ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದ ಹುಟ್ಟುಹಾಕಿದ ಹಾದಿಯಾ ವಿವಾಹ ಪ್ರಕರಣ

Last Updated 28 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಈ ವರ್ಷ ದೇಶದಾದ್ಯಂತ ಭಾರಿ ಚರ್ಚೆ ಹುಟ್ಟುಹಾಕಿದ್ದು ಕೇರಳದ ಅಖಿಲಾ (ಹಾದಿಯಾ) ಎಂಬ ಯುವತಿಯ ಅಂತರ್‌ಧರ್ಮೀಯ ವಿವಾಹ ಪ್ರಕರಣ.

ತಮಿಳುನಾಡಿನ ಸೇಲಂನಲ್ಲಿ ಹೋಮಿಯೋಪಥಿ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದ ಅಖಿಲಾ, ಶಫಿನ್ ಜಹಾನ್ ಎಂಬ ಮುಸ್ಲಿಂ ಯುವಕನನ್ನು ಕಳೆದ ವರ್ಷದ ಡಿಸೆಂಬರ್‌ನಲ್ಲಿ ವರಿಸಿದ್ದರು. ನಂತರ ಅವರು ಇಸ್ಲಾಂ ಧರ್ಮಕ್ಕೆ ಮತಾಂತರಗೊಂಡು ತಮ್ಮ ಹೆಸರನ್ನು ಹಾದಿಯಾ ಎಂದು ಬದಲಾಯಿಸಿಕೊಂಡಿದ್ದರು.

ಈ ಮದುವೆಗೆ ಯುವತಿಯ ಪೋಷಕರ ವಿರೋಧ ಇತ್ತು. ‘ಮಗಳನ್ನು ಬಲವಂತವಾಗಿ ಮತಾಂತರ ಮಾಡಲಾಗಿದೆ. ಆಕೆಯನ್ನು ಜಿಹಾದಿ ಚಟುವಟಿಕೆಗಳಿಗೆ ಬಳಸಿಕೊಳ್ಳುವ ಯತ್ನ ಇದು’ ಎಂದು ಆರೋಪಿಸಿದ್ದ ಆಕೆಯ ತಂದೆ ಅಶೋಕನ್‌ ಕೇರಳ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಮೇ ತಿಂಗಳಲ್ಲಿ ತೀರ್ಪು ನೀಡಿದ್ದ ನ್ಯಾಯಾಲಯ ಶಫಿನ್‌–ಹಾದಿಯಾ ಮದುವೆಯನ್ನು ಅಸಿಂಧುಗೊಳಿಸಿತ್ತಲ್ಲದೇ ಯುವತಿಯನ್ನು ಪೋಷಕರಿಗೆ ಒಪ್ಪಿಸಿತ್ತು. ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿ ಶಫಿನ್‌ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ಹೈಕೋರ್ಟ್‌ ತೀರ್ಪನ್ನು ಪ್ರಶ್ನಿಸಿತ್ತು. ಮದುವೆ ಅಸಿಂಧುಗೊಳಿಸುವ ಹಕ್ಕು ಹೈಕೋರ್ಟ್‌ಗೆ ಇದೆಯೇ ಎಂದು ಕೇಳಿತ್ತು. ಅಲ್ಲದೇ, ಇದು ಬಲವಂತದ ಮದುವೆ ಹೌದೇ ಅಲ್ಲವೇ ಎಂಬುದನ್ನು ತನಿಖೆ ನಡೆಸುವಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗೆ (ಎನ್‌ಐಎ) ಸೂಚಿಸಿತ್ತು.

ನವೆಂಬರ್‌ 27ರಂದು ಸುಪ್ರೀಂ ಕೋರ್ಟ್‌ ಮುಂದೆ ಖುದ್ದಾಗಿ ಹಾಜರಾದ ಹಾದಿಯಾ, ಹೋಮಿಯೋಪಥಿ ಶಿಕ್ಷಣವನ್ನು ಮುಂದುವರೆಸುವ ಬಯಕೆ ವ್ಯಕ್ತಪಡಿಸಿದ್ದಲ್ಲದೆ ಪತಿ ಶಫಿನ್ ಜೊತೆಗೆ ಹೋಗುವುದಾಗಿಯೂ ತಿಳಿಸಿದರು.

ಹಾದಿಯಾ ಮನವಿ ಮಾನ್ಯ ಮಾಡಿದ ಸುಪ್ರೀಂ ಕೋರ್ಟ್‌, ಸೇಲಂನಲ್ಲಿ ವ್ಯಾಸಂಗ ಮುಂದುವರೆಸಲು ಅವಕಾಶ ಕಲ್ಪಿಸಿತು. ಹಾದಿಯಾಗೆ ಅಗತ್ಯ ಭದ್ರತೆ ನೀಡುವಂತೆ ಕೇರಳ ಪೊಲೀಸರಿಗೆ ಸೂಚಿಸಿದೆ. ಕಾಲೇಜಿನ ಡೀನ್‌ ಅವರನ್ನು ಪಾಲಕರನ್ನಾಗಿಯೂ ನೇಮಿಸಿದೆ. ಮುಂದಿನ ವಿಚಾರಣೆ ಜನವರಿ ಮೂರನೇ ವಾರದಲ್ಲಿ ನಡೆಯಲಿದೆ.

ಅಂತರ್‌ಧರ್ಮೀಯ ವಿವಾಹ ಪ್ರಕರಣ

ಹಾದಿಯಾ ಪ್ರಕರಣವಲ್ಲದೇ ಕೇರಳದಲ್ಲಿ ಮತ್ತೊಂದು ಅಂತರ್‌ಧರ್ಮೀಯ ವಿವಾಹ ಹೈಕೋರ್ಟ್‌ ಮೆಟ್ಟಿಲೇರಿತ್ತು.

ಕಣ್ಣೂರು ನಿವಾಸಿ ಶ್ರುತಿ ಮೇಲೇಡೆತ್ತ್‌ ಎಂಬ ಯುವತಿ, ಮುಸ್ಲಿಂ ಸಮುದಾಯಕ್ಕೆ ಸೇರಿದ ತಮ್ಮ ಸಹಪಾಠಿ ಅನೀಸ್‌ ಹಮೀದ್‌ ಎಂಬುವವರನ್ನು ಮದುವೆಯಾಗಿ ಇಸ್ಲಾಂಗೆ ಮತಾಂತರಗೊಂಡಿದ್ದರು.

ಇದನ್ನು ವಿರೋಧಿಸಿದ್ದ ಯುವತಿಯ ಪೋಷಕರು ಹೈಕೋರ್ಟ್‌ನಲ್ಲಿ ಮದುವೆಯ ಸಿಂಧುತ್ವ ಪ್ರಶ್ನಿಸಿದ್ದರು. ನ್ಯಾಯಾಲಯ ಅಕ್ಟೋಬರ್‌ನಲ್ಲಿ ಈ ‌ಮದುವೆಯನ್ನು ಮಾನ್ಯ ಮಾಡಿತ್ತು. ಎಲ್ಲ ಅಂತರ್‌ಧರ್ಮೀಯ ವಿವಾಹಗಳನ್ನು ‘ಲವ್‌ ಜಿಹಾದ್‌’ ಎಂದು ಕರೆಯಲು ಸಾಧ್ಯವಿಲ್ಲ ಎಂದೂ ಪ್ರತಿಪಾದಿಸಿತ್ತು.

ರಾಜಸ್ಥಾನದ ಘಟನೆ: ಡಿಸೆಂಬರ್‌ ಮೊದಲ ವಾರದಲ್ಲಿ ರಾಜಸ್ಥಾನದ ರಾಜ್‌ಸಮಂದ್‌ ಜಿಲ್ಲೆಯಲ್ಲಿ ಪಶ್ಚಿಮ ಬಂಗಾಳದ ದಿನಗೂಲಿ ನೌಕರ ಮೊಹಮ್ಮದ್‌ ಅಫ್ರಾಜುಲ್‌ ಎಂಬುವವರನ್ನು ಶಂಭುಲಾಲ್‌ ಎಂಬಾತ ಕ್ಯಾಮೆರಾ ಮುಂದೆ ಹತ್ಯೆ ಮಾಡಿ ಸುಟ್ಟು ಹಾಕಿದ ಪ್ರಕರಣವೂ ‘ಲವ್‌ ಜಿಹಾದ್‌’ನ ಬಣ್ಣ ಪಡೆದಿತ್ತು.

ಅಫ್ರಾಜುಲ್‌ ಹಿಂದೂ ಯುವತಿಯನ್ನು ಮದುವೆಯಾಗಿದ್ದಕ್ಕೆ ಪ್ರತೀಕಾರವಾಗಿ ಈ ಹತ್ಯೆ ಮಾಡಲಾಗಿದೆ ಎಂದು ವರದಿಯಾಗಿತ್ತು. ಲವ್‌ ಜಿಹಾದ್‌ನಿಂದ ಮಹಿಳೆಯನ್ನು ರಕ್ಷಿಸಲು ಹತ್ಯೆ ಮಾಡಿರುವುದಾಗಿ ಶಂಭುಲಾಲ್‌ ವಿಡಿಯೊದಲ್ಲಿ ಹೇಳಿದ್ದ.

ಆದರೆ, ‘ಇದೊಂದು ಅಪರಾಧ ಪ್ರಕರಣವೇ ವಿನಾ, ಲವ್‌ ಜಿಹಾದ್‌ ಪ್ರಕರಣ ಅಲ್ಲ’ ಎಂದು ಕೇಂದ್ರ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವ ಮುಖ್ತಾರ್‌ ಅಬ್ಬಾಸ್‌ ನಕ್ವಿ ಹೇಳಿದ್ದರು.

ಕೇರಳ: ಮುಂದುವರಿದ ಸಿಪಿಎಂ –ಬಿಜೆಪಿ ಸಂಘರ್ಷ

ಕೇರಳದಲ್ಲಿ ಪಿಣರಾಯಿ ವಿಜಯನ್‌ ನೇತೃತ್ವದ ಎಡರಂಗದ ಸರ್ಕಾರ 2016ರ ಮೇ ತಿಂಗಳಿನಲ್ಲಿ ಅಧಿಕಾರಕ್ಕೆ ಬಂದ ನಂತರ ಹೆಚ್ಚಾದ ಬಿಜೆಪಿ–ಸಿಪಿಎಂ ಕಾರ್ಯಕರ್ತರ ನಡುವಣ ಹಿಂಸಾಚಾರ 2017ರಲ್ಲೂ ಮುಂದುವರಿಯಿತು.‌

ಕೇರಳದ ರಾಜಕೀಯದಲ್ಲಿ ಈ ಎರಡು ಪಕ್ಷಗಳ ನಡುವಣ ಸಂಘರ್ಷ ಹೊಸದೇನಲ್ಲ. ಸಿಪಿಎಂ ಮತ್ತು ಬಿಜೆಪಿ/ಆರ್‌ಎಸ್‌ಎಸ್‌ ಕಾರ್ಯಕರ್ತರ ನಡುವೆ ಸಂಭವಿಸುವ ಘರ್ಷಣೆ ಕೊಲೆಯಲ್ಲಿ ಅಂತ್ಯವಾಗುವುದು ಹಿಂದಿನಿಂದಲೇ ನಡೆದುಕೊಂಡೇ ಬಂದಿದೆ. ಕಳೆದ ವರ್ಷದಿಂದ ಈಚೆಗೆ ಇದು ಹೆಚ್ಚಾಗುತ್ತಿದೆ.

ರಾಜ್ಯದಲ್ಲಿ ತನ್ನ ಅಧಿಪತ್ಯವನ್ನು ಸ್ಥಾಪಿಸಲು ಎರಡೂ ಪಕ್ಷಗಳು ಯತ್ನಿಸುತ್ತಿರುವುದರಿಂದ ಹೀಗೆ ಆಗುತ್ತಿದೆ ಎಂಬುದು ರಾಜಕೀಯ ಪಂಡಿತರ ವಿಶ್ಲೇಷಣೆ. ಇದೇ ವಿಚಾರದಲ್ಲಿ ಕೇಂದ್ರದ ಬಿಜೆಪಿ ಮತ್ತು ರಾಜ್ಯದ ಎಡ ಪಕ್ಷಗಳ ನಡುವೆ ತಿಕ್ಕಾಟ ನಡೆಯುತ್ತಿದೆ.

ತಿರುವನಂತಪುರದಲ್ಲಿ ನಡೆದಿದ್ದ ಬಿಜೆಪಿ ಕಾರ್ಯಕರ್ತ ರಾಜೇಶ್‌ ಹತ್ಯೆ ಭಾರಿ ಸುದ್ದಿ ಮಾಡಿತ್ತು. ಅರುಣ್‌ ಜೇಟ್ಲಿ ಸೇರಿದಂತೆ ಕೆಲವು ಕೇಂದ್ರ ಸಚಿವರು ಕಾರ್ಯಕರ್ತನ ಮನೆಗೆ ಭೇಟಿ ನೀಡಿ ಸಾಂತ್ವನ ಹೇಳಿದ್ದರು. ರಾಜಕೀಯ ಹತ್ಯೆಗಳನ್ನು ಖಂಡಿಸಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಷಾ ನೇತೃತ್ವದಲ್ಲಿ ಅಕ್ಟೋಬರ್‌ನಲ್ಲಿ ‘ಜನರಕ್ಷಾ ಯಾತ್ರೆ’ಯೂ ನಡೆಯಿತು.

ಆಗಸ್ಟ್‌ ಮೊದಲ ವಾರ ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ್ದ ಆರ್‌ಎಸ್‌ಎಸ್‌ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ, ಇದೇ ವಿಚಾರವಾಗಿ ಪಿಣರಾಯಿ ವಿಜಯನ್‌ ಸರ್ಕಾರದ ಮೇಲೆ ಹರಿಹಾಯ್ದಿದ್ದರು. ‘ಪಿಣರಾಯಿ ಸರ್ಕಾರ ಬಂದ ನಂತರ ಸಿಪಿಎಂನ ಕ್ರೌರ್ಯಕ್ಕೆ ಬಿಜೆಪಿ/ಆರ್‌ಎಸ್‌ಎಸ್‌ನ 14 ಕಾರ್ಯಕರ್ತರು ಬಲಿಯಾಗಿದ್ದಾರೆ. ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡಲು ಅವರು ವಿಫಲರಾಗಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗೆ ಮುಂದುವರಿದರೆ ರಾಷ್ಟ್ರಪತಿ ಆಳ್ವಿಕೆಗೆ ಒತ್ತಾಯಿಸಬೇಕಾಗುತ್ತದೆ ಎಂದೂ ಹೇಳಿದ್ದರು.

ವಿಶ್ವಸುಂದರಿ ಪಟ್ಟ 

20 ವರ್ಷ ವಯಸ್ಸಿನ ಹರಿಯಾಣದ ವೈದ್ಯಕೀಯ ವಿದ್ಯಾರ್ಥಿನಿ ಮಾನುಷಿ ಛಿಲ್ಲರ್‌ 2017ರ ‘ವಿಶ್ವ ಸುಂದರಿ’ ಎಂಬ ಗರಿ ಮುಡಿಗೇರಿಸುವುದರೊಂದಿಗೆ ಫ್ಯಾಷನ್‌ ಜಗತ್ತಿನಲ್ಲಿ ಭಾರತ ಬೀಗುವಂತೆ ಮಾಡಿದರು. 17 ವರ್ಷಗಳ ಬಳಿಕ ಈ ಪಟ್ಟ ಭಾರತಕ್ಕೆ ಒಲಿದು ಬಂತು.

ಪ್ಯಾರಡೈಸ್‌ ದಾಖಲೆಗಳಲ್ಲಿ ಭಾರತೀಯರ ಹೆಸರು

ಪನಾಮಾ ದಾಖಲೆಗಳು ಬಹಿರಂಗಗೊಂಡ ಒಂದೂಮುಕ್ಕೂಲು ವರ್ಷದ ಅವಧಿಯಲ್ಲಿ, ಜಗತ್ತಿನ ಅತ್ಯಂತ ಪ್ರಭಾವಿಗಳು ತೆರಿಗೆರಹಿತ ದೇಶಗಳಲ್ಲಿ ಹೂಡಿಕೆ ಮಾಡಿರುವ ವಿಷಯ ಈ ವರ್ಷದ ನವೆಂಬರ್‌ನಲ್ಲಿ ಮತ್ತೆ ಬಹಿರಂಗವಾಯಿತು. ‘ಪ್ಯಾರಡೈಸ್‌ ದಾಖಲೆಗಳು’ ಎಂಬ ಹೆಸರಿನಲ್ಲಿ ಸೋರಿಕೆಯಾದ ಮಾಹಿತಿಗಳು ಈ ವಿಷಯದ ಬಗ್ಗೆ ಬೆಳಕು ಚೆಲ್ಲಿತು. ಭಾರತದ 714 ಪ್ರಭಾವಿಗಳು ತೆರಿಗೆ ಇಲ್ಲದ ದೇಶದಲ್ಲಿ ಹೂಡಿಕೆ ಮಾಡಿರುವ ಗುಟ್ಟು ಕೂಡ ರಟ್ಟಾಯಿತು.

ನಟ ಅಮಿತಾಭ್‌ ಬಚ್ಚನ್‌, ಉದ್ಯಮಿ ವಿಜಯ ಮಲ್ಯ, ನೀರಾ ರಾಡಿಯಾ, ನಟ ಸಂಜಯ ದತ್‌ ಹೆಂಡತಿ ದಿಲ್‌ನಶಿನ್‌ (ಮಾನ್ಯತಾ), ಕೇಂದ್ರ ಸಚಿವ ಜಯಂತ್‌ ಸಿನ್ಹಾ, ರಾಜ್ಯಸಭಾ ಸದಸ್ಯ ಆರ್‌.ಕೆ. ಸಿನ್ಹಾ, ಸಂಸದ ವೀರಪ್ಪ ಮೊಯಿಲಿ ಮಗ ಹರ್ಷ ಮೊಯಿಲಿ ಅವರ ಹೆಸರು ಈ ಪಟ್ಟಿಯಲ್ಲಿತ್ತು.

ಪನಾಮಾ ದಾಖಲೆಗಳ ಬಗ್ಗೆ ತನಿಖೆ ನಡೆಸಲು ರಚಿಸಲಾಗಿದ್ದ ಬಹುಸಂಸ್ಥೆಗಳ ಪ್ರತಿನಿಧಿಗಳಿರುವ ತನಿಖಾ ಗುಂಪು ಪ್ಯಾರಡೈಸ್‌ ದಾಖಲೆಗಳಲ್ಲಿರುವ ಹೆಸರುಗಳ ಬಗ್ಗೆಯೂ ತನಿಖೆ ನಡೆಸಲಿದೆ ಎಂದು ಸರ್ಕಾರ ಹೇಳಿತು.

ಬ್ರಿಟನ್‌ ರಾಣಿ ಎರಡನೇ ಎಲಿಜಬೆತ್‌, ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ವಿಲ್ಬರ್‌ ರಾಸ್‌, ಪಾಕಿಸ್ತಾನದ ಮಾಜಿ ಪ್ರಧಾನಿ ಶೌಕತ್‌ ಅಜೀಜ್‌ ಮತ್ತಿತರರು ಕೂಡ ಹೂಡಿಕೆ ಮಾಡಿದ್ದಾರೆ ಎಂಬುದನ್ನು ದಾಖಲೆ ಹೇಳಿತ್ತು.

ರಾಮಮಂದಿರ ಬಿಕ್ಕಟ್ಟು ಪರಿಹಾರ ಯತ್ನಕ್ಕೆ ಹಿನ್ನಡೆ

ದಶಕಗಳಿಂದ ಬಗೆಹರಿಯದೆ ಕಗ್ಗಂಟಾಗಿ ಉಳಿದಿರುವ ಅಯೋಧ್ಯೆ ರಾಮಮಂದಿರ ವಿವಾದವನ್ನು ನ್ಯಾಯಾಲಯದ ಹೊರಗಡೆ ಮಾತುಕತೆ ಮೂಲಕ ಬಗೆಹರಿಸಲು ಆರ್ಟ್‌ ಆಫ್‌ ಲಿವಿಂಗ್‌ ಸಂಸ್ಥಾಪಕ ಶ್ರೀ ಶ್ರೀ ರವಿಶಂಕರ್‌ ನಡೆಸಿದ ಯತ್ನ ಸಫಲವಾಗಲಿಲ್ಲ.

ಅರ್ಜಿದಾರರ ನಡುವೆ ಸಂಧಾನ ನಡೆಯುವುದಕ್ಕಾಗಿ ರವಿಶಂಕರ್‌ ನವೆಂಬರ್‌ 16ರಂದು ಅಯೋಧ್ಯೆಗೆ ಭೇಟಿ ನೀಡಿದ್ದರು. ಆದರೆ, ರಾಮಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದವರು ಅವರ ಭೇಟಿಗೆ ಆಸಕ್ತಿ ತೋರಲಿಲ್ಲ.

ವಿವಾದವನ್ನು ರಾಜಿ ಮಾತುಕತೆಯ ಮೂಲಕ ಬಗೆಹರಿಸಲು ಸಾಧ್ಯವಿಲ್ಲ. ಇದು ನ್ಯಾಯಾಲಯದಲ್ಲೇ ಇತ್ಯರ್ಥವಾಗಬೇಕು ಎಂದು ಮುಸ್ಲಿಂ ಅರ್ಜಿದಾರರು ಹೇಳುತ್ತಲೇ ಬಂದಿದ್ದರು. ರವಿ‌ಶಂಕರ್‌ ಯತ್ನವನ್ನು ‘ರಾಜಕೀಯ ನಾಟಕ’ ಎಂದು ಕರೆದ ಅವರು ಮಾತುಕತೆಯಿಂದ ದೂರ ಇಳಿದರು.

ಅಯೋಧ್ಯೆಯಲ್ಲೇ ರಾಮಮಂದಿರ ನಿರ್ಮಾಣ ಆಗಬೇಕು ಎಂದು ಹೇಳುತ್ತಲೇ ಬಂದಿರುವ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಕೂಡ ರವಿಶಂಕರ್‌ ಅವರನ್ನು ಬೆಂಬಲಿಸಿಲ್ಲ. ಉಡುಪಿಯಲ್ಲಿ ನಡೆದ ಧರ್ಮ ಸಂಸದ್‌ನಲ್ಲಿ ಅದು ತನ್ನ ಅಭಿಪ್ರಾಯವನ್ನು ಸ್ಪಷ್ಟವಾಗಿ ಹೇಳಿತು. ‘ರಾಮ ಮಂದಿರ ನಿರ್ಮಾಣ ವಿಚಾರದಲ್ಲಿ ರಾಜಿ ಮಾತುಕತೆ ಸಾಧ್ಯವೇ ಇಲ್ಲ. ರವಿಶಂಕರ್‌ ಅವರ ಸಂಧಾನ ಯತ್ನದಲ್ಲಿ ನಮ್ಮ ಪಾತ್ರ ಇಲ್ಲ. ಅದು ಅವರ ಸ್ವಯಂಪ್ರೇರಿತ ಯತ್ನ’ ಎಂದು ಹೇಳಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT