7

ನವ ಉದಾರೀಕರಣ ನೀತಿಯಿಂದ ಸಮಾನತೆ ನಾಶ

Published:
Updated:
ನವ ಉದಾರೀಕರಣ ನೀತಿಯಿಂದ ಸಮಾನತೆ ನಾಶ

ಕೋಲಾರ: ‘ನವ ಉದಾರೀಕರಣ ಮತ್ತು ಆರ್ಥಿಕ ನೀತಿಗಳಿಂದ ದೇಶದಲ್ಲಿ ಏಕತೆ ಸಮಾನತೆ ನಾಶವಾಗಿದೆ’ ಎಂದು ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ ಜಿ.ವಿ.ಶ್ರೀರಾಮರೆಡ್ಡಿ ಕಳವಳ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ನಡೆದ ಸಿಪಿಎಂ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿ, ಕೇಂದ್ರ ಸರ್ಕಾರದ ಆರ್ಥಿಕ ನೀತಿಗಳು ದೇಶವನ್ನು ಅತ್ಯಂತ ಅಪಾಯಕಾರಿ ಪರಿಸ್ಥಿತಿಗೆ ನೂಕಿವೆ ಎಂದರು.

ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿಲ್ಲ. ಬಿಜೆಪಿ ಸರ್ಕಾರ ಹಿಂದಿನ ಕಾಂಗ್ರೆಸ್‌ ಸರ್ಕಾರದ ಆರ್ಥಿಕ ನೀತಿಗಳನ್ನೇ ಅನುಸರಿಸುತ್ತಿದೆ. ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್ 50 ಕಿ.ಮೀ ವೇಗದಲ್ಲಿದ್ದರೆ ಮೋದಿಯವರು 150 ಕಿ.ಮೀ ವೇಗದಲ್ಲಿದ್ದಾರೆ ಅಷ್ಟೇ. ಯಾವುದೇ ಬದಲಾವಣೆ ಆಗಿಲ್ಲ ಎಂದು ಹೇಳಿದರು.

ದೇಶದಲ್ಲಿ ಕೃಷಿ ಮತ್ತು ಕೈಗಾರಿಕಾ ರಂಗ ಬಿಕ್ಕಟ್ಟಿಗೆ ಸಿಲುಕಿವೆ. ಕೃಷಿ ಬಿಕ್ಕಟ್ಟಿನಿಂದ ನಾಲ್ಕು ವರ್ಷದಲ್ಲಿ 1.40 ಲಕ್ಷ ರೈತರು ಆತ್ಮಹತ್ಯೆಗೆ ಮಾಡಿಕೊಂಡಿದ್ದಾರೆ. ರೈತರ ಆತ್ಮಹತ್ಯೆಯಲ್ಲಿ ಕರ್ನಾಟಕವು ಎರಡನೇ ಸ್ಥಾನದಲ್ಲಿದೆ. ಕೃಷಿ ಉತ್ಪಾದನೆ ಕಡಿಮೆಯಾಗಿ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಿದೆ. ಆಹಾರ ಪಡೆಯಲು ಸಾಧ್ಯವಾಗದೆ ಅಪೌಷ್ಟಿಕತೆ ಸಮಸ್ಯೆ ಎದುರಾಗಿದೆ ಎಂದು ವಿಷಾದಿಸಿದರು.

ಕೈಗಾರಿಕಾ ರಂಗ ಸಹ ಸಾಕಷ್ಟು ಬಿಕ್ಕಟ್ಟು ಎದುರಿಸುತ್ತಿದೆ. ಈಗಾಗಲೇ ಸಣ್ಣ, ಮಧ್ಯಮ ಪ್ರಮಾಣದ ಕೈಗಾರಿಕೆಗಳು ಮುಚ್ಚಿ ಹೋಗಿ ಲಕ್ಷಾಂತರ ಕಾರ್ಮಿಕರು ಬೀದಿ ಪಾಲಾಗಿದ್ದಾರೆ. ಆದರೆ, ಮೋದಿ ಲೆಕ್ಕದಲ್ಲಿ ಮಾತ್ರ ದೇಶದ ಉದ್ಧಾರದ ಬಗ್ಗೆ ಹೇಳುತ್ತಿದ್ದಾರೆ. ದೇಶ, ಜನ ಉದ್ಧಾರವಾಗಿಲ್ಲ. ಬದಲಿಗೆ ಕಾರ್ಪೊರೇಟ್‌ ಕಂಪೆನಿಗಳು, ಶ್ರೀಮಂತರು ಉದ್ಧಾರವಾಗಿದ್ದಾರೆ. ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆ ಹೆಚ್ಚಾಗಿದೆ ಎಂದು ದೂರಿದರು.

ಕಮಿಷನ್‌ ಪಡೆದಿದ್ದಾರೆ: ಕೃಷಿ ಬಿಕ್ಕಟ್ಟು ಎದುರಾಗಿರುವುದರಿಂದ ಒಂದೆಡೆ ತೊಗರಿ ಬೇಳೆ ಸಾಧ್ಯವಾಗುತ್ತಿಲ್ಲ. ಮತ್ತೊಂದೆಡೆ ಬೆಳೆದಿರುವ ತೊಗರಿ ಬೇಳೆಗೆ ಬೆಲೆ ಸಿಗುತ್ತಿಲ್ಲ. ಭ್ರಷ್ಟಾಚಾರ ಸಹಿಸಲ್ಲ ಎಂದು ಬೊಗಳೆ ಬಿಡುವ ಮೋದಿ ತೊಗರಿ ಬೇಳೆ ಖರೀದಿಯಲ್ಲಿ ದೊಡ್ಡ ಪ್ರಮಾಣದ ಅವ್ಯವಹಾರದಲ್ಲಿ ಭಾಗಿಯಾಗಿದ್ದಾರೆ. ತೊಗರಿ ಬೇಳೆ ಖರೀದಿಯಲ್ಲಿ ₹ 1.86 ಲಕ್ಷ ಕೋಟಿ ಕಮಿಷನ್‌ ಪಡೆದಿದ್ದಾರೆ ಎಂದು ಆರೋಪಿಸಿದರು.

ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರ್ಕಾರ ಕೋಮುವಾದಿ ಶಕ್ತಿಗಳಿಗೆ ಕಡಿವಾಣ ಹಾಕುವಲ್ಲಿ ಸಂಪೂರ್ಣ ವಿಫಲವಾಗಿದೆ. ಆಡಳಿತಾತ್ಮಕವಾಗಿ ಬಿಗಿ ನಿಲುವು ತಳೆಯದೆ, ಕನಿಷ್ಠ ಹೋರಾಟಕ್ಕೂ ಮುಂದಾಗುತ್ತಿಲ್ಲ ಎಂದು ಕಿಡಿ ಕಾರಿದರು.

ಪ್ರಾದೇಶಿಕ ಪಕ್ಷಗಳು ಅವಕಾಶವಾದಿ ರಾಜಕೀಯಕ್ಕೆ ಕಾಯುತ್ತಿದ್ದು, ಯಾವಾಗ ಯಾರ ಜತೆ ಹೋಗುತ್ತಾರೆ ಎನ್ನುವುದನ್ನು ಅರಿಯಲು ಸಾಧ್ಯವಿಲ್ಲ. ಅದಕ್ಕಾಗಿ ಎಲ್ಲಾ ಜಾತ್ಯಾತೀತ ಪಕ್ಷಗಳು ಒಗ್ಗೂಡಿ, ಅಪಾಯಕಾರಿ ಕೋಮುವಾದಿ ಹಾಗೂ ಆರ್ಥಿಕ ನೀತಿಗಳ ವಿರುದ್ಧ ಹೋರಾಟ ಮಾಡಬೇಕು ಎಂದು ಕರೆ ನೀಡಿದರು.

ಮಾರ್ಕ್ಸ್‌ ವಾದ: ‘ರಾಜ್ಯದಲ್ಲಿ ಕಮ್ಯುನಿಸ್ಟ್ ಪಕ್ಷ ಹುಟ್ಟುವುದಕ್ಕೂ 15 ವರ್ಷ ಮುನ್ನವೇ ರಾಷ್ಟ್ರಕವಿ ಕುವೆಂಪು ಸಾಹಿತ್ಯದ ಮೂಲಕ ಸರ್ವರಿಗೂ ಸಮ ಪಾಲು, ಸಮ ಬಾಳು ಎಂಬ ಮಾರ್ಕ್ಸ್‌ ವಾದದ ತಿರುಳನ್ನು ಜನರಿಗೆ ಪರಿಚಯಿಸಿದ್ದರು’ ಎಂದು ಸಿಪಿಎಂ ರಾಜ್ಯ ಕಾರ್ಯಕಾರಿ ಮಂಡಳಿ ಸದಸ್ಯ ಜಿ.ಎನ್.ನಾಗರಾಜ್ ಅಭಿಪ್ರಾಯಪಟ್ಟರು.

‘ಪಕ್ಷವು ಶಾಖಾ ಮಟ್ಟದಿಂದ ಅಖಿಲ ಭಾರತ ಮಟ್ಟದವರೆಗೆ ಸಮ್ಮೇಳನ ನಡೆಸಿ, ಆಯಾ ಭಾಗದ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರಕ್ಕೆ ನಿರ್ಣಯಗಳನ್ನು ಕೈಗೊಳ್ಳುತ್ತಿದೆ’ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ನಾರಾಯಣಸ್ವಾಮಿ ಹೇಳಿದರು.

ಸಮಾವೇಶಕ್ಕೂ ಮುನ್ನ ಸಿಪಿಎಂ ಕಾರ್ಯಕರ್ತರು ನಗರದ ಪ್ರಮುಖ ರಸ್ತೆಗಳಲ್ಲಿ ಬೈಕ್‌ ರ್‌್ಯಾಲಿ ಮತ್ತು ಜಾಥಾ ನಡೆಸಿದರು. ಸಿಪಿಎಂ ರಾಜ್ಯ ಸಮಿತಿ ಸದಸ್ಯರಾದ ಅರ್ಜುನನ್, ಪಿ.ಆರ್.ಸೂರ್ಯ ನಾರಾಯಣ್, ಪಿ.ಶ್ರೀನಿವಾಸ್, ಜಿಲ್ಲಾ ಸಮಿತಿ ಸದಸ್ಯರಾದ ಎ.ಆರ್.ಬಾಬು, ಎಂ.ವಿಜಯ್‌ಕುಮಾರ್‌, ಆನಂದ್‌ರಾಜ್‌, ತಂಗರಾಜ್, ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ ಪಾಲ್ಗೊಂಡಿದ್ದರು.

* * 

ಆರ್‍ಎಸ್‍ಎಸ್‌ನವರು ಭಾರತದ ಕಲ್ಪನೆಯನ್ನೇ ನಾಶ ಮಾಡಲು ಹೊರಟಿದ್ದಾರೆ. ನಾಲ್ಕು ಧರ್ಮಗಳು ಸೇರಿ ಕಟ್ಟಿದ್ದ ಭಾರತವನ್ನು ಏಕ ಧರ್ಮ ಮಾಡಲು ವ್ಯವಸ್ಥಿತ ಸಂಚು ರೂಪಿಸಿದ್ದಾರೆ. ಸಂವಿಧಾನ ಮತ್ತು ಮೂಲಭೂತ ಹಕ್ಕುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ

ಜಿ.ವಿ.ಶ್ರೀರಾಮರೆಡ್ಡಿ, ಸಿಪಿಎಂ ರಾಜ್ಯ ಘಟಕದ ಕಾರ್ಯದರ್ಶಿ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry