ಶನಿವಾರ, ಜೂಲೈ 11, 2020
28 °C
ಇತಿಹಾಸ ಸೇರಿದ 2017; ಹಾಸ್ಟೆಲ್‌ಗಳಲ್ಲಿ ನೃತ್ಯ, ಮನೆಗಳಲ್ಲಿ ಕೇಕ್‌ ಸವಿ

ಹೊಸ ವರ್ಷಕ್ಕೆ ಹರುಷದ ಸ್ವಾಗತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಂಡ್ಯ: ಚುಮುಚಮು ಚಳಿಯ ನಡುವೆ ಜನ 2017ಕ್ಕೆ ವಿದಾಯ ಹೇಳಿ 2018ಕ್ಕೆ ಸಂಭ್ರಮದಿಂದ ಸ್ವಾಗತ ಕೋರಿದರು.

ನಗರದ ವಿವಿಧೆಡೆ ಹೊಸ ವರ್ಷಾಚರಣೆ ಹಬ್ಬದ ಕಳೆ ಕಟ್ಟಿತ್ತು. ರಾತ್ರಿ 12 ಗಂಟೆಯಾಗುತ್ತಿದ್ದರೆ ಬಾನಿನಲ್ಲಿ ಪಟಾಕಿಗಳು ಸಿಡಿದವು.

ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಸಂತಸದಿಂದ ಪರಸ್ಪರ ಹೊಸ ವರ್ಷದ ಶುಭಾಶಯ ಕೋರಿದರು. ನಗರದ ಅಗ್ರಿ ಕ್ಲಬ್‌, ಸ್ಪೋರ್ಟ್ಸ್‌ ಕ್ಲಬ್‌ಗಳಲ್ಲಿ ಸದಸ್ಯರು ಹೊಸ ವರ್ಷಾಚರಣೆ ಮಾಡಿದರು. ಮೈಸೂರು– ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಡಾಭಾಗಳಲ್ಲಿ ಹೊಸ ವರ್ಷದ ಅಂಗವಾಗಿ ಯುವಕರು ಸಂತೋಷ ಕೂಟ ಏರ್ಪಡಿಸಿದ್ದರು.

ಮನೆಗಳಲ್ಲೂ ಕೇಕ್‌ ಕತ್ತರಿಸಿ ಹೊಸ ವರ್ಷಕ್ಕೆ ಸ್ವಾಗತ ಕೋರಿದರು. ಕೆಲವೆಡೆ ಅಕ್ಕಪಕ್ಕದ ಮನೆಯವರು ಒಟ್ಟಾಗಿ ಸೇರಿ ನೃತ್ಯ ಮಾಡಿ ಹೊಸ ವರ್ಷಾಚರಣೆ ಮಾಡಿದರು. ಹಾಸ್ಟೆಲ್‌ಗಳಲ್ಲಿ ವಿದ್ಯಾರ್ಥಿಗಳು ನೃತ್ಯ ಮಾಡುವ ಮೂಲಕ ಹಬ್ಬ ಆಚರಿಸಿದರು.

ಮಾಂಸದೂಟ: ಭಾನುವಾರವಾಗಿದ್ದ ಕಾರಣ ಬೆಳಿಗ್ಗೆಯಿಂದಲೇ ನಗರದ ಎಲ್ಲಾ ಮಾಂಸದ ಅಂಗಡಿಗಳ ಮುಂದೆ ಜನಜಾತ್ರೆ ನೆರೆದಿತ್ತು. ನೂರು ಅಡಿ ರಸ್ತೆ ಬದಿಯಲ್ಲಿ ಗುಡ್ಡೆ ಬಾಡು ಕೊಳ್ಳಲು ಜನರು ಮುಗಿ ಬಿದ್ದಿದ್ದರು. ಮಾಂಸದ ಅಂಗಡಿ ಮಾಲೀಕರು ಹೊಸ ವರ್ಷದ ಅಂಗವಾಗಿ ಹೆಚ್ಚು ಮರಿ ಕಡಿದಿದ್ದರು. ‘ಇಂದು ನಮ್ಮ ಅಂಗಡಿಯಲ್ಲಿ ಹೆಚ್ಚುವರಿಯಾಗಿ 10 ಮರಿ ಕಡಿದಿದ್ದೇವೆ. ಹೊಸ ವರ್ಷವಾದ್ದರಿಂದ ಜನಜಂಗುಳಿ ಇದೆ. ವ್ಯಾಪಾರ ಭರ್ಜರಿಯಾಗಿದೆ’ ಎಂದು ಮಾಂಸದಂಗಡಿಯ ಅಬ್ದಲ್ಲಾ ಹೇಳಿದರು.

ಬೇಕರಿಗಳಲ್ಲಿ ಕೇಕ್‌ ಮೇಳ: ನಗರದ ಹಲವು ಬೇಕರಿಗಳಲ್ಲಿ ಹೊಸ ವರ್ಷದ ಅಂಗವಾಗಿ ಕೇಕ್‌ ಮೇಳ ಆಯೋಜನೆ ಮಾಡಲಾಗಿತ್ತು. ಬೇಕರಿ ಮುಂದೆ ಶಾಮಿಯಾನ ಹಾಕಿಸಿ ವಿವಿಧ ಮಾದರಿಯ ಕೇಕ್‌ ತಯಾರಿಸಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಡಲಾಗಿತ್ತು. ಆರ್‌ಆರ್‌ ಬೇಕರಿ, ಅರವಿಂದ್‌ ಬೇಕ್‌ ಪಾಯಿಂಟ್‌, ರಾಘವೇಂದ್ರ ಬೇಕರಿ, ಎಂ.ವಿ.ಜಿ. ಬೇಕರಿಗಳಲ್ಲಿ ನಡೆದ ಕೇಕ್‌ ಮೇಳದಲ್ಲಿ ಜನರು ತಮ್ಮಿಷ್ಟದ ಕೇಕ್‌ ಕೊಂಡರು.

ಜನಜಾತ್ರೆ...

ಮಂಡ್ಯ: ಹೊಸ ವರ್ಷಾಚರಣೆ ಅಂಗವಾಗಿ ಭಾನುವಾರ ಕೆ.ಆರ್.ಎಸ್‌ ಬೃಂದಾವನಕ್ಕೆ ದಾಖಲೆಯ ಪ್ರವಾಸಿಗರು ಭೇಟಿ ನೀಡಿದ್ದರು. ಕೆ.ಆರ್‌.ಎಸ್‌ ಮಾರ್ಗವಾಗಿ ಚಲಿಸುವ ಭಾರಿ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿತ್ತು. ಕೇವಲ ಪ‍್ರವಾಸಿಗರ ವಾಹನಗಳು ಚಲಿಸುವ ವ್ಯವಸ್ಥೆ ಮಾಡಲಾಗಿತ್ತು. ಬೆಳಿಗ್ಗೆಯಿಂದಲೂ ಬೃಂದಾವನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದರು. ಸಂಜೆಯಾಗುತ್ತಿದ್ದಂತೆ ವಿದ್ಯುತ್‌ ದೀಪಾಲಂಕಾರ ನೋಡಿ ಆನಂದಿಸಿದರು. ಸಂಗೀತ ಕಾರಂಜಿಯನ್ನು ಸ್ಥಳದಲ್ಲಿ ಜನಸಾಗರವೇ ನೆರೆದಿತ್ತು. ರಾತ್ರಿ 9.30ರವರೆಗೂ ಬೃಂದಾವನ ತೆರೆದಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.