ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 343 ಕೋಟಿಯ ಕಾಮಗಾರಿಗಳಿಗೆ ಚಾಲನೆ

Last Updated 1 ಜನವರಿ 2018, 6:44 IST
ಅಕ್ಷರ ಗಾತ್ರ

ಕಡೂರು: ಇದೇ 5ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಡೂರಿನಲ್ಲಿ ₹ 343 ಕೋಟಿ ವೆಚ್ಚದ ಕಾಮಗಾರಿಗಳಿಗೆ ಶಂಕುಸ್ಥಾಪನೆ ಮತ್ತು ಉದ್ಘಾಟನೆ ನೆರವೇರಿಸಲಿದ್ದಾರೆ. ಇದನ್ನು ‘ಕಡೂರಿನ ಅಭಿವೃದ್ಧಿಯ ಸಂಭ್ರಮ’ ಎನ್ನಬಹುದು ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.

ಭಾನುವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಮುಖ್ಯಮಂತ್ರಿ ಇದೇ 13ರವರೆಗೆ ರಾಜ್ಯ ಪ್ರವಾಸ ಮಾಡುತ್ತಿದ್ದಾರೆ. ಹಲವು ಕಡೆ ಅವರು ಸಾಧನಾ ಸಂಭ್ರಮ ಹೆಸರಿನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡಿಗಲ್ಲು ಮತ್ತು ಉದ್ಘಾಟನೆ ಮಾಡುತ್ತಿದ್ದಾರೆ. ನವಕರ್ನಾಟಕ ನಿರ್ಮಾಣದತ್ತ ಎಂಬ ಸರ್ಕಾರದ ಸಾಧನೆಯ ಜಾಹೀರಾತುಗಳು ಬರುತ್ತಿವೆ. ಅಂತಹ ಅಭಿವೃದ್ಧಿಯ ಪಟ್ಟಿಯಲ್ಲಿ ಕಡೂರನ್ನು ಆಯ್ಕೆ ಮಾಡಿಕೊಂಡಿರುವುದಕ್ಕಾಗಿ ಮುಖ್ಯಮಂತ್ರಿಯನ್ನು ಅಭಿನಂದಿಸುತ್ತೇನೆ’ ಎಂದರು.

ದಶಕಗಳಿಂದ ಕಗ್ಗಂಟಾಗಿ ಉಳಿದಿದ್ದ ಎಮ್ಮೆದೊಡ್ಡಿ ಪ್ರದೇಶದ 56 ಜನ ಬಗರ್‌ಹುಕಂ ಸಾಗುವಳಿದಾರರಿಗೆ ಮುಖ್ಯಮಂತ್ರಿಯ ಕಾರ್ಯಕ್ರಮದಲ್ಲಿ ಪತ್ರ ವಿತರಿಸಲಾಗುವುದು. 500ಕ್ಕೂ ಹೆಚ್ಚು ಬಗರ್‌ಹುಕುಂ ಸಾಗುವಳಿ ಪತ್ರ ಸಿದ್ಧವಾಗಿದ್ದು ಹಂತ ಹಂತವಾಗಿ ಅರ್ಜಿದಾರರ ಅರ್ಹತೆ ಮುಂತಾದವುಗಳನ್ನು ಪರಿಶೀಲಿಸಿ, ವಿಲೇವಾರಿ ಮಾಡಲಾಗುವುದು ಎಂದು ವಿವರಿಸಿದ ಶಾಸಕರು, ಕ್ಷೇತ್ರದ ಅಭಿವೃದ್ಧಿಗೆ ಶಾಸಕರ ಕೊಡುಗೆ ಶೂನ್ಯ ಎಂದು ಹೇಳುವವರಿಗೆ ಮುಖ್ಯಮಂತ್ರಿಯೇ ಅಧಿಕೃತವಾಗಿ ಚಾಲನೆ ನೀಡಲಿರುವ ಈ ಕಾರ್ಯಕ್ರಮಗಳಲ್ಲಿ ಯಾವುದೇ ಸುಳ್ಳು ಇಲ್ಲ ಎಂಬುದನ್ನು ಗಮನಿಸಲಿ ಎಂದರು.

‘2010ರಲ್ಲಿ ನಡೆದ ಉಪ ಚುನಾವಣೆಯಲ್ಲಿ ಆಗ ಅಧಿಕಾರದಲ್ಲಿದ್ದ ಬಿಜೆಪಿಯ ಇಡೀ ಸರ್ಕಾರವೇ ಇಲ್ಲಿ ಬೀಡುಬಿಟ್ಟಿತ್ತು. ಆಗ ಯಡಿಯೂರಪ್ಪನವರು ‘ಕಡೂರನ್ನು ದತ್ತು ತೆಗೆದುಕೊಳ್ಳುತ್ತೇನೆ’ ಎಂದು ಹೇಳಿದ್ದರು. ಆದರೆ, ಅದಕ್ಕೆ ಅವರಿಗೆ ಸಮಯ ಸಾಲಲಿಲ್ಲ. ಈಚೆಗೆ ಕಡೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಳ್ಳು ಹೇಳುತ್ತಾರೆ’. ಅದರಂತೆ ‘ಕಡೂರಿನಲ್ಲಿ ದತ್ತ ಸುಳ್ಳು ಹೇಳುತ್ತಾರೆ’ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಯ ಜತೆ ನನ್ನನ್ನು ಸಮೀಕರಿಸಿದಕ್ಕಾಗಿ ಅವರಿಗೆ ಅಭಿನಂದನೆ ಹೇಳುತ್ತೇನೆ. ಆದರೆ,ಮುಖ್ಯಮಂತ್ರಿಯೇ ಅಧಿಕೃತವಾಗಿ ಚಾಲನೆ ನೀಡುವ ಕಾರ್ಯಕ್ರಮಗಳು ಸುಳ್ಳಾಗುವುದಕ್ಕೆ ಸಾಧ್ಯವಿಲ್ಲ’ ಎಂಬುದನ್ನು ಅವರು ಗಮನಿಸಲಿ ಎಂದು ಹೇಳಿದರು.

ಚಾಲನೆ ದೊರೆಯಲಿರುವ ಕಾಮಗಾರಿಗಳು

ಇದೇ 5ರಂದು ತಾಲ್ಲೂಕಿನ ಬಹುದಿನಗಳ ಕನಸಾದ 32 ಕೆರೆಗಳಿಗೆ ನೀರು ತುಂಬಿಸುವ ಭದ್ರಾ ಮೇಲ್ದಂಡೆ ಯೋಜನೆಯ ತುಮಕೂರು ಶಾಖಾ ಕಾಲುವೆಯ ಮೊದಲ ಹಂತದ ₹ 108 ಕೋಟಿ ವೆಚ್ಚದ ಕಾಮಗಾರಿ, ₹ 100 ಕೋಟಿ ವೆಚ್ಚದ ಸೋಲಾರ್ ಪಾರ್ಕ್ ಸೇರಿದಂತೆ ಯಗಟಿ ಹೋಬಳಿಯ ಕುಂಕನಾಡು ಗ್ರಾಮದಲ್ಲಿ ₹ 12 ಕೋಟಿ ವೆಚ್ಚದ ಎಂಎಸ್‍ಎಸ್ ವಿದ್ಯುತ್ ವಿತರಣಾ ಕೇಂದ್ರ ಮತ್ತು ಹಿರೇನಲ್ಲೂರಿನಲ್ಲಿ ₹ 98 ಲಕ್ಷ ವೆಚ್ಚದ ಬಾಕ್ಸ್ ಚರಂಡಿ ಕಾಮಗಾರಿ ಸೇರಿದಂತೆ ಒಟ್ಟು ₹ 343 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ದತ್ತ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT