ಸೋಮವಾರ, ಆಗಸ್ಟ್ 3, 2020
27 °C

ಅಥ್ಲೆಟಿಕ್ಸ್ ಟ್ರ್ಯಾಕ್‌ನಲ್ಲಿ ರಾಧಾ ಮಿಂಚು

ಮಾನಸ ಬಿ.ಆರ್. Updated:

ಅಕ್ಷರ ಗಾತ್ರ : | |

ಅಥ್ಲೆಟಿಕ್ಸ್ ಟ್ರ್ಯಾಕ್‌ನಲ್ಲಿ ರಾಧಾ ಮಿಂಚು

ಅಂಗವೈಕಲ್ಯವನ್ನು ಬದುಕಿನ ಮೆಟ್ಟಿಲಾಗಿಸಿಕೊಂಡು ಅಥ್ಲೆಟಿಕ್ಸ್‌ ಟ್ರ್ಯಾಕ್‌ನಲ್ಲಿ ಮಿಂಚು ಹರಿಸಿದವರು ಅಂಧ ಕ್ರೀಡಾಪಟು ರಾಧಾ. ಚೆಳ್ಳಕೆರೆ ತಾಲ್ಲೂಕಿನ ಬೊಮ್ಮಸಂದ್ರ ಇವರ ಹುಟ್ಟೂರು. ಗ್ರಾಮದಲ್ಲಿ ಕುರುಡು ಮಕ್ಕಳು ಭವಿಷ್ಯ ಕಟ್ಟಿಕೊಳ್ಳುವಂಥ ವಾತಾವರಣ ಇರಲಿಲ್ಲ. ಚಿಕ್ಕಮಗಳೂರಿನ ಅಂಧ ಮಕ್ಕಳ ಪಾಠಶಾಲೆಗೆ ಸೇರಿದ ಅವರು, ಅಲ್ಲಿಯೇ ಇರುವ ಲಾಲ್‌ಬಹದ್ದೂರ್ ಶಾಸ್ತ್ರಿ ಕಾಲೇಜಿನಲ್ಲಿ ಪ್ರಥಮ ಪಿಯುಸಿ ಓದುತ್ತಿದ್ದಾರೆ.

ಬೇರೆ ಮಕ್ಕಳಂತೆ ರಾಧಾ ತಮ್ಮ ಕುರುಡುತನಕ್ಕೆ ವಿಧಿಯನ್ನು ಹಳಿಯಲಿಲ್ಲ. ಎಲ್ಲರಿಗಿಂತ ಭಿನ್ನವಾಗಿ ತಾವು ಗುರುತಿಸಿಕೊಳ್ಳಬೇಕು, ತಮ್ಮ ಬಗ್ಗೆ ಅಪ್ಪ, ಅಮ್ಮ ಬೇಸರಗೊಳ್ಳದಂತೆ ಬದುಕಬೇಕು, ಇನ್ನೊಬ್ಬರಿಗೆ ಹೊರೆಯಾಗಿರಬಾರದು ಎಂದು ಯೋಚಿಸಿದರು.

ಅವರ ಒಳಗಣ್ಣಿಗೆ ಸಾಧನೆಯ ಹಾದಿಯಾಗಿ ಕಾಣಿಸಿದ್ದು ಅಥ್ಲೆಟಿಕ್ಸ್. ಆರಂಭದ ದಿನಗಳಲ್ಲಿ ಓಡುವುದರಲ್ಲಿ ಅಷ್ಟೇನೂ ಆಸಕ್ತಿ ಇರಲಿಲ್ಲ. ಅವರು ಓದುತ್ತಿರುವ ಕಾಲೇಜಿನಲ್ಲಿ ಉತ್ತಮ ಕ್ರೀಡಾಂಗಣವಾಗಲೀ, ಓಡಲು ಬೇಕಾದ ವ್ಯವಸ್ಥೆಯಾಗಲೀ ಇಲ್ಲ. ಬಹುಮುಖ್ಯವಾಗಿ ಕುರುಡು ಮಕ್ಕಳಿಗೆ ಬೇಕಾದ ಸಹಾಯಕರನ್ನು ನಿರೀಕ್ಷಿಸುವಂತೆಯೇ ಇರಲಿಲ್ಲ. ಇಂಡಿಯನ್ ಅಥ್ಲೆಟಿಕ್ಸ್ ಅಕಾಡೆಮಿಯ ನೆರವಿನಿಂದ ರಾಧಾ ಅವರು ಬೆಂಗಳೂರಿಗೆ ಬಂದರು. ಪ್ರಸ್ತುತ ನಗರದ ಹಾಸ್ಟೆಲ್‌ನಲ್ಲಿ ಇದ್ದುಕೊಂಡು ಕ್ರೀಡೆ ಹಾಗೂ ಓದಿನ ಅಭ್ಯಾಸವನ್ನು ಮುಂದುವರೆಸಿದ್ದಾರೆ. ದುಬೈನಲ್ಲಿ ಈಚೆಗೆ ನಡೆದ ಏಷ್ಯನ್‌ ಜೂನಿಯರ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಮೂರು ಬೆಳ್ಳಿ ಪದಕಗಳನ್ನು ಗೆದ್ದ ಸಾಧನೆ ಅವರದು.

ಕುರುಡು ಮಕ್ಕಳ ಓಟದಲ್ಲಿ ರನ್ನರ್ (ಸಹಾಯಕರು) ಬಹುಮುಖ್ಯ ಪಾತ್ರ ವಹಿಸುತ್ತಾರೆ. ಕಣ್ಣು ಕಾಣದಿದ್ದರೂ ನಿಯಮದ ಪ್ರಕಾರ ಅಂಧ ಓಟಗಾರರು ಟ್ರ್ಯಾಕ್ ಬಿಟ್ಟು ಓಡುವಂತಿಲ್ಲ. ಸಹಾಯಕರ ನೆರವು ಪಡೆದು ಕೈಗೆ ಬ್ಯಾಂಡ್‌ ಕಟ್ಟಿಕೊಂಡು ಓಡಬೇಕು. ರನ್ನರ್‌ಗಿಂತ ಮುಂದೆ ಓಡುವಂತಿಲ್ಲ. ಚೂರು ಎಚ್ಚರ ತಪ್ಪಿದರು ಬೀಳುವ ಅಪಾಯ ಇರುತ್ತದೆ. ಈ ಅಪಾಯವನ್ನು ಮೈಗಂಟಿಕೊಂಡೇ ದಿನನಿತ್ಯ ಓಡುವ ಅಭ್ಯಾಸ ಮಾಡುವ ರಾಧಾ ಅವರ ಮುಗ್ಧ ಕಣ್ಣುಗಳಲ್ಲಿ ಆಕಾಶದ ಎತ್ತರದ ಕನಸುಗಳಿವೆ.

ಹಿರಿಯ ಅಥ್ಲೀಟ್ ಹಾಗೂ ಕೋಚ್ ಸತ್ಯನಾರಾಯಣ ಅವರು ಕುರುಡು ಮಕ್ಕಳಿಗೆ ಮಾರ್ಗದರ್ಶನ ಮಾಡುತ್ತಿದ್ದಾರೆ. ಇವರ ಅಕಾಡೆಮಿಯಲ್ಲಿ ಪಳಗಿದ ಕೆ.ಜಿ.ಕೇಶವ ಮೂರ್ತಿ ಕೂಡ ದುಬೈ ಅಥ್ಲೆಟಿಕ್ಸ್‌ನಲ್ಲಿ ಚಿನ್ನಕ್ಕೆ ಕೊರಳೊಡ್ಡಿದ್ದಾರೆ.

ಸಂಪರ್ಕಕ್ಕೆ– 9663330444 (ಇಂಡಿಯನ್ ಅಥ್ಲೆಟಿಕ್ಸ್ ಅಕಾಡೆಮಿ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.