ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ವಿಂಟಲ್‌ಗೆ ₹6 ಸಾವಿರದಂತೆ ತೊಗರಿ ಖರೀದಿ

Last Updated 26 ಡಿಸೆಂಬರ್ 2017, 6:36 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಡಿ. 27ರಿಂದ ಆಯಾ ತಾಲ್ಲೂಕು ಎಪಿಎಂಸಿ ಮಾರುಕಟ್ಟೆ ಪ್ರಾಂಗಣದಲ್ಲಿ ತೊಗರಿ ಖರೀದಿ ಕೇಂದ್ರವನ್ನು ಸ್ಥಾಪಿಸಲಾಗಿದ್ದು, ಪ್ರತಿ ಕ್ವಿಂಟಲ್‌ಗೆ ₹ 6 ಸಾವಿರದಂತೆ ಖರೀದಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಕೆ.ಜಿ.ಶಾಂತಾರಾಮ್ ಹೇಳಿದರು. ಇಲ್ಲಿನ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಜರುಗಿದ ಜಿಲ್ಲಾ ಟಾಸ್ಕ್‌ಪೋರ್ಸ್‌ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸರ್ಕಾರದ ಆದೇಶದನ್ವಯ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್ಎಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಪ್ರತಿಯೊಬ್ಬ ರೈತರಿಂದ ಗರಿಷ್ಠ 20 ಕ್ವಿಂಟಲ್‌ಗಳಿಗೆ ಮೀರದಂತೆ ಪ್ರತಿ ಕ್ವಿಂಟಲ್‌ಗೆ ₹ 5,450 ಹಾಗೂ ರಾಜ್ಯ ಸರ್ಕಾರದ ಪ್ರೋತ್ಸಾಹಧನ ₹ 550 ಸೇರಿ ಒಟ್ಟು ₹ 6 ಸಾವಿರದಂತೆ ಖರೀದಿಸಲಾಗುತ್ತಿದೆ ಎಂದರು.

ಸರ್ಕಾರದ ವತಿಯಿಂದ ಮಾರ್ಕಫೆಡ್ ಸಂಸ್ಥೆಯನ್ನು ರಾಜ್ಯ ಮಟ್ಟದ ಖರೀದಿ ಏಜೆನ್ಸಿಯನ್ನಾಗಿ ನೇಮಕ ಮಾಡಲಾಗಿದೆ. ಡಿ. 27ರಿಂದ ತೊಗರಿ ಖರೀದಿ ಕೇಂದ್ರವನ್ನು ಪ್ರಾರಂಭಿಸಲು ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳದ ಜಿಲ್ಲಾ ಶಾಖಾ ವ್ಯವಸ್ಥಾಪಕರಿಗೆ ಸೂಚಿಸಿದರು.

ಹಿಂದಿನ ಸಾಲಿನ ಮುಂಗಾರಿನಲ್ಲಿ 37,324 ಹೆಕ್ಟರ್ ಪ್ರದೇಶದಲ್ಲಿ ತೊಗರಿ ಬಿತ್ತನೆಯಾಗಿ 2,20,000 ಕ್ವಿಂಟಲ್‌ಗಳಷ್ಟು ಇಳುವರಿ ಅಂದಾಜಿಸಲಾಗಿತ್ತು. ಆದರೆ ಖರೀದಿ ಕೇಂದ್ರದಲ್ಲಿ 1,55,880 ಕ್ವಿಂಟಲ್‌ಗಳಷ್ಟು ರೈತರಿಂದ ತೊಗರಿ ಖರೀದಿಸಲಾಗಿದೆ. ಪ್ರಸ್ತುತ ಜಿಲ್ಲೆಯಲ್ಲಿ 22,692 ಹೆಕ್ಟೇರ್‌ ತೊಗರಿ ಬಿತ್ತನೆಯಾಗಿ 1,61,052 ಕ್ವಿಂಟಲ್ ತೊಗರಿ ಇಳುವರಿ ನಿರೀಕ್ಷಿಸಲಾಗಿದೆ ಎಂದು ಜಿಲ್ಲಾ ಕೃಷಿ ಜಂಟಿ ನಿರ್ದೇಶಕ ಡಾ.ರಮೇಶಕುಮಾರ ಸಭೆಗೆ ತಿಳಿಸಿದರು.

ತಾಲ್ಲೂಕಿನ ಆಯಾ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಖರೀದಿ ಕೇಂದ್ರ ಪ್ರಾರಂಭಿಸಲು ಸ್ಥಳಾವಕಾಶ, ಮೂಲಸೌಲಭ್ಯಗಳಾದ ಕುಡಿಯುವ ನೀರು, ಬೆಳಕಿನ ವ್ಯವಸ್ಥೆ, ತೂಕದ ಯಂತ್ರ, ಜರಡಿ ಹಾಗೂ ಒಬ್ಬ ಸಿಬ್ಬಂದಿಯನ್ನು ನೇಮಿಸುವುದರ ಜೊತೆಗೆ ಪ್ರಚಾರಕ್ಕಾಗಿ ಬ್ಯಾನರ್‌ಗಳನ್ನು ಬರೆಯಿಸುವಂತೆ ಸೂಚಿಸಲಾಯಿತು.

ಎಫ್ಎಕ್ಯೂ ಗುಣಮಟ್ಟದ ತೊಗರಿ ಉತ್ಪನ್ನವನ್ನು ಪರೀಕ್ಷಿಸುವ ಸಲುವಾಗಿ ಪ್ರತಿ ಖರೀದಿ ಕೇಂದ್ರಕ್ಕೆ ಅನುಭವಿ ಗ್ರೇಡರ್‌ ನೇಮಿಸಬೇಕು. ಖರೀದಿಸಿದ ತೊಗರಿಯನ್ನು ಆಯಾ ತಾಲ್ಲೂಕಿನ ರಾಜ್ಯ ಉಗ್ರಾಣ ನಿಗಮಗಳಲ್ಲಿ ನಿಯಮಾನುಸಾರ ಸಂಗ್ರಹಿಸಿಡಬೇಕು. 7 ದಿನಗಳೊಳಗಾಗಿ ಆರ್.ಟಿ.ಜಿ.ಎಸ್ ಮೂಲಕ ರೈತರ ಬ್ಯಾಂಕ್ ಖಾತೆಗೆ ಹಣ ಜಮಾ ಮಾಡಲು ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಆಹಾರ ಇಲಾಖೆಯ ಉಪನಿರ್ದೇಶಕ ಶ್ರೀಶೈಲ ಕಂಕಣವಾಡಿ, ಸಹಕಾರ ಇಲಾಖೆಯ ಉಪನಿಬಂಧಕ ಕಳಸಣ್ಣವರ, ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕ ಎಸ್.ಎನ್.ಪತ್ತಾರ, ಜಿಲ್ಲಾ ಮಾರಾಟ ಮಹಾ ಮಂಡಳದ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT