7
2017ರ ಒಡನಾಟಕ್ಕೆ ವಿದಾಯ, 2018ರ ಸಹಜೀವನ ಆರಂಭ

ನಗುವಿಲ್ಲ, ಮುನಿಸಿಲ್ಲ : ಅಲ್ಪ ಸಿಹಿ – ಸ್ವಲ್ಪ ಕಹಿ

Published:
Updated:
ನಗುವಿಲ್ಲ, ಮುನಿಸಿಲ್ಲ : ಅಲ್ಪ ಸಿಹಿ – ಸ್ವಲ್ಪ ಕಹಿ

ಬರಗಾಲದೊಂದಿಗೆ ವರ್ಷಾರಂಭವಾಯಿತು. ಕುಡಿಯುವ ನೀರಿಗೆ ತೀವ್ರ ತತ್ವಾರ ಶುರುವಾಯಿತು. ಕೊಳವೆಬಾವಿಗಳ ಸದ್ದು ಹೆಚ್ಚಾಯಿತು. ಬೋರ್‌ಗಳು ಬತ್ತಿದವು. ನೀರಿನ ಕೊರತೆಯಿಂದಾಗಿ ಇಂಗಳದಾಳ್, ಐನಳ್ಳಿ, ಭರಮಸಾಗರ, ಹೊಳಲ್ಕೆರೆ ತಾಲ್ಲೂಕಿನಲ್ಲಿ ರೈತರು ಅಡಿಕೆ ತೋಟಗಳಿಗೆ ಬೆಂಕಿ ಹಚ್ಚಿದ ಘಟನೆಗಳು ನಡೆದವು. ಟ್ಯಾಂಕರ್ ನೀರಿನಲ್ಲಿ ಅಡಿಕೆ ತೋಟ ಮಾಡುವಷ್ಟು ಪರಿಸ್ಥಿತಿ ವಿಕೋಪಕ್ಕೆ ತಿರುಗಿತು.

ಜಾನುವಾರುಗಳಿಗೆ ನೀರು, ಮೇವಿನ ಕೊರತೆಯಾಯಿತು. ದೇವರ ಎತ್ತುಗಳು ಸಾವನ್ನಪ್ಪಿದವು. ಟ್ಯಾಂಕರ್ ನೀರು ಪೂರೈಕೆ ಆರಂಭವಾಯಿತು. ಎಲ್ಲ ಕಡೆ ಕೊಡಗಳ ಸಾಲು ಸಾಲು. ಜಿಲ್ಲಾ ಪಂಚಾಯ್ತಿ, ತಾಲ್ಲೂಕು ಪಂಚಾಯ್ತಿ, ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿಗಳ ಸಭೆಗಳಲ್ಲೂ ಬರಗಾಲದ್ದೇ ಚರ್ಚೆ. ಜಿಲ್ಲೆಯಾದ್ಯಂತ 18 ಗೋಶಾಲೆಗಳು ಶುರುವಾದವು. 25 ರಿಂದ 40 ಸಾವಿರದವರೆಗೂ ಜಾನುವಾರುಗಳಿಗೆ ಮೇವು, ನೀರು ಪೂರೈಕೆ ಮಾಡಲಾಯಿತು. ಚಿತ್ರದುರ್ಗ ನಗರಕ್ಕೆ ಶಾಂತಿಸಾಗರದಿಂದ ನೀರು ಸ್ಥಗಿತಗೊಂಡಿತು. ವಾಣಿವಿಲಾಸ ಸಾಗರದಿಂದ ನೀರು ತರಿಸಿ, ಟ್ಯಾಂಕರ್‌ನಲ್ಲಿ ಜನರಿಗೆ ಪೂರೈಕೆ ಮಾಡಲಾಯಿತು. ಬರಗಾಲದ ತೀವ್ರತೆ ನಿರೀಕ್ಷೆ ಮೀರಿ ಇದ್ದ ಕಾರಣ ಸರ್ಕಾರ ಮಾನದಂಡಗಳನ್ನು ಸಡಿಲಿಸುವಂತಾಯಿತು.

ಸಮಾಧಾನ ತಂದ ಮಳೆಗಾಲ:

ಮೇ – ಜೂನ್ ನಡುವೆ ರುಚಿ ತೋರಿಸಿ ಮುಂಗಾರು ಮಾಯವಾಯಿತು. ಮತ್ತೊಂದು ಬರಗಾಲದ ಭಯ ಹುಟ್ಟಿಸಿತು. ಆದರೆ, ಹಿಂಗಾರು ಕೈ ಹಿಡಿಯಿತು. ಜುಲೈನಿಂದ ಸೆಪ್ಟೆಂಬರ್ (ಹೊಳಲ್ಕೆರೆ, ಮೊಳಕಾಲ್ಮುರು ಹೊರತುಪಡಿಸಿ) ಎಲ್ಲೆಡೆ ಉತ್ತಮ ಮಳೆಯಾಯಿತು. ಚಳ್ಳಕೆರೆಯಲ್ಲಿ ದಾಖಲೆ ಮಳೆ. ಚಿತ್ರದುರ್ಗದಲ್ಲಿ ಒಂದೇ ರಾತ್ರಿ 106 ಮಿ.ಮೀ ಮಳೆಯಾಯಿತು. ವರ್ಷದ ಸರಾಸರಿಯ ಅರ್ಧದಷ್ಟು ಮಳೆ ಮೂರು ದಿನಗಳಲ್ಲಿ ಸುರಿಯಿತು. ಕಳಪೆ, ಅವೈಜ್ಞಾನಿಕವಾಗಿ ಕಟ್ಟಿದ್ದ ಚೆಕ್ ಡ್ಯಾಂ, ಬ್ಯಾರೇಜ್‌ಗಳು ಮಳೆ ನೀರಿಗೆ ಕೊಚ್ಚಿ ಹೋದವು. ಕೆಲವು ಕೆರೆಗಳು ತುಂಬಿ ತೂಬುಗಳು ಬಿರುಕುಗೊಂಡವು. ‘ಮಳೆ ಬಂದಾಗ ನೋಡಿಕೊಳ್ಳೋಣ’ ಎಂದು ಉಡಾಫೆ ಮಾಡುತ್ತಾ ರಾಜಕಾಲುವೆ ಒತ್ತುವರಿ ಮಾಡಿ ಮನೆ ಕಟ್ಟಿಕೊಂಡಿದ್ದವರಿಗೆ ಈ ಮಳೆ ಪಾಠ ಕಲಿಸಿತು. ಯಾರೋ ಮಾಡಿದ ತಪ್ಪಿಗೆ ನಮ್ಮ ಮನೆಗಳಿಗೆ ನೀರು ನುಗ್ಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ನಾಗರಿಕರು ಪ್ರತಿಭಟನೆ ಮಾಡಿದರು. ಸ್ಥಳೀಯ ಸಂಸ್ಥೆಗಳು ಕಾಲುವೆ ಒತ್ತುವರಿ ತೆರವುಗೊಳಿಸಿದ್ದು. ಇವೆಲ್ಲ ನೆರೆ ಬಂದಾಗಿನ ಸಂಕಟಗಳು.

‘ಕ್ಲೀನ್ ಹೊಂಡ’ ಅಭಿಯಾನ ಫಲಪ್ರದ:

ನಗರಸಭೆಯ 80 ರಿಂದ 100 ಪೌರಕಾರ್ಮಿಕರ ನೆರವಿನೊಂದಿಗೆ ಮೂರ್ನಾಲ್ಕು ತಿಂಗಳ ಕಾಲ ಏಳೆಂಟು ಕಲ್ಯಾಣಿ, ಹೊಂಡ, ಬಾವಿಗಳನ್ನು ಸ್ವಚ್ಛಗೊಳಿಸಿದ್ದು, ಇಡೀ ವರ್ಷದ ಮಾದರಿ ಕೆಲಸಗಳಲ್ಲಿ ಪ್ರಮುಖವಾದದ್ದು. ನಗರಸಭೆ ಅಧ್ಯಕ್ಷ ಗೊಪ್ಪೆ ಮಂಜುನಾಥ್ ಆಸಕ್ತಿಯಿಂದ ನಡೆದ ಈ ಅಭಿಯಾನಕ್ಕೆ ಮುಂಗಾರು- ಹಿಂಗಾರು ಮಳೆ ಸಾಥ್ ನೀಡಿ, ಫಲಪ್ರದವಾಗಿಸಿದವು. ಸೆಪ್ಟೆಂಬರ್ ಹೊತ್ತಿಗೆ ಸ್ವಚ್ಛಗೊಂಡ ಹೊಂಡಗಳು ತುಂಬಿ ತುಳುಕಿದವು. ಹೊಂಡ ಸ್ವಚ್ಛ ಮಾಡುವಾಗ ತಿರುಗಿಯೂ ನೋಡದವರು, ಬಾಗಿನ ಬಿಡಲು ಮುಂದಾಗಿದ್ದರು!

ನನೆಗುದಿಗೆ ಬಿದ್ದಿದ್ದ ಸಿಹಿನೀರು ಹೊಂಡ ಸ್ವಚ್ಛತಾ ಕಾರ್ಯವನ್ನು ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್ ಸ್ವ ಇಚ್ಛೆಯಿಂದ ಕೈಗೆತ್ತಿಕೊಂಡರು. ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಅನೇಕ ಸಂಘ ಸಂಸ್ಥೆಗಳು, ಸಾರ್ವಜನಿಕರು ಸಾಥ್ ನೀಡಿದರು. ಮೈನ್ಸ್ ಕಂಪೆನಿಗಳು ಕೈಲಾದ ನೆರವು ನೀಡಿದವು. ಆರು ತಿಂಗಳ ಕಾಲ ನಡೆದ ಹೂಳೆತ್ತುವ ಕಾರ್ಯಾಚರಣೆಯಿಂದ ಐತಿಹಾಸಿಕ ಸಿಹನೀರು ಹೊಂಡಕ್ಕೆ ಕಾಯಕಲ್ಪ ಸಿಕ್ಕಿತು. ಅದೃಷ್ಟವೆಂಬಂತೆ ಮಳೆಯಾಯಿತು. ಎರಡು ಮೂರು ದಿನಗಳಲ್ಲಿ ಹೊಂಡ ಭರ್ತಿಯಾಯಿತು. ನಗರಸಭೆಯ ಈ ಕಾರ್ಯ, ಸಾರ್ವಜನಿಕರ ಸಹಭಾಗಿತ್ವಕ್ಕೆ ಪ್ರೇರಣೆಯಾಗಿ, ಹೊಸದುರ್ಗ, ಚಳ್ಳಕೆರೆ ಸೇರಿದಂತೆ ವಿವಿಧ ಭಾಗಗಳಲ್ಲಿ ಶ್ರಮದಾನದ ಮೂಲಕ ಹೊಂಡಗಳ ಸ್ವಚ್ಛತ ಕಾರ್ಯ ನಡೆಯಿತು.

ನೆನಪಿನಲ್ಲಿ ಉಳಿದ ರಾಷ್ಟ್ರೀಯ ವಾಲಿಬಾಲ್ ಚಾಂಪಿಯನ್‌ಶಿಪ್‌:

ಜನವರಿ 13ರಂದು ನಗರದಲ್ಲಿ ರಾಷ್ಟ್ರೀಯ ಸೀನಿಯರ್‌ ವಾಲಿಬಾಲ್ ಚಾಂಪಿಯನ್‌ಷಿಪ್‌ ನಡೆಯಿತು. ಇದು ಈ ವರ್ಷದ ಪ್ರಮುಖ ಕ್ರೀಡಾ ಚಟುವಟಿಕೆ. ಪುರುಷರ ವಿಭಾಗದಲ್ಲಿ ಕರ್ನಾಟಕ ತಂಡ ಪ್ರಥಮ ಬಹುಮಾನ, ಮಹಿಳೆಯರ ವಿಭಾಗದಲ್ಲಿ ತಮಿಳುನಾಡು ಪ್ರಥಮ ಬಹುಮಾನ ಪಡೆದವು. ಮಾದಾರ ಚನ್ನಯ್ಯ ಸ್ವಾಮೀಜಿ ಸಾರಥ್ಯದಲ್ಲಿ ನಡೆದ ಈ ಪಂದ್ಯಾವಳಿಯ ಸಮಾರೋಪ ಸಮಾರಂಭದಲ್ಲಿ ಬಾಲಿವುಡ್‌ನ ಹಿರಿಯ ಗಾಯಕ ಕುಮಾರ್‌ ಸಾನು ತಂಡ ಸಂಗೀತ ಸಂಜೆ ನಡೆಸಿಕೊಟ್ಟಿತು. ವಾಲಿಬಾಲ್ ಯಶಸ್ಸು ಕಬಡ್ಡಿ, ಕ್ರಿಕೆಟ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ನಡೆಸಲು ಉತ್ತೇಜನ ನೀಡಿತು.

ನಾಲ್ಕು ಬಾರಿ ಮುಖ್ಯಮಂತ್ರಿ ಭೇಟಿ :

ಮೇ 13ರಂದು ನಡೆದ ‘ಜನರಿಗೆ ನಮನ, ಜನರಿಗೆ ಮನನ’ ಸರ್ಕಾರದ ನಾಲ್ಕು ವರ್ಷಗಳ ಸಾಧನೆಯ ಬೆಂಗಳೂರು ವಿಭಾಗದ ಸಮಾವೇಶಕ್ಕೆ ಜಿಲ್ಲೆ ಸಾಕ್ಷಿಯಾಯಿತು. ಫಲಾನುಭವಿಗಳಿಗೆ ಸೌಲಭ್ಯ, ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಸಮಾರಂಭ ಪ್ರಮುಖ ವಿದ್ಯಮಾನಗಳಲ್ಲೊಂದು.  ಈ ಕಾರ್ಯಕ್ರಮವೂ ಸೇರಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರ್ಷವೂ ಜಿಲ್ಲೆಗೆ ನಾಲ್ಕು ಬಾರಿ ಭೇಟಿ ನೀಡಿದ್ದಾರೆ. ಸಿರಿಗೆರೆಯ ಶಿವಕುಮಾರ ಸ್ವಾಮೀಜಿ ಶ್ರದ್ಧಾಂಜಲಿ ಕಾರ್ಯಕ್ರಮ, ಮುರುಘಾಮಠದ ಶರಣ ಸಂಸ್ಕೃತಿ ಉತ್ಸವ, ಸಾಧನ ಸಮಾವೇಶ ಮತ್ತು ವರ್ಷದ ಕೊನೆಯಲ್ಲಿ ನಡೆದ ಸಾಧನ–ಸಂಭ್ರಮ ಕಾರ್ಯಕ್ರಮ, ಸಿಎಂ ಭೇಟಿ ನೀಡಿದ ಕಾರ್ಯಕ್ರಮಗಳು.

ಜಿಲ್ಲಾ ಉಸ್ತುವಾರಿ ಸಚಿವರ ‘ವಾಸ್ತವ್ಯ’

2015ರಲ್ಲಿ ಮೊಳಕಾಲ್ಮುರು ತಾಲ್ಲೂಕು ಹನುಮನಗುಡ್ಡದಿಂದ ಗ್ರಾಮವಾಸ್ತವ್ಯ ಆರಂಭಿಸಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಈ ವರ್ಷ ಜಿಲ್ಲೆಯಲ್ಲಿ ನಾಲ್ಕು ಹಳ್ಳಿಗಳಲ್ಲಿ ಗ್ರಾಮ ವಾಸ್ತವ್ಯ ಮಾಡಿದರು. ರಾಮಗಿರಿ ಸಮೀಪ ಸುಡುಗಾಡು ಸಿದ್ಧರಿಗೆ ಮನೆ ನಿರ್ಮಿಸಿಕೊಟ್ಟಿದ್ದು, ಆ ಬಡಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಇಟ್ಟಿದ್ದು ಈ ಬಾರಿಯ ವಾಸ್ತವ್ಯದ ಹೈಲೈಟ್.

ಸರ್ಕಾರಿ ಕಲಾ ಕಾಲೇಜು ಮತ್ತು ಸರ್ಕಾರಿ ವಿಜ್ಞಾನ ಕಾಲೇಜುಗಳ ಆವರಣದಲ್ಲಿ ತಲಾ ₹ 12 ಕೋಟಿ ವೆಚ್ಚದಲ್ಲಿ ಹೈಟೆಕ್ ಕಾಲೇಜು ನಿರ್ಮಾಣಕ್ಕೆ ಸಚಿವ ಆಂಜನೇಯ ಚಾಲನೆ ಕೊಡಿಸಿದ್ದು ಜಿಲ್ಲೆಯ ಶಿಕ್ಷಣ ಕ್ಷೇತ್ರದ ಬೆಳವಣಿಗೆ. ಜಿಲ್ಲೆಯ ತುಂಬಾ ಹೊಸ ಹೊಸ ವಿದ್ಯಾರ್ಥಿ ವಸತಿ ನಿಲಯಗಳು, ಹೈಟೆಕ್ ಹಾಸ್ಟೆಲ್‌ಗಳ ನಿರ್ಮಾಣವೂ ಆ ಪಟ್ಟಿಗೆ ಸೇರುತ್ತದೆ.

ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ₹ 11 ಕೋಟಿ ವೆಚ್ಚದಲ್ಲಿ ತಾಯಿ ಮತ್ತು ಮಕ್ಕಳ ಚಿಕಿತ್ಸೆಗಾಗಿ 50 ಹಾಸಿಗೆ ಸಾಮರ್ಥ್ಯದ ತಾಯಿ ಮತ್ತು ಮಕ್ಕಳ ಆಸ್ಪತ್ರೆಗೆ ಶಂಕುಸ್ಥಾಪನೆ. ಮೆಡಿಕಲ್ ಕಾಲೇಜು ಸ್ಥಾಪನೆಗೆ ಉತ್ತೇಜನ – ಜಿಲ್ಲೆಯ ಆರೋಗ್ಯ ಕ್ಷೇತ್ರದ ಪ್ರಮುಖ ಬೆಳವಣಿಗೆಗಳು.

ವಿವಾದಗಳು – ಸಂಘರ್ಷಗಳು:

ಚಿತ್ರದುರ್ಗದ ಪಾಳೆಗಾರ ಮದಕರಿ ನಾಯಕ ಪಟ್ಟಾಭಿಷೇಕ ಆಚರಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಾದ ಸೃಷ್ಟಿಯಾಯಿತು. ಅಂತಿಮವಾಗಿ ಪಟ್ಟಾಭಿಷೇಕ ರದ್ದಾಗಿ, ಮುಂದೆ ಸ್ಮರಣೋತ್ಸವದ ರೂಪದಲ್ಲಿ ಆಚರಿಸಲಾಯಿತು.

ಹಿಂದೂ ಮಹಾಗಣಪತಿ ಉತ್ಸವದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು ವಿವಾದಕ್ಕೆ ಕಾರಣವಾಯಿತು. ಟಿಪ್ಪು ಜಯಂತಿ ಆಚರಣೆ ವಿರೋಧದ ಹಿನ್ನೆಲೆಯಲ್ಲಿ ನಗರದಲ್ಲಿ ನಾಲ್ಕು ದಿನಗಳ ನಿಷೇಧಾಜ್ಞೆ ಜಾರಿ ಮಾಡಿದ್ದೂ ಹಲವರ ಟೀಕೆಗೆ ಗುರಿಯಾಯಿತು. ಈ ವೇಳೆ ಬಿಜೆಪಿ ಮತ್ತು ಹಿಂದೂ ಸಂಘಟನೆ ಕಾರ್ಯಕರ್ತರ ಬಂಧಿಸಿದ್ದನ್ನು ಹಾಗೂ ಸಂಸದ ಪ್ರತಾಪ್ ಸಿಂಹ ಅವರಿಗೆ ಸುದ್ದಿಗೋಷ್ಠಿ ನಡೆಸಲು ತಡೆಯೊಡ್ಡಿದ್ದಕ್ಕೆ ಬಿಜೆಪಿಯವರು ಮುಖಂಡ ಕೆ.ಎಸ್. ಈಶ್ವರಪ್ಪ, ಸಿ.ಟಿ.ರವಿ ನೇತೃತ್ವದಲ್ಲಿ ಪ್ರತಿಭಟನಾ ರ‍್ಯಾಲಿ ನಡೆಸಿದರು.

ವರ್ಷದ ರಾಜಕೀಯ ಮೇಲಾಟಗಳು...

ಪಕ್ಷದ ಆಂತರಿಕ ಒಡಂಬಡಿಕೆಯಂತೆ ಅಧ್ಯಕ್ಷ ಸ್ಥಾನ ಬಿಟ್ಟುಕೊಡದ ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಸೌಭಾಗ್ಯ ಬಸವರಾಜನ್ ವಿರುದ್ಧ ಆ ಪಕ್ಷದ ಸದಸ್ಯರೇ ಪ್ರತಿಭಟನೆ ನಡೆಸಿದ್ದು ಈ ವರ್ಷದ ರಾಜಕೀಯ ಬೆಳವಣಿಗೆಗಳ ಪ್ರಮುಖ ವಿದ್ಯಮಾನ. ಅದರಲ್ಲೂ ಕೆಡಿಪಿ ಸಭೆ ರದ್ದುಗೊಳಿಸುವಂತೆ ಪ್ರತಿಭಟನೆ ನಡೆಸಿದ್ದು, ಪೊಲೀಸ್ ರಕ್ಷಣೆಯಲ್ಲಿ ಸಭೆ ನಡೆಸುವಂತಾಗಿದ್ದು, ‘ಚುನಾವಣೆವರೆಗೂ ಅವಕಾಶ ಕೊಡಿ’ ಎಂಬ ಸೌಭಾಗ್ಯ ಅವರ ಮನವಿಗೆ ಸ್ಪಂದಿಸದ ವರಿಷ್ಠರು, ಆಕೆಯನ್ನು ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಉಚ್ಚಾಟಿಸಿದರು. ನಂತರ ನಡೆದ ಸಾಮಾನ್ಯ ಸಭೆಗಳಿಗೆ ಸದಸ್ಯರು ಗೈರಾಗುವ ಮೂಲಕ ಕೋರಂ ಕೊರತೆ ಸೃಷ್ಟಿಸಿ ಪರೋಕ್ಷ ಅಸಹಕಾರ ತೋರಿದರು. ಆಡಳಿತ ಪಕ್ಷದ ಸದಸ್ಯರೇ ವಿರೋಧ ಪಕ್ಷದವರಂತೆ ನಡೆದುಕೊಂಡಿದ್ದು, ಈ ಬಾರಿಯ ರಾಜಕೀಯ ಕ್ಷೇತ್ರದ ವಿಶೇಷ.

ಬಿಜೆಪಿ ಇಡೀ ವರ್ಷ ಚುನಾವಣೆ ಸಿದ್ಧತೆ ನಡೆಸಿದರು. ಪ್ರತಿಭಟನೆಗಾಗಿ ರಸ್ತೆಗಿಳಿದರು. ದಿನಾಚರಣೆಗಳನ್ನು ನಡೆಸಿದರು. ಪದಾಧಿಕಾರಿಗಳ ವಿವಿಧ ಹಂತದ ಸಭೆಗಳು, ರಾಜ್ಯ ನಾಯಕರನ್ನು ಆಹ್ವಾನಿಸುತ್ತಾ ಪಕ್ಷದ ಶಕ್ತಿ ಪ್ರದರ್ಶಿಸುತ್ತಾ ಸದಾ ಸುದ್ದಿಯಲ್ಲಿದ್ದಿದು ಈ ವರ್ಷದ ವಿಶೇಷ.

‘ನಮ್ಮ ನಡಿಗೆ ದಲಿತರ ಮನೆಗೆ’ ಎಂಬ ಕಾರ್ಯಕ್ರಮದಡಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಅವರು ಕೆಳಗೋಟೆಯ ದಲಿತರ ಮನೆಯಲ್ಲಿ ಉಪಹಾರ ಸೇವಿಸಿದ್ದರು.  ಆ ಉಪಹಾರ ಹೋಟೆಲ್‌ನಿಂದ ತರಿಸಿ ತಿಂದಿದ್ದಾರೆ ಎಂದು ಕಾಂಗ್ರೆಸ್ ನವರು ಆರೋಪಿಸಿದ್ದರು. ಇಡೀ ರಾಜ್ಯದಲ್ಲಿ ಅದು ದೊಡ್ಡ ಸುದ್ದಿಯಾಗಿತ್ತು.

ಫೆಬ್ರುವರಿಯಲ್ಲಿ ನಡೆದ ಆಗ್ನೇಯ ಶಿಕ್ಷಕರ ಕ್ಷೇತ್ರ ಚುನಾವಣೆಯಲ್ಲಿ ಜೆಡಿಎಸ್‌ನ ರಮೇಶ್ ಬಾಬು ಗೆಲುವು ಸಾಧಿಸಿದ್ದು, ಜಿಲ್ಲೆಯಲ್ಲಿ ಪಕ್ಷಕ್ಕೆ ಮತ್ತಷ್ಟು ಬಲ ಬಂದಂತಾಯಿತು. ಈ ಬೆಳವಣಿಗೆ ನಂತರ ವರಿಷ್ಠ ದೇವೇಗೌಡರು ನಿರಂತರವಾಗಿ ಜಿಲ್ಲೆಗೆ ಭೇಟಿ ನೀಡಿದರು. ಭರಮಸಾಗರ, ನಾಯಕನಹಟ್ಟಿ, ಪರಶುರಾಂಪುರ, ಹೊಸದುರ್ಗದ ರೈತರ ಹೊಲಗಳಿಗೆ ಭೇಟಿ ನೀಡಿ, ಬೆಳೆ ಹಾನಿಯ ಬಗ್ಗೆ ಪರಿಶೀಲನೆ ನಡೆಸಿ, ಆ ಭಾಗದ ಮುಖಂಡರನ್ನು ಹುರಿದುಂಬಿಸಿದರು.

ಪ್ರಾಣಿ - ಮಾನವ ಸಂಘರ್ಷ :

ಪ್ರತಿ ವರ್ಷ ಆನೆ, ಕರಡಿ ಮತ್ತು ಚಿರತೆಯೊಂದಿಗೆ ಮಾನವ ಸಂಘರ್ಷ ಸಾಮಾನ್ಯ. ಆದರೆ, ಈ ಬಾರಿ ಆನೆಗಳದ್ದೇ ಸುದ್ದಿ. ವಿಶೇಷ ಎಂದರೆ, ಕಾಡೇ ಇಲ್ಲದ ಮೊಳಕಾಲ್ಮುರು – ನಾಯಕನಹಟ್ಟಿ ಭಾಗಕ್ಕೆ ದಾಳಿಮಾಡಿದ್ದು ಜಿಲ್ಲೆಯ ರೈತರನ್ನೇ ಕಂಗಾಲಾಗಿಸಿತು. ಅರಣ್ಯ ಅಧಿಕಾರಿಗಳಿಗೆ ತಲೆನೋವು ತಂದೊಡ್ಡಿತು. ಸತತ ಹತ್ತು ದಿನಗಳ ಕಾರ್ಯಾಚಾರಣೆ­ಯೊಂದಿಗೆ ಅವುಗಳನ್ನು ‘ಸರಿ ದಾರಿ’ಗೆ ತರುವ ವೇಳೆಗೆ ಮೂವರು ತೀವ್ರವಾಗಿ ಗಾಯಗೊಳ್ಳಬೇಕಾಯಿತು.

ಬರದ ನಾಡಿನಲ್ಲಿ ಆನೆಗಳೆಲ್ಲಿ ಬರುತ್ತವೆ? ಎಲ್ಲಿದೆ ಆನೆ ಕಾರಿಡಾರ್ ಎಂದು ಕೇಳುತ್ತಿದ್ದ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಪುನಃ ಆನೆಗಳೇ ಈ ಬಾರಿ ಉತ್ತರ ನೀಡಿದವು.

ಚಿತ್ರದುರ್ಗ: ತಾಲ್ಲೂಕುಗಳ ವರ್ಷದ ಹಿನ್ನೋಟ

ಮೊಳಕಾಲ್ಮುರು ತಾಲ್ಲೂಕು

* ಮುತ್ತಿಗಾರಹಳ್ಳಿ ಗೋಶಾಲೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಿ ಪರಿಶೀಲನೆ.

* ತಾಲ್ಲೂಕಿನ ರೇಷ್ಮೆ ಬೆಳೆಗಾರರಿಗೆ ಐದು ರಾಜ್ಯ ಪ್ರಶಸ್ತಿಗಳು

* ರೊಪ್ಪದಲ್ಲಿ ಶೈಲ ಪೀಠಾಧಿಪತಿಗಳು ಧಾರ್ಮಿಕ ಸಭೆ ನಡೆಸಿದರು. ಉಜ್ಜಿನಿ ಪೀಠಕ್ಕೆ ಸಂಬಂಧಪಟ್ಟಂತೆ ನೀಡಿದ್ದ ಹೇಳಿಕೆ ವಿವಾದ ಪಡೆಯಿತು.

* ಮೊಳಕಾಲ್ಮುರು ಪಟ್ಟಣದಲ್ಲಿ ಕಾಂಗ್ರೆಸ್‌ ವೀಕ್ಷಕರ ಎದುರಲ್ಲೇ ಎನ್‌.ವೈ.ಗೋಪಾಲಕೃಷ್ಣ, ಯೋಗೇಶ್‌ಬಾಬು ಬೆಂಬಲಿಗರ ತೀವ್ರ ಜಟಾಪಟಿ.

* ದಶಕದ ನಂತರ ತುಂಬಿದ ನೆರೆಯ ಬಿಟಿಪಿ ಜಲಾಶಯ.

* ರಾಯದುರ್ಗ ತಾಲ್ಲೂಕಿನಲ್ಲಿ ಕಾಡಾನೆ ದಾಳಿಗೆ ಇಬ್ಬರು ಬಲಿ.ಹೊಳಲ್ಕೆರೆ ತಾಲ್ಲೂಕು

* ಸಚಿವ ಎಚ್.ಆಂಜನೇಯ ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಹಾಗೂ ದೊಗ್ಗನಾಳ್‌ನಲ್ಲಿ ಗ್ರಾಮ ವಾಸ್ತವ್ಯ. ಸೌಲಭ್ಯ ವಿತರಣೆ

* ಹೊಳಲ್ಕೆರೆಯಲ್ಲಿ ಹಿಂದೂ ಮಹಾಗಣಪತಿ ವಿಸರ್ಜನೆಗೆ ಡಿಜೆಗೆ ಅನುಮತಿ ನೀಡಬೇಕೆಂದು ಮಾದಾರ ಚೆನ್ನಯ್ಯ ಸ್ವಾಮೀಜಿ ನೇತೃತ್ವದಲ್ಲಿ ರಸ್ತೆ ತಡೆ.

* ಸೆ.5ರಂದು ಹೊಳಲ್ಕೆರೆಯ ಐತಿಹಾಸಿಕ ಪ್ರಸನ್ನ ಗಣಪತಿ ದೇವರ ದರ್ಶನ ಪಡೆದ ಮಾಜಿ ಪ್ರಧಾನಿ ದೇವೇಗೌಡ.

* ಸೆ.23ರಂದು ಹೊಳಲ್ಕೆರೆಯ ವಾಗ್ದೇವಿ ಶಾಲೆಗೆ ಸಾಲುಮರದ ತಿಮ್ಮಕ್ಕ ಅವರಿಂದ ಸಸಿನೆಡುವ ಕಾರ್ಯಕ್ರಮಕ್ಕೆ ಚಾಲನೆ.

* ಡಿ.15 ರಂದು ಹೊಳಲ್ಕೆರೆ ತಾಲ್ಲೂಕಿನ ತಾಳಿಕಟ್ಟೆ

ಸುತ್ತಮುತ್ತ ಕಾಡಾನೆ ದಾಳಿಗೆ ವ್ಯಕ್ತಿ, ಎತ್ತು ಬಲಿ, ಆರು ಜನರಿಗೆ ಗಾಯ.

* ಡಿ.27ರಂದು ಪಟ್ಟಣದಲ್ಲಿ ಸಚಿವ ಎಚ್.ಆಂಜನೇಯ ನೇತೃತ್ವದಲ್ಲಿ 150 ಜೋಡಿಗಳ ಸರಳ ಸಾಮೂಹಿಕ ವಿವಾಹ. ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ

ಹಿರಿಯೂರು ತಾಲ್ಲೂಕು

* ಬರಗಾಲದಲ್ಲಿ ಜಾನುವಾರುಗಳ ಸಂರಕ್ಷಣೆಗೆ ಕೆರೆ ಅಂಗಳ ಬಳಸಿಕೊಂಡು ಶಾಸಕ ಡಿ. ಸುಧಾಕರ್ ಸ್ವಂತ ಖರ್ಚಿನಲ್ಲಿ ಮೇವು ಬೆಳೆದಿದ್ದು.

* ವಾಣಿ ವಿಲಾಸ ಜಲಾಶಯ ಬರಿದಾದ ಕಾರಣ ಅಚ್ಚುಕಟ್ಟು ಪ್ರದೇಶದಲ್ಲಿನ 900 ಎಕರೆ ತೆಂಗು, ಅಡಿಕೆ ಬೆಳೆ ಒಣಗಿದ್ದು.

* ವಿವಿ ಸಾಗರ ಜಲಾಶಯದಲ್ಲಿರುವ ಅಲ್ಪ ನೀರನ್ನು ನಾಲೆಗಳಲ್ಲಿ ಹರಿಸುವಂತೆ ತಿಂಗಳುಗಳ ಕಾಲ ಅಚ್ಚುಕಟ್ಟು ರೈತರ ಧರಣಿ.

* ವೇದಾವತಿ ನದಿಗೆ ಕಸವನಹಳ್ಳಿ ಸಮೀಪ ರೈತರಿಂದಲೇ ಒಡ್ಡು ನಿರ್ಮಾಣ.

* ತಾಲ್ಲೂಕಿನಲ್ಲಿ ಸಾಲಬಾಧೆಗೆ ಈ ವರ್ಷ 8 ರೈತರು ಆತ್ಮಹತ್ಯೆಗೆ ಶರಣು.

* ಧರ್ಮಪುರ ಕೆರೆಗೆ ಪೂರಕ ನಾಲೆ ನಿರ್ಮಿಸುವಂತೆ ಹಾಗೂ ತಾಲ್ಲೂಕು ಕೇಂದ್ರ ಮಾಡುವಂತೆ ನೂರಕ್ಕೂ ಹೆಚ್ಚು ದಿನ ಧರಣಿ.

* ಹಿರಿಯೂರು ತಾಲ್ಲೂಕಿನಲ್ಲಿ ಐಮಂಗಲ ಕಲ್ಲಟ್ಟಿ ಮೂಲಕ ಆನೆಗಳ ದಾಳಿ. ಜನರಲ್ಲಿ ಭಯ ಬಿತ್ತಿದ ಗಜರಾಜ.

ಹೊಸದುರ್ಗ ತಾಲ್ಲೂಕು

* ಸಾಣೆಹಳ್ಳಿ ತರಳಬಾಳು ಶಾಖಾ ಮಠದಲ್ಲಿ 12ನೇ ರಾಷ್ಟ್ರೀಯ ಯಕ್ಷಗಾನ ಬಯಲಾಟ ಸಮ್ಮೇಳನ ಆಯೋಜನೆ

* ಸಾಣೇಹಳ್ಳಿ ಶಾಖಾ ಮಠದಲ್ಲಿ ಮಾರ್ಚ್‌ 5ರಂದು ರಾಷ್ಟ್ರೀಯ ಗೊಂಬೆಯಾಟ ಉತ್ಸವ ಆಯೋಜನೆ.

* ಕಂಚೀಪುರದಲ್ಲಿ ಏಪ್ರಿಲ್‌ 2 ರಂದು ಸಂಭವಿಸಿದ ಲಘು ಭೂಕಂಪನಕ್ಕೆ ಕಂಚೀವರದರಾಜ ಸ್ವಾಮಿ ದೇಗುಲದ ಗೋಪುರ ಬಿರುಕು ಬಿಟ್ಟಿತ್ತು.

* ಮತ್ತೋಡು ಹೋಬಳಿ ಕುದುರೆ ಕಣಿವೆ ಅರಣ್ಯ ಪ್ರದೇಶದಲ್ಲಿ ಏಪ್ರಿಲ್‌ 26ರಂದು ವಿದ್ಯುತ್‌ ತಂತಿ ತಗುಲಿ ಕರಡಿ, ಚಿರತೆ ಹಾಗೂ ಮುಳ್ಳಂದಿ ಸಾವು.

* ಹೊಸದುರ್ಗದಲ್ಲಿ ಏಪ್ರಿಲ್‌ 28ರಂದು ನಡೆದ 4ನೇ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್‌ ಸಮ್ಮೇಳನ ಆಯೋಜನೆ.

* ಬಾಗೂರು ಗ್ರಾಮದ ಓರುಗಲ್ಲಮ್ಮ ದೇಗುಲಕ್ಕೆ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಜೂನ್‌ 16ರಂದು ಭೇಟಿ .

* ಹೊಸದುರ್ಗದಲ್ಲಿ ಮೇ 7ರಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಅವರಿಂದ ಸಾಗುವಳಿ ಚೀಟಿ, ಅರಣ್ಯ ಹಕ್ಕುಪತ್ರ ವಿತರಣೆ.

* ಮಾಡದಕೆರೆಯಲ್ಲಿ ಜೂನ್‌ 28ರಂದು ಸಮಗ್ರ ಕೃಷಿ ಅಭಿಯಾನಕ್ಕೆ ಕೃಷಿ ಸಚಿವ ಕೃಷ್ಣ ಬೈರೇಗೌಡ ಚಾಲನೆ

* ಹೊಸದುರ್ಗದಲ್ಲಿ ವಿದ್ಯುತ್‌ ಮಗ್ಗದ ಕ್ಲಸ್ಟರ್‌ ಕೇಂದ್ರ ನಿರ್ಮಾಣಕ್ಕೆ ಜುಲೈ 28ರಂದು ಜವಳಿ ಹಾಗೂ ಮುಜರಾಯಿ ಖಾತೆ ಸಚಿವ ರುದ್ರಪ್ಪ ಲಮಾಣಿ ಭೂಮಿ ಪೂಜೆ.

* ಮಲ್ಲಪ್ಪನಹಳ್ಳಿಯಲ್ಲಿ ಜುಲೈ 30ರಂದು ನಡೆದ ಗುರು ಸಿದ್ಧರಾಮೇಶ್ವರ ವಿದ್ಯಾಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭವನ್ನು ಇಸ್ರೊ ಅಧ್ಯಕ್ಷ ಡಾ.ಎ.ಎಸ್‌.ಕಿರಣ್‌ಕುಮಾರ್‌ ಉದ್ಘಾಟನೆ.

* ಹೊಸದುರ್ಗದಲ್ಲಿ ಸೆಪ್ಟಂಬರ್‌ 5ರಂದು ನಡೆದ ಜೆಡಿಎಸ್‌ ಕಾರ್ಯಕರ್ತರ ಸಮಾವೇಶವನ್ನು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್‌.ಡಿ.ದೇವೇಗೌಡ ಉದ್ಘಾಟಿಸಿದರು.

ಚಳ್ಳಕೆರೆ ತಾಲ್ಲೂಕು

ಉದ್ಯಮಿ ಕೆ.ಸಿ.ವೀರೇಂದ್ರ (ಪಪ್ಪಿ) ಅವರ ಮನೆಯಲ್ಲಿ ಸೆಪ್ಟೆಂಬರ್‌ 12ರಂದು ರಾತ್ರಿ ₹ 6.30 ಕೋಟಿ ಮೌಲ್ಯದ 21 ಕೆ.ಜಿ ಬಂಗಾರದ ಗಟ್ಟಿ ಹಾಗೂ ಅವರ ಸಹೋದರ ಕೆ.ಸಿ.ತಿಪ್ಪೇಸ್ವಾಮಿ ಅವರ ಮನೆಯಲ್ಲಿ ₹ 10.70 ಲಕ್ಷ ನಗದು ಕಳವು ಮಾಡಲಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry