ಬುಧವಾರ, ಆಗಸ್ಟ್ 5, 2020
26 °C
ಭದ್ರಾವತಿ: ನಾಳೆ ಬಿಜೆಪಿ ಪರಿವರ್ತನಾ ಯಾತ್ರೆ; ಹಳೇನಗರದ ಕನಕ ಮಂಟಪದಲ್ಲಿ ಭರದ ಸಿದ್ಧತೆ

ಗೆಲ್ಲದ ಕ್ಷೇತ್ರದಲ್ಲಿ ಪರಿವರ್ತನೆಯ ಮಂತ್ರ

ಕೆ.ಎನ್. ಶ್ರೀಹರ್ಷ Updated:

ಅಕ್ಷರ ಗಾತ್ರ : | |

ಗೆಲ್ಲದ ಕ್ಷೇತ್ರದಲ್ಲಿ ಪರಿವರ್ತನೆಯ ಮಂತ್ರ

ಭದ್ರಾವತಿ: ಈ ಕ್ಷೇತ್ರದಲ್ಲಿ ಬಿಜೆಪಿ ಎಂದೂ ಗೆದ್ದಿಲ್ಲ. ಆದರೆ ಮೂರು ದಶಕಗಳಲ್ಲಿ ಎಲ್ಲಾ ಲೋಕಸಭಾ ಚುನಾವಣೆಗಳಲ್ಲೂ 10ರಿಂದ 15 ಸಾವಿರ ಮತಗಳ ಮುನ್ನಡೆಯನ್ನು ಕ್ಷೇತ್ರದಲ್ಲಿ ಪಡೆಯುವ ಮೂಲಕ ತನ್ನದೇ ಛಾಪು ಮೂಡಿಸಿದೆ.

ಹಿಂದೆ ಭದ್ರಾವತಿಯಲ್ಲಿ ಬಿಜೆಪಿಗೆ ಜಯ ಕಟ್ಟಿಟ್ಟಬುತ್ತಿ ಎನ್ನಲಾಗುತ್ತಿತ್ತು. ಇದಕ್ಕೆ ಕಾರಣ ಆಗ ಸಚಿವರಾಗಿದ್ದ ಸಿ.ಎಂ.ಇಬ್ರಾಹಿಂ ಅವರ ರೋಲೆಕ್ಸ್ ವಾಚ್ ಹಗರಣ. ಇದಷ್ಟೇ ಅಲ್ಲದೆ ಇತರ ಪ್ರಮುಖ ವಿಷಯಗಳನ್ನು ವಿಧಾನಪರಿಷತ್ತಿನಲ್ಲಿ ಎ.ಕೆ.ಸುಬ್ಬಯ್ಯ ಪ್ರಸ್ತಾಪಿಸುವ ಮೂಲಕ ಸ್ಥಳೀಯ ನಾಯಕರ ಧ್ವನಿಯಾಗಿದ್ದರು. ಅದೇ ಕಾಲದಲ್ಲಿ ಹೋರಾಟದ ಮುಂಚೂಣಿಯಲ್ಲಿದ್ದ ಹಿರಿಯ ನಾಯಕರು ಕ್ಷೇತ್ರದಲ್ಲಿ ಭಾರಿ ಹೆಸರು ಮಾಡಿದ್ದರು.

ಹಿರಿಯ ಮುಖಂಡ ವಿಶ್ವನಾಥ ಕೋಠಿ, ಎಸ್.ಎಲ್. ಬಾಲಕೃಷ್ಣ, ದಿವಂಗತ ರಾಮಚಂದ್ರ, ಕೆಂಚಪ್ಪ ಅವರ ಹೋರಾಟಗಳನ್ನು ಈಗಲೂ ಕಾರ್ಯಕರ್ತರು ಮೆಲುಕು ಹಾಕುತ್ತಾರೆ.

ಸಂಘಟನಾ ಬಲ: ಸಂಘ ಪರಿವಾರ ಸಂಘಟನೆಗಳ ಶಕ್ತಿ ಹೆಚ್ಚಾಗಿದ್ದ ಕಾಲದಲ್ಲಿ ಪಕ್ಷದ ಮತ ಪ್ರಮಾಣ, ಶಕ್ತಿ ಎಲ್ಲವೂ ಬಲವಾಗಿತ್ತು. ಆದರೆ ಬದಲಾದ ರಾಜಕೀಯ ಕಾಲಘಟ್ಟದಲ್ಲಿ ಪಕ್ಷ ಸಂಘಟನೆ ಕುಸಿಯಿತು ಎನ್ನುತ್ತಾರೆ ಪಕ್ಷದ ಹಿರಿಯರು.

ಹಿರಿಯ ಮುಖಂಡ ನವನೀತ, ಎನ್.ವಿಶ್ವನಾಥರಾವ್ ಅವರ ಸಂಘಟನಾ ಅವಧಿಯಲ್ಲಿ ಕ್ಷೇತ್ರದ ಎಲ್ಲಾ ಹೋಬಳಿ, ಗ್ರಾಮೀಣ ಭಾಗದಲ್ಲಿ ಪಕ್ಷ ಬಲವಾಗಿ ಬೇರೂರಿತ್ತು. ನಗರಸಭೆಗೂ ಪಕ್ಷದ ಆರು ಮಂದಿ ಸದಸ್ಯರು ಆಯ್ಕೆಯಾಗಲು ಸಾಧ್ಯವಾಗಿತ್ತು.

ನಂತರ ಇಲ್ಲಿನ ರಾಜಕೀಯ ಸ್ಥಿತ್ಯಂತರದ ಪರಿಣಾಮ ಗೆದ್ದ ಸದಸ್ಯರಲ್ಲಿ ಹಲವರು ಜನತಾದಳದ ಸಹಕಾರ ಪಡೆದು, ಪಕ್ಷದಿಂದ ಹೊರನಡೆದು ಅಧಿಕಾರ ಹಿಡಿದರು. ಆಮೇಲೆ ಗಟ್ಟಿ ನಾಯಕತ್ವ ದೊರೆಯಲಿಲ್ಲ.

ಅಭ್ಯರ್ಥಿ ಹೇರಿಕೆ: ಎಸ್. ಬಂಗಾರಪ್ಪ ಬಿಜೆಪಿ ಸೇರಿದ ಸಂದರ್ಭದಲ್ಲಿ ಅವರ ಕಟ್ಟಾ ಬೆಂಬಲಿಗ ಕೂಡ್ಲಿಗೆರೆ ಮಂಜುನಾಥ ಎಂಬುವರನ್ನು ಕಣಕ್ಕೆ ಇಳಿಸಲಾಯಿತು. ನಂತರ ವಿ.ಕದಿರೇಶ್, ಆಯನೂರು ಮಂಜುನಾಥ ಸ್ಪರ್ಧಿಸಿದ್ದರು. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದ್ದ ಶಿವಾಜಿರಾವ್ ಸಿಂಧ್ಯಾ ಅವರನ್ನು ಕರೆತಂದು ಕಣಕ್ಕೆ ಇಳಿಸಿದ್ದು ಅನೇಕ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಯಿತು ಎನ್ನುತ್ತಾರೆ ಪಕ್ಷದ ಹಿರಿಯರು.

ಈ ಎಲ್ಲಾ ಚುನಾವಣೆಗಳಲ್ಲೂ ಪಕ್ಷದ ಮತಬ್ಯಾಂಕ್ ವ್ಯವಸ್ಥಿತವಾಗಿ ಒಡೆದು ಹೋಗುತ್ತಾ ಬಂತು. ಹೀಗಾಗಿ ಕಳೆದ ಚುನಾವಣೆಯಲ್ಲಿ ಪಡೆದ ಮತಗಳ ಪ್ರಮಾಣ ಶೇ 2ಕ್ಕೆ ಕುಸಿಯಿತು. ಇದರಿಂದ 25 ವರ್ಷಗಳ ಕ್ಷೇತ್ರ ರಾಜಕಾರಣದಲ್ಲಿ ಅಪ್ಪಾಜಿ, ಸಂಗಮೇಶ್ವರ ಪ್ರಾಬಲ್ಯ ಬೆಳೆಯಿತು.

ಸಂಘ ಪರಿವಾರ ಶಕ್ತಿ: ಬಿಜೆಪಿ ವೈಯಕ್ತಿಕ ನೆಲೆಗಟ್ಟಿಗಿಂತ ಸಂಘ ಪರಿವಾರ ಸಂಘಟನೆಗಳ ಬಲದ ಮೇಲೆ ಮಾತ್ರ ಕ್ಷೇತ್ರದಲ್ಲಿ ಪೈಪೋಟಿ ನೀಡಲು ಸಾಧ್ಯ. ಇದರ ಹೊರತಾಗಿ ಬಹಳ ಕಷ್ಟ ಎಂಬ ಮಾತು ಕಾರ್ಯಕರ್ತರಲ್ಲಿದೆ.

ಬೂತ್ ಸಮಿತಿ ವಿಸ್ತಾರಕರು ಕ್ಷೇತ್ರಕ್ಕೆ ಬಂದು ಮೂರು ತಿಂಗಳು ಕಳೆದರೂ ಇನ್ನೂ 100 ಬೂತ್ ಮಾಡಲು ಸಾಧ್ಯವಾಗಿಲ್ಲ ಎಂಬ ಮಾತಿದೆ. ಅವರು ಬರುವುದಕ್ಕೂ ಮುನ್ನ ಇದ್ದದ್ದು ಕೇವಲ 30 ಬೂತ್‌ಗಳು. ಕೆಲವರ ನಿರಾಸಕ್ತಿಯ ನಡವೆಯೂ ತುಸು ಯಶಸ್ಸು ಕಂಡಿರುವ ಸಮಾಧಾನ ಕಾರ್ಯಕರ್ತರಿಗೆ ಇದೆ.

ಈಚೆಗೆ ಎಬಿವಿಪಿ, ಬಜರಂಗದಳ‌ದ ಸಂಘಟನಾ ಶಕ್ತಿ ಹೆಚ್ಚಿದೆ. ಹಿಂದುತ್ವ ಹೋರಾಟದ ಚಟುವಟಿಕೆ ಕೂಡ ಹೆಚ್ಚಾಗಿದೆ. ಇದೆಲ್ಲವನ್ನೂ ವ್ಯವಸ್ಥಿತವಾಗಿ ಸಂಘಟಿಸುವ ಶಕ್ತಿ ಹೊಂದಿದ್ದ ಆರ್‌ಎಸ್‌ಎಸ್ ಮುಖಂಡರಾಗಿದ್ದ ಜಿ.ಧರ್ಮಪ್ರಸಾದ್ ಈಗ ಬಿಜೆಪಿ ಜಿಲ್ಲಾ ಘಟಕದ ಕಾರ್ಯದರ್ಶಿಯಾಗಿ ನೇಮಕವಾಗಿದ್ದು ಸಹ ಪರಿವಾರ ಸಂಘಟನೆ ಉತ್ಸಾಹ ಹೆಚ್ಚು ಮಾಡಿದೆ ಎನ್ನುತ್ತಾರೆ ಸಂಘ ಪರಿವಾದವರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.