ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುವೆಂಪು ಕೊಟ್ಟ ‘ಬೆಳ್ಳಿ ಕರಂಡಕ’ದ ನೆನಪು

Last Updated 29 ಡಿಸೆಂಬರ್ 2017, 5:49 IST
ಅಕ್ಷರ ಗಾತ್ರ

ಮಂಡ್ಯ: ಹೂವು ಹಗುರ ಎಂದುಕೊಂಡಿದ್ದೆ, ಹೂವು ಕೂಡಾ ಭಾರ ಎನ್ನುವುದು ಮಂಡ್ಯದಲ್ಲಿ ತಿಳಿಯಿತು... ನಗರದ ಜನರ ಪ್ರೀತಿಯ ಸನ್ಮಾನ ಸ್ವೀಕರಿಸಿದ ರಾಷ್ಟ್ರಕವಿ ಕುವೆಂಪು ಆಡಿದ ಮಾತು ಇವು.

ತಮ್ಮ ಆತ್ಮಕತೆ ‘ನೆನಪಿನ ದೋಣಿಯಲ್ಲಿ’ಯೂ ಕುವೆಂಪು ಇದನ್ನು ಬರೆದುಕೊಂಡಿದ್ದಾರೆ. ಇದು ಬರೀ ಮಾತಾಗಿರಲಿಲ್ಲ, ನಗರದ ಜನರ ಅಭಿಮಾನಕ್ಕೆ ಕುವೆಂಪು ಕೊಟ್ಟ ಭಾವದ ಬಿರುದಾಗಿತ್ತು. ಇಂದಿಗೂ ಹಲವರ ನಾಲೆಗೆಯ ಮೇಲೆ ಈ ಮಾತುಗಳು ನಲಿದಾಡುತ್ತವೆ.

ಅದು 1952, ಡಿಸೆಂಬರ್‌ 22. ಕರ್ನಾಟಕ ಸಂಘದಲ್ಲಿ ಕುವೆಂಪು ಅವರಿಗೆ ಪೌರ ಸನ್ಮಾನ ಸಮಾರಂಭ. ಜನರು ಪ್ರೀತಿಯಿಂದ ಕುವೆಂಪು ಅವರ ಮೇಲೆ ಹೂವಿನ ಮಳೆಗರೆದರು.

‘ಜನರ ಪ್ರೀತಿ ಭಾರ ಎನಿಸಲಿಲ್ಲ, ಆದರೆ ಹೂವು ಭಾರ ಎನಿಸಿತ್ತು. ಇಂತಹ ಹೊತ್ತಿನಲ್ಲಿ ಅವರು ಆಡಿದ ಮಾತು ಐತಿಹಾಸಿಕ ಸ್ಥಾನ ಪಡೆದವು. ಈ ಕಾರ್ಯಕ್ರಮದಲ್ಲಿ ಮಂಡ್ಯದ ಗಣ್ಯಮಾನ್ಯರು ಕುವೆಂಪು ಅವರಿಗೊಂದು ‘ಬೆಳ್ಳಿಯ ಕರಂಡಕ’ವೊಂದನ್ನು ಉಡುಗೊರೆಯಾಗಿ ಕೊಟ್ಟರು.

ಆ ಕರಂಡಕವನ್ನು ಜೊತೆಯಲ್ಲಿ ಒಯ್ಯದ ಕುವೆಂಪು, ಕರ್ನಾಟಕ ಸಂಘಕ್ಕೆ ವಾಪಸ್‌ ಕೊಟ್ಟು ‘ಪ್ರತಿ ವರ್ಷ ಶ್ರೀ ರಾಮಾಯಣ ದರ್ಶನಂ ಗಮಕ ಸ್ಪರ್ಧೆ ನಡೆಸಿ, ವಿಜೇತರಿಗೆ ಈ ಕರಂಡಕವನ್ನು ಸಾಂಕೇತಿಕವಾಗಿ ನೀಡಿ’ ಎಂದು ಸೂಚನೆ ಕೊಟ್ಟರು. ಅಂದಿನಿಂದ ಇಂದಿನವರೆಗೂ ಕರ್ನಾಟಕ ಸಂಘದ ಆವರಣದಲ್ಲಿ ಶ್ರೀ ರಾಮಾಯಣ ದರ್ಶನಂ ಕಾವ್ಯದ ಗಮಕ ವಾಚನ, ವ್ಯಾಖ್ಯಾನ ನಿರಂತರವಾಗಿ ನಡೆದು ಬಂದಿದೆ.

‘1952ರಲ್ಲಿ ಕುವೆಂಪು ಪ್ರೀತಿಯಿಂದ ಕೊಟ್ಟ ಬೆಳ್ಳಿ ಕರಂಡಕ ಕರ್ನಾಟಕ ಸಂಘದಲ್ಲಿ ಇನ್ನೂ ಭದ್ರವಾಗಿದೆ. ಅಂದು ಈ ಕರಂಡಕಕ್ಕೆ ಒಂದೆರಡು ಸಾವಿರ ಮೌಲ್ಯ ಇದ್ದಿರಬಹುದು. ಇಂದು ಇದಕ್ಕೆ ಲಕ್ಷಾಂತರ ರೂಪಾಯಿ ಮೌಲ್ಯವಿದೆ. ಆದರೆ ಕುವೆಂಪು ಅವರು ಕರ್ನಾಟಕ ಸಂಘದ ಮೇಲೆ ತೋರಿದ ಪ್ರೀತಿಗೆ ಬೆಲೆ ಕಟ್ಟಲು ಸಾಧ್ಯವಿಲ್ಲ. ಕುವೆಂಪು ಸೂಚನೆಯಂತೆ ಹಲವು ವರ್ಷಗಳ ಕಾಲ ಶ್ರೀ ರಾಮಾಯಣ ದರ್ಶನಂ ಕಾವ್ಯ ಗಮಕ ಸ್ಪರ್ಧೆ ನಡೆಯಿತು.

ಈಚೆಗೆ ಅದು ಗಮಕ ವಾಚನ, ವ್ಯಾಖ್ಯಾನ ಕಾರ್ಯಕ್ರಮ ರೂಪ ಪಡೆಯಿತು. ನಾಡಿನ ಖ್ಯಾತ ಗಮಕಿಗಳು ಇಲ್ಲಿಗೆ ಬಂದು ಕಾರ್ಯಕ್ರಮ ನೀಡಿದ್ದಾರೆ. ಡಿಸೆಂಬರ್‌ ತಿಂಗಳಲ್ಲಿ ಗಮಕ ಸಪ್ತಾಹ ಕಾರ್ಯಕ್ರಮ ನಡೆಸಲಾಗುತ್ತಿದೆ. ಪ್ರತಿ ಡಿ.29ರಂದು ವಿಶ್ವಮಾನವ ದಿನ ಆಚರಿಸುತ್ತೇವೆ’ ಎಂದು ಕರ್ನಾಟಕ ಸಂಘದ ಅಧ್ಯಕ್ಷ ಡಾ.ಜಯಪ್ರಕಾಶ್‌ಗೌಡ ಹೇಳಿದರು.

ಸುಂದರ ಆಕೃತಿ: 65 ವರ್ಷಗಳ ಹಿಂದೆ ನೀಡಿದ್ದ ಈ ಬೆಳ್ಳಿ ಕರಂಡಕ ಇಂದಿಗೂ ತನ್ನ ಸೌಂದರ್ಯ ಉಳಿಸಿಕೊಂಡಿದೆ. ಮರದ ಪೀಠದ ಮೇಲೆ ಕರಂಡಕವನ್ನು ಜೋಡಿಸಲಾಗಿದೆ. ನಾಲ್ಕೂ ಕಡೆ ಹೂ ಬಳ್ಳಿಗಳ ಚಿತ್ರಗಳಿವೆ. ನಡುವೆ ಅರಮನೆ ಚಿತ್ರ. ಮೇಲ್ಭಾಗದಲ್ಲಿ ಶಾರದೆಯ ಮೂರ್ತಿ ಇದೆ.

ವೀಣಾಪಾಣಿ ಶಾರದೆಯ ಮೂರ್ತಿ ಕರಂಡಕಕ್ಕೆ ವಿಶೇಷ ಮೆರಗು ತಂದುಕೊಟ್ಟಿದೆ. ಮರದ ಪೀಠದ ನಡುವಿನ ಬೆಳ್ಳಿ ಪಟ್ಟಿಯ ಮೇಲೆ ‘ಸಿರಿಗನ್ನಡಂ ಗೆಲ್ಗೆ, ಮಂಡ್ಯದ ಮಹಾಜನರು ಮಹಾಕವಿ ಶ್ರೀ ಕುವೆಂಪು ಅವರಿಗೆ ಭಕ್ತಿ ಪೂರ್ವಕವಾಗಿ ಅರ್ಪಿಸಿದರು’ ಎಂದು ಕೆತ್ತಲಾಗಿದೆ.

‘52ರಲ್ಲಿ ನಾನು ಬೆಂಗಳೂರಿನಲ್ಲಿ ಕೃಷಿ ವಿದ್ಯಾರ್ಥಿಯಾಗಿದ್ದೆ. ಕರ್ನಾಟಕ ಸಂಘದಲ್ಲಿ ಕಾರ್ಯಕ್ರಮ ನಡೆದ ನೆನಪು ನನ್ನಲ್ಲಿ ಇಲ್ಲ. ಆದರೆ ಅಂದು ಕುವೆಂಪು ಆಡಿದ ಮಾತುಗಳನ್ನು ಕೇಳಿದ್ದೇನೆ. ಆವು ಮಂಡ್ಯದಲ್ಲಿ ಇಂದಿಗೂ ಹಸಿರಾಗಿವೆ’ ಎಂದು ಜನತಾ ಶಿಕ್ಷಣ ಸಂಸ್ಥೆ ಅಧ್ಯಕ್ಷ ಡಾ.ಎಚ್‌.ಡಿ.ಚೌಡಯ್ಯ ಹೇಳಿದರು.

1975ರಲ್ಲಿ ನಗರಕ್ಕೆ ಬಂದಿದ್ದ ಕುವೆಂಪು, ಕೆ.ವಿ.ಶಂಕರಗೌಡ ಬಿ.ಇಡಿ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿಗೆ ಶಿಲಾನ್ಯಾಸ ನೆರವೇರಿಸಿದ್ದರು. ಆ ನೆನಪುಗಳು ಈಗಲೂ ಕಾಲೇಜಿನಲ್ಲಿ ಜೀವಂತವಾಗಿದ್ದು ಕಾರ್ಯಕ್ರಮದ ಛಾಯಾಚಿತ್ರಗಳನ್ನು ಗ್ರಂಥಾಲಯದಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.

‘ಜನತಾ ಶಿಕ್ಷಣ ಸಂಸ್ಥೆಯ ಮೊದಲ ಅಧ್ಯಕ್ಷರಾಗಿದ್ದ ವಕೀಲ ಪಿ.ಮಲ್ಲಯ್ಯ ಅವರು ಕುವೆಂಪು ಅವರ ಒಡನಾಡಿ. ಇಬ್ಬರೂ ಕಾಲೇಜು ದಿನಗಳಲ್ಲಿ ಸ್ನೇಹಿತರಾಗಿ ಒಂದೇ ಕೊಠಡಿಯಲ್ಲಿ ವಾಸವಾಗಿದ್ದರು. ಕುವೆಂಪು ಮಂಡ್ಯಕ್ಕೆ ಭೇಟಿ ಕೊಟ್ಟಾಗಲೆಲ್ಲಾ ಮಲ್ಲಯ್ಯ ಅವರನ್ನು ತಪ್ಪದೇ ಭೇಟಿ ಮಾಡುತ್ತಿದ್ದರು’ ಎಂದು ಗಾಂಧಿ ಭವನದ ಕಾರ್ಯದರ್ಶಿ ಲಿಂಗಣ್ಣ ಬಂಧುಕರ್‌ ನೆನಪು ಮಾಡಿಕೊಂಡರು.

‘ನಿತ್ಯ ಸಚಿವ’ ಬಿರುದು ಕೊಟ್ಟ ಕುವೆಂಪು

1974ರಲ್ಲಿ ನಗರದ ರೈತ ಸಮುದಾಯ ಭವನದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕುವೆಂಪು ಪಾಲ್ಗೊಂಡಿದ್ದರು. ಸಮಾರಂಭದಲ್ಲಿ ಮಾತನಾಡಿದವರೆಲ್ಲರೂ ಕೆ.ವಿ.ಶಂಕರಗೌಡ ಅವರನ್ನು ಮಾಜಿ ಸಚಿವ ಶಂಕರಗೌಡ ಎಂದು ಸಂಭೋದಿಸಿದರು.

ನಂತರ ಮಾತನಾಡಿದ ಕುವೆಂಪು, ‘ಕೆ.ವಿ.ಶಂಕರಗೌಡರು ಮಾಜಿ ಸಚಿವರಲ್ಲ, ಅವರು ನಿತ್ಯ ಸಚಿವ’ ಎಂದರು. ಈ ಸಮಾರಂಭ ಮಂಡ್ಯದಲ್ಲಿ ನಡೆದ ಐತಿಹಾಸಿಕ ಕಾರ್ಯಕ್ರಮವಾಯಿತು. ಕೆ.ವಿ.ಶಂಕರಗೌಡರು ಅಗಲಿದರೂ ಕುವೆಂಪು ಕೊಟ್ಟ ‘ನಿತ್ಯ ಸಚಿವ’ ಬಿರುದು ಅವರನ್ನು ಸದಾ ಜೀವಂತವಾಗಿ ಉಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT