ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತ್ರೆ ಸೊಗಡಿಗೆ ಚಂದ್ರಮಂಡಲ ಮುನ್ನುಡಿ

ಜಿಲ್ಲೆಯಲ್ಲಿ ಹೊಸ ವರ್ಷದಲ್ಲಿ ಮೊದಲ ಪರಿಷೆ
Last Updated 1 ಜನವರಿ 2018, 6:26 IST
ಅಕ್ಷರ ಗಾತ್ರ

ಹನೂರು: ಕಾವೇರಿ ಕಣಿವೆ ಮಗ್ಗುಲಿನ ಚಿಕ್ಕಲ್ಲೂರಿನಲ್ಲಿ ನಡೆಯುವ ಜಾತ್ರೆ ಜಿಲ್ಲೆಯಲ್ಲಿ ಹೊಸ ವರ್ಷದಲ್ಲಿ ಮೊದಲ ಜಾತ್ರೆ. ಚಂದ್ರಮಂಡಲದ ಮೂಲಕ ಜಾತ್ರೆ ಆರಂಭವಾಗುತ್ತದೆ.

ಸಿದ್ದಪ್ಪಾಜಿಯು ಕತ್ತಲರಾಜ್ಯದಲ್ಲಿ ಜನರನ್ನು ಜಾಗೃತಿಗೊಳಿಸಿ ಬೆಳಕಾದ ಪ್ರತೀಕವಾಗಿ ಚಂದ್ರಮಂಡಲ, ಪರಂಜ್ಯೋತಿ, ಜ್ಯೋತಿರ್ಲಿಂಗಯ್ಯ ಎಂಬ ಸಾಂಕೇತಿಕ ಅರ್ಥಗಳಿಂದ ಕರೆಯಲಾಗುತ್ತದೆ.

ಸಪ್ತಗ್ರಾಮಗಳ ಸಮಾಗಮ: ಜ.2ರಿಂದ 5 ದಿನ ವಿಜೃಂಭಣೆಯಿಂದ ಜರುಗುವ ಜಾತ್ರೆಯಲ್ಲಿ ಚಂದ್ರಮಂಡಲ ಪ್ರಮುಖ ಆಕರ್ಷಣೆ.

ಚಿಕ್ಕಲ್ಲೂರು ಸುತ್ತಮುತ್ತಲಿನ ಬಾಣೂರು, ಬಾಳಗುಣಸೆ, ತೆಳ್ಳನೂರು, ಇಕ್ಕಡಹಳ್ಳಿ ಮುಂತಾದ ಏಳು ಊರುಗಳ ವಿವಿಧ ಸಮುದಾಯಗಳು ಒಟ್ಟಾಗಿ ಸೇರಿ ಇದನ್ನು ಸಡಗರ ಸಂಭ್ರಮದಿಂದ ಆಚರಿಸುತ್ತಾರೆ.

ಚಂದ್ರಮಂಡಲವೆಂಬ ಬಿದಿರಿನ ಕಿರೀಟ, ತೇರಿನ, ಜ್ಯೋತಿಯ ಆಕೃತಿಯನ್ನು ನಿರ್ಮಿಸುತ್ತಾರೆ. ಬಿದಿರಿನ ಅಚ್ಚೆ, ನಾರುಗಳಿಂದ ಕಟ್ಟುವ ಈ ಚಂದ್ರಮಂಡಲಕ್ಕೆ ಭಕ್ತರು ಕೊಡುವ ಪಂಜು, ಎಣ್ಣೆ, ತುಪ್ಪ, ಹೂವು, ಹೊಂಬಾಳೆ ಹಾಕಿ ಸಿಂಗರಿಸಲಾಗುತ್ತದೆ.

ಸುಗ್ಗಿ ಮುಗಿದು ದವಸಧಾನ್ಯಗಳನ್ನು ತುಂಬಿಕೊಳ್ಳುವ ಏಳು ಊರುಗಳ ಜನರು ಚಂದ್ರಮಂಡಲ ಉತ್ಸವಕ್ಕೆ ತಮ್ಮದೇ ಕೆಲ ಕೊಡುಗೆಗಳನ್ನು ನೀಡುತ್ತಾರೆ. ತೆಳ್ಳನೂರು ಹಾಗೂ ಸುಂಡ್ರಳ್ಳಿ ಗ್ರಾಮದ ಜನರು ಬೊಂಬು, ಬಿದಿರು, ಅಚ್ಚೆ ನೀಡಿದರೆ, ಇಕ್ಕಡಹಳ್ಳಿ ಹಾಗೂ ಇರಿದಾಳು ಗ್ರಾಮಸ್ಥರು ಎಣ್ಣೆ, ಪಂಜು ಪೂರೈಸುತ್ತಾರೆ.

ಬಾಣೂರು ಹಾಗೂ ಬಾಳಗುಣಸೆ ಗ್ರಾಮದವರು ಮಡಿ ಬಟ್ಟೆಯನ್ನು ನೀಡುತ್ತಾರೆ. ಮಧ್ಯರಾತ್ರಿ ವೇಳೆಗೆ ಬೊಪ್ಪೆಗೌಡನಪುರದ ಧರೆಗೆ ದೊಡ್ಡವರ ಸಂಸ್ಥಾನ ಮಠದ ಸ್ವಾಮಿಗಳು ಗದ್ದಿಗೆಗೆ ಹಾಗೂ ಚಂದ್ರಮಂಡಲಕ್ಕೆ ಪೂಜೆ ಮಾಡಿ ಚಂದ್ರಮಂಡಲದ ಆಕೃತಿಯನ್ನು ಬೆಳಗುತ್ತಾರೆ. ಇದೇ ಚಂದ್ರಮಂಡಲ ಸೇವೆ.

ಚಂದ್ರಮಂಡಲಕ್ಕೆ ಭಕ್ತಾದಿಗಳು ಹಣ್ಣು, ಜವನ, ದವಸಧಾನ್ಯ, ನಗನಾಣ್ಯಗಳನ್ನು ಎಸೆದು ಹರಕೆ ಒಪ್ಪಿಸುತ್ತಾರೆ. ಕೊನೆಗೆ ಉಳಿಯುವ ಚಂದ್ರಮಂಡಲದ ಬೂದಿಗೆ ಎಣ್ಣೆ, ಕರ್ಪೂರ ಹಾಕಿ ಕಲಸಿ ಮಟ್ಟಿ ಕಪ್ಪು ಮಾಡಿ ಹಣೆಗೆ ಹಚ್ಚಿಕೊಳ್ಳುತ್ತಾರೆ. ಇದೇ ಇಂದು ಮಂಟೇಸ್ವಾಮಿ, ಸಿದ್ದಪ್ಪಾಜಿ ಪರಂಪರೆಯಲ್ಲಿ ಕಪ್ಪುಧೂಳ್ತ ಎಂದು ಪ್ರಸಿದ್ಧಿ ಪಡೆದಿದೆ.

ಶಾಗ್ಯ ಗ್ರಾಮಕ್ಕೆ ಮಾತ್ರ ಸೀಮಿತ: 600 ವರ್ಷಗಳಿಗೂ ಹೆಚ್ಚು ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಹಿನ್ನೆಲೆ ಹೊಂದಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಚಂದ್ರಮಂಡಲ ಕಟ್ಟುವ ಅವಕಾಶ ಶಾಗ್ಯ ಗ್ರಾಮದ ಆದಿಜಾಂಬವ ಸಮುದಾಯಕ್ಕೆ ಮಾತ್ರ ಸೀಮಿತವಾಗಿದೆ.

ಸರ್ವ ಸಮುದಾಯಗಳ ಏಕತೆಯ ಪ್ರತೀಕವಾಗಿರುವ ಚಿಕ್ಕಲ್ಲೂರು ಜಾತ್ರೆಯಲ್ಲಿ ಈ ಗ್ರಾಮದವರು ಪ್ರಧಾನ ಪಾತ್ರ ವಹಿಸುತ್ತಾರೆ.

ಜಾತ್ರೆಯ ಆರಂಭದ ದಿನದಿಂದ ಮುಕ್ತಾಯದವರೆಗೂ ಜರುಗುವ ವಿವಿಧ ಉತ್ಸವಗಳಲ್ಲಿ ಇವರ ಭಾಗವಹಿಸುವಿಕೆ ಅತ್ಯಂತ ಮುಖ್ಯವಾಗಿರುತ್ತದೆ.

ಜಾತ್ರೆಯ ಕೊನೆಯ ಕಡಬಾಗಿಲು ಸೇವೆ ದಿನ ಇವರಿಗೆ ಮಠದ ವತಿಯಿಂದ ವಿಶೇಷ ಆತಿಥ್ಯ ನೀಡಿ ಗೌರವಿಸಲಾಗುತ್ತದೆ. ಜಾತ್ರೆ ಆರಂಭವಾಗುವುದು, ಮುಕ್ತಾಯಗೊಳ್ಳುವುದು ಈ ಗ್ರಾಮಸ್ಥರಿಂದಲೇ ಎಂಬುದು ಮತ್ತೊಂದು ವಿಶೇಷ.

ನಾಲ್ಕೈದು ತಲೆಮಾರಿನಿಂದ ಗ್ರಾಮದಲ್ಲಿರುವ ಗುರುಮನೆ ಕುಟುಂಬದವರು ಚಿಕ್ಕಲ್ಲೂರು ಜಾತ್ರೆಗೆ ಚಂದ್ರಮಂಡಲ ಕಟ್ಟುತ್ತಾ ಬಂದಿದ್ದಾರೆ.

‘ನಮ್ಮ ತಂದೆ ಚಂದ್ರಮಂಡಲ ಕಟ್ಟುತ್ತಿದ್ದರು, ಅವರು ನಿಧನರಾದ ನಂತರ ಜವಾಬ್ದಾರಿ ನನ್ನದಾಗಿದೆ. ಗುರುಮನೆಯ ಇನ್ನೂ ಐದಾರು ಜನರು ನನಗೆ ಸಹಾಯ ಮಾಡುತ್ತಾರೆ’ ಎಂದು ಶಾಗ್ಯ ಗ್ರಾಮದ ಗುರುಮನೆ ಮುಖ್ಯಸ್ಥ ರಾಚಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT