ಶನಿವಾರ, ಜೂಲೈ 4, 2020
21 °C

ಬಾಳೆಯೇ ಬಂಗಾರ

ಗುರುರಾಜ ಬ. ಕನ್ನೂರ Updated:

ಅಕ್ಷರ ಗಾತ್ರ : | |

ಬಾಳೆಯೇ ಬಂಗಾರ

ಅವರು ಅರಣ್ಯ ವಿಷಯದಲ್ಲಿ ಬಿಎಸ್ಸಿ ಪದವೀಧರರು. 17 ವರ್ಷಗಳಿಂದ ರಾಜ್ಯದ ಮೂಲೆ ಮೂಲೆಯಲ್ಲಿರುವ ರೈತರಿಗೆ ಜಲ ಸಂರಕ್ಷಣೆ ಕುರಿತು ಪಾಠ ಮಾಡುತ್ತಿದ್ದರು. ಬೈಫ್ ಗ್ರಾಮೀಣ ಸೇವಾ ಸಂಸ್ಥೆಯ ಮೂಲಕ ಕೃಷಿ ಸೇವೆ ಸಲ್ಲಿಸುತ್ತಿದ್ದರು.

ವರ್ಗಾವಣೆ ಕಾರಣದಿಂದ ಊರೂರು ತಿರುಗುವುದು ಬೇಡ ಎಂಬ ನಿರ್ಧಾರಕ್ಕೆ ಬಂದು ಕೃಷಿಯಲ್ಲಿಯೇ ಖುಷಿ ಕಾಣುವ ಉದ್ದೇಶದಿಂದ ಮರಳಿ ತಮ್ಮ ಹೊಲದತ್ತ ಹೆಜ್ಜೆ ಹಾಕಿದರು. ಉದ್ಯೋಗ ಬಿಟ್ಟು ಕೃಷಿಯತ್ತ ಹೊರಳಿದ ಆ ವ್ಯಕ್ತಿಯೇ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲ್ಲೂಕಿನ ತಂಗಡಗಿ ಗ್ರಾಮದ ಶಶಿಧರ ಹಾಲ್ಯಾಳ. ತಮ್ಮ ಎರಡು ಎಕರೆ 10 ಗುಂಟೆ ಭೂಮಿಯಲ್ಲಿ ಬಾಳೆ ಹಾಗೂ ತರಕಾರಿ ಕೃಷಿ ಮಾಡುತ್ತಿದ್ದಾರೆ.

ರಾಜಾಪುರಿ ಜುವಾರಿ ಬಾಳೆಯ 2,000 ಸಸಿಗಳನ್ನು ನೆಟ್ಟಿದ್ದಾರೆ. ಗಿಡದಿಂದ ಗಿಡಕ್ಕೆ ಐದು ಅಡಿ ಅಂತರ ಇರುವಂತೆ ಸಾಲು ಗುಂಡಿ ನಿರ್ಮಿಸಿದ್ದಾರೆ. ಪ್ರತಿ ತಿಂಗಳು ಹಸಿರೆಲೆ ಗೊಬ್ಬರ, ಜೀವಾಮೃತ, ಜೀವಸಾರ, ತಿಪ್ಪೆಗೊಬ್ಬರ, ಎರೆಹುಳು ಗೊಬ್ಬರವನ್ನು ವರ್ಷದಲ್ಲಿ ಎರಡು ಬಾರಿ ಹನಿನೀರಾವರಿ ಮೂಲಕ ಕೊಡುತ್ತಾರೆ.

ಬೇಸಿಗೆಯಲ್ಲಿ ಕುರಿಗೊಬ್ಬರ ಹಾಕಿದ್ದಾರೆ. ಯಾವುದೇ ರಾಸಾಯನಿಕ ಗೊಬ್ಬರ ಹಾಕದ ಕಾರಣ ಇವರು ಬೆಳೆದ ಬಾಳೆಹಣ್ಣು ಹೆಚ್ಚು ರುಚಿ. ಇವರ ತೋಟಕ್ಕೆ ವಿಜಯಪುರ ಹಾಗೂ ಬಾಗಲಕೋಟೆಯಿಂದ ಬಂದು ವ್ಯಾಪಾರಸ್ಥರು ಖರೀದಿಸುತ್ತಿರುವುದು ವಿಶೇಷ. ಆಗಸ್ಟ್‌ನಿಂದ ಫಸಲು ಪ್ರಾರಂಭವಾಗಿದ್ದು, ಈಗಾಗಲೇ 12 ಟನ್ ಮಾರಾಟ ಮಾಡಿದ್ದಾರೆ. ಇನ್ನೂ ಅಷ್ಟೇ ಫಸಲು ಪಡೆಯುವ ನಿರೀಕ್ಷೆಯಲ್ಲಿದ್ದಾರೆ ಶಶಿಧರ. ₹ 22,500ಕ್ಕೆ ಒಂದು ಟನ್‌ನಂತೆ ಮಾರಾಟ ಮಾಡಿದ್ದಾರೆ, ತಿಂಗಳಿಗೆ ನಾಲ್ಕು ಬಾರಿ ಕೊಯ್ಲು ಮಾಡುತ್ತಾರೆ.

‘ಬಾಳೆಗೆ ಯಾವುದೇ ರೋಗಗಳು ತಗಲುವುದಿಲ್ಲ. ಹನಿನೀರಾವರಿ ಮೂಲಕ ನಿತ್ಯ ಮೂರು ಗಂಟೆ ನೀರು ಬಿಡುವೆ. ಆದರೆ ನೀರು ಜಾಸ್ತಿ ಬೇಕು. ನೀರು ಕಡಿಮೆಯಾದಲ್ಲಿ ಗೊನೆ ಸಣ್ಣದಾಗುತ್ತವೆ. ಪ್ರತಿ ವರ್ಷ ₹5 ಲಕ್ಷದವರೆಗೆ ಬಾಳೆಯಿಂದ ವರಮಾನ ಸಿಗುತ್ತಿದೆ. ಒಂದು ಗೊನೆ 15 ಕೆ.ಜಿ.ಯಷ್ಟು ತೂಗುತ್ತದೆ. ಒಂದು ಗಿಡ 12 ಡಜನ್ ಫಸಲು ಕೊಡುತ್ತಿದೆ. ತೋಟದಲ್ಲಿ ನಾಲ್ಕು ಇಂಚು ನೀರು ಬಿದ್ದಿರುವ ಒಂದು ಕೊಳವೆ ಬಾವಿಯಿದೆ’ ಎಂದು ಹೇಳುತ್ತಾರೆ ಅವರು.

ಜೀವಸಾರ ಘಟಕ: ಜೀವಸಾರ ಘಟಕವನ್ನು ನಿರ್ಮಿಸಿರುವ ಅವರು, ಅದರಲ್ಲಿ ಗೋಮೂತ್ರ, ಸೆಗಣಿ, ಸಣ್ಣ ಚೋಗಚಿ ಗಿಡವಲ್ಲದೆ ವಿವಿಧ ಗಿಡಗಳ ತಪ್ಪಲು ಹಾಗೂ ಕಸಕಡ್ಡಿಯನ್ನು ಹಾಕಿ ಹನಿನೀರಾವರಿ ಮೂಲಕ ಬಾಳೆ ಬೆಳೆಗಳಿಗೆ ಬಿಡುತ್ತಾರೆ. ಇದರಿಂದ ಬೆಳೆಗಳಿಗೆ ಹೆಚ್ಚಿನ ಪೋಷಕಾಂಶ ಸಿಗುತ್ತದೆ.

‘ಬಾಳೆ ಗಿಡದಿಂದ ಬರುವ ಯಾವುದೇ ತ್ಯಾಜ್ಯವನ್ನು ತೋಟದಿಂದ ತೆಗೆಯದೇ ಅಲ್ಲಿಯೇ ಗೊಬ್ಬರವಾಗಲು ಬಿಡುತ್ತೇನೆ’ ಎನ್ನುತ್ತಾರೆ.

ಅಲ್ಪಾವಧಿ ಬೆಳೆಗಳಾದ ತರಕಾರಿ ಬೆಳೆಗಳನ್ನು ಬೆಳೆಯುವ ಇವರು, ಅದಕ್ಕಾಗಿ ಸರ್ಕಾರದಿಂದ ಮೂರೂವರೆ ಲಕ್ಷ ಸಹಾಯಧನ ಪಡೆದುಕೊಂಡು ಹಸಿರು ಮನೆ ನಿರ್ಮಾಣ ಮಾಡಿದ್ದಾರೆ. ಟೊಮೆಟೊ, ಕ್ಯಾಪ್ಸಿಕಂ ಹಾಗೂ ಕೊತ್ತಂಬರಿ ಬೆಳೆದು ಆದಾಯ ಪಡೆದಿದ್ದಾರೆ. ಸದ್ಯ ಪ್ರಾಯೋಗಿಕವಾಗಿ ದಮನ್ ಎಂಬ ಮೆಣಸಿನಕಾಯಿ ತಳಿಯ ಕೃಷಿ ಮಾಡಿದ್ದಾರೆ.

ತೋಟದ ಸುತ್ತಲೂ 100 ಸಾಗುವಾನಿ, 20 ಲಿಂಬೆ, 60 ತೆಂಗು, ಮೋಸಂಬಿ, ನೇರಳೆ ಗಿಡಗಳನ್ನು ಬೆಳೆಸಿದ್ದಾರೆ.

ಕೃಷಿಗೆ ನೀರು ಬೇಕು, ಲಾಭವಿಲ್ಲ ಎಂದು ಕೃಷಿಯಿಂದ ವಿಮುಖವಾಗುತ್ತಿರುವ ಇಂದಿನ ದಿನಗಳಲ್ಲಿ ನೀರಿನ ಸದ್ಬಳಕೆ ಹಾಗೂ ಹೊಸ ತಂತ್ರಜ್ಞಾನಗಳ ಬಳಕೆಯಿಂದ ಕೃಷಿಗೆ ಮುಂದಾದಲ್ಲಿ ಭೂತಾಯಿ ನಮ್ಮನ್ನು ಎಂದಿಗೂ ಕೈ ಬಿಡುವುದಿಲ್ಲ ಎನ್ನುತ್ತಾರೆ.
ಶಶಿಧರ ಅವರ ಸಂಪರ್ಕಕ್ಕೆ: 9448751065.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು