕೋಳಮ್ಮ, ಕರಿಯಪ್ಪ, ಪರ್ಲೇಗೌಡ ಎಂಬುವರ ರಾಗಿ ಮೆದೆಯನ್ನೂ ಗಜಪಡೆ ಹಾಳು ಮಾಡಿದೆ.

ಹೊಸದೊಡ್ಡಿ ಗ್ರಾಮದ ಪುಟ್ಟಲಿಂಗಯ್ಯ, ಶಿವಣ್ಣ, ಸಾವಿತ್ರಮ್ಮ, ಶಿವಲಿಂಗಯ್ಯ, ಕೆಂಪಯ್ಯ ಎಂಬುವರ ರಾಗಿ ಮೆದೆ, ಸತೀಶ್ ಎಂಬುವರ ತೆಂಗಿನ ಎರಡು ಮರಗಳು, ಕಾಡೇಗೌಡ ಎಂ ಬುವರ ಹುರುಳಿ ಒಡ್ಡು, ಅಕ್ಕಿಲಿಂಗಯ್ಯ ಎಂಬುವರಿಗೆ ಸೇರಿದ ಹಲಸಿನ ಮರದ ಫಸಲು ಆನೆಗಳ ದಾಳಿಯಿಂದಾಗಿ ಹಾನಿಗೀಡಾಗಿದೆ.

ಕಾವೇರಿ ವನ್ಯಜೀವಿ ಧಾಮದಿಂದ ಬಂದಿರುವ ಮೂರು ಆನೆಗಳ ಹಿಂಡು ಕಬ್ಬಾಳು ಅರಣ್ಯ ಸೇರಿ ಅಲ್ಲಿಂದ ಚನ್ನಪಟ್ಟಣ ತಾಲೂಕಿನ ವಿರೂಪಾಕ್ಷಿಪುರದ ನರೀಗುಡ್ಡೆ ಅರಣ್ಯ ಪ್ರದೇಶದ ಮುಖಾಂತರ ತೆಂಗಿನಕಲ್ಲು ಅರಣ್ಯ ಪ್ರವೇಶಿಸಿ ಈ ಗ್ರಾಮಗಳಿಗೆ ಲಗ್ಗೆ ಇಟ್ಟಿವೆ ಎಂದು

ಹೇಳಲಾಗಿದೆ.

ಅರಣ್ಯ ಇಲಾಖೆ ವಿರುದ್ಧ ಆಕ್ರೋಶ: ಆನೆ ದಾಳಿಯಿಂದ ಬೆಳೆ ನಷ್ಟವಾಗಿರುವ ಮಾಹಿತಿ ನೀಡಿದ್ದಾಗ್ಯೂ ಅರಣ್ಯ ಇಲಾಖೆಯ ಯಾವ ಅಧಿಕಾರಿ, ಸಿಬ್ಬಂದಿಯೂ ಈವರೆಗೆ ಭೇಟಿ ನೀಡಿಲ್ಲ ಎಂದು ಸ್ಥಳೀಯರು ಸೋಮವಾರ ಅಸಮಾಧಾನ ವ್ಯಕ್ತಪಡಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ ಖಂಡಿಸಿ ಗ್ರಾಮಸ್ಥರು ಬನ್ನಿಕುಪ್ಪೆ- ಕಾಡನಕುಪ್ಪೆ ರಸ್ತೆಯಲ್ಲಿ ಬಸ್‌ ಸಂಚಾರ ತಡೆಗೆ ಮುಂದಾದರು. ಬಳಿಕ ಗ್ರಾಮದ ಮುಖಂಡರು ಸಂಧಾನ ನಡೆಸಿ ಸಮಾಧಾನ ಪಡಿಸಿದರು.

ಭಾನುವಾರ ರಾತ್ರಿ ದಾಳಿ ನಡೆಸಿ ರೈತರ ಫಸಲನ್ನು ನಾಶಪಡಿಸಿ ತೆಂಗಿನಕಲ್ಲು ಅರಣ್ಯ ಸೇರಿರುವ ಆನೆಗಳು ಬಾಳೆದಿಂಡು ಮತ್ತು ರಾಗಿ ತೆನೆ ಆಸೆಗಾಗಿ ಮತ್ತೆ ಈ ಭಾಗಕ್ಕೆ ಮರಳುವ ಸಾಧ್ಯತೆ ಹೆಚ್ಚಿದೆ. ಆನೆಗಳ ಹಾವಳಿ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಈ ಭಾಗದಲ್ಲಿ ಆನೆಗಳ ಹಾವಳಿ ಸಾಮಾನ್ಯ ಎಂಬಂತೆ ಆಗಿದೆ. ಅವುಗಳು ಬಾಳೆ, ರಾಗಿ ಸಹಿತ ಎಲ್ಲವನ್ನೂ ತಿಂದು ನಾಶಪಡಿಸಿ ಹೋಗಿವೆ. ಅಧಿಕಾರಿಗಳು ಕೂಡಲೇ ಸ್ಥಳಕ್ಕೆ ಧಾವಿಸಿ ಮಹಜರು ನಡೆಸಬೇಕು. ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ನೀಡಬೇಕು ಎಂದು ಸ್ಥಳೀಯರಾದ ಶಿವಲಿಂಗಯ್ಯ, ಮಲ್ಲೇಶ್, ಹೇಮಂತ್‌, ಸಿದ್ದಪ್ಪ, ಕಾಡೇಗೌಡ, ಸತೀಶ್‌ ಒತ್ತಾಯಿಸಿದರು.

* * 

ಈಚಿನ ದಿನಗಳಲ್ಲಿ ಈ ಭಾಗದಲ್ಲಿ ಆನೆ ದಾಳಿ ಸಾಮಾನ್ಯವಾಗಿದೆ. ನಷ್ಟಕ್ಕೆ ಒಳಗಾದ ರೈತರ ನೆರವಿಗೆ ಅರಣ್ಯ ಇಲಾಖೆಯ ಸಿಬ್ಬಂದಿ ಧಾವಿಸುತ್ತಿಲ್ಲ

ಯೋಗೇಶ್‌, ರೈತ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry