7

ಮೌಲ್ಯಾಧಾರಿತ ಶಿಕ್ಷಣ ಅಗತ್ಯ

Published:
Updated:

ನಾಪೋಕ್ಲು: ಶಿಕ್ಷಣದಿಂದ ಸಮಾಜಕ್ಕೆ ಒಳಿತು, ಕೆಡುಕು ಎರಡೂ ಇದೆ. ಶಿಕ್ಷಣ ಮಾತ್ರ ಮುಖ್ಯವೆನಿಸುವುದಿಲ್ಲ. ಸಮಾಜಕ್ಕೆ ಮೌಲ್ಯಾಧಾರಿತ ಶಿಕ್ಷಣದ ಅಗತ್ಯತೆ ಇದೆ ಎಂದು ವಕೀಲ ಕೆ.ಪಿ.ಬಾಲಸುಬ್ರಮಣ್ಯ ಹೇಳಿದರು. ಸಮೀಪದ ಮೂರ್ನಾಡು ಜ್ಞಾನ ಜ್ಯೋತಿ ವಿದ್ಯಾಸಂಸ್ಥೆಯ ಶಾಲಾ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯೆ ಕಲಿತವರೇ ದೇಶದ ಅಭಿವೃದ್ಧಿಗೆ ಕಾರಣಕರ್ತರಾದರೂ ಅಳಿವಿಗೂ ವಿದ್ಯಾವಂತರೇ ಕಾರಣರಾಗಿದ್ದಾರೆ. ಶಾಲೆಗಳಲ್ಲಿ ಕೇವಲ ಅಂಕಗಳು ಮಾತ್ರ ಪರಿಗಣನೆಯಾದರೆ ಸಾಲದು. ವಿನಯ, ಸೌಜನ್ಯ, ಉಪಕಾರ ಮನೋಭಾವಗಳ ಪರಿಪಕ್ವತೆ ವಿದ್ಯಾರ್ಥಿಗಳಲ್ಲಿ ಒಡಮೂಡಬೇಕು’ ಎಂದು ಹೇಳಿದರು.

‘ಸಹಪಠ್ಯ ಚಟುವಟಿಕೆಗಳಲ್ಲೂ ವಿದ್ಯಾರ್ಥಿಗಳು ಭಾಗವಹಿಸಬೇಕು. ಮಕ್ಕಳು ಕಷ್ಟಪಡಬೇಕು. ಎಲ್ಲದಕ್ಕೂ ಪೋಷಕರು ನೆರವಾಗಬಾರದು. ಮಕ್ಕಳ ಮುಂದೆ ಕೋಪ, ಕ್ರೋಧಗಳನ್ನು ಪ್ರದರ್ಶಿಸದೆ, ಆದಷ್ಟು ಪ್ರೀತಿ– ವಿನಯಗಳನ್ನು ತಮ್ಮ ನಡವಳಿಕೆಯಲ್ಲಿ ಅಳವಡಿಸಿಕೊಂಡರೆ ಮಕ್ಕಳು ಅದೇ ಹಾದಿಯಲ್ಲಿ ಸಾಗಲು ಅನುಕೂಲವಾಗುತ್ತದೆ’ ಎಂದರು.

ಅಧ್ಯಕ್ಷತೆಯನ್ನು ವಿದ್ಯಾಸಂಸ್ಥೆಯ ಅಧ್ಯಕ್ಷ ಮಾಳೇಟಿರ ನವೀನ್ ಕಾರ್ಯಪ್ಪ ವಹಿಸಿದ್ದರು. ವಿದ್ಯಾಸಂಸ್ಥೆಯ ಉಪಾಧ್ಯಕ್ಷ ಮುಕ್ಕಾಟಿರ ರವಿ ಚೀಯಣ್ಣ, ಕಾರ್ಯದರ್ಶಿ ಜೆ.ಎ. ಕುಂಞ್ಞ ಅಬ್ದುಲ್ಲಾ, ಖಜಾಂಚಿ ಬುಡುವಂದ ಬೆಲ್ಲು ಚಿಣ್ಣಪ್ಪ, ನಿರ್ದೇಶಕರಾದ ಬಡುವಂಡ ಎ. ವಿಜಯ, ಎನ್.ಒ. ಮಾಥ್ಯು, ಬಡುವಂಡ ಬೋಪಣ್ಣ, ಅವರೆಮಾದಂಡ ಸುಗುಣ ಸುಬ್ಬಯ್ಯ, ಶಾಲಾ ಮುಖ್ಯಶಿಕ್ಷಕಿ ಶೀಲಾ ಅಬ್ದುಲ್ಲಾ ಉಪಸ್ಥಿತರಿದ್ದರು.

ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮತ್ತು ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿಲಾಯಿತು. ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮ ಸಭಿಕರ ಮನರಂಜಿಸಿತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry