ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿವ್ಯದರ್ಶನದ ಹಾದಿ ವ್ರತಧಾರಿಯ ಬದುಕು

Last Updated 1 ಜನವರಿ 2018, 19:30 IST
ಅಕ್ಷರ ಗಾತ್ರ

ಮುಗುಡುವ ಚಳಿ, ಮೈಕೊರೆವ ತಣ್ಣೀರು ಸ್ನಾನ, ಒಪ್ಪತ್ತು ಆಹಾರ, ಬರಿ ಮೈಗೆ ಕರಿ ಬಟ್ಟೆಯ ದೊರಗು ಹೊದಿಕೆ, ಬರಿಗಾಲಿನ ನಡಿಗೆ, ಮನದೊಳಗೆ ಶಬರೀಶ, ಕೊರಳಲ್ಲಿ ದೀಕ್ಷೆಯ ವ್ರತಮಾಲೆ...

ಇಷ್ಟು ವಿವರ ಓದಿದರೆ ಸಾಕು, ಇವರು ಅಯ್ಯಪ್ಪಮಾಲೆ ಧರಿಸಿದವರು ಎನ್ನುವುದು ನಿಮಗೆ ಅರ್ಥವಾಗಿಬಿಡುತ್ತದೆ. ಅಯ್ಯಪ್ಪಮಾಲೆ ಹಾಕುವವರ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಮಾಲೆ ಹಾಕಿದವರ ಶ್ರದ್ಧೆಯ ಬಗ್ಗೆ ಕೆಲ ಹಿರಿಯರು ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ. ಆದರೆ ಇಂದಿಗೂ ಡಿಸೆಂಬರ್‌, ಜನವರಿ ತಿಂಗಳಲ್ಲಿ ಸಾವಿರಾರು ಮಂದಿ ಶಬರಿಮಲೆಗೆ ತೆರಳಿ ಅಯ್ಯಪ್ಪನ ದರ್ಶನ ಮಾಡಿ ಪುನೀತರಾಗುತ್ತಾರೆ.

‘ನಾನು 1983ರಿಂದ ಮಾಲೆ ಹಾಕುತ್ತಿದ್ದೇನೆ. ಅಂದಿನ ಶಿಸ್ತು, ಸಾಧನೆಗೂ ಇಂದಿನವರ ಸಾಧನೆಗೂ ತುಂಬಾ ವ್ಯತ್ಯಾಸ ಕಾಣುತ್ತಿದೆ. ಇತ್ತೀಚೆಗೆ ಚಪ್ಪಲಿ ಧರಿಸುವುದು, ಶೋಕಿ ಮಾಡುವುದೂ ಕಾಣುತ್ತಿದೆ’ ಎನ್ನುತ್ತಾರೆ 36 ವರ್ಷಗಳಿಂದ ದೀಕ್ಷೆ ನಡೆಸಿರುವ ಗುರುಸ್ವಾಮಿ ಶಿವರಾಮ ಮಲ್ಲಿ. ಮಾಲಾಧಾರಿಯ ಬದುಕು ಹೇಗಿರಬೇಕು ಎಂಬ ಬಗ್ಗೆ ಅವರುಕೊಟ್ಟ ಮಾಹಿತಿ ಇಲ್ಲಿದೆ.

‘ಸಂಸಾರದ ಚುಂಗಿಲ್ಲದ, ಪಂಚೇಂದ್ರಿಯಗಳ ಹಂಗಿಲ್ಲದ ಬದುಕು, ದಿವ್ಯದರ್ಶನದ ಗುರಿಹೊಂದಿದ ವ್ರತಧಾರಿಗೆ 41 ದಿನಗಳ ಅವಧಿಯ ಮಂಡಲದ ದೀಕ್ಷೆ. ಲೌಕಿಕದ ಪೊರೆ ಕಳಚಿಟ್ಟು, ಕರಿವೇಷ, ರುದ್ರಾಕ್ಷ, ವಿಭೂತಿ, ವ್ರತ ಮಾಲೆ, ತಣ್ಣೀರು, ತಂಪುನೆಲದ ಬದುಕಿಗೆ ಮೈಒಡ್ಡುವ ಸನ್ಯಾಸದ ಹಟಯೋಗ ಮುದ್ರೆ. ಇದಕ್ಕೆ ಅನುಭವಿ ಗುರುಸ್ವಾಮಿ ಮಾರ್ಗದರ್ಶನ ಮಾಡುತ್ತಾರೆ. ತಲೆಯ ಇಬ್ಬದಿಯಲ್ಲಿ ಇರುಮುಡಿ ಗಂಟು–ಮುಂದಿರುವ ಸನ್ಯಾಸದ ಹಾದಿ, ಹಿಂದಿಕ್ಕಿರುವ ಸಾಂಸಾರಿಕ ದಾರಿಯ ಕುರುಹಾಗಿ ಸನ್ನಿಧಿಗೆ ಶಿಸ್ತುಬದ್ಧವಾಗಿ ತೆರಳಲು ವ್ರತಧಾರಿಯನ್ನು ಎಚ್ಚರಿಸುತ್ತದೆ.

‘ವ್ರತಮಾಲೆ ಧರಿಸಿ ಕುಟುಂಬದಿಂದ ಬೇರ್ಪಟ್ಟು ಹೊಸದಾಗಿ ದೀಕ್ಷೆ ಕೈಗೊಳ್ಳುವವರನ್ನು ಕನ್ನಿಸ್ವಾಮಿ ಎನ್ನುತ್ತಾರೆ (ಕನ್ನಿ ಎಂದರೆ ಅನುಭವ ರಹಿತ ಎಂದರ್ಥ). ಎರಡನೇ ಬಾರಿಗೆ ಕತ್ತಿಸ್ವಾಮಿ, ಮೂರನೇ ವರ್ಷಕ್ಕೆ ಗಂಟೆಸ್ವಾಮಿ, ನಾಲ್ಕನೇ ವರ್ಷಕ್ಕೆ ಗದಾಸ್ವಾಮಿ, ಐದನೇ ವರ್ಷಕ್ಕೆ ಪೆರಿಯ ಸ್ವಾಮಿ ಎಂದು ಗುರುತಿಸಿಸುತ್ತಾರೆ. ಸತತ ಆರು ವರ್ಷ ಮಾಲೆ ಹಾಕಿದವರು ಗುರುಸ್ವಾಮಿಯಾಗಿ ಮಾರ್ಗದರ್ಶಕರಾಗುತ್ತಾರೆ. ವ್ರತಧಾರಿಗಳ ಪ್ರತಿ ತಂಡದಲ್ಲಿಯೂ ಒಬ್ಬರು ಗುರುಸ್ವಾಮಿ ಇರುತ್ತಾರೆ. ಇವರು ಶಿಸ್ತುಬದ್ಧ ಬದುಕು, ಇಂದ್ರಿಯ ನಿಗ್ರಹ, ಪೂಜಾವಿಧಾನ, ಆಹಾರ ಕ್ರಮಗಳನ್ನು ಬೊಧಿಸುತ್ತಾರೆ.

‘ಕೊರಳಲ್ಲಿ ರುದ್ರಾಕ್ಷಿ , ತುಳಸಿ ದಳದ ಮಾಲೆ, ಲೌಕಿಕದಿಂದ ಬೇರ್ಪಟ್ಟ ಸಂಕೇತವಾಗಿ ಕರಿಯ ಬಟ್ಟೆ, ನಿರಾಡಂಬರತೆಗಾಗಿ ಕ್ಷೌರ ನಿಷಿದ್ಧ, ದೀಕ್ಷಾ ಕಾಲದಲ್ಲಿ ಸ್ವತಃ ಅಡುಗೆ ಮಾಡಿಕೊಂಡು ಒಪ್ಪತ್ತು ಮಾತ್ರ ಆಹಾರ ಸ್ವೀಕರಿಸಬೇಕು. ಬೆಳಗು ಬೈಗು ಅಯ್ಯಪ್ಪನಿಗೆ ಪೂಜೆ, ಪ್ರಾರ್ಥನೆ, ಪಂಚೇಂದ್ರಿಯಗಳಿಗೆ ಕಡಿವಾಣದ ಸೂಚಕವಾಗಿ ಬ್ರಹ್ಮಚರ್ಯ ಪಾಲನೆ ಮಾಡಬೇಕು. ಪತ್ನಿಯನ್ನೂ ವ್ತತಧಾರಿಗಳು ತಾಯಿಯಂತೆ ಕಾಣಬೇಕು ಎಂಬ ನಿಯಮವಿದೆ. ನೆಲ ಅಥವಾ ಚಾಪೆಯಲ್ಲಿ ನಿದ್ದೆ. ಮೇಲು–ಕೀಳಿನ ಭಾವನೆ ತೊಡೆದು ಹಾಕಿ ಎಲ್ಲರನ್ನೂ ‘ಸ್ವಾಮಿಗಳೇ’ ಎಂದು ಸಂಬೋಧಿಸಬೇಕು. ಆಹಾರದಾನ, ವಿನಯ, ಪರೋಪಕಾರಗಳೂ ದೀಕ್ಷೆಯ ಅಂಗಗಳೇ ಆಗಿರುತ್ತವೆ.

‘ಶಬರಿಮಲೆ ಯಾತ್ರೆಯು ಭಾವೈಕ್ಯದ ಸಂಕೇತ. ಮಣಿಕಂಠನಾಗಿದ್ದ ಅಯ್ಯಪ್ಪನ ಪೌರಾಣಿಕ ಕಥಾ ಹಂದರದಲ್ಲಿ ಮುಸ್ಲಿಂ ವನವಾಸಿ ವಾವರಸ್ವಾಮಿಯೂ ಇರುವುದು ವಿಶೇಷ. ಮಣಿಕಂಠ ಅವನ ಮನ ಪರಿವರ್ತಿಸಿ ತಪಸ್ವಿಯಾಗುವಂತೆ ಮಾಡುತ್ತಾನೆ. ಎರಿಮೇಲಿಯಲ್ಲಿ ವಾವರಸ್ವಾಮಿ ದರ್ಗಾ ಇದೆ. ಕನ್ನಿ ಸ್ವಾಮಿಗಳು ವಾವರಸ್ವಾಮಿಗೆ ಕಾಯಿ ಒಡೆಯುವ ಪರಿಪಾಠ ಇದೆ.

‘ಮಲಯಾಳಂ ಭಾಷೆಯಲ್ಲಿ ‘ಮಾಳಿಗ ಪುರತ್ತಮ್ಮ’ ಎಂದು ಕರೆಯುವ ಗಂಧರ್ವ ಕನ್ಯೆಯ ಸುತ್ತ ಅಯ್ಯಪ್ಪನ ವೃತ್ತಾಂತ ಇದೆ. ಶಬರಿಗೆ ಮೋಕ್ಷ ನೀಡಿದ ಅಯ್ಯಪ್ಪನಿಗೆ ಅಲ್ಲೇ ಉದ್ಭವವಾದ ಮಾಳಿಗ ಪುರತ್ತಮ್ಮ ಮದುವೆ ಆಗೆಂದು ದುಂಬಾಲು ಬೀಳುತ್ತಾಳೆ. ಕೊನೆಗೆ ಕನ್ನಿ ಅಯ್ಯಪ್ಪರು ಇಲ್ಲದ ವರ್ಷ ವಿವಾಹವಾಗುವ ಒಪ್ಪಂದಕ್ಕೆ ಬದ್ಧರಾಗುತ್ತಾರೆ. ಇಂದಿಗೂ ಆಕೆ ‘ಹೊಸಬರು ಇದ್ದಾರೆಯೇ ಎಂದು ಗಮನಿಸುತ್ತಿರುತ್ತಾಳೆ ’ಎಂಬುದು ವ್ರತಧಾರಿಗಳ ನಂಬಿಕೆ. ಅದೇ ರೀತಿ ಮಾಳಿಗಪುರತ್ತಮ್ಮನ ಸನ್ನಿಧಿಯಲ್ಲಿ ಪೂಜಿಸಿ ತಂದಂತಹ ಕಣದ ಕುಪ್ಪಸ ತೊಟ್ಟರೆ ಯುವತಿಯರಿಗೆ ಕಂಕಣ ಭಾಗ್ಯ ಲಭಿಸುವುದು ಎಂಬ ನಂಬಿಕೆಯೂ ಇದೆ.‘ಶಬರೀಶನ ವಿಗ್ರಹಗಳೆಲ್ಲ ಯೋಗ ಮುದ್ರೆಯ ವಿಶಿಷ್ಟ ಭಂಗಿಯಲ್ಲಿರುವುದು ಗಮನಾರ್ಹ. ಅಯ್ಯಪ್ಪನ ವಿಗ್ರಹಗಳು ಪಾದ ಊರಿ, ಅರ್ಧ ಕುಳಿತ ಭಂಗಿಯಲ್ಲಿರುತ್ತವೆ. ಕಾಲುಗಳ ಭಾಗದಲ್ಲಿ ‘ನ್ಯಾಸ ಬಂಧ’ ಎಂಬ ಕಟ್ಟು ಇರುತ್ತದೆ. ತಪಸ್ಸಿನ ಈ ಭಂಗಿ ಮಾನಸಿಕ ಏಕಾಗ್ರತೆ, ದೇಹ–ಇಂದ್ರಿಯಗಳ ನಿಷ್ಠುರ ಸಂಯಮ, ಸಾಧಕ ಮೋವೃತ್ತಿಯ ಲಾಂಛನ. ವ್ರತಧಾರಿ ಭಕ್ತರು ಹೆಚ್ಚಿನ ಶಿಸ್ತು–ಸಂಯಮವನ್ನು ಹೊಂದಿರಬೇಕು’ ಎನ್ನುತ್ತಾರೆ ಶಿವರಾಮ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT