7
X

'ಪ್ರಜಾವಾಣಿ'ಯ ಜಾಲತಾಣವನ್ನು ಹೆಚ್ಚು ಓದುಗ ಸ್ನೇಹಿಯಾಗಿಸುವ ಉದ್ದೇಶದಿಂದ ಹೊಸ ವಿನ್ಯಾಸವನ್ನು ರೂಪಿಸಲಾಗಿದೆ.
ಈ ವಿನ್ಯಾಸದ ಕುರಿತ ನಿಮ್ಮ ಅಭಿಪ್ರಾಯಗಳನ್ನು ಇಲ್ಲಿರುವ ಲಿಂಕ್ ಕ್ಲಿಕ್ಕಿಸುವ ಮೂಲಕ ನಮಗೆ ತಿಳಿಸಬಹುದು

webfeedback@prajavani.co.in

ಜಾಧವ್‌ ಕುಟುಂಬದ ಜತೆ ಪಾಕ್‌ ನಡವಳಿಕೆ ಸರಿಯಲ್ಲ

Published:
Updated:
ಜಾಧವ್‌ ಕುಟುಂಬದ ಜತೆ ಪಾಕ್‌ ನಡವಳಿಕೆ ಸರಿಯಲ್ಲ

ಕೈದಿಗಳನ್ನು ಮತ್ತು ಅವರ ಕುಟುಂಬದವರನ್ನು ಹೇಗೆ ನಡೆಸಿಕೊಳ್ಳಬೇಕು ಎಂಬುದಕ್ಕೆ ಅಂತರರಾಷ್ಟ್ರೀಯ ಮಟ್ಟದಲ್ಲಿಯೇ ಒಂದಿಷ್ಟು ನೀತಿ ನಿಯಮಗಳಿವೆ. ಆದರೆ ನಮ್ಮ ನೆರೆಯ ರಾಷ್ಟ್ರ ಪಾಕಿಸ್ತಾನ ಮಾತ್ರ, ಅದ್ಯಾವುದೂ ತನಗೆ ಅನ್ವಯಿಸುವುದಿಲ್ಲ ಎಂಬಂತೆ ನಡೆದುಕೊಳ್ಳುತ್ತಿದೆ. ಬೇಹುಗಾರಿಕೆಯ ಆರೋಪದಲ್ಲಿ ಪಾಕ್‌ ಜೈಲಿನಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರನ್ನು ನೋಡಲು ಅವರ ತಾಯಿ ಅವಂತಿ ಮತ್ತು ಹೆಂಡತಿ ಚೇತನ್‌ ಕುಲ್‌ಗೆ ಅವಕಾಶ ಕೊಟ್ಟರೂ ಆ ಸಂದರ್ಭದಲ್ಲಿ ತುಂಬ ಕೆಟ್ಟದಾಗಿ, ಅಮಾನವೀಯವಾಗಿ ವರ್ತಿಸಿದೆ. ಭೇಟಿಗೂ ಮುನ್ನ ಈ ಇಬ್ಬರೂ ಮಹಿಳೆಯರ ಉಡುಪುಗಳನ್ನು ಬಲವಂತವಾಗಿ ಬದಲಿಸಿದ್ದಲ್ಲದೆ ಭದ್ರತೆಯ ನೆಪದಲ್ಲಿ ಮಾಂಗಲ್ಯ, ಕುಂಕುಮ, ಬಳೆ ತೆಗೆಸಲಾಗಿದೆ. ಮಾತೃಭಾಷೆ ಮರಾಠಿಯಲ್ಲಿ ಮಾತನಾಡಲಿಕ್ಕೂ ಪದೇಪದೇ ಅಡ್ಡಿ ಮಾಡಿದ್ದು ಖಂಡನೀಯ. ಪಾಕಿಸ್ತಾನದ ಏಕಪಕ್ಷೀಯ ತೀರ್ಮಾನದ ದೃಷ್ಟಿಯಲ್ಲಿ ಜಾಧವ್‌ ಅಪರಾಧಿ. ಆದರೆ ಅವರ ತಾಯಿ, ಹೆಂಡತಿಯೇನೂ ಅಪರಾಧಿಗಳಲ್ಲವಲ್ಲ. ಮಗನನ್ನು ಆಲಂಗಿಸುವ, ಕೊನೆಯ ಪಕ್ಷ ಸ್ಪರ್ಶಿಸುವ, ತನಗೆ ತಿಳಿದ ಭಾಷೆಯಲ್ಲಿ ಮಗನೊಂದಿಗೆ ಮಾತನಾಡುವ ಅವಕಾಶವೂ ಸಿಗಲಿಲ್ಲ ಎಂದಾಗ ತಾಯಿ ಎಂಬ ಆ ಹಿರಿಯ ಜೀವಕ್ಕೆ ಎಷ್ಟು ಹಿಂಸೆಯಾಗಿರಬಹುದು. ಪಾಕಿಸ್ತಾನದ ಧೋರಣೆಯಿಂದಾಗಿ ಒಟ್ಟಾರೆ ಇಡೀ ಭೇಟಿಯೇ ಒಂದು ಪ್ರಹಸನದಂತೆ ನಡೆಯಿತು. ಆದರೂ ತಾನು ಬಹಳ ಉದಾರಿ ಎಂದು ಬಡಾಯಿ ಕೊಚ್ಚಿಕೊಳ್ಳಲು ಅದು ಹಿಂದೆ ಬಿದ್ದಿಲ್ಲ. ಇರುವುದರಲ್ಲಿ ಒಂದೇ ಒಂದು ಸಮಾಧಾನ ಎಂದರೆ ತಾಯಿ ಮತ್ತು ಹೆಂಡತಿಗೆ ಕೊನೆ ಪಕ್ಷ ಗಾಜಿನ ಪರದೆ ಆಚೆಯಿಂದಲಾದರೂ ಜಾಧವ್‌ ಅವರನ್ನು ಕಣ್ಣಾರೆ ನೋಡುವ, ಇಂಟರ್‌ಕಾಮ್‌ ಮೂಲಕವಾದರೂ ಮಾತನಾಡುವ ಅವಕಾಶ ಸಿಕ್ಕಿತು ಎನ್ನುವುದು.

ಈ ಭೇಟಿ ಸುಲಭವಾಗಿ ನಡೆದದ್ದಲ್ಲ. ಇದರ ಹಿಂದೆ ಭಾರತದ ನಿರಂತರ ಪ್ರಯತ್ನವೇ ಇತ್ತು. ಕುಟುಂಬದವರಿಗೆ ಅವಕಾಶ ಕೊಡುವಂತೆ ಭಾರತ 25 ಸಲ ಮಾಡಿದ ಮನವಿಯನ್ನು ಪಾಕಿಸ್ತಾನ ಒಂದಿಲ್ಲೊಂದು ಕುಂಟು ನೆಪ ಹೇಳಿ ನಿರಾಕರಿಸುತ್ತಲೇ ಬಂದಿತ್ತು. ಮುಕ್ತ ಮತ್ತು ನ್ಯಾಯಸಮ್ಮತ ವಿಚಾರಣೆ ಇಲ್ಲದೆ ಜಾಧವ್‌ಗೆ ‘ಗೂಢಚಾರಿ’ ಎಂಬ ಹಣೆಪಟ್ಟಿ ಕಟ್ಟಿ, ಸೇನಾ ನ್ಯಾಯಾಲಯದ ಮೂಲಕ ಗಲ್ಲು ಶಿಕ್ಷೆ ವಿಧಿಸಿ ನ್ಯಾಯದ ಪ್ರಕ್ರಿಯೆಯನ್ನೇ ಅಪಹಾಸ್ಯ ಮಾಡಿತ್ತು. ವಿಚಾರಣೆ ನಡೆಯುವಾಗ ಒಂದೇ ಒಂದು ಸಲವೂ ಭಾರತೀಯ ರಾಜತಾಂತ್ರಿಕ ಅಧಿಕಾರಿಗಳಿಗೆ ಭೇಟಿಯ ಅವಕಾಶವನ್ನೇ ಕೊಟ್ಟಿರಲಿಲ್ಲ. ಗಲ್ಲು ಶಿಕ್ಷೆ ಜಾರಿಗೆ ಅಂತರರಾಷ್ಟ್ರೀಯ ನ್ಯಾಯಾಲಯ ತಾತ್ಕಾಲಿಕ ತಡೆ ವಿಧಿಸಿದಾಗ ತೀವ್ರ ಮುಖಭಂಗಕ್ಕೆ ಒಳಗಾದರೂ ಕಿತಾಪತಿ ಬಿಟ್ಟಿರಲಿಲ್ಲ. ಈಗಲೂ ಜಾಧವ್‌ ಅವರ ಅಮ್ಮ ಮತ್ತು ಹೆಂಡತಿಗೆ ಅವಕಾಶ ಕೊಟ್ಟಿದ್ದು ಅಂತರರಾಷ್ಟ್ರೀಯ ಒತ್ತಡಕ್ಕೆ ಮಣಿದು ಮತ್ತು ಅಂತರರಾಷ್ಟ್ರೀಯ ನ್ಯಾಯಾಲಯವನ್ನು ಮೆಚ್ಚಿಸಲು ಎಂದು ವ್ಯಾಖ್ಯಾನಿಸಲಾಗುತ್ತಿದೆ. ಏಕೆಂದರೆ ಜಾಧವ್‌ ಗಲ್ಲು ಶಿಕ್ಷೆ ಪ್ರಕರಣದ ಮುಂದಿನ ವಿಚಾರಣೆ ಸದ್ಯದಲ್ಲಿಯೇ ಆ ನ್ಯಾಯಾಲಯದ ಮುಂದೆ ಬರಲಿದೆ. ಇವೆಲ್ಲದರ ಒಟ್ಟು ಪರಿಣಾಮವೇ ಈ ಭೇಟಿ. ಆದರೆ ಭೇಟಿಯ ರೂಪುರೇಷೆಗಳ ಬಗ್ಗೆ ಭಾರತದ ಜತೆ ಮಾಡಿಕೊಂಡಿದ್ದ ಒಪ್ಪಂದವನ್ನು ಪಾಕಿಸ್ತಾನ ಮುರಿದಿದೆ. ಅದು ತಪ್ಪಿನ ಪರಮಾವಧಿ.

ಈಗಂತೂ ಎರಡೂ ದೇಶಗಳ ಮಧ್ಯೆ ಉದ್ವಿಗ್ನ ಸ್ಥಿತಿ ಇದೆ. ಗಡಿಗಳಲ್ಲಿ ಅಶಾಂತಿಯಿದೆ. ಗುಂಡಿನ ಚಕಮಕಿ, ಸಾವು ನೋವು ನಿಂತಿಲ್ಲ. ಅದರ ನಡುವೆಯೇ ಜಾಧವ್‌ ತಾಯಿ ಮತ್ತು ಪತ್ನಿಯನ್ನು ನಡೆಸಿಕೊಂಡ ರೀತಿಯ ಬಗ್ಗೆ ಎರಡೂ ಸರ್ಕಾರಗಳ ಮಟ್ಟದಲ್ಲಿ ಆರೋಪ– ಪ್ರತ್ಯಾರೋಪ ನಡೆಯುತ್ತಿದೆ. ಇಂತಹ ಸನ್ನಿವೇಶದಲ್ಲಿ ಸಹಜ ಸ್ಥಿತಿ ನೆಲೆಗೊಳ್ಳುವಂತೆ ಮಾಡಲು ಸರ್ಕಾರೇತರ ಸಂಘಟನೆಗಳು, ವ್ಯಕ್ತಿಗಳು ತಮ್ಮ ತಮ್ಮ ಮಟ್ಟದಲ್ಲಿ ಮುಂದಾಗುವುದು ತಪ್ಪಲ್ಲ. ಹಿಂದೆ ಅನೇಕ ಸಲ ಇಂತಹ ಯತ್ನಗಳು ಕೆಲಮಟ್ಟಿಗಾದರೂ ಫಲ ಕೊಟ್ಟಿವೆ. ಜಾಧವ್‌ ಪಾಕ್‌ ವಶದಲ್ಲಿದ್ದಾರೆ. ಆದ್ದರಿಂದ ಇದು ಅತ್ಯಂತ ನಾಜೂಕು ಪರಿಸ್ಥಿತಿ. ಅವರನ್ನು ಸುರಕ್ಷಿತವಾಗಿ ಸ್ವದೇಶಕ್ಕೆ ಕರೆತರಲು ಎಲ್ಲ ಅವಕಾಶ, ಯುಕ್ತಿ ಬಳಸಬೇಕು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry