7

ದಾರ ತಪ್ಪಿಸುವ ವಾದ

Published:
Updated:

ಅಂಕಣಕಾರ ಶೇಖರ್ ಗುಪ್ತ ಅವರು ‘ಭ್ರಷ್ಟಾಚಾರದ ಜಾತಿಯ ಮುಖವನ್ನು ಅನಾವರಣ ಮಾಡುತ್ತಿರುವುದಕ್ಕೆ ಓದುಗರು ನನ್ನ ಬಗ್ಗೆ ಕೋಪಾವಿಷ್ಟರಾಗುವ ಮುನ್ನ...’ ಮತ್ತು ‘ಇಂತಹ ಕಟು ವಾಸ್ತವ ಸಂಗತಿಯನ್ನು ನೆನಪಿಸಿ ನಿಮ್ಮ ಕ್ರಿಸ್‍ಮಸ್ ವಾರಾಂತ್ಯ ಹಾಳುಮಾಡಿದ್ದಕ್ಕೆ ಕ್ಷಮೆ ಇರಲಿ’ ಎಂದೆಲ್ಲ (ಪ್ರ.ವಾ., ಡಿ. 24) ಕ್ಷಮಾಪಣ ಸ್ತೋತ್ರ ಪಠಿಸುತ್ತ ಮುಂಚೆಯೇ ನಿರೀಕ್ಷಣಾ ಜಾಮೀನು ಪಡೆವ ಹುನ್ನಾರ ನಡೆಸಿದ್ದರೂ ಅವರ ಬರಹ ಪೂರ್ವಗ್ರಹ ಪೀಡಿತವೆನ್ನದೆ ವಿಧಿಯಿಲ್ಲ. ಅವರ ನಿಜವಾದ ಗುರಿ ಯಾರೆಂಬುದು ಸ್ವಲ್ಪಮಟ್ಟಿಗೆ ನಿಗೂಢವಾಗಿಯೇ ಇದೆ.

ಇಲ್ಲಿ ಭ್ರಷ್ಟಾಚಾರದಲ್ಲಿ ನಿಜವಾಗಿಯೂ ಭಾಗಿಯಾಗುವುದು ಬೇರೆ, ಭಾಗಿಯಾಗಿದ್ದಾರೆಂದು ಬಿಂಬಿಸುವುದು ಬೇರೆ. ಸಿಲುಕಿಕೊಳ್ಳುವುದು ಬೇರೆ, ಸಿಲುಕಿಸುವುದು ಬೇರೆ. ಆದರೆ ಶೇಖರ್ ಗುಪ್ತ ಅವರು ಈ ಸೂಕ್ಷ್ಮಗಳಿಗೆ ಹೋಗದೆ ‘ಜಾತೀಯತೆಗೂ ಭ್ರಷ್ಟತೆಗೂ ನಂಟು ಇದೆಯೇ?’ ಎಂದು ಶೀರ್ಷಿಕೆ ಇಟ್ಟುಕೊಂಡು ಅವರು ಟಾರ್ಗೆಟ್ ಮಾಡುತ್ತಿರುವುದು ಎಲ್ಲ ಕಾಲಘಟ್ಟದ ಸರ್ಕಾರ, ರಾಜಕೀಯ ಪಕ್ಷಗಳು, ನ್ಯಾಯಾಂಗದಲ್ಲಿರುವ ಯಾವುದೋ ಒಂದು ವರ್ಗವನ್ನು.

ನಿಜವಾಗಿಯೂ ಭ್ರಷ್ಟಾಚಾರಕ್ಕೂ ಜಾತಿಗೂ ನಂಟೇನೂ ಇರುವುದಿಲ್ಲ ಎಂದು ಎಲ್ಲರಿಗೂ ತಿಳಿದೇ ಇದೆ. ಜಾತಿ ಶ್ರೇಣಿಯಲ್ಲಿ ತುತ್ತ ತುದಿಯಲ್ಲಿರುವವರಿಂದ ಹಿಡಿದು ತೀರ ಕೆಳಗಿನವರವರೆಗೆ ಇದರ ವ್ಯಾಪ್ತಿ ಇದೆ. ಭ್ರಷ್ಟರಾಗಿದ್ದೂ ಸಿಕ್ಕಿಕೊಳ್ಳದೆ ಇರುವ ಚಾತುರ್ಯ ಮೇಲುವರ್ಗದವರಲ್ಲಿ ಉಳಿದವರಿಗಿಂತ ಸ್ವಲ್ಪ ಹೆಚ್ಚಿರಬಹುದು. ಭ್ರಷ್ಟರಾಗಿರದಿದ್ದರೂ ಹಗರಣದಲ್ಲಿ ಕೆಳ ಜಾತಿಯವರನ್ನೇ ಟಾರ್ಗೆಟ್ ಮಾಡಲಾಗುತ್ತಿದೆ ಎಂಬುದು ಗುಪ್ತ ಅವರ ಆರೋಪವಾಗಿರುವಂತಿದೆ. ಅದು ನಿಜವಿದ್ದರೆ ಅಂಥವರು ಯಾವುದೋ ಒಂದು ರಾಜಕೀಯ ಪಕ್ಷದಲ್ಲಿದ್ದಾರೆಂಬುದು ಅವರ ಆರೋಪವೇ ಅಥವಾ ಅದಕ್ಕೆ ಪಕ್ಷದ ತಾರತಮ್ಯವಿಲ್ಲ ಎಂಬುದು ಅವರ ಅಭಿಪ್ರಾಯವೇ ಎಂಬುದು ಸ್ಪಷ್ಟವಾಗುತ್ತಿಲ್ಲ. ಇನ್ನು ಸಿ.ಬಿ.ಐ. ಬಳಸಿಕೊಂಡು ಭ್ರಷ್ಟರೆಂದು ಕೇವಲ ಕೆಳವರ್ಗದವರನ್ನು ಗುರಿಮಾಡಲಾಗುತ್ತಿದ್ದರೆ ಹಾಗೆ ಮಾಡಿದ್ದು ಯಾವ ಕಾಲಘಟ್ಟದ ಕೇಂದ್ರ ಸರ್ಕಾರ ಎಂಬುದೂ ಸ್ಪಷ್ಟವಿಲ್ಲ.

ಅವರು ಭ್ರಷ್ಟಾಚಾರದೊಂದಿಗೆ ಜಾತಿಯನ್ನು ತಳಕು ಹಾಕುವಾಗ ಅವರ ಗುರಿ ನ್ಯಾಯಾಲಯದಲ್ಲಿರುವವರು, ರಾಜಕೀಯ ಪಕ್ಷದ ಮುಖಂಡರು, ಆಡಳಿತದ ಚುಕ್ಕಾಣಿ ಹಿಡಿದವರು ಅದರಲ್ಲೂ ಈ ಎಲ್ಲರಲ್ಲಿರುವ ಮೇಲುವರ್ಗದ ಜಾತಿಯವರು ಆಗಿರುವಂತಿದೆ. ಕೆಲವೊಂದು ಪ್ರಕರಣಗಳನ್ನು ಉದಾಹರಿಸುತ್ತ ಹೀಗೆ ಹೇಳುವುದು ಎಷ್ಟು ಸರಿ ಅಥವಾ ಅದನ್ನು ಸಾಮಾನ್ಯೀಕರಣ ಮಾಡಲು ಸಾಧ್ಯವಾಗುವಷ್ಟು ಪ್ರಕರಣಗಳು ವಿಪುಲವಾಗಿವೆಯೇ?

ನಮ್ಮ ದೇಶದಲ್ಲಿ ರಾಜಕೀಯ ಭ್ರಷ್ಟಾಚಾರವೆಂಬುದು ಜಾತಿ, ವರ್ಗಗಳ ಪರಿಗಣನೆ ಮೀರಿ ಅಪಾರವಾಗಿ ಬೆಳೆದಿದೆ. ಅಲ್ಲದೆ ಜಾತಿ ಶ್ರೇಣೀಕರಣದ ಅಸಮಾನತೆಯಿಂದಾಗಿ ಈಗಾಗಲೇ ಭಾರತೀಯ ಸಮಾಜ ಛಿದ್ರವಾದಂತಿದೆ. ರಾಜಕೀಯ ಪಕ್ಷಗಳಾದರೋ ತಮ್ಮ ವೋಟು ಗಳಿಕೆಯ ಸ್ವಾರ್ಥದ ಸಲುವಾಗಿ ಮೇಲು ಮೇಲೆ ಜಾತ್ಯತೀತತೆಯ ಮಂತ್ರ ಪಠಿಸುತ್ತಿದ್ದರೂ ಒಳಗೊಳಗೇ ಜಾತೀಯತೆಯ ಬೇರುಗಳನ್ನು ಮತ್ತಷ್ಟು ಸದೃಢಗೊಳಿಸುತ್ತಿವೆ. ಇಂಥ ಪರಿಸ್ಥಿತಿಯಲ್ಲಿ ಯಾರನ್ನಾದರೂ ಭ್ರಷ್ಟರೆಂದು ಗುರುತಿಸುವಲ್ಲಿಯೂ ಜಾತಿಯೇ ಪರಿಗಣನೆಯಾಗುತ್ತಿದೆ ಎಂಬ ಸಂದೇಹದ ಚೇಳನ್ನು ಜನಸಮುದಾಯದ ಮೆದುಳಲ್ಲಿ ಹರಿಯಬಿಡುವುದು ಖಂಡಿತಾ ಸದಭಿರುಚಿಯ ಮತ್ತು ಜವಾಬ್ದಾರಿಯ ನಡೆಯಲ್ಲ. ಅದು ದಾರಿ ತಪ್ಪಿಸುವಂಥದ್ದು. ಭ್ರಷ್ಟ ವ್ಯಕ್ತಿಗಳಿಗೆ ತಮ್ಮನ್ನು ಸಮರ್ಥಿಸಿಕೊಳ್ಳಲು ಅಥವಾ ತಾವು ನಿರಪರಾಧಿಗಳು ಎಂದು ಹೇಳಿಕೊಳ್ಳಲು ಇದೇ ನೆವವಾಗುತ್ತದೆ ಎಂಬುದನ್ನು ಮರೆಯಲಾಗದು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry